ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೧

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೧

ಬರಹ

ಶ್ಯಾಮಶಾಸ್ತ್ರಿಗಳು
ಶ್ಯಾಮಶಾಸ್ತ್ರಿಗಳು (ಕ್ರಿ.ಶ. ೧೭೬೨ - ೧೮೨೭): ಸಂಗೀತ ತ್ರಿಮೂರ್ತಿಗಳಲ್ಲಿ ಹಿರಿಯವರಾದ ಶ್ಯಾಮಶಾಸ್ತ್ರಿಗಳು ಕಾಮಾಕ್ಷಿದೇವಿಯ ಉಪಾಸನೆಯನ್ನು ಮಾಡಿ ದೇವಿಯನ್ನು ಒಲಿಸಿಕೊಂಡು, ಅವಳೊಡನೆ ಮಾತನಾಡಿದ್ದರು. ಬಂಗಾರು ಕಾಮಾಕ್ಷಿಯನ್ನು ಎಡೆಬಿಡದೆ ಆರಾಧಿಸಿದ್ದರು. ಅವಳನ್ನು ತಮ್ಮ ಕೃತಿಗಳ ಮೂಲಕ ನಾನಾ ವಿಧದಲ್ಲಿ ಬೇಡಿದ್ದರು. ಅದರಲ್ಲೂ ದೇವಿಯನ್ನು ತಾಯಿಯೆಂದೇ ಸಂಭೋದಿಸಿ ಆನಂದ ಪಟ್ಟಿದ್ದರು.

ಶ್ಯಾಮಶಾಸ್ತ್ರಿಗಳು ತಿರುವಾರೂರಿನಲ್ಲಿ ಜನಿಸಿದರು. ತಂದೆ ವಿಶ್ವನಾಥ ಅಯ್ಯರ್‍. ವೆಂಕಟಸುಬ್ರಹ್ಮಣ್ಯನೆಂದು ಮಗುವಿಗೆ ನಾಮಕರಣ ಮಾಡಿದರು. ಮುದ್ದಿನಿಂದ ಶ್ಯಾಮಕೃಷ್ಣನೆಂದು ಮಗುವನ್ನು ಕರೆಯುತ್ತಿದ್ದರು. ಮುಂದೆ ಶ್ಯಾಮಶಾಸ್ತ್ರಿಗಳೆಂಬ ಹೆಸರೇ ಜನಜನಿತವಾಗಿ ಉಳಿಯಿತು. ಶ್ಯಾಮಶಾಸ್ತ್ರಿಗಳು ವೇದಾಧ್ಯಯನ, ವ್ಯಾಕರಣ, ಛಂದಸ್ಸು, ಸಾಹಿತ್ಯ ಮುಂತಾದ ಶಾಸ್ತ್ರಗಳಲ್ಲಿ ಪಾರಂಗತರು. ಸಂಗೀತವನ್ನು ತಮ್ಮ ಸೋದರಮಾವನಿಂದ ಕಲಿತರು.

ಯೋಗಿಗಳಾದ ಸಂಗೀತ ಸ್ವಾಮಿಗಳು ಅಗಿಂದಾಗ್ಗೆ ವಿಶ್ವನಾಥ ಅಯ್ಯರ್‍ ಅವರನ್ನು ಭೇಟಿ ಮಾಡಲು ಬರುತ್ತಿದ್ದರು. ವರ್ಚಸ್ವಿಯಾದ ಬಾಲಕನನ್ನು ನೋಡಿ ಸಂತೋಷಿಸಿ, ಸಂಗೀತದಲ್ಲಿ ಉನ್ನತ ಶಿಕ್ಷಣವನ್ನು ನೀಡಲು ಒಪ್ಪಿಗೆಯನ್ನಿತ್ತರು. ಇದಲ್ಲದೇ ಶ್ರೀವಿದ್ಯಾಮಂತ್ರವನ್ನು ಬಾಲಕನಿಗೆ ಉಪದೇಶಿಸಿದರು. ಗುರುಗಳ ಆಶ್ರಯದಲ್ಲಿ ಶ್ಯಾಮಶಾಸ್ತ್ರಿಗಳು ಸಂಗೀತದಲ್ಲಿ ವಿಶೇಷ ಪರಿಣತಿಯನ್ನು ಹೊಂದಿದರು. ರಾಗಾಲಾಪನೆ, ರಾಗ, ತಾನ, ಪಲ್ಲವಿಗಳಲ್ಲಿ ಪ್ರಾವಿಣ್ಯತೆಯನ್ನು ಪಡೆದರು. ಸಂಗೀತದಲ್ಲಿ ಹಿರಿಯ ವಾಗ್ಗೇಯಕಾರರೆನಿಸಿ, "ಶ್ಯಾಮಕೃಷ್ಣ" ಎಂಬ ಅಂಕಿತನಾಮದಲ್ಲಿ ಅನೇಕ ಸ್ವರಜತಿ, ವರ್ಣ, ಕೃತಿಗಳನ್ನು ರಚಿಸಿದರು. ಇವರ ಕೃತಿಗಳು ಹೆಚ್ಚಾಗಿ ತೆಲುಗು ಭಾಷೆಯಲ್ಲಿದ್ದರೂ ಸಂಸ್ಕೃತ ಹಾಗೂ ತಮಿಳಿನಲ್ಲೂ ಕೆಲವು ಕೃತಿಗಳು ರಚಿತವಾಗಿವೆ. ತಾಳಗಳಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ ಇವರು, ನೂರೆಂಟು ತಾಳಗಳನ್ನೂ ಅಭ್ಯಾಸ ಮಾಡಿದ್ದರು. ಸ್ವರಜತಿಗಳು, ಸಭಾಗಾನದ ರಚನೆಯ ಗುಣಗಳನ್ನು ಒಳಗೊಂಡು, ಸಂಗೀತ ಕಛೇರಿಯಲ್ಲಿ ಇಂದಿಗೂ ನಿರೂಪಿತವಾಗುತ್ತಿವೆ. ಇವರ ರಚನೆಗಳು ಪೂರ್ಣವಾಗಿದ್ದು ಭಕ್ತಿಯಿಂದ ಕೂಡಿವೆ. ಕೆಲವು ಕೃತಿಗಳಲ್ಲಿ ಸ್ವರಸಾಹಿತ್ಯವೂ, ಚಿಟ್ಟೆಸ್ವರಗಳು ಕಂಡುಬರುತ್ತವೆ.

ಇವರು ರಚಿಸಿರುವ ಕೃತಿಗಳಲ್ಲಿ "ಹಿಮಾದ್ರಿ ಸುತೇ ಪಾಹಿಮಾಂ" ಪ್ರಮುಖವಾದದ್ದು. ಈ ಕೃತಿಯನ್ನು ಕಲ್ಯಾಣಿ ರಾಗದಲ್ಲಿ ರಚಿಸಲಾಗಿದೆ...
ಈ ಕೃತಿಯನ್ನು "ಹಂಸಗೀತೆ" ಚಿತ್ರದಲ್ಲಿ ಅಳವಡಿಸಲಾಗಿದೆ...

ಪಲ್ಲವಿ:      || ಹಿಮಾದ್ರಿ ಸುತೇ ಪಾಹಿಮಾಂ ವರದೇ ಪರದೇವತೆ||
ಅನು ಪಲ್ಲವಿ:|| ಸುಮೇರು ಮಧ್ಯವಾಸಿನಿ ಶ್ರೀ ಕಾಮಾಕ್ಷಿ|| ಹಿಮಾದ್ರಿ||
ಚರಣ:      ||ಶ್ಯಾಮಕೃಷ್ಣ ಸೋದರಿ ಗೌರೀ ಪರಮೇಶ್ವರಿ ಗಿರಿಜಾ ನೀಲವೇಣಿ ಕೀರವಾಣಿ ಶ್ರೀ ಲಲಿತೆ|| ಹಿಮಾದ್ರಿ||

ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್] ಪುಸ್ತಕ