ಕನ್ನಡ ಪತ್ರಿಕಾ ಲೋಕ (ಭಾಗ ೧೨೩) - ಕರಾವಳಿ ಮಿತ್ರ

ಕನ್ನಡ ಪತ್ರಿಕಾ ಲೋಕ (ಭಾಗ ೧೨೩) - ಕರಾವಳಿ ಮಿತ್ರ

ರಾಘವೇಂದ್ರ ಇವರ ಸಂಪಾದಕತ್ವದಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆಯೇ ‘ಕರಾವಳಿ ಮಿತ್ರ'. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು, ೮ ಪುಟಗಳನ್ನು ಹೊಂದಿದೆ. ೪ ಪುಟಗಳು ವರ್ಣದಲ್ಲೂ, ಉಳಿದ ನಾಲ್ಕು ಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣವಾಗಿದೆ. ಪತ್ರಿಕೆಯಲ್ಲಿ ಅಪರಾಧ ಸುದ್ದಿಗಳು, ರಾಜಕೀಯ ಸುದ್ದಿಗಳಿಗೆ ಅಧಿಕ ಮಹತ್ವ ನೀಡಲಾಗಿದೆ. ಸಿನೆಮಾ ಹಾಗೂ ಕ್ರೀಡಾ ವಿಷಯಗಳೂ ಪತ್ರಿಕೆಯಲ್ಲಿವೆ.

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜುಲೈ ೧-೧೫, ೨೦೨೩ರ (ಸಂಪುಟ ೧, ಸಂಚಿಕೆ ೧೦) ಸಂಚಿಕೆ. ಈ ಸಂಚಿಕೆಯಲ್ಲಿ ‘ಸೌಜನ್ಯ ಸಾವಿಗೆ ಕೊನೆಗೂ ಸಿಗದ ನ್ಯಾಯ’ ಎಂಬ ಬಗ್ಗೆ ಮುಖಪುಟ ಲೇಖನವಿದೆ. ಬಾರ್ಕೂರುನಲ್ಲಿ ನಡೆದ ಕಾರ್ತಿಕ್ ನ ಕರ್ಮಕಾಂಡಕ್ಕೆ ಬಲಿಯಾದ ಹೆಣ್ಣುಗಳೆಷ್ಟು? ಎಂಬ ತನಿಖಾ ಲೇಖನವಿದೆ. ಸಂಪಾದಕರಾದ ರಾಘವೇಂದ್ರ ಇವರು ತಮ್ಮ ಸಂಪಾದಕೀಯದಲ್ಲಿ “ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ..." ಎಂಬ ಬರಹವನ್ನು ಬರೆದಿದ್ದಾರೆ. ‘ಭಾರತೀಯ ಕ್ರೀಡೆಗಳ ಮೇಲೆ ಪಾಶ್ಚಿಮಾತ್ಯ ಕ್ರೀಡೆಗಳ ಪ್ರಭಾವ’ ಎಂಬ ಮಾಹಿತಿಪೂರ್ಣ ಲೇಖನವಿದೆ. ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರು ಪತ್ರಿಕೆಯ ವರದಿಗಾರರಾಗಿದ್ದಾರೆ. ತುಳಸಿ ಸಸ್ಯದ ಬಗ್ಗೆ ಒಂದು ಲೇಖನವಿದೆ. 

‘ಕರಾವಳಿ ಮಿತ್ರ’ ಪತ್ರಿಕೆಯು ಕುಂದಾಪುರ ತಾಲೂಕಿನ ವಡೇರಹೋಬಳಿಯ ತೊಡಕಟ್ಟು ಎಂಬಲ್ಲಿಂದ ಪ್ರಕಟವಾಗುತ್ತಿದೆ. ಮಂಗಳೂರಿನ ಯೆಯ್ಯಾಡಿ ಬಳಿ ಇರುವ ದಿಗಂತ ಮುದ್ರಣದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಸಂಪಾದಕ, ಮುದ್ರಕ ಮತ್ತು ಪ್ರಕಾಶಕರು ರಾಘವೇಂದ್ರ ಇವರೇ ಆಗಿದ್ದಾರೆ. ಪತ್ರಿಕೆಯ ಬಿಡಿಪ್ರತಿಯ ಬೆಲೆ ರೂ.೧೦.೦೦, ಚಂದಾ ವಿವರಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪತ್ರಿಕೆಯು ಕ್ಲಪ್ತ ಸಮಯಕ್ಕೆ ಮುದ್ರಿತವಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇದೆ.