ಕಪ್ಪು ಕಣ್ಣುಗಳ ಆಕೆಯ ನುಡಿಗಳು
ದೋಣಿಯಾಕಾರದ ಕಪ್ಪು ಕಣ್ಣಿನಲಿ
ಕಡಲಿನಷ್ಟು ಅಗಲ ಕನಸು ತುಂಬಿ
ಕತ್ತಲೆ ದಾರಿಯಲ್ಲಿ ಒಬ್ಬಳೆ ನಡೆದು ಬರುವಾಗ
ಎದೆಯ ಗೂಡಿಗೆ ಕಾಮದ ಬೆಂಕಿ
ಹಚ್ಚಿಕೊಂಡವನೊಬ್ಬ ಎದುರಾದ
ನನ್ನ ಕಣ್ಣುಗಳನು ಆತ ದಿಟ್ಟಿಸಲೇ ಇಲ್ಲ ;
ನನ್ನ ಮೈ ಮೇಲಿನ ಅಂಗಿಯಿಂದ
ಹೊರಗೆ ಇಣುಕಿದ ಎರಡು ನೀಳ ತೋಳುಗಳು ;
ವರ್ಷಗಳಿಂದ ಕಾಪಡಿಕೊಂಡ
ನನ್ನದೆನ್ನುವ ಎದೆ,
ಅದರ ಮೇಲಿನ ಚರ್ಮದ ಹೊದಿಕೆ,
ನನ್ನತನವನು ಹೊತ್ತು ನನ್ನೊಡನೆ
ಹುಟ್ಟಿದಾಗಿನಿಂದಾ ನಡೆದ ನನ್ನ
ಮೂಳೆಯ ಕಾಲುಗಳು,,,ಮತ್ತದರ ಬಣ್ಣ
ಇವಿಷ್ಟೇ ಅವನ ಕಣ್ಣಿಗೆ ಕಂಡಿದ್ದು,
ಕಂಡವನು, ಉರಿವ ಕೈಗಳಲ್ಲಿ,
ನನ್ನ ತೋಳುಗಳನು ಹಿಡಿದುಬಿಟ್ಟ;
ನಾನು ಕೊಸರಿದರೂ, ಕಾಡಿ ಬೇಡಿದರೂ
ಬಿಡದೆ
ಅವ್ವನ ಎದೆಹಾಲು ಕುಡಿದು ಬೆಳೆದ
ನನ್ನೆದೆಯ ಮುಟ್ಟಿಬಿಟ್ಟ ,,,,
ಒರಟು ವಾಸನೆಯ, ಕಮಟು
ಚರಂಡಿಯ ಪಕ್ಕವೆನ್ನದೆ
ಮಾನವತೆಯ ಬಟ್ಟೆ ಹರಿದು ಬೆತ್ತಲಾದ
ನನ್ನ ಕಣ್ಣಿನ ಬಣ್ಣ ಬಣ್ಣದ ಕನಸುಗಳು
ಕರಟಿ ಹನಿ ಹನಿಯಾಗಿ ಬಿದ್ದವು,
ನನ್ನ ಸುತ್ತಲೂ ನನ್ನದೇ ಕನಸುಗಳ ಹೆಣ
ಆ ಹೆಣದ ಕಮಟು ವಾಸನೆ ;
ಕೊನೆಗೆ ನನ್ನನೂ ಇರಿದು ಕೊಂದ,,,,,
ಆತ ದೋಚಿದ್ದು,
ನನ್ನವ್ವನ ಎದೆಯೊಳಗೆ ನಾನು ಹುಟ್ಟಿ ಹಾಕಿದ ಭರವಸೆಯನ್ನು,
ನನ್ನಪ್ಪನ ತೋಳೊಳಗೆ ನಾನು ಬೆರೆಸಿಟ್ಟ ಶಕ್ತಿಯನ್ನು,
ಅವನಿಗೆ ಅದು ಹೆಚ್ಚೆಂದರೆ ನಿಮಿಷಗಳ ಆಮಿಷ
ನನಗೋ,
ಅದೆಷ್ಟೋ ದಿನಗಳು ಉಪವಾಸವಿದ್ದ ನನ್ನವ್ವ
ಕುಡಿಸಿದ ಮೊಲೆಹಾಲಿನ ಪರಿಮಳ,,,, ನನ್ನ ಕನಸು
ಬೆನ್ನು ಮೂಳೆ ಮುರಿಯುವಂತೆ ದುಡಿದ
ಅಪ್ಪನ ಬೆವರಿನ ತಣ್ಣೀರು,,,,,,,,, ನನ್ನ ಕನಸು
ಅಷ್ಟು ವರ್ಷಗಳ ನನ್ನವ್ವನ ಶ್ರಮ,
ಬೂದಿಯಾಯಿತು, ಚರಂಡಿಯ ಪಕ್ಕದಲಿ,
ಅತ್ತಳು ಅವ್ವ, ನನ್ನ ಕಣ್ಣನು ನೆನೆದು,
ಅಪ್ಪ ಹೆಣವಾದ, ನನ್ನದೇ ಗೋರಿಯ ಪಕ್ಕ,
ನಾ ಸತ್ತಂತೆ,
ಪ್ರತಿ ಹೆಣ್ಣೊಳಗಿನ, ಹೆಣ್ಣು ಸತ್ತರೆ
ತಿಳಿಯುತ್ತದೆ, ಹೆಣ್ತನದ ಬೆಲೆ,,
ಹೆಣ್ಣೊಳಗೆ, ಹೆಣ್ಣು ಸತ್ತು, ಕ್ರೌರ್ಯ ಉದಯಿಸಿದರೆ,,,
ಹೆಣ್ಣ ಮನದ ತಾಳ್ಮೆ ಸತ್ತರೆ,,,,,,
ಬಣ್ಣ ಕಳೆದ ಕಾಮನಬಿಲ್ಲಿನಂತಾಗುವುದು ಬದುಕು,,,,
-ಜೀ ಕೇ ನ