ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು

ಬರಹ

ಮಧೂರುಗಣೇಶ ಚತುರ್ಥಿಯಂದು ಕರಾವಳಿಯ ಅನೇಕ ಕಡೆ ಒಂದು ಹಾಡು ಕೇಳಿಬರುತ್ತದೆ. ಇದರ ಸಾಹಿತ್ಯ ಸರಿಯಾಗಿ ತಿಳಿದಿಲ್ಲ. ಆ ಹಾಡಿನಲ್ಲಿ ಕೆಳಗಿನ ಚರಣ ಬರುತ್ತದೆ. ಈ ಚರಣದಲ್ಲಿ ಕರಾವಳಿಯ ಪ್ರಸಿದ್ಧ ಗಣಪತಿ ದೇವಾಲಯಗಳ ಹೆಸರುಗಳಿವೆ.

"ಮಧೂರು ಗಣಪತಿ ಶರವು ಗಣಪತಿ ಕುಂಭಾಸಿ ಗಣಪತಿ ಶರಣಂ
ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ ಗೋಕರ್ಣ ಗಣಪತಿ ಶರಣಂ"

ಈ ದೇವಸ್ಥಾನಗಳ ವಿಶೇಷತೆಯೆಂದರೆ (ಒಂದೆರಡು ಬಿಟ್ಟು) ಅಪಾರ ಪ್ರಕೃತಿ ಸೌಂದರ್ಯದಿಂದ ಆವರಿಸಿದೆ. ಇಲ್ಲಿ ನಾನು ಸಂಕ್ಷಿಪ್ತ ವಿವರಣೆಯನ್ನು ನೀಡಿದ್ದೇನೆ. ವಿಸ್ತಾರವಾಗಿ ಸಮಯವಿದ್ದಾಗ ಬರೆಯುತ್ತೇನೆ. ಈ ದೇವಸ್ಥಾನಗಳು ಎಷ್ಟು ಪ್ರಸಿದ್ಧಿ ಎಂದರೆ ಕರಾವಳಿಯ ಬಿರುಸಿನ ಮಳೆಗಾಲದ ಮಧ್ಯೆಯೂ ಗಣೇಶ ಚತುರ್ಥಿಯಂದು ಬಹಳ ಜನ ಸೇರುತ್ತಾರೆ. ಗಣಪತಿ ದೇವಸ್ಥಾನ ಎಂದು ಎಲ್ಲೂ ಇಲ್ಲ. ಗಣಪತಿ ಜೊತೆಗೆ ಶಿವನೂ ಇರುವನು. ಹಾಗೆ ಈ ಎಲ್ಲಾ ದೇವಸ್ಥಾನಗಳಿಗೂ ಐತಿಹಾಸಿಕ ಹಿನ್ನೆಲೆ ಇದೆ.

೧) ಮಧೂರು ಗಣಪತಿ: ಕಾಸರಗೋಡು ಜಿಲ್ಲೆಯ ಮಧೂರು ಎಂಬ ಸುಂದರ ಊರಿನಲ್ಲಿ ಈ ಗಣಪ ನೆಲೆಸಿದ್ದಾನೆ. ಮಂಗಳೂರಿನಿಂದ ಕಾಸರಗೋಡಿಗೆ ಹೋಗಿ ಅಲ್ಲಿಂದ ಮಧೂರಿಗೆ ಹೋಗಬಹುದು. ಮಧೂರು ರಾಷ್ಟ್ರೀಯ ಹೆದ್ದಾರಿ-೧೭ ಬಳಿ ಬರುವುದೋ ತಿಳಿದಿಲ್ಲ. ಇಲ್ಲಿ ಹೊಳೆಯೊಂದು ಹರಿಯುತ್ತದೆ. ಮಳೆಗಾಲದಲ್ಲಿ ಈ ದೇವಸ್ಥಾನ ಸಂಪೂರ್ಣ ಹೊಳೆಯಾಗುತ್ತದೆ. ಆದರೂ ಚೌತಿಯಂದು ಜನರಿಗೆನೂ ಕಡಿಮೆಯಿಲ್ಲ.

೨) ಶರವು ಗಣಪತಿ: ಈ ದೇವಸ್ಥಾನ ಮಂಗಳೂರು ನಗರದ ಹೃದಯ ಭಾಗದಲ್ಲಿದೆ. ವಿಶ್ವಭವನ ಬಸ್ ನಿಲ್ದಾಣದಿಂದ ಸ್ವಲ್ಪ ನಡೆದರೆ ಈ ದೇವಸ್ಥಾನ ಸಿಗುತ್ತದೆ.

೩) ಕುಂಭಾಸಿ ಗಣಪತಿ: ಈ ದೇವಸ್ಥಾನ ಉಡುಪಿ ಕುಂದಾಪುರದ ಮಧ್ಯೆ ಇದೆ. ರಾಹೆ-೧೭ರ ಕುಂಭಾಸಿ ಎಂಬ ಜಾಗದಲ್ಲಿ ಇಳಿದು ನಂತರ ಅಡ್ಡ ರಸ್ತೆಯಲ್ಲಿ ಅನೆಗುಡ್ಡೆಗೆ ಹೋಗಬೇಕು. ಇಲ್ಲಿ ದೇವಸ್ಥಾನ. ಈ ದೇವಸ್ಥಾನದ ಕಡುಬು ಬಹಳ ರುಚಿ. ಈ ದೇವಸ್ಥಾನದ ಬಳಿ ಇರುವ ಮೆಟ್ಟಿಲುಗಳಲ್ಲಿ ಇಳಿದು ಹೋದರೆ ಶಿವನ ದೇವಸ್ಥಾನ ಸಿಗುತ್ತದೆ.

೪) ಹಟ್ಟಿಯಂಗಡಿ ಗಣಪತಿ: ಕುಂದಾಪುರ-ಕೊಲ್ಲೂರು ಮಾರ್ಗ ಮಧ್ಯದಲ್ಲಿ ಕಾಣಸಿಗುವ ಈ ದೇವಸ್ಥಾನ ಕೂಡ ಬಹಳ ಪ್ರಸಿದ್ಧ.

೫) ಇಡಗುಂಜಿ ಗಣಪತಿ: ಹೊನ್ನಾವರದ ಬಳಿ ಬರುವ ಇಡಗುಂಜಿ ದೇವಸ್ಥಾನ ಬಹಳ ನಿಸರ್ಗ ರಮಣೇಯವಾಗಿದೆ. ಇಲ್ಲಿನ ದೇವಸ್ಥಾನಕ್ಕೆ ಕಳೆದ ವರ್ಷ ಚೌತಿಯಂದು ೫೦,೦೦೦ಕ್ಕಿಂತಲೂ ಅಧಿಕ ಭಕ್ತರು ಭೇಟಿ ನೀಡಿದ್ದರು.

೬) ಗೋಕರ್ಣ ಗಣಪತಿ: ಶಿವನ ಆತ್ಮಲಿಂಗದಿಂದ ಭೂಕೈಲಾಸ ಎಂದು ಪ್ರಸಿದ್ಧಿ ಪಡೆದ ಗೋಕರ್ಣದಲ್ಲಿ ಶಿವನಿಗಿರುವಷ್ಟೇ ಪ್ರಾಶಸ್ತ್ಯ ಗಣೇಶನಿಗಿದೆ. ಯಾಕೆಂದರೆ ಗಣಪನೆ ಇಟ್ಟಿದ್ದಲ್ಲವೆ :)

೭) ಸೌತಡ್ಕ ಗಣಪತಿ: ಇವುಗಳನ್ನು ಬಿಟ್ಟು, ರಾಹೆ-೪೮ ರಿಂದ ಧರ್ಮಸ್ಥಳಕ್ಕೆ [ಶಿರಾಡಿ ಘಾಟಿ ಇಳಿದ ತಕ್ಷಣ ಗುಂಡ್ಯ ಸಿಗುತ್ತದೆ. ಗುಂಡ್ಯದಿಂದ ನೆಲ್ಯಾಡಿಗೆ (ಅಂದರೆ ಮಂಗಳೂರು ಕಡೆ) ಹೋಗುವಾಗ ರಾಹೆ-೪೮ರಲ್ಲಿ ಬಲಕ್ಕೆ ಒಂದು ರಸ್ತೆ ಧರ್ಮಸ್ಥಳಕ್ಕೆ ಹೋಗುತ್ತದೆ] ಹೋಗುವ ಮಾರ್ಗದಲ್ಲಿ ಸೌತಡ್ಕ ಎಂಬಲ್ಲಿ ಮಹಾಗಣಪತಿ ದೇವಸ್ಥಾನವಿದೆ. ವಿಶೇಷವೆಂದರೆ ಈ ದೇವಸ್ಥಾನ ಮರದಡಿ ಇದೆ. ಎಷ್ಟು ಬಾರಿ ಮಂಟಪ ಕಟ್ಟಿದರೂ ಕುಸಿದು ಬೀಳುತ್ತಿತ್ತಂತೆ. ಯಾಕೋ ಗಣಪತಿಗೆ ಮರವೇ ಖುಷಿಯೇನೋ. ಇಲ್ಲಿನ ಅಪ್ಪ ಪ್ರಸಾದ, ಅವಲಕ್ಕಿ ಪಂಚಕಜ್ಜಾಯ ಬಹಳ ರುಚಿ. ಹಾಗೆ ಈ ದೇವಸ್ಥಾನವೂ ಕೂಡ ಹಚ್ಚ ಹಸಿರಿನಿಂದ ಕೂಡಿದೆ.

-----------------------------------------------------------------------------------------------------------------------------


ಕೃಷ್ಣಪ್ರಕಾಶರ ಚಿತ್ರಪುಟದಲ್ಲಿ ಮಧೂರು ಗಣಪನ ನೋಡಿದಾಗ, ಹಾಗೆ ಅನಿಲ್ ಅವರ ಜ್ಯೋತಿರ್ಲಿಂಗಗಳ ಲೇಖನ ಓದಿದಾಗ, ಕರಾವಳಿಯ ಗಣಪತಿ ದೇವಾಲಯಗಳ ಬಗ್ಗೆ ಯಾಕೆ ಬರೆಯಬಾರದು ಎಂಬ ಆಲೋಚನೆ ಮನದಲ್ಲಿ ಹುಟ್ಟಿತು. ಅದರ ಪರಿಣಾಮ ಈ ಸಣ್ಣ ಲೇಖನ. ಈ ಕ್ಷೇತ್ರಗಳ ಬಗ್ಗೆ ಅಧಿಕ ಮಾಹಿತಿ ಇದ್ದರೆ ಬಲ್ಲವರು ಹಂಚಿಕೊಳ್ಳಬೇಕಾಗಿ ವಿನಂತಿ.


---------------------------------------------------------------------------------------------------------------------------------------------------
ಚಿತ್ರ: ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಮಧೂರು, ಕಾಸರಗೋಡು ಜಿಲ್ಲೆ. ಕೃಷ್ಣಪ್ರಕಾಶ ಬೊಳುಂಬು ಅವರ ಚಿತ್ರ ಪುಟದಿಂದ ಬಳಸಿದ್ದು