ಕನ್ನಡ ಪತ್ರಿಕಾ ಲೋಕ (ಭಾಗ ೧೬೧) - ಸುಮ ಸೌರಭ

ಕನ್ನಡ ಪತ್ರಿಕಾ ಲೋಕ (ಭಾಗ ೧೬೧) - ಸುಮ ಸೌರಭ

ಪಂಕಜ್ ಸವಣೂರು ಅವರ "ಸುಮ‌ ಸೌರಭ"

ಕವಿ, ಲೇಖಕ, ಕ್ಯಾಸೆಟ್ ತಯಾರಕ, ಕೃಷಿಕ ಪುತ್ತೂರಿನ ಪಂಕಜ್ ಸವಣೂರು (ಪಿ. ಎನ್. ಕೃಷ್ಣ ಭಟ್) ಅವರು ಸಂಪಾದಕರು ಪ್ರಕಾಶಕರಾಗಿ ಹೊರತರುತ್ತಿದ್ದ ಮಾಸಿಕ "ಸುಮ ಸೌರಭ".

"ಸುಮ ಸೌರಭ" ಆರಂಭವಾದದ್ದು 1987ರ ದಶಂಬರ ತಿಂಗಳ ಪ್ರಾಯೋಗಿಕ ಸಂಚಿಕೆಯ ಮೂಲಕ. ಇದಲ್ಲದೆ ಇನ್ನೂ ಎರಡು ತಿಂಗಳು (ಜನವರಿ, ಫೆಬ್ರವರಿ) ಪ್ರಾಯೋಗಿಕ ಸಂಚಿಕೆಯಾಗಿಯೇ ಪ್ರಕಟವಾಗಿತ್ತು. ಪ್ರಾಯೋಗಿಕ ಸಂಚಿಕೆಗಳ ಬಳಿಕ 12  ತಿಂಗಳು 12 ಸಂಚಿಕೆಗಳನ್ನು ಮುದ್ರಿಸಿ ಹೊರತಂದಿದ್ದ ಸಂಪಾದಕರು, ಆನಂತರ ಆರ್ಥಿಕ ಸಂಕಷ್ಟದ ಕಾರಣ ಪ್ರಕಟಣೆಯನ್ನು ಸ್ಥಗಿತಗೊಳಿಸಿದ್ದರು.

ಪ್ರಕಟಣೆ ಸ್ಥಗಿತಗೊಳಿಸಿದ ಬಳಿಕ ಪಂಕಜ್ ಸವಣೂರು ಅವರು ತನ್ನ ಹೆಸರಲ್ಲಿದ್ದ "ಸುಮ ಸೌರಭ" ಟೈಟಲ್ ನ್ನು ಮಂಗಳೂರಿನ ಎಂ. ಜೆ. ರಾವ್ ಅವರಿಗೆ ಹಸ್ತಾಂತರಿಸಿದ್ದರು. ಇವರು ದಶಕಕ್ಕೂ ಅಧಿಕ ಕಾಲ "ಸುಮ ಸೌರಭ" ಪತ್ರಿಕೆಯನ್ನು ಟ್ಯಾಬ್ಲಾಯ್ಡ್ ಮಾದರಿಯಲ್ಲಿ ಹೊರತಂದಿದ್ದರು. ಇವರ ನಿಧನದ ತರುವಾಯ ಪತ್ರಿಕೆ ನಿಂತಿದೆ.

ಪಂಕಜ್ ಸವಣೂರು ಅವರ "ಸುಮ ಸೌರಭ" ಆರಂಭದಲ್ಲಿ  36 ಪುಟಗಳಲ್ಲಿ ಮತ್ತು ನಂತರ 44 ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿತ್ತು. ಆರಂಭದಲ್ಲಿ  ಮಂಗಳೂರು ಅತ್ತಾವರ ಎನ್. ಜಿ. ರಸ್ತೆಯಲ್ಲಿದ್ದ ಎಂ. ರವಿ ಕುಮಾರ್ ಅವರ "ರವಿ ಪ್ರಿಂಟರ್ಸ್" ನಲ್ಲಿ ಮುದ್ರಣವಾಗುತ್ತಿತ್ತು. ಆನಂತರ ಕುಕ್ಕೆ ಸುಬ್ರಹ್ಮಣ್ಯದ ಪುರುಷೋತ್ತಮ ಕಾನಡ್ಕ ಅವರ ಷಣ್ಮುಖ ಪವರ್ ಪ್ರೆಸ್ ನಲ್ಲಿ ಮುದ್ರಣವಾಗುತ್ತಿತ್ತು. ಬಿಡಿ ಸಂಚಿಕೆಯ ಬೆಲೆ ಎರಡು ರೂಪಾಯಿಗಳಾಗಿತ್ತು. ಹೊರಗಿನ ರಕ್ಷಾಪುಟಗಳು ದ್ವಿವರ್ಣದಲ್ಲಿ ಮುದ್ರಣವಾಗುತ್ತಿತ್ತು.

ಮಂಗಳೂರಿನ ರವಿ ಪ್ರಿಂಟರ್ಸ್ ನ ಎಂ. ರವಿ ಕುಮಾರ್ ಅವರು "ದಿವ್ಯವಾಣಿ" ಎಂಬ ಪತ್ರಿಕೆಯೊಂದನ್ನು ಸಂಪಾದಕರಾಗಿ ಹೊರತರುತ್ತಿದ್ದರೆ, ಸುಬ್ರಹ್ಮಣ್ಯದ ಷಣ್ಮುಖ ಪವರ್ ಪ್ರೆಸ್ ನ ಪುರುಷೋತ್ತಮ ಕಾನಡ್ಕ ಅವರು "ಕುಮಾರಧಾರಾ" ಎಂಬ ಪತ್ರಿಕೆಯನ್ನು ಸಂಪಾದಕರಾಗಿ ಹೊರತರುತ್ತಿದ್ದರು. "ಸುಮಸೌರಭ"ವನ್ನು ಮಂಗಳೂರು ನಗರದ ಹೊರವಲಯದ ಮುಡಿಪುವಿನಲ್ಲಿ ನಡೆದ ಸಮಾರಂಭದಲ್ಲಿ ಡಾ. ವಿ. ಎಸ್. ಆಚಾರ್ಯರು ಬಿಡುಗಡೆಗೊಳಿಸಿದ್ದರು. ಡಾ. ಮಾಧವ ಭಂಡಾರಿ, ಮನೋಹರ ಪ್ರಸಾದ್, ಕುಂಬಳೆ ಸುಂದರ ರಾವ್, ಎಂ. ರವಿ ಕುಮಾರ್, ಶ್ರೀಮತಿ ಮಾಲತಿ ರಾವ್ ಪೇಜಾವರ್, ಕೊಡಕ್ಕಲ್ ವೆಂಕಟ್ರಮಣ ಭಟ್, ಕೊಡಕ್ಕಲ್ ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

ಕೊಡಕ್ಕಲ್ ಶಿವಪ್ರಸಾದ್, ವೈ. ಉಮಾನಾಥ ಶೆಣೈ, " ಪ್ರಜ್ಞಾ" (ಅ.ನಾ. ಪೂರ್ಣಿಮಾ), ಬಿ. ಎಂ. ರಶೀದ್ ಬಜತ್ತೂರು, ಬಾಲಸುಬ್ರಹ್ಮಣ್ಯ ಕೆರೆಮಾರ್ಕಂಡೆ, ಪುರುಷೋತ್ತಮ ಕಾನಡ್ಕ, ಕೆ. ಕೆ. ಮೂರ್ತಿ ಸುರತ್ಕಲ್, ಎಸ್. ಆರ್. ಚಂದ್ರ ಚೊಕ್ಕಾಡಿ, ಕೆ. ಎಸ್. ಭಾರತಿ ಸಾಗರ, ಜಿ. ಕೆ. ಶರ್ಮಾ ಬೆಳ್ಳೂರು, ಶ್ರೀನಿವಾಸ ಜೋಕಟ್ಟೆ, ರಾಜ ಅಡ್ಕಸ್ಥಳ, ಪ್ರಸನ್ನ ಕುಮಾರಿ ಎ., ಸುರೇಶ್ ಬೆಳಗಜೆ, ನಾರಾಯಣ ರೈ ಕುಕ್ಕುವಳ್ಳಿ, ಶೀಲಾ ಜೆನ್ನಿಫರ್, ಡಿ. ಐ. ಅಬೂಬಕ್ಕರ್ ಕೈರಂಗಳ, ಜಯಶ್ರೀ‌ ಮಣಿಪಾಲ, ವೀಣಾ ಕಲ್ಲೇರಿಮೂಲೆ ಬೆಳ್ಳೂರು, "ಸೀಮಾಮಾ" ಲಿಂಗಸಗೂರು, "ಸುವಿಚಾರಿ", ಹ. ಚ. ಸತ್ಯನಾರಾಯಣ ಉರಾಳ ಬೆಂಗಳೂರು, " ಪ್ರಸಾದ್" ಮೈರ್ಕಳ, ಪ. ಶಿ. ದೊಡ್ಡಮನಿ ಹುಬ್ಬಳ್ಳಿ, "ರಮೀ" ಪೆರ್ಲ, ಕು. ಹೆಚ್. ಎಂ. ಭಾನು ತುರುವೇಕೆರೆ, ನೀಲಾವರ ಸುರೇಂದ್ರ ಅಡಿಗ, "ಎಸ್", ಸತ್ಯವತಿ ಬಿ., ಬಿ. ಉಮೇಶ್ ರಾವ್, ಕೆ. ಉಷಾ ಕಿರಣ್ ಇನ್ನ, ಡಾ. ಡಿ. ಸದಾಶಿವ ಭಟ್ಟ ನಿಡ್ಪಳ್ಳಿ, ಎಂ. ಗೀತಾ ಪ್ರಭು ಮುಲ್ಕಿ, ಕೆ. ಸಿ. ಗಟ್ಟಿ ಮಂಗಳೂರು, ಹೊ. ಗ. ಮನೋಹರ್ ತುರುವೇಕೆರೆ, ದಿವಾಕರ ಗೇರುಕಟ್ಟೆ, ಪ್ರೊ. ಬಿ. ವಿ. ಮಾರ್ಕಂಡೆ, ಲಕ್ಷ್ಮಿ ಭಟ್ ಪಿ., ಯಂ. ಬಿ. ರಾಜೇಗೌಡ ಧಾರವಾಡ, ಶೈಲಜಾ ಪುದುಕೋಳಿ, ಜಿ. ವಿ. ಗಣೇಶಯ್ಯ, ಎನ್. ಜಿ. ಕೆ. ಪ್ರಸಾದ್, ಡಾ. ಶ್ರೀಕೃಷ್ಣ ಚೊಕ್ಕಾಡಿ, 'ವಿಚಿತ್ರ' ಏತಡ್ಕ, ವೆಂಕಟ್ ಭಟ್ ಎಡನೀರು, ವಾಮನ, ಎಂ. ಪಿ. ಮುಂತಾದವರ ವೈವಿಧ್ಯಮಯ ಬರೆಹಗಳು ಪ್ರಕಟವಾಗುತ್ತಿದ್ದುವು. ಎಲ್ಲೆನ್ ರಾವ್ ಅವರ ವ್ಯಂಗ್ಯಚಿತ್ರಗಳು ಪ್ರತಿ ಸಂಚಿಕೆಯಲ್ಲೂ ಇರುತ್ತಿತ್ತು.

ಕಥೆ, ಧಾರಾವಾಹಿ, ಕವನ, ಹನಿಕವನ, ಚುಟುಕು, ಹಾಸ್ಯ ಬರೆಹ, ಮಕ್ಕಳ ಕಥೆ, ಮಕ್ಕಳ ಕವನ, ವಿಶೇಷ ಲೇಖನ, ರಾಜಕೀಯ ವಿಶ್ಲೇಷಣೆ, ಸಾಮಾಜಿಕ, ವಿಜ್ಞಾನ, ಕೃಷಿ ಸಂಬಂಧಿ ಲೇಖನಗಳು, ವ್ಯಕ್ತಿ ಪರಿಚಯ ಲೇಖನಗಳು ಹೀಗೆ " ಸುಮ ಸೌರಭ"ದಲ್ಲಿ ವೈವಿಧ್ಯಮಯ ಬರೆಹಗಳು ಪ್ರಕಟವಾಗುತ್ತಿತ್ತು.

~ ಶ್ರೀರಾಮ ದಿವಾಣ