ಕನ್ನಡ ರ೦ಗದಲ್ಲಿನ ರಾಮಾಯಣ

ಕನ್ನಡ ರ೦ಗದಲ್ಲಿನ ರಾಮಾಯಣ

ಬರಹ

ಮೈಸೂರಿನ ರಂಗಾಯಣದ ಆವರಣ ಮತ್ತು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ ನನ್ನನ್ನು ಬಹಳವಾಗಿ ಸೆಳೆಯುವ ತಾಣಗಳು. ಇಂದಿನ ಅಬ್ಬರದ ದಿನಗಳಲ್ಲಿ ಇಲ್ಲಿ ಒಂದಿಷ್ಟು ಹೊತ್ತು ಕಳೆದರೆ ವಿಶಿಷ್ಟವಾದ ಅನುಭವ ನನ್ನದಾಗುತ್ತದೆ. ನಿರಂತರವಾಗಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ನನ್ನೊಳಗೆ ಸಂವಾದಿಯಾಗಿ ನಿಲ್ಲಬಲ್ಲವು. ನಾನು ಮತ್ತು ನನ್ನಂಥವರು ಈ ಕಾಲಘಟ್ಟದಲ್ಲಿ ಅದ್ಯಾವುದೋ ಆವರಣದೊಳಕ್ಕೆ ಸಿಲುಕಿ ಗೊಂದಲ ಹಾಗು ಅಗತ್ಯವಾಗಿರಬಹುದಾದ,ಅನಗತ್ಯವಾಗಿರಬಹುದಾದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಕೊನೆಗೆ ಕಾಡಹರಟೆಗೆ ಬಂದು ಮುಕ್ತಾಯಗೊಳಿಸುವ ಸಂದರ್ಭದಲ್ಲಿ ಗಂಭೀರರಾಗಿ ಆತಂಕಗೊಳ್ಳುವುದೂ ಇದೆ.

ನಿರಂತರ, ಕೆಲಬಾರಿ ಅನಗತ್ಯ ಅನ್ನಬಹುದಾದ ಆತಂಕ ಮತ್ತು ದಿನನಿತ್ಯದ ಜಂಜಾಟದ,ಗುದ್ದಾಟದ ಬದುಕಿನ ನಡುವೆ ಆಹ್ಲಾದ,ಆಸ್ವಾದಿಸುವ ಕ್ಷಣಗಳನ್ನು ಮೊನ್ನೆ ರವೀಂದ್ರ ಕಲಾಕ್ಷೇತ್ರದ ಆವರಣ ನನಗೆ ಒದಗಿಸಿಕೊಟ್ಟಿತ್ತು. ನೀನಾಸಂ ಮರು ತಿರುಗಾಟದ 'ಕನ್ನಡ ರಾಮಾಯಣ'ನಾಟಕ ಪ್ರದರ್ಶನ ಇತ್ತೀಚಿಗಿನ ಒಂದು ಅದ್ಭುತ ರಂಗ ಸಂವಹನ.ಮನಸ್ಸು ಮತ್ತು ಬುದ್ಧಿಯನ್ನು ಚುರುಕಾಗಿಸಿದ ಈ ಪ್ರದರ್ಶನ ಕನ್ನಡ ರಂಗಭೂಮಿಯಲ್ಲಿನ ಬದಲಾವಣೆ,ಹೊಸ ಅಲೆಯ ಅನ್ವೇಷಣೆಯ ನಡುವೆ ತನ್ನ ತಾಕತ್ತನ್ನು ತೆರೆದಿಟ್ಟಿತ್ತು.

ಹೊಸ ವಿಷಯ ವಸ್ತುವನ್ನು ತೆಗೆದುಕೊಂಡು ಅದನ್ನು ಪ್ರಸ್ತುತಪಡಿಸುವುದು ಸವಾಲು. ಆದರೆ ಜನಮಾನಸದಲ್ಲಿ ನಿತ್ಯ ನಿರಂತರವಾಗಿ ಕಾಡುವ ತುಂಬ ಹಳೆಯದಾದ,ಆಯಾ ಕಾಲದಲ್ಲಿ ಮತ್ತೆ ಮತ್ತೆ ಪ್ರಸ್ತುತವಾಗುವ ರಾಮಾಯಣ ಮಹಾಕಾವ್ಯವನ್ನು ರಂಗರೂಪಕ್ಕಿಳಿಸಿಯೂ ಕಾವ್ಯಾತ್ಮಕತೆಗೆ ಧಕ್ಕೆ ಬರದ ರೀತಿಯಲ್ಲಿ ಅದನ್ನು ವಿಜೃಂಭಿಸುವಂತೆ ಮಾಡಿದ ವೆಂಕಟರಮಣ ಐತಾಳರ ಅದ್ಭುತ ಪ್ರತಿಭೆ ನೋಡುಗರನ್ನು ಆವರಿಸಿತ್ತು.

ಕುವೆಂಪುರವರ ಶ್ರೀ ರಾಮಾಯಣ ದರ್ಶನಂ, ಕುಮುದೇಂದ್ರ ರಾಮಾಯಣ, ಪಾರ್ಥಿ ಸುಬ್ಬನ ಯಕ್ಷಗಾನ ಪ್ರಸಂಗ,..ಹೀಗೆ ಮಹಾ ಮಹಾ ಗ್ರಂಥಗಳನ್ನೆಲ್ಲ ತೆರೆದು, ನೋಡಿ,ಆಯ್ಕೆ ಮಾಡಿ,ಅಳೆದು-ತೂಗಿ,ಬೆಸೆದು ಕಲ್ಪಿಸಿಕೊಂಡು ರಂಗಕ್ಕೆ ತಂದು ನಮ್ಮ ಮನಸ್ಸು ತುಂಬಿಕೊಳ್ಳುವಂತೆ ಮಾಡಿ ಅಪೂರ್ವ ಅನುಭವವನ್ನು ಪ್ರೇಕ್ಷಕರು ತಮ್ಮದಾಗಿಸಿಕೊಳ್ಳುವಂತೆ ರೂಪಿಸಿದ ಐತಾಳರಿಗೆ ತುಂಬು ಧನ್ಯವಾದಗಳು.

ಅನಾಮತ್ತು ಎರಡು ಗಂಟೆ ನಮ್ಮನ್ನು ಪೂರ್ಣವಾಗಿ ತೊಡಗಿಸಿಕೊಳುವಂತೆ ಅನಾವರಣಗೊಂಡ 'ಕನ್ನಡ ರಾಮಾಯಣ' ಅಚ್ಚಳಿಯದಂತೆ ಇರುತ್ತದೆ.ಅದೇ ಕಥೆ,ಅದೇ ಕಾವ್ಯ.. ಮತ್ತೆ ಮತ್ತೆ ನಮ್ಮನ್ನು ಮುಖಾ ಮುಖಿಯನ್ನಾಗಿಸಿಕೊಳ್ಳುತ್ತದೆ ರಾಮಾಯಣ. ಆ ಶ್ರೀರಾಮ,ಆ ಸೀತೆ,ಆ ಲಕ್ಷ್ಮಣ,ಆ ದಶರಥ ಮಹಾರಾಜ,ಅವನ ಅಸಹಾಯಕತೆ,ಮೋಹ,ರಾವಣನಂಥ ರಾವಣ,ಬಹುಷಃ ರಾಮನ ಆದರ್ಶಕ್ಕೆ ಪುಷ್ಠಿ ಒದಗಿಸಲೆಂದೆ,ಅದನ್ನು ಎಳೆ ಎಳೆಯಾಗಿ ಬಿಡಿಸಿಡಲೆಂದೆ ವಾಲ್ಮೀಕಿಯಿಂದ ಸೃಷ್ಟಿಯಾದ ರಾವಣ,ಕುಂಭಕರ್ಣ,ಕೈಕೇಯಿ ಒಂದೊಂದು ಪಾತ್ರಗಳು ವಿಸ್ತರಿಸಿದಷ್ಟೂ ಹಿಗ್ಗುವ ಅಥವಾ ಸಂಕ್ಷಿಪ್ತಗೊಳಿಸಿದಷ್ಟು ಕುಗ್ಗುವ ವ್ಯಕ್ತಿತ್ವಗಳನ್ನು ಸರ್ವಕಾಲದಲ್ಲೂ ನಮ್ಮ ನಿಮ್ಮ ನಡುವೆ ಇರುವ ಕೆಲವರಿಗೆ ಆರೋಪಿಸುವಂತಿರುವ,ಮಾಲೆ ಮಾಲೆಯಾಗಿ ಸರ್ವಕಾಲಕ್ಕೂ ಅಕರ್ಷಿಸುವ ಮೌಲ್ಯಗಳನ್ನೊಳಗೊಂಡ ರಾಮಾಯಣ.ಅದನ್ನು ವಿಭಿನ್ನವಾಗಿ,ಹೊಚ್ಚ ಹೊಸದೆನ್ನುವಂತೆ ಕಣ್ಣಿಗೆ ತುಂಬಿಕೊಟ್ಟಿದ್ದು ಈ ನಾಟಕದ ವೈಶಿಷ್ಟ್ಯತೆ.

ನಾಟಕದಲ್ಲಿನ ನಟರ ಸಾಮರ್ಥ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.ಅವರ ಆಂಗಿಕ ಅಭಿನಯ,ಮುಖಭಾವ,ಅವರ ಪವರ್ ಫುಲ್ ಎಂಟ್ರಿ,ಸುಲಲಿತವಾಗಿ ಹೇಳಿದ ಆ ಕ್ಲಿಷ್ಟ ಕನ್ನಡ,ದೃಶ್ಯಕ್ಕೆ ತಕ್ಕಂತೆ ಮೂಡುತ್ತಿದ್ದ ಬೆಳಕು,ಸಂದರ್ಭಕ್ಕನುಗುಣವಾಗಿ ಕೇಳಿಬರುತ್ತಿದ್ದ ರಂಗ ಸಂಗೀತ. ಅಲ್ಲಿ ಯಾವ ಕೊರತೆಯೂ ನನಗೆ ಕಂಡುಬರಲಿಲ್ಲ.. ಪ್ರೇಕ್ಷಕರ ಚಪ್ಪಾಳೆಯೂ ಸಹ.

ಕನ್ನಡ ರಂಗಭೂಮಿ ೨೧ ಶತಮಾನಕ್ಕೆ ಕಾಲಿಟ್ಟು ೭ ವರ್ಷಗಳಾದವು.ಈ ನಾಟಕ ನೋಡಿದ ಮೇಲೆ ನಡೆದು ಬಂದ ದಾರಿಯನ್ನು ಹಿಂದಿರುಗಿ ನೋಡಬೇಕು ಅನ್ನಿಸುತ್ತಿಲ್ಲ.ಸ್ಪರ್ಧೆ ಹೇಗೇ ಇರಲಿ,ಯಾವುದೇ ರಿತಿಯದಾಗಿರಲಿ ಅದನ್ನೆಲ್ಲ ಎದುರಿಸುವ ಶಕ್ತಿ ಸಾಮರ್ಥ್ಯ ನಮ್ಮ ಕನ್ನಡ ರಂಗಭೂಮಿಗಿದೆ.ಮುಂದಿನ ದಿನಗಳಲ್ಲಿ ರಾರಾಜಿಸಲಿ ನಮ್ಮ ರಂಗಭೂಮಿ.
-ಪ್ರಸಾದ ಹೆಗಡೆ.