ಕನ್ನಡ ಪತ್ರಿಕೆಗಳ ಪಿತಾಮಹ - ಮಂಗಳೂರ ಸಮಾಚಾರ
ಕನ್ನಡ ಪತ್ರಿಕೆಗಳನ್ನು ಓದುವ ಸೊಗಡೇ ಬೇರೆ. ಕನ್ನಡ ಭಾಷೆಯ ಘಮವನ್ನು ಮರೆಯಲಾಗದು. ಕನ್ನಡ ನುಡಿಯನ್ನು ಅಕ್ಷರ ರೂಪಕ್ಕೆ ತಂದು ಅದನ್ನು ಪ್ರಪ್ರಥಮವಾಗಿ ಪತ್ರಿಕೆಯ ರೂಪದಲ್ಲಿ ಹೊರ ತಂದದ್ದು ಯಾವಾಗ ಗೊತ್ತೇ? ೧೮೪೩ ಜುಲೈ ೧ ರಂದು. ಮಂಗಳೂರಿಗನಾದ ನನಗಂತೂ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ' ಮಂಗಳೂರಿನಲ್ಲೇ ಮುದ್ರಿತವಾಗಿ ನಮ್ಮ ಊರಿನ ಹೆಸರೇ ಹೊಂದಿರುವುದಂತೂ ಅತ್ಯಂತ ಆನಂದದ ಸಂಗತಿ. ಈ ಪತ್ರಿಕೆ ಯಾರು ಹೊರತಂದದ್ದು, ಎಲ್ಲಿ ಮುದ್ರಿತವಾಯಿತು ಎಂಬೆಲ್ಲಾ ವಿಷಯಗಳನ್ನು ನಾವು ಸ್ವಲ್ಪ ತಿಳಿದುಕೊಳ್ಳೋಣ.
ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಕ್ರೈಸ್ತ ಮಿಷಿನರಿಗಳ ಉಸ್ತುವಾರಿಯಲ್ಲಿ ಈ ಪತ್ರಿಕೆಯನ್ನು ಹೊರತರಲಾಯಿತು. ಜರ್ಮನಿ ಮೂಲದ ರೆವರೆಂಡ್ ಹೆರ್ಮನ್ ಮೋಗ್ಲಿಂಗ್ ಎಂಬ ವ್ಯಕ್ತಿಯು ಈ ಪತ್ರಿಕೆಯ ಸಂಪಾದಕರಾಗಿದ್ದರು. ಇವರು ಇತಿಹಾಸಕಾರರು, ಲೇಖಕರು ಹಾಗೂ ಉತ್ತಮ ಅನುವಾದಕರಾಗಿದ್ದರು. ಇದು ಪ್ರತೀ ವಾರ ಕಲ್ಲಚ್ಚಿನಲ್ಲಿ ಮುದ್ರಿತವಾಗಿ ಹೊರಬರುತ್ತಿತ್ತು. ಬಾಶೆಲ್ ಮಿಷನ್ ಸಂಸ್ಥೆಯ ಮೂಲಕ ಪ್ರಕಾಶಿತವಾಗುತ್ತಿತ್ತು. ಆಗೆಲ್ಲಾ ಮುದ್ರಣಗಳು ಭಾರೀ ಕಷ್ಟಕರವಾದ ಸಂಗತಿಯಾಗಿತ್ತು. ನಂತರದ ದಿನಗಳಲ್ಲಿ ಅಚ್ಚು ಮೊಳೆಯ ವಿನ್ಯಾಸದ ಮುದ್ರಣ ಯಂತ್ರವೂ ಬಂತು. ಹೀಗೆ ಕಾಲ ಕ್ರಮೇಣ ಮುದ್ರಣ ಯುಗದಲ್ಲಿ ಬದಲಾವಣೆಗಳು ಸಂಭವಿಸುತ್ತಾ ಬಂತು. ಜರ್ಮನಿ-ಫ್ರಾನ್ಸ್ ನ ಗಡಿಗೆ ಹೊಂದಿಕೊಂಡಿರುವ ಬಾಸೆಲ್ ಎಂಬ ಊರಿನಿಂದ ೧೮೩೪ರಲ್ಲಿ ಭಾರತಕ್ಕೆ ಬಂದ ಮಿಶನರಿಗಳು ಇಲ್ಲಿ ಕೈಗಾರಿಕೆ, ವಿದ್ಯಾಸಂಸ್ಥೆ ಹಾಗೂ ಮುದ್ರಣಾಲಯಗಳನ್ನು ಸ್ಥಾಪಿಸಿದರು. ಈಗಲೂ ಬಾಸೆಲ್ ಮಿಷನ್ ಸಂಸ್ಥೆ ಮಂಗಳೂರಿನಲ್ಲಿದೆ. ೧೮೪೧ರಲ್ಲಿ ಬಾಸೆಲ್ ಮಿಶನ್ ಪ್ರೆಸ್ ಮೂಲಕ ಮುದ್ರಣ ಕಾರ್ಯಗಳನ್ನು ಪ್ರಾರಂಭಿಸಿದರು. ಮೋಗ್ಲಿಂಗ್ ಅವರಿಗೆ ಮುದ್ರಣ ಕಾರ್ಯದಲ್ಲಿ ಚಿನ್ನದ ಕುಸುರಿ ಕೆಲಸವನ್ನು ಮಾಡುತ್ತಿದ್ದ ಅತ್ತಾವರ ಅನಂತಾಚಾರಿ ಹಾಗೂ ಪಾಂಡುರಂಗ ಸೆಟ್ಟಿ ಇವರು ಸಹಕಾರ ನೀಡಿದ್ದರು. ಚಿನ್ನದ ಕೆಲಸದಲ್ಲಿ ಪರಿಣತಿಯನ್ನು ಹೊಂದಿದ್ದ ಅನಂತಾಚಾರಿ ಕನ್ನಡದ ಅಚ್ಚಿನ ಮೊಳೆಗಳನ್ನು ತಯಾರಿಸಿಕೊಟ್ಟಿದ್ದರು.
ಮಂಗಳೂರ ಸಮಾಚಾರದ ಮೊದಲ ಪ್ರತಿಗೆ ಒಂದು ದುಡ್ಡು ಬೆಲೆ ಇತ್ತು. ಇದನ್ನು ಪತ್ರಿಕೆ ಅನ್ನದೆ ಕಾಗದ ಎಂದು ಕರೆಯುತ್ತಿದ್ದರು. ಮೊದಲಿಗೆ ತಿಂಗಳಿಗೆ ಎರಡು ಬಾರಿ ಪ್ರತಿಗಳು ಮುದ್ರಿತವಾಗಿ ಹೊರಬರುತ್ತಿದ್ದುವು. ಆ ಸಮಯದಲ್ಲಿ ಮತಾಂತರಕ್ಕೆ ಮಿಶನರಿಗಳು ಮೊದಲ ಪ್ರಾಶಸ್ತ್ಯ ನೀಡುತ್ತಿದ್ದರೂ ಮೋಗ್ಲಿಂಗ್ ತಮ್ಮ ಪತ್ರಿಕೆಯಲ್ಲಿ ಆ ವಿಷಯವನ್ನು ಬಳಸದೇ ಜನರ ಬೌದ್ಧಿಕ ಮಟ್ಟ ಹೆಚ್ಚಿಸುವ ವಿಷಯಗಳಿಗೆ ಮಹತ್ವ ನೀಡಿದ್ದ. ಮೊದಲಿಗೆ ಕಲ್ಲಚ್ಚಿನಲ್ಲಿ ಮುದ್ರಿತವಾಗುತ್ತಿದುದರಿಂದ ಕ್ರಮೇಣ ಅಧಿಕ ಪ್ರತಿಗಳಿಗೆ ಬೇಡಿಕೆ ಬಂದಾಗ ಬಳ್ಳಾರಿಯಲ್ಲಿ ಅಚ್ಚುಮೊಳೆಯ ಮುದ್ರಣಾಲಯದಲ್ಲಿ ಮುದ್ರಿಸಿ ತರಲಾಗುತ್ತಿತ್ತು. ಆದರೆ ಬಳ್ಳಾರಿಯಲ್ಲಿ ತೆಲುಗು ಭಾಷೆಯ ಪ್ರಭಾವವಿದ್ದುದರಿಂದ ಮತ್ತು ತೆಲುಗು ಹಾಗೂ ಕನ್ನಡ ಭಾಷೆಯ ಲಿಪಿಗಳು ಸ್ವಲ್ಪ ಒಂದೇ ರೀತಿಯಾಗಿದ್ದುದರಿಂದ ಕನ್ನಡ ಭಾಷೆಯ ಮುದ್ರಣಕ್ಕೆ ಅಲ್ಲಿ ತೆಲುಗು ಲಿಪಿಯನ್ನು ಹಾಕಿ ಮುದ್ರಿಸುತ್ತಿದ್ದರು. ಮಾರ್ಚ್,೧೮೪೪ರಲ್ಲಿ ಬಳ್ಳಾರಿಯಲ್ಲಿ ಮುದ್ರಣ ಪ್ರಾರಂಭಿಸಿದಾಗ ಅದರ ಹೆಸರನ್ನು ‘ಕನ್ನಡ ಸಮಾಚಾರ' ಎಂದು ಬದಲಾಯಿಸಲಾಯಿತು. ಆದರೆ ಮೋಗ್ಲಿಂಗ್ ಮಂಗಳೂರಿನಲ್ಲಿ ಇದ್ದುಕೊಂಡು ಬಳ್ಳಾರಿಯಲ್ಲಿ ಮುದ್ರಿಸಲು ಹೊರಟದ್ದು ಅವರಿಗೆ ತುಂಬಾ ಕಷ್ಟಕರ ಸಂಗತಿಯಾಗಿ ಕಾಡಿತು. ಬಳ್ಳಾರಿಯಲ್ಲೂ ಅಧಿಕ ಸಮಯ ಮುದ್ರಿಸಲು ಸಾಧ್ಯವಾಗಲಿಲ್ಲ. ಕೇವಲ ೮ ತಿಂಗಳಲ್ಲೇ ಮುದ್ರಣವನ್ನು ನಿಲ್ಲಿಸಬೇಕಾಯಿತು. ಆ ಸಮಯದಲ್ಲಿ ಪತ್ರಿಕೆಗೆ ತುಂಬಾ ಜನ ಓದುಗರು ಇದ್ದರು ಮತ್ತು ನಿಯಮಿತವಾಗಿ ಪತ್ರಿಕೆಗೆ ಪತ್ರ ಬರೆಯುತ್ತಿದ್ದರು. ಓದುಗರ ಪತ್ರ ಮೋಗ್ಲಿಂಗ್ ಅವರಿಗೆ ತುಂಬಾ ಖುಷಿ ಕೊಡುತ್ತಿತ್ತು.
ಹೊರ ದೇಶದಿಂದ ಬಂದವರು ಕನ್ನಡ ಪತ್ರಿಕೆ ಮಾಡಿದುದನ್ನು ಇಲ್ಲಿಯ ಲೇಖಕರು ಪೂರ್ಣ ಮನಸ್ಸಿನಿಂದ ಒಪ್ಪಿಕೊಳ್ಳಲಿಲ್ಲ. ಆದರೂ ಮಂಗಳೂರ ಸಮಾಚಾರದಲ್ಲಿ ಅಂದಿನ ಪ್ರಸ್ತುತ ವಿಷಯಗಳು, ಸರಕಾರದ ನೋಟೀಸ್ ಮುಂತಾದ ವಿಷಯಗಳು ಬರುತ್ತಿದ್ದವು. ನಾವೆಲ್ಲ ಮೆಚ್ಚ ಬೇಕಾದ ಒಂದು ಸಂಗತಿಯೆಂದರೆ ಅಂದಿನ ಪ್ರಪ್ರಥಮ ಕನ್ನಡ ಪತ್ರಿಕೆಯಲ್ಲಿ ಕನ್ನಡ ಅಂಕೆಗಳನ್ನೇ ಬಳಸಿದ್ದರು. ಆದರೆ ನಾವಿಂದು ಆಂಗ್ಲ ಅಂಕೆಗಳನ್ನೇ ಅಧಿಕವಾಗಿ ಬಳಸುತ್ತೇವೆ. ಕೆಲವರಂತೂ ಕನ್ನಡ ಅಂಕೆಗಳನ್ನು ಮರೆತೇ ಹೋಗಿದ್ದಾರೆ. ಮಂಗಳೂರ ಸಮಾಚಾರ ನಿಂತು ಹೋದ ಬಳಿಕ ಮೋಗ್ಲಿಂಗ್ ಸ್ವಲ್ಪ ಸಮಯ ‘ಕಂನಡ ವಾರ್ತಿಕ' ಎಂಬ ಪತ್ರಿಕೆಯನ್ನೂ, ೧೮೫೩ರಲ್ಲಿ ‘ಮಂಗಳೂರು ಪಂಚಾಂಗ’ವನ್ನೂ ಹೊರ ತಂದಿದ್ದ. ಆದರೆ ಯಾವುದನ್ನೂ ತುಂಬಾ ಸಮಯ ಮುಂದುವರೆಸಿಕೊಂಡು ಹೋಗಲು ಅವರಿಂದ ಸಾಧ್ಯವಾಗಲಿಲ್ಲ. ಆದರೂ ಕನ್ನಡ ಪತ್ರಿಕಾ ರಂಗಕ್ಕೆ ನಾಂದಿ ಹಾಡಿದ ಹೆರ್ಮನ್ ಮೋಗ್ಲಿಂಗ್ ಅವರನ್ನು ನಾವಿಂದು ಸ್ಮರಿಸಲೇ ಬೇಕಾಗಿದೆ. ಹರ್ಮನ್ ಮೋಗ್ಲಿಂಗ್ ಹೆಸರಿನಲ್ಲಿ ಪತ್ರಿಕಾ ರಂಗದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಕನ್ನಡದ ಮೊದಲ ಪತ್ರಿಕೆ ಮುದ್ರಣವಾಗಿ ಹೊರ ಬಂದ ದಿನ ಜುಲೈ ೧. ಆದುದರಿಂದ ಈ ದಿನವನ್ನು ಪತ್ರಿಕಾ ದಿನವೆಂದು ಕರೆಯುತ್ತಾರೆ. ಇಂದು ಹಲವಾರು ಕನ್ನಡ ಪತ್ರಿಕೆಗಳು ಮಾರುಕಟ್ಟೆಯಲ್ಲಿವೆ. ದೃಶ್ಯ ಮಾಧ್ಯಮದ ಹಾಗೂ ಅಂತರ್ಜಾಲದ ಹೊಡೆತದಿಂದ ಕನ್ನಡ ಪತ್ರಿಕೆಗಳು ಕಮ್ಮಿಯಾಗುತ್ತಿವೆ. ಕನ್ನಡ ಭಾಷೆಯ ಪತ್ರಿಕೆಗಿಂತ ಬೇರೆ ಭಾಷೆಯ ಪತ್ರಿಕೆಗಳು ಕರ್ನಾಟಕದಲ್ಲಿ ಅಧಿಕವಾಗಿ ಮಾರಾಟವಾಗುತ್ತಿವೆ ಎಂಬುದು ಬೇಸರದ ಸಂಗತಿ. ದಿನಕ್ಕೆ ಒಂದಾದರೂ ಕನ್ನಡ ಪತ್ರಿಕೆಯನ್ನು ಕೊಂಡು ಓದೋಣ. ಆ ಮೂಲಕ ಕನ್ನಡ ಪತ್ರಿಕಾ ರಂಗವನ್ನು ಬೆಳೆಸಿ, ಉಳಿಸೋಣ.
ಚಿತ್ರ ೧: ಮಂಗಳೂರ ಸಮಾಚಾರದ ಪ್ರತಿ
ಚಿತ್ರ ೨: ಪತ್ರಿಕೆಯ ಸಂಪಾದಕ ಹೆರ್ಮನ್ ಮೋಗ್ಲಿಂಗ್
ಚಿತ್ರ ಕೃಪೆ: ಅಂತರ್ಜಾಲ ತಾಣ