ಕನ್ನಡ ಪತ್ರಿಕಾ ಲೋಕ (ಭಾಗ ೫೫) - ತುಳುನಾಡ ಸೂರ್ಯ
ಯೋಗೀಶ್ ಶೆಟ್ಟಿ ಜಪ್ಪು ಇವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಕನ್ನಡ-ತುಳು ಮಾಸಿಕ ಪತ್ರಿಕೆ “ತುಳುನಾಡ ಸೂರ್ಯ". ಮಾರ್ಚ್ ೨೦೨೧ರಲ್ಲಿ ಬಿಡುಗಡೆಯಾದ ಮೊದಲ ಸಂಚಿಕೆಯಲ್ಲಿ ಹಲವಾರು ಸಾಹಿತ್ಯ, ಪಾರಂಪರಿಕ, ಸಂಘಟನಾ ಚಟುವಟಿಯ ಲೇಖನಗಳಿಗೆ ಒತ್ತು ನೀಡಿದ್ದಾರೆ. ತುಳುನಾಡಿನ ಕಾರಣಿಕ ದೈವ ಕೊರಗಜ್ಜ, ತುಳುನಾಡಿನ ಕುಟುಂಬದ ಮನೆ, ಯಕ್ಷಗಾನ ಬಯಲಾಟದ ವೇಷ ವೈವಿಧ್ಯ, ತುಳುನಾಡ ಜನಪದ ಆಚರಣೆದ ಕೋರಿದ ಕಟ್ಟ, ಪವಾಡಗಳ ಗುಡ್ಡ ಬಿಕರ್ನಕಟ್ಟೆ ಬಾಲಯೇಸು ಪುಣ್ಯಕ್ಷೇತ್ರ ಹೀಗೆ ತುಳುನಾಡಿನ ವೈಭವನ್ನು ಪರಿಚಯಿಸುವ ಕನ್ನಡ-ತುಳು ಭಾಷೆಯ ಲೇಖನಗಳಿವೆ.
೪೮ ಪುಟಗಳ ವರ್ಣರಂಜಿತ ‘ಸುಧಾ-ತರಂಗ' ಆಕಾರದ ಈ ಮೊದಲ ಸಂಚಿಕೆಯ ಬಿಡಿ ಪ್ರತಿಯ ಬೆಲೆ ರೂ.೨೦.೦೦ ಆಗಿತ್ತು. ಪ್ರಥಮ ಸಂಚಿಕೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್, ಸಾಹಿತಿ ಅಮೃತ ಸೋಮೇಶ್ವರ, ಉಳ್ಳಾಲ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಪೀಟರ್ ಪಾವ್ಲ್ ಸಲ್ಡಾನಾ ಮೊದಲಾದವರು ತಮ್ಮ ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ. ಪತ್ರಿಕೆಗೆ ಸುಧನ್ ಕುಮಾರ್ ಉರ್ವಾ, ಭಾರತಿ ರಾಘವ ಶೆಟ್ಟಿ, ಮುದ್ದು ಮೂಡುಬೆಳ್ಳೆ, ದಿಲ್ ರಾಜ್ ಆಳ್ವ, ಮಹೇಂದ್ರನಾಥ್ ಸಾಲೆತ್ತೂರು ಮೊದಲಾದ ಖ್ಯಾತನಾಮರ ಲೇಖನಗಳಿವೆ. “ತುಳುನಾಡ ರಕ್ಷಣಾ ವೇದಿಕೆ" ಎಂಬ ಜನಪರ ಸಂಘಟನೆಯನ್ನು ಕಟ್ಟಿ ಬಹಳ ಸಮಯದಿಂದ ಹೋರಾಟಗಳ ಮೂಲಕ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುತ್ತಾ ಬಂದಿರುವ ಯೋಗೀಶ್ ಶೆಟ್ಟಿ ಜೆಪ್ಪು ಅವರು ತಮ್ಮ ಸಂಪಾದಕೀಯದಲ್ಲಿ ಪತ್ರಿಕೆಯನ್ನು ಪ್ರಾರಂಭಿಸುವ ಉದ್ದೇಶವನ್ನು ವಿವರಿಸಿದ್ದಾರೆ. ಎರಡು ಸಂಚಿಕೆಗಳ ಬಳಿಕ ಸಂಪಾದಕರು ತಾತ್ಕಾಲಿಕವಾಗಿ ಪತ್ರಿಕೆಯನ್ನು ಸ್ಥಗಿತಗೊಳಿಸಿದ್ದಾರೆ. ಬೇಗದಲ್ಲೇ ಪತ್ರಿಕೆ ಮತ್ತೆ ಹೊರಬರಲಿದೆ ಎಂಬ ಆಶಾವಾದವಿದೆ.