ಕನ್ನಡ ಪತ್ರಿಕಾ ಲೋಕ (ಭಾಗ ೧೧೮) - ಪಬ್ಲಿಕ್ ಫೈಲ್
ಎಂ ಎನ್ ಕೊಟ್ಟಾರಿ ಸಾರಥ್ಯದಲ್ಲಿ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆಯೇ “ಪಬ್ಲಿಕ್ ಫೈಲ್”. ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು. ಎಲ್ಲಾ ಪುಟಗಳು ಕಪ್ಪು ಬಿಳುಪು ಮುದ್ರಣ. ಪತ್ರಿಕೆಯಲ್ಲಿ ಕ್ರೈಂ, ರಾಜಕೀಯ ಸುದ್ದಿಗಳದ್ದೇ ಮಹಾಪೂರ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜೂನ್ ೧೫-೩೦, ೨೦೨೩ (ಸಂಪುಟ: ೧ ಸಂಚಿಕೆ: ೧೧) ರ ಸಂಚಿಕೆ.
ಪತ್ರಿಕೆಯ ಗೌರವ ಸಂಪಾದಕರಾಗಿ ಕೆ.ರಾಜಶೇಖರ್, ರಾಜ್ಯದ ವಿಶೇಷ ಪ್ರಧಾನ ವರದಿಗಾರರಾಗಿ ಕೆ.ಸಂತೋಷ ಶೆಟ್ಟಿ ಮೊಳಹಳ್ಳಿ, ಉಪ ಸಂಪಾದಕರಾಗಿ ಧರ್ಮೇಂದ್ರ ಪೂಜಾರಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಪಾದಕರಾದ ಎಂ ಎನ್ ಕೊಟ್ಟಾರಿ ಇವರು “ನನ್ನ ನೇರ ನುಡಿ" ಎಂಬ ಹೆಸರಿನ ಸಂಪಾದಕೀಯ ಬರೆಯುತ್ತಾರೆ. ಈ ಸಂಚಿಕೆಯಲ್ಲಿ “ಮೈ ಮರೆತ ಹಿಂದೂ ಸಮಾಜ... ಮೈಕೊಡವಿ ನಿಂತ ಅನ್ಯ ಸಮಾಜ" ಎಂಬ ಬರಹವನ್ನು ಬರೆದಿದ್ದಾರೆ.
ಪತ್ರಿಕೆಯಲ್ಲಿ ಸ್ವಾಮೀಜಿಯೊಬ್ಬರಿಗೆ ಹನಿ ಟ್ರ್ಯಾಪ್ ಮಾಡಿ ಹಣವನ್ನು ಲಪಟಾಯಿಸಿದ ಬಗ್ಗೆ ಮುಖಪುಟ ಲೇಖನವಿದೆ. ಉಚಿತ ಯೋಜನೆಗಳಲ್ಲಿ ಕಳೆದು ಹೋಗಬೇಡಿ, ಸರಕಾರದ ನಿರ್ಲಕ್ಷ್ಯಕ್ಕೆ ಸರಕಾರಿ ಶಾಲೆಗಳೇ ಬಲಿ ಎಂಬ ಲೇಖನಗಳಿವೆ. ಸರಕಾರಿ ಬಸ್ ಚಾಲಕಿಯಾದ ಪ್ರೇಮಾ ರಾಮಪ್ಪ ಇವರ ಬಗ್ಗೆ "ಹೆಣ್ಣು ಅಬಲೆಯಲ್ಲ, ಸಬಲೆ"ಎಂಬ ಸ್ಪೂರ್ತಿದಾಯಕ ಬರಹವಿದೆ. ಪತ್ರಿಕೆಯಲ್ಲಿ ಜಾಹೀರಾತುಗಳು ಕಂಡು ಬರುತ್ತಿಲ್ಲ.
ಮಂಜುನಾಥ ಎಂ ಎನ್ ಇವರು ಸಂಪಾದಕ, ಮುದ್ರಕ, ಪ್ರಕಾಶಕರಾಗಿದ್ದಾರೆ. ಪತ್ರಿಕೆಯ ಕಚೇರಿ ಕುಕ್ಕಿಕಟ್ಟೆ, ಉಡುಪಿಯಲ್ಲಿದೆ. ಪತ್ರಿಕೆಯು ಕುಕ್ಕಿಕಟ್ಟೆಯ ಪ್ರಕೃತಿ ಪ್ರಿಂಟರ್ಸ್ ಆಂಡ್ ಪಬ್ಲಿಷರ್ಸ್ ಇಲ್ಲಿ ಮುದ್ರಿತವಾಗಿ ಹೊರಬರುತ್ತಿದೆ. ಪತ್ರಿಕೆಯ ಬಿಡಿಪ್ರತಿಯ ಬೆಲೆ ರೂ. ೧೫.೦೦, ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆಯು ಈಗಲೂ ಮುದ್ರಣವಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇದೆ.