ಕನ್ನಡ ತಮಿೞಿಗಿಂತ ಹೞೆಯದೇ?
ಕನ್ನಡ ತಮಿೞಿಗಿಂತ ಹೞೆಯದಿರಬಹುದೆನ್ನುವುದಕ್ಕೆ ಎರಡು ಉದಾಹರಣೆಗಳನ್ನು ಕೊಡುತ್ತೇನೆ.
೧) ದಿಕ್ಕು
೨) ತಾಲವ್ಯೀಕರಣ
೧) ದಿಕ್ಕು:
ಮೂಡಣ ಮತ್ತು ಪಡುವಣ ದಿಕ್ಕುಗಳಿಗೆ ತಮಿೞರು ಮತ್ತು ಮಲಯಾಳಂನವರು ಕಿೞಕ್ಕು(ಕೆೞಗೆ)=ಮೂಡಣ, ಮೇಱ್ಕು (ಮೇಲೆ)=ಪಡುವಣ ಎಂದರು. ಗಮನಿಸಿ ಕೇರಳಕ್ಕೆ ಕರಾವಳಿ (ತಗ್ಗು ಪ್ರದೇಶ ಅಥವಾ ಕೆೞಗಿನ ಪ್ರದೇಶ) ಪಡುವಣವಾಗಿದ್ದರೂ ಅವರು ಮೇಱ್ಕು ಎನ್ನುವುದು ಅವರ ಭಾಷೆ ಮೊದಲು ತಮಿೞೇ ಆಗಿರಬಹುದೆಂಬುದಕ್ಕೆ ಪುರಾವೆಯಾಗಿದೆ. ಆದ್ದಱಿಂದ ಮೇಲಿದ್ದರೂ ಮೂಡಣ ಕೇರಳಿಗರಿಗೆ ಕಿೞಕ್ಕು=ಕೆೞಗೆ. ಯಾಕೆಂದರೆ ಅವರಿಗೆ ಇದು ತಮಿೞರ ಪ್ರಭಾವ. ಆದರೆ ನಾವು ಇದಕ್ಕಿಂತ ಬೇಱೆಯಾದ "ಮೂಡಣ" (ಸೂರ್ಯ ಮೂಡುವ ದಿಕ್ಕು) "ಪಡುವಣ" (ಸೂರ್ಯ ಪಡುವ (ಮಲಗುವ) ದಿಕ್ಕು) ಎಂದು ಬೞಸುತ್ತೇವೆ.
೨) ತಾಲವ್ಯೀಕರಣ:
ಕನ್ನಡದ ಕವರ್ಗದಿಂದ ಪ್ರಾರಂಭವಾಗುವ ಶಬ್ದಗಳು ತಮಿೞಿನಲ್ಲಿ ಮುಂದಿನ ಅಕ್ಷರಗಳಲ್ಲಿ ಮೂರ್ಧನ್ಯ(ಪ್ರತಿವೇಷ್ಟಿತ)ವಿರದಿದ್ದರೆ ಅಂದರೆ ಮುಂದಿನ ಅಕ್ಷರಗಳು ಟವರ್ಗ ಮತ್ತು ಳ ಆಗದಿದ್ದರೆ ಕವರ್ಗಕ್ಕೆ ಬದಲು ಚವರ್ಗ (ತಾಲವ್ಯಗಳು) ಬೞಸುವುದನ್ನು ಕಾಣುತ್ತೇವೆ. ತೆಲುಗಿನಲ್ಲಿ ಯಾವಾಗಲೂ ತಾಲವ್ಯಗಳೇ ಬೞಕೆಯಾಗುವುದನ್ನು ಕಾಣುತ್ತೇವೆ.
ನೋಡಿ:
ಕನ್ನಡದ ಕಿವಿ(ಮಿ), ತಮಿೞ್ ಮತ್ತು ತೆಲುಗುಗಳಲ್ಲಿ ಚೆವಿ ತಮಿೞರು ’ಚ’ಕ್ಕೆ ’ಸ’ ಮಾತಾಡುವಾಗ ವಾಡಿಕೆಯಲ್ಲಿ ಬೞಸುತ್ತಾರೆ. ಕಿವಿಗೆ ಕಾದು ಎಂಬ ಪದ ಸಾಮಾನ್ಯವಾಗಿದ್ದರೂ ಚೆನ್ನಾಗಿ ತಮಿೞ್ ಬಲ್ಲವರು ಸೆ(ಚೆ)ವಿ ಎಂಬ ಇನ್ನೊಂದು ಪದ ಗುಱುತಿಸುತ್ತಾರೆ.
ಕೆಲ(ಕೆಲವು)=ಚಿ(ಸಿ)ಲ (ತಮಿೞಿನಲ್ಲಿ)
ಕಿಱು(ಸಣ್ಣ) =ಚಿ(ಸಿ)ಱು(ತಮಿೞಿನಲ್ಲಿ)
ಕೇರಿ=ಚೇರಿ (ಗಮನಿಸಿ ತಮಿೞರ ಪುದುಚೇರಿ ಅಥವಾ ಪಾಂಡಿಚೇರಿ)
ಕಿವುಡು=ಚೆವಿಡು(ಸೆವಿಡು)(ತಮಿೞ್)=ಚೆವಿಟಿ(ತೆಲುಗು)
ಪರದಲ್ಲಿ ಟವರ್ಗ ಮತ್ತು ಳ ಇದ್ದಾಗ ಈ ರೂಪಾಂತರ ತಮಿೞಿನಲ್ಲಿ ಅನ್ವಯಿಸುವುದಿಲ್ಲ.
ಗಿಳಿ=ಕಿಳಿ(ತಮಿೞ್) ತಮಿೞಿನಲ್ಲಿ ಯಾವಾಗಲೂ ಪದಾರಂಭದಲ್ಲಿ ಅಘೋಷಗಳೇ.
ಕೆಡು=ಕೆಡು (ತಮಿೞ್)
ಆದರೆ ತೆಲುಗಿನಲ್ಲಿ ಯಾವಾಗಲೂ ತಾಲವ್ಯವೇ ಇರುತ್ತದೆ.
ಉದಾಹರಣೆಗೆ
ಕೆಯ್(ಗೆಯ್)(ಕನ್ನಡದಲ್ಲಿ ಮಾಡು)= ಚೆಯ್(ತಮಿೞ್ ಮತ್ತು ತೆಲುಗುಗಳಲ್ಲಿ)
ಕೆರ್ಪು(ಕೆಪ್ಪು=ಚಪ್ಪಲಿ)=ಚೆರುಪ್ಪು(ತಮಿೞ್)=ಚೆಪ್ಪು(ತೆಲುಗು) (ತೆಲುಗಿನಲ್ಲಿ ಚೆಪ್ಪಲಿಗಳು ಜೊತೆಯಾಗಿಯೇ ಇರುವುದಱಿಂದ ಚೆಪ್ಪುಲು ಎಂದು ಬಹುವಚನವನ್ನೇ ಬೞಸುವುದಱಿಂದ ನಮಗೆ ಚಪ್ಪಲ್ (ಹಿಂದಿ) ಎಂದೇ ಹೇೞುತ್ತಾರೇನೋ ಎಂದು ಭಾಸವಾಗುತ್ತದೆ. ಆದರೆ ಅದು "ಚೆಪ್ಪು" ಶಬ್ದಕ್ಕೆ "ಲು" ಸೇರಿಸಿದ ಬಹುವಚನ.
ಗಿಳಿ=ಕಿಳಿ(ತಮಿೞ್)=ಚಿಲುಕ (ತೆಲುಗು)
ಕೆಡು=ಕೆಡು(ತಮಿೞ್)=ಚೆಡು(ತೆಲುಗು)
ಈ ತಾಲವ್ಯೀಕರಣ ಭಾಷೆಯ ಬೆಳವಣಿಗೆಯಲ್ಲಿ ಇತ್ತೀಚಿನದಾಗಿದ್ದು ಕನ್ನಡ ತಮಿೞಿಗಿಂತ ಹೞೆಯದೇನೋ ಎಂಬ ವಿಚಾರಕ್ಕೆಡೆಮಾಡಿಕೊಡುತ್ತದೆ. ಹಾಗಲ್ಲದಿದ್ದರೂ ಕನ್ನಡ ಮೂಲತೆನ್ನುಡಿಯಿಂದ ಸ್ವತಂತ್ರವಾಗಿ ಕವಲೊಡೆದ ನುಡಿ ಎನ್ನಲು ಯಾವ ಸಂದೇಹವೇ ಇಲ್ಲ.
Comments
ಉ: ಕನ್ನಡ ತಮಿೞಿಗಿಂತ ಹೞೆಯದೇ?
In reply to ಉ: ಕನ್ನಡ ತಮಿೞಿಗಿಂತ ಹೞೆಯದೇ? by hamsanandi
ಉ: ಕನ್ನಡ ತಮಿೞಿಗಿಂತ ಹೞೆಯದೇ?
ಉ: ಕನ್ನಡ ತಮಿೞಿಗಿಂತ ಹೞೆಯದೇ?
In reply to ಉ: ಕನ್ನಡ ತಮಿೞಿಗಿಂತ ಹೞೆಯದೇ? by ಸಂಗನಗೌಡ
ಉ: ಕನ್ನಡ ತಮಿೞಿಗಿಂತ ಹೞೆಯದೇ?