ಕನ್ನಡ ಪತ್ರಿಕಾ ಲೋಕ (ಭಾಗ ೧೮೨) - ರಂಜನೆ ಬೋಧನೆ ಪ್ರಚೋದನೆ ಲಂಕೇಶ್
ಗೌರಿ ಲಂಕೇಶರ "ರಂಜನೆ ಬೋಧನೆ ಪ್ರಚೋದನೆ ಲಂಕೇಶ್"
2017ರ ಸೆಪ್ಟೆಂಬರ್ 5ರಂದು ದುಷ್ಕರ್ಮಿಗಳು ಹಾರಿಸಿದ ಗುಂಡಿಗೆ ಬಲಿಯಾಗಿ ಹುತಾತ್ಮರಾದ ಗೌರಿ ಲಂಕೇಶ್ ಅವರು 12 ವರ್ಷಗಳ ಕಾಲ ಸಂಪಾದಕಿ, ಪ್ರಕಾಶಕಿ, ಮುದ್ರಕಿ ಮತ್ತು ಮಾಲಕಿಯಾಗಿ ಮುನ್ನಡೆಸಿದ ವಾರಪತ್ರಿಕೆ "ರಂಜನೆ ಬೋಧನೆ ಪ್ರಚೋದನೆ ಲಂಕೇಶ್".
ಗೌರಿಯವರ "ಲಂಕೇಶ್" ವಾರಪತ್ರಿಕೆ ಆರಂಭವಾಗಿದ್ದು ವಿಶ್ವ ಮಹಿಳಾ ದಿನಾಚರಣೆಯ ದಿನವಾದ ಮಾರ್ಚ್ 8ರಂದು 2005ರಲ್ಲಿ. ಬೆಂಗಳೂರಿನಲ್ಲಿ ಬಿಡುಗಡೆ ಸಮಾರಂಭ ನಡೆದಿತ್ತು. ಟ್ಯಾಬ್ಲಾಯ್ಡ್ ಮಾದರಿಯಲ್ಲಿ ಬಹುವರ್ಣ ಮುಖಪುಟದೊಂದಿಗೆ 20 ಪುಟಗಳಲ್ಲಿ ಪ್ರಕಟವಾಗುತ್ತಿದ್ದ "ಲಂಕೇಶ್" ನ ಬಿಡಿ ಸಂಚಿಕೆಯ ಬೆಲೆ 14 ರೂಪಾಯಿಗಳಾಗಿತ್ತು. ಪತ್ರಿಕೆ ಜಾಹೀರಾತು ರಹಿತವಾಗಿತ್ತು.
ಲಂಕೇಶ್ ನಲ್ಲಿ ಗೌರಿಯವರನ್ನು ಹೊರತುಪಡಿಸಿದರೆ ವಾರಪತ್ರಿಕೆಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರು ಪಾರ್ವತೀಶ ಬಳಿದಾಳೆ (ಸಂಪಾದಕೀಯ ವಿಭಾಗ) ಹಾಗೂ ರಾಜು (ಪ್ರಸರಣ ವಿಭಾಗ) ಅವರು. ಎಚ್. ಎಲ್. ಕೇಶವಮೂರ್ತಿ (ಅಣಕ), ಬಿ. ಚಂದ್ರೇಗೌಡ (ಬಯಲು ಸೀಮೆಯ ಕಟ್ಟೆಪುರಾಣ), ಪಾರ್ವತೀಶ (ಬಿಡಿ ಚಿತ್ರಗಳು), ಯಾಹೂ (ಥೂತ್ತೇರಿ), ಶಿವಸುಂದರ್ (ಚಾರ್ವಾಕ), ಕೆ. ಫಣಿರಾಜ್ (ಗುಮಾಸ್ತನ ಬ್ಲಾಗ್), ಡಾ. ವಾಸು ಎಚ್.ವಿ. (ಅಂಚಿನಿಂದ), ಶಾರದೆ (ಪಾಂಚಾಲಿ), ಸುಕನ್ಯಾ ಕನಾರಳ್ಳಿ ಮೊದಲಾದವರು ಅಂಕಣ ಬರಹಗಾರರಾಗಿದ್ದರು. ಸದಾಶಿವ ಶಣೈ, ಜಿ. ರಾಜಶೇಖರ್, ಸಾರಾ ಅಬೂಬಕರ್, ಕೆ. ಪಿ. ಸುರೇಶ, ನಗರಗೆರೆ ರಮೇಶ್, ಜೆ. ಬಾಲಕೃಷ್ಣ, ಸರ್ಜಾಶಂಕರ್ ಹರಳಿಮಠ, ಡಾ.ಎಂ. ಎಸ್. ಆಶಾದೇವಿ ಮೊದಲಾದವರು ಖಾಯಂ ಲೇಖಕರಾಗಿದ್ದರು.
ರಾ. ಸೋಮನಾಥ ಮುಖ್ಯ ವರದಿಗಾರರಾಗಿದ್ದರು. ವಿಶ್ವಾರಾಧ್ಯ ಸಂತ್ಯಂಪೇಟೆ, ಈ. ಚಂದ್ರ ತಾಳಿಕಟ್ಟೆ, ಗಿರೀಶ್ ತಾಳಿಕಟ್ಟೆ, ಮೇಘರಾಜ್, ನಹುಷ, ಸಂಘಮಿತ್ರ, ಎಂ. ಬಿ. ನಾಗಣ್ಣ, ಬಸವರಾಜ ಸೂಳಿಭಾವಿ, ಎಂ. ಎಸ್. ಸತೀಶ್, ಹುರಳಿಕುಪ್ಪಿ ವಿನಯ್, ಮೆ. ನಾ. ಅಹೋಬಳಪತಿ, ನಹುಷ, ರಮೇಶ್ ಹೀರೆಜಂಬೂರು, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಅಶೋಕ್ ನೀಮ್ ಕರ್, ಶ್ರೀರಾಮ ದಿವಾಣ ಮೊದಲಾದವರು ವಿವಿಧ ಜಿಲ್ಲೆಗಳ ವರದಿಗಾರರಾಗಿದ್ದರು.
ಗೌರಿ ಲಂಕೇಶ್ ಅವರು ತಮ್ಮ "ಲಂಕೇಶ್ ಮೀಡಿಯಾ"ದ ಮೂಲಕ ಲಂಕೇಶ್ ಜೊತೆಗೆ "ಜಾಬ್ ನ್ಯೂಸ್" ಪಾಕ್ಷಿಕ ಪತ್ರಿಕೆ ಮತ್ತು "ಗೈಡ್" ಮಾಸಿಕವನ್ನು ನಡೆಸುತ್ತಿದ್ದರು. ಎರಡು ಪ್ರಕಾಶನ ಸಂಸ್ಥೆಗಳ ಮೂಲಕ ಹಲವು ಪುಸ್ತಕಗಳನ್ನೂ ಮುದ್ರಿಸಿದ್ದಾರೆ. "ಲಂಕೇಶ್" ಆರಂಭಿಸುವ ಮುನ್ನ ಕೆಲ ವರ್ಷಗಳ ಕಾಲ (ಪಿ. ಲಂಕೇಶ್ ನಿಧನದ ನಂತರ) "ಲಂಕೇಶ್ ಪತ್ರಿಕೆ" ಯ ಸಂಪಾದಕಿ ಆಗಿದ್ದರು ಮತ್ತು ಇದಕ್ಕೂ ಮೊದಲು "ಸಂಡೆ" ಇಂಗ್ಲೀಷ್ ಪತ್ರಿಕೆಯ ಪತ್ರಕರ್ತೆಯಾಗಿದ್ದರು. "ಬೆಂಗಳೂರ್ ಮಿರರ್" ಅಂಕಣಕಾರ್ತಿಯೂ ಆಗಿದ್ದರು.
~ ಶ್ರೀರಾಮ ದಿವಾಣ