ಕನ್ನಡ ಪತ್ರಿಕಾ ಲೋಕ (ಭಾಗ ೧೩೬) - ಮುಂಗಾರು

ವಡ್ಡರ್ಸೆ ರಘುರಾಮ ಶೆಟ್ಟಿಯವರ "ಮುಂಗಾರು"
ಇಪ್ಪತ್ತು ವರ್ಷಗಳ ಕಾಲ "ಪ್ರಜಾವಾಣಿ" ಮತ್ತು "ಡೆಕ್ಕನ್ ಹೆರಾಲ್ಡ್" ದೈನಿಕಗಳ ಹಿರಿಯ ವರದಿಗಾರರಾಗಿ ನಾಡಿನಾದ್ಯಂತ ಖ್ಯಾತಿಗಳಿಸಿದ್ದ ವಡ್ಡರ್ಸೆ ರಘುರಾಮ ಶೆಟ್ಟಿಯವರು ದಲಿತರು, ಮಹಿಳೆಯರು, ಕಾರ್ಮಿಕರು, ರೈತರು, ಅಲ್ಪಸಂಖ್ಯಾತರು, ಬಡವರ ಸಹಿತ ಸರ್ವ ಶೋಷಿತರ, ತುಳಿತಕ್ಕೆ ಒಳಗಾದ ಜನರ ಧ್ವನಿಯಾಗಿ, ಶೋಷಣೆ, ಮೌಢ್ಯ ಇತ್ಯಾದಿಗಳ ವಿರುದ್ಧ ಜನಜಾಗೃತಿ ಮೂಡಿಸುವ ಸದುದ್ಧೇಶದಿಂದ ಮಂಗಳೂರಿನಿಂದ ಆರಂಭಿಸಿದ ದೈನಿಕವಾಗಿತ್ತು "ಮುಂಗಾರು".
ಸಾರ್ವಜನಿಕರಿಂದ, ಹಿತೈಷಿಗಳಿಂದ ಶೇರು ಸಂಗ್ರಹಿಸಿ, ನಿರ್ದೇಶಕ ಮಂಡಳಿ ರಚಿಸಿ " ಓದುಗರ ಒಡೆತನದ ದಿನಪತ್ರಿಕೆ" ಎಂಬ ಘೋಷಣೆಯೊಂದಿಗೆ ವಡ್ಡರ್ಸೆ ಮುಂಗಾರು ಆರಂಭಿಸಿದ್ದರು. ಎಸ್. ವಿ. ಅಮೀನ್, ಕಂಕನಾಡಿ ಜೆ. ರಾಮಪ್ಪಣ್ಣ, ಜಯಕರ್ ಮುಂತಾದವರು ನಿರ್ದೇಶಕರಾಗಿದ್ದು. ವಡ್ಡರ್ಸೆಯವರು ಆಡಳಿತ ನಿರ್ದೇಶಕರು ಮತ್ತು ಪ್ರಧಾನ ಸಂಪಾದಕರು ಆಗಿದ್ದರು.
ಮುಂಗಾರು ದಿನಪತ್ರಿಕೆಯ ಮೊದಲ ಸಂಚಿಕೆಯ ಬಿಡುಗಡೆ ಸಮಾರಂಭ ನಡೆದುದು 1984 ಸೆಪ್ಟೆಂಬರ್ 9ರಂದು, ಮಂಗಳೂರು ಪುರಭವನದಲ್ಲಿ. ಬಿಡುಗಡೆ ಮಾಡಿದವರು ದೇವನೂರ ಮಹಾದೇವರು. ವಡ್ಡರ್ಸೆ ಜೊತೆಗೆ ಪ್ರಜಾವಾಣಿ ಬಿಟ್ಟುಬಂದ ಇಂದೂಧರ ಹೊನ್ನಾಪುರ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು. ಎನ್. ಎಸ್. ಶಂಕರ್ ಸುದ್ಧಿ ಸಂಪಾದಕರು. ಕೆ. ಪುಟ್ಟಸ್ವಾಮಿ, ಆರ್. ಜಿ. ಹಳ್ಳಿ ನಾಗರಾಜ್, ಜಿ. ಕೆ. ಮೈರುಗ, ಮಹಾಬಲೇಶ್ವರ ಕಾಟ್ರಹಳ್ಳಿ, ಎಂ. ಬಿ. ಕೋಟಿ, ಶಂಕರ್ ಲಾಳಾಪುರ, ಕೆ. ರಾಮಯ್ಯ, ವಿ. ಮನೋಹರ್, ಕೆ. ಎಸ್. ಕೇಶವ ಪ್ರಸಾದ್, ಕೃಪಾಕರ್, ಕೆ. ಕೆ. ಮಕಾಳಿ, ದಿನೇಶ್ ಅಮೀನ್ ಮಟ್ಟು, ಚಿದಂಬರ ಬೈಕಂಪಾಡಿ (ಮುಖ್ಯ ವರದಿಗಾರರು), ಬಿ. ಎಂ. ಹನೀಫ್, ಮಂಜುನಾಥ ಭಟ್, ಯಶವಂತ ಬೋಳೂರು, ಸುಧಾಕರ ಬನ್ನಂಜೆ, ಗಂಗಾಧರ ಹಿರೇಗುತ್ತಿ, ಗಣಪತಿ ಭಂಡಾರಿ, ಮಂಜುನಾಥ್ ಚಾಂದ್, ವಿಜು ಪೂಣಚ್ಚ, ಜೆ. ಎ. ಪ್ರಸನ್ನ ಕುಮಾರ್, ನೇತ್ರಕೆರೆ ಉದಯಶಂಕರ ಭಟ್, ಆ. ಮುನ್ನ, ರಾಮಮೂರ್ತಿ ಹಾಸನ, ಎಕ್ಕಾರು ಮಹಾಬಲ ಹೆಗ್ಡೆ ಮುಂತಾದ ಸಮರ್ಥರ ತಂಡ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು.
ಟಿ. ಕೆ. ತ್ಯಾಗರಾಜ್ ಮಡಿಕೇರಿ, ಕೋಡಿಹೊಸಹಳ್ಳಿ ರಾಮಣ್ಣ, ಜೆ. ಸು. ನಾ., ರಮೇಶ್ ಶೆಟ್ಟಿ ತೀರ್ಥಹಳ್ಳಿ, ಚಂದ್ರಶೇಖರ ಹೆಗ್ಡೆ ಗುಲ್ವಾಡಿ, ಜಯನ್ ಮಲ್ಪೆ ಮುಂತಾದವರು ವಿವಿಧ ಕಡೆಗಳಿಂದ ವರದಿಗಾರರಾಗಿಯೂ ಸೇವೆ ಸಲ್ಲಿಸಿದ್ದರು. ನನ್ನ (ಶ್ರೀರಾಮ ದಿವಾಣ) ತಂದೆ (ಗಣಪತಿ ದಿವಾಣ)ಯವರು 'ದರ್ಪಣಾಚಾರ್ಯ' ಎಂಬ ಕಾವ್ಯನಾಮದಲ್ಲಿ "ಮಾತಿನ ಮಂಟಪ" ಎಂಬ ಶೀರ್ಷಿಕೆಯಡಿಯಲ್ಲಿ ದೈನಿಕ ಅಂಕಣ ಬರೆಹ ಮತ್ತು ಬಿಡಿ ರಾಜಕೀಯ ಸಂಬಂಧಿ ಲೇಖನಗಳನ್ನು ಬರೆಯುತ್ತಿದ್ದರು. ಬೈಕಂಪಾಡಿ ಕೈಗಾರಿಕಾ ಪ್ರದೇಶದ ಜೋಕಟ್ಟೆ ರಸ್ತೆಯ ತಿರುವಿನಲ್ಲಿ ಕೇಂದ್ರ ಕಚೇರಿ ಇತ್ತು. ವೆಲೆನ್ಸಿಯಾದಲ್ಲಿ ಪ್ರಧಾನ ಕಚೇರಿ ಇತ್ತು.
ಕೆಲ ವರ್ಷಗಳ ಕಾಲ ವಡ್ಡರ್ಸೆಯವರು "ಮುಂಗಾರು" ಮುನ್ನಡೆಸಿದರು. ಬಳಿಕ ಆರ್ಥಿಕ ಮುಗ್ಗಟ್ಟು ತಲೆದೋರಿತು. ಆಡಳಿತ ಮಂಡಳಿಯ ಕೆಲ ಸದಸ್ಯರು, ನಿರ್ದೇಶಕರಿಗೂ ಹಾಗೂ ವಡ್ಡರ್ಸೆಯವರಿಗೂ ನಡುವೆ ಭಿನ್ನಾಭಿಪ್ರಾಯ ತಲೆದೋರಿತು. ಕೊನೆಗೆ ವಡ್ಡರ್ಸೆ ಮುಂಗಾರು ತೊರೆದರು. ಅಂತಿಮವಾಗಿ ಡಾ. ಡಿ. ಸಿ. ಚೌಟ ಅವರು ಕೆಲ ಕಾಲ ಆಡಳಿತ ನಿರ್ದೇಶಕರಾಗಿ, ಪ್ರಧಾನ ಸಂಪಾದಕರಾಗಿ ಮುಂಗಾರು ಮುನ್ನಡೆಸಿ ಕೊನೆಗೆ 1994ರಲ್ಲಿ ಪತ್ರಿಕೆಯ ಪ್ರಕಟಣೆಯನ್ನು ಸ್ಥಗಿತಗೊಳಿಸಿದರು.
~ ಶ್ರೀರಾಮ ದಿವಾಣ