ಕರ್ಮಯೋಗಿ ಸಿದ್ಧರಾಮ
ಇಂದಿನ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ, ಸುಮಾರು ಎಂಟನೂರೈವತು ವರ್ಷಗಳ ಹಿಂದೆ ಸೊನ್ನಲಿಗೆ ಎಂದು ಹೆಸರಾಗಿತ್ತು. (ಇಂದಿನ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನಲ್ಲಿದೆ.) ಆ ಊರಿನ ಕುಡಿಯರ ವಂಶಕ್ಕೆ ಸೇರಿದ ದಂಪತಿಗಳಿಗೆ ಒಂದು ಗಂಡು ಮಗುವಾಯಿತು. ಆ ದಿನವೇ ಊರಾಚೆಯ ಕಣಿವೆಯಲ್ಲಿ ಕಪ್ಪಾದ ಕಲ್ಲಿನ ಒಂದು ಆಕೃತಿ ಕಾಣಿಸಿಕೊಂಡಿದ್ದರಿಂದ, ಹುಟಿದ ಮಗುವಿಗೆ ಮೊರಡಿಯ ಮುದ್ದ ಎಂದು ನಾಮಕರಣ ಮಾಡಿದರು. ವಯಸ್ಸಿಗೆ ಬಂದ ಮೊರಡಿಯ ಮುದ್ದನಿಗೆ ಅದೇ ಊರಿನ ಬೇರೊಬ್ಬ ಗೌಡ ದಂಪತಿಗಳ ಮಗಳಾಗಿದ್ದ ಸುಗ್ಗವ್ವೆ ಎಂಬುವವಳನ್ನು ತಂದು ಮದುವೆ ಮಾಡಿದರು. ಆದರೆ ಮೊರಡಿಯ ಮುದ್ದ ಮತ್ತು ಸುಗ್ಗವ್ವೆ ದಂಪತಿಗಳಿಗೆ ಮಕ್ಕಳಾಗಲಿಲ್ಲ. ಕಂಡ ಕಂಡ ದೈವವೆಲ್ಲವನ್ನೂ ಪೂಜಿಸಿ ವ್ರತಾದಿಗಳನ್ನು ಮಾಡಿದರೂ ಮಕ್ಕಳಾಗಲೇ ಇಲ್ಲ. ಸುಗ್ಗವ್ವೆಗೆ ಮುಟ್ಟು ಏರುಪೇರು ಆಗುವ ಕಾಲ ಬಂದಾಗ ಮಕ್ಕಳ ಆಸೆಯನ್ನೇ ಆ ದಂಪತಿಗಳು ಬಿಟ್ಟರು.
ಹೀಗಿರುವಲ್ಲಿ ಒಂದು ದಿನ ರೇವಣಸಿದ್ಧೇಶ್ವರ ಎಂಬ ಯತಿಗಳು ಆ ಊರಿಗೆ ಬಂದರು. ಭಿಕ್ಷೆಗಾಗಿ ಸುಗ್ಗವ್ವೆಯ ಮನೆಗೆ ಬಂದ ಅವರಲ್ಲಿ ಸುಗ್ಗವ್ವೆ ತನ್ನ ನೋವನ್ನು ಹೇಳಿಕೊಂಡಳು. ಅವರು ಭಿಕ್ಷೆ ಪಡೆದು, ಕಾಲವಿನ್ನು ಮಿಂಚಿಲ್ಲ. ಶಿವನ ಕರುಣೆಯಿದ್ದಲ್ಲಿ ನಿನಗೆ ಮಗು ಏಕಾಗಬಾರದು? ಎಂದು ಅವಳಿಗೆ ಆಶೀರ್ವದಿಸಿ ಹೋದರು. ಆಶ್ಚರ್ಯವೆಂಬಂತೆ ಮುಂದಿನ ಮೂರು ತಿಂಗಳಲ್ಲಿ ಸುಗ್ಗವ್ವೆ ಗರ್ಭಿಣಿಯಾದಳು. ನವಮಾಸಗಳು ಕಳೆದಾಗ ಗಂಡುಮಗುವಿಗೆ ಜನ್ಮವಿತ್ತಳು. ಗಂಡು ಮಗುವನ್ನು ಪಡೆದ ಹರ್ಷ ತುಂಬ ದಿನ ಉಳಿಯಲಿಲ್ಲ. ಮಗು ಮೂಗನೂ ಕಿವುಡನೂ ಆಗಿ ಬುದ್ದಿವೈಕಲ್ಯದವನಂತೆ ಕಾಣುತ್ತಿದ್ದನು. ಆದರೂ ತಂದೆ ತಾಯಿಗಳು ಅವನನ್ನು ಪ್ರೀತಿಯಿಂದಲೇ ಸಾಕಿದರು. ಅವನಿಗೆ ತಮ್ಮ ಮನೆದೇವರಾದ ಧೂಳಿಮಾಕಾಳನ ಹೆಸರನ್ನೇ ಇಟ್ಟರು. ಮಗು ಬೆಳೆದು ದೊಡ್ಡವನಾದ ಮೇಲೆ ಊರಿನ ಇತರ ಹುಡುಗರಂತೆ ದನ ಮೇಯಿಸುವುದಕ್ಕೆ ಕಳುಹಿಸಿದರು. ಮಾತು ಬಾರದ, ಕಿವಿ ಕೇಳದ ಧೂಳಿಮಾಕಳ ಬೇರೆ ಹುಡುಗರ ಜೊತೆಯಲ್ಲಿ ಅಷ್ಟಾಗಿ ಬೆರೆಯದೇ ಮರದ ತೋಪೊಂದರಲ್ಲಿ ಕಾಲ ಕಳೆಯುತ್ತಿದ್ದ. ಮನೆಯಿಂದ ತಂದಿರುತ್ತಿದ್ದ ಬುತ್ತಿಯನ್ನು ಅಲ್ಲಿದ್ದ ಕಲ್ಲೊಂದಕ್ಕೆ ನೈವೇದ್ಯ ಮಾಡಿ ಊಟ ಮಾಡುತ್ತಿದ್ದ. ಬೇರೆ ಹುಡುಗರು ಅದನ್ನೊಂದು ಆಶ್ಚರ್ಯವೆಂಬಂತೆ ನೋಡುತ್ತಿದ್ದರು.
ಒಂದು ದಿನ ಶಿವಸ್ವರೂಪಿಯಾದ ಒಬ್ಬ ಜಂಗಮರು ಆ ದಾರಿಯಲ್ಲಿ ಬಂದು ವಿಶ್ರಾಂತಿಗಾಗಿ ಮರದ ನೆಳಲಿನಲ್ಲಿ ಕುಳಿತಿದ್ದ. ಆಗ ಧೂಳಿಮಾಕಾಳನು ತಾನು ತಂದಿದ್ದ ರೊಟ್ಟಿಯನ್ನು ಅಲ್ಲಿದ್ದ ಕಲ್ಲೊಂದಕ್ಕೆ ನೈವೇದ್ಯ ರೂಪದಲ್ಲಿ ಅರ್ಪಿಸಿ ತಿನ್ನುವ ಮೊದಲು ಜಂಗಮರನ್ನು ನೋಡುತ್ತಾನೆ. ತನ್ನ ರೊಟಿಯನ್ನು ಅವರ ಮುಂದಿಟ್ಟು ತಿನ್ನುವಂತೆ ತನ್ನ ಕೈಭಾಷೆ ಬಾಯಿ ಭಾಷೆಯಿಂದಲೇ ಸೂಚಿಸುತ್ತಾನೆ. ಆ ಜಂಗಮರು ಶಿವಮಹಾತ್ಮೆಯ ಕಥೆಗಳನ್ನು ಹೇಳುತ್ತಾ, ಶಿವನ ಮಲ್ಲಿಕಾರ್ಜುನ ಸ್ವರೂಪವನ್ನು ವರ್ಣಿಸುತ್ತಾ ರೊಟ್ಟಿಯನ್ನು ಸ್ವೀಕರಿಸುತ್ತಾರೆ. ಶಿವನ ಆ ಕಥೆಗಳನ್ನು ಕೇಳುತ್ತಾ ಧೂಳಿಮಾಕಾಳ ಅದರಲ್ಲಿಯೇ ತಲ್ಲೀನನಾಗುತ್ತಾನೆ. ಆಶ್ಚರ್ಯವೆಂಬಂತೆ ಧೂಳಿಮಾಕಾಳನು ಮಾತನಾಡುತ್ತಾನೆ. ’ನಿಮ್ಮ ಮಲ್ಲಿಕಾರ್ಜುನನ್ನು ನಾನು ನೋಡಬಹುದೆ?’ ಎಂದು ಪ್ರಶ್ನಿಸುತ್ತಾನೆ. ’ಧಾರಾಳವಾಗಿ ನೋಡಬಹುದು’ ಎಂದು ಜಂಗಮರು ಉತ್ತರಿಸುತ್ತಾರೆ. ರೊಟ್ಟಿಯನ್ನು ತಿಂದು ಮುಗಿಸಿದ ಜಂಗಮರು ’ಕುಡಿಯಲು ಮಜ್ಜಿಗೆ ಇದೆಯೇ?’ ಎಂದು ಕೇಳುತ್ತಾರೆ. ’ನೀವು ಸ್ವಲ್ಪ ಹೊತ್ತು ಇಲ್ಲಿರುವುದಾದರೆ ನಾನು ಮನೆಗೆ ಹೋಗಿ ತರುತ್ತೇನೆ. ನೀವು ನನಗೆ ಮಲ್ಲಿಕಾರ್ಜುನನ್ನು ತೋರಿಸಬೇಕು’ ಎಂದು ಓಡುತ್ತಾನೆ. ಇಂದು ಬೇಗನೆ ಮನೆಗೆ ಬಂಧ ಮಗನನ್ನು ಕಂಡು ಸುಗ್ಗವ್ವೆಗೆ ಆಶ್ಚರ್ಯವಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ’ಜಂಗಮರಿಗೆ ಕುಡಿಯಲು ಮಜ್ಜಿಗೆ ಬೇಕು’ ಎಂದು ಮಗ ಕೇಳಿದಾಗ ಅವಳಿಗೆ ಆನಂದ ಆಶ್ಚರ್ಯ ಉಂಟಾಗುತ್ತವೆ. ಸಂಭ್ರಮದಿಂದ ಮನೆಯಲ್ಲಿದ್ದ ಮಜ್ಜಿಗೆಗೆ ಮೇಲೋಗರ ಮಾಡಿ ಕೊಡುತ್ತಾಳೆ. ಅದನ್ನು ಎತ್ತಿಕೊಂಡು ಹೊಲಕ್ಕೆ ಬಂದ ಧೂಳಿ ಮಾಕಾಳ ಅಲ್ಲಿ ಜಂಗಮರನ್ನು ನೋಡಲಾಗುವುದಿಲ್ಲ. ಅವರನ್ನು ಹುಡುಕುತ್ತಾ ಅಲೆಯುತ್ತಾ ದಾರಿಯಲ್ಲಿ ಶ್ರೀಶೈಲದ ಕಡೆಗೆ ಯಾತ್ರೆ ಹೊರಟಿದ್ದ ಯಾತ್ರಿಕರೊಂದಿಗೆ ಸೇರಿ ನಡೆದುಬಿಡುತ್ತಾನೆ.
ಶ್ರೀಶೈಲಕ್ಕೆ ಬಂದು ಮಲ್ಲಿಕಾರ್ಜುನನು ಎಲ್ಲಿರುವನೆಂದು ಸಿಕ್ಕಿದವರನ್ನೆಲ್ಲಾ ಕೇಳುತ್ತಾನೆ. ಕೆಲವರು ಅವನನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ ಗರ್ಭಗುಡಿಯಲ್ಲಿದ್ದ ಶಿವಲಿಂಗವನ್ನು ತೋರಿಸುತ್ತಾರೆ. ’ಇವನು ನನ್ನ ಮಲ್ಲಿನಾಥನಲ್ಲ’ ಎಂದು ಹೊರಗೆ ಬಂದು ಹುಡುಕಾಟ ಪ್ರಾರಂಭಿಸುತ್ತಾನೆ. ಸಂಜೆಯವರೆಗೆ ಹುಡುಕಿದರೂ ಎಲ್ಲಿಯೂ ಸಿಗದೆ ಬೇಸರದಿಂದ ರುದ್ರಗಮ್ಮರಿ ಎಂಬ ಕಣಿವೆಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳಲು ನಿಶ್ಚಯಿಸಿ ಮೇಲಿನಿಂದ ಧುಮುಕುತ್ತಾನೆ. ಆದರೆ ಆಳ ಹೆಚ್ಚಿಲ್ಲದ ಹಾಗೂ ದಟ್ಟ ಕಾಡಿನಿಂದ ಕೂಡಿದ್ದ ಆ ಕಣಿವೆಯಲ್ಲಿ ಹೆಚ್ಚಿನ ಅಪಾಯವೇನೂ ಆಗದೆ ಬದುಕಿ ಉಳಿಯುತ್ತಾನೆ. ತಲೆಗೆ ಬಂಡೆಯೊಂದು ಬಡಿದಿದ್ದರಿಂದ ಊದಿಕೊಂಡು ಲಿಂಗದ ರೂಪವನ್ನು ಪಡೆದಿರುತ್ತದೆ. ಅವನಿಂದ ರೊಟಿಯನ್ನು ಪಡೆದು ತಿಂದು ಶ್ರೀಶೈಲಕ್ಕೆ ಬಂದಿದ್ದ ಜಂಗಮರು ಆ ದಾರಿಯಲ್ಲಿ ಬಂದು ಧೂಳಿಮಾಕಾಳನನ್ನು ನೋಡುತ್ತಾರೆ. ಅವನನ್ನು ಎತ್ತಿ ಅವನ ಗಾಯಗಳಿಗೆ ಔಷಧಿ ಹಾಕಿ ಶುಶ್ರೂಷೆ ಮಾಡುತ್ತಾರೆ. ತಲೆಯಲ್ಲಿ ಮೂಡಿದ್ದ ಲಿಂಗಾಕಾರದ ಬೋರೆಯನ್ನು ನೋಡಿ ’ಓಹೋ ನೀನು ಸಿದ್ಧರಾಮ. ಇಂದಿನಿಂದ ನಿನ್ನ ಹೆಸರು ಸಿದ್ಧರಾಮ’ ಎನ್ನುತ್ತಾರೆ. ’ಮಲ್ಲಿನಾಥನನ್ನು ತೋರಿಸಿ’ ಎಂದು ಸಿದ್ಧರಾಮ ಪೀಡಿಸಿದಾಗ ಅವನನ್ನು ಅವರ ಜೊತೆಯಲ್ಲಿಯೇ ಇರಿಸಿಕೊಂಡು ಶಿವನ ಕಥೆಗಳನ್ನು ಹೇಳುತ್ತಲೇ ಅವನಲ್ಲಿ ಶಿವಭಕ್ತಿಯ ಬೀಜವನ್ನು ಬಿತ್ತುತ್ತಾರೆ. ಶಿವನ ಸಾಕ್ಷಾತ್ಕಾರವಾಗಬೇಕಾದರೆ ನೀನು ಸಾಧಕನಾಗಬೇಕು ಎಂದು ಆತನಿಗೆ ತಿಳಿಸಿ ಹೇಳುತ್ತಾರೆ. ಊರಿಗೆ ಹಿಂತಿರುಗಿ ದುಃಖದಲ್ಲಿರುವ ನಿನ್ನ ತಂದೆತಾಯಿಗಳನ್ನು ಸಮಾಧಾನಪಡಿಸು. ಅಲ್ಲಿ ಊರಿಗೆ ಉಪಕಾರವಾಗುವಂತಹ ಕೆಲಸಗಳನ್ನು ಮಾಡು. ನಿನ್ನ ಕೆಲಸದಲ್ಲಿಯೇ ನೀನು ಶಿವನನ್ನು ಕಾಣಲು ಸಾಧ್ಯ. ಬೇಕಾದರೆ ನಿನ್ನ ಊರಿನಲ್ಲಿಯೇ ಮಲ್ಲಿನಾಥನ ದೇವಾಲಯವನ್ನು ನಿರ್ಮಿಸಿ ಪೂಜಿಸು ಎಂದು ಹೇಳುತ್ತಾರೆ. ಅವರ ಮಾತಿನಿಂದ ಪ್ರಭಾವಿತನಾದ ಸಿದ್ಧರಾಮ ಊರಿಗೆ ಹಿಂತಿರುಗಿ ಬಂದು ತನ್ನ ತಂದೆ ತಾಯಿಗಳೊಂದಿಗೆ ನೆಲೆಸುತ್ತಾನೆ. ಊರಿನ ಜನರನ್ನು ಸೇರಿಸಿಕೊಂಡು ಹೊಲ ತೋಟಗಳನ್ನು ಮಾಡಿಸುತ್ತಾನೆ. ಬಾವಿ ತೆಗೆಸುತ್ತಾನೆ. ದೇವಾಲಯವನ್ನು ಕಟ್ಟಿಸಿ ತನ್ನ ಇಷ್ಟದೈವವಾದ ಕಪಿಲಸಿದ್ಧಮಲ್ಲಿನಾಥನನ್ನು ಲಿಂಗರೂಪದಲ್ಲಿ ಪ್ರತಿಷ್ಠಾಪಿಸುತ್ತಾನೆ. ಹೋದೋಟ ಮಾಡಿಸುತ್ತಾನೆ. ಊರವರ, ಸಕಲ ಪ್ರಾಣಿಪಕ್ಷಿಗಳ ಉಪಯೋಗಕ್ಕೆಂದು ಕೆರೆ ಕಟ್ಟಿಸುತ್ತಾನೆ.
ದೇವಯ್ಯ ಮತ್ತು ರಾಯಮ್ಮ ಎಂಬ ಶಿವಭಕ್ತ ದಂಪತಿಗಳಿದ್ದರು. ಇಷ್ಟಲಿಂಗಾರಾಧನೆಯಲ್ಲಿ ನಂಬಿಕೆಯುಳ್ಳ ಈ ದಂಪತಿಗಳದ್ದು ನೇಯ್ಗೆಯ ವೃತ್ತಿ. ಸಿದ್ಧರಾಮ ಊರಿನ ಯಜಮಾನ. ಅವನ ಇಷ್ಟದೈವವಾದ ಮಲ್ಲಿಕಾರ್ಜುನನ ಜಾತ್ರೆಗೆಂದು ಊರಿನವರೆಲ್ಲಾ ಭತ್ತ ಕುಟ್ಟಬೇಕೆಂದು, ಮನೆಮನೆಗೆ ಭತ್ತವನ್ನು ಕಳುಹಿಸುತ್ತಾನೆ. ಅಮುಗೆ ದಂಪತಿಗಳು ಏಕಲಿಂಗದಲ್ಲಿ, ಇಷ್ಟಲಿಂಗದಲ್ಲಿ ನಂಬಿಕೆಯುಳ್ಳವರು. ಲಿಂಗಧಾರಿಗಳಾಗಿದ್ದವರು. ಸಿದ್ಧರಾಮ ಲಿಂಗವನ್ನು ಧರಿಸಿರದೆ ಕರ್ಮಸಿದ್ಧಾಂತದಲ್ಲಿ ನಂಬಿಕೆಯನ್ನಿಟ್ಟಿದ್ದ ಭವಿ. ಭವಿಯು ಹೇಳಿದ ಕೆಲಸ ಮಾಡುತ್ತಾ ಕುಳಿತರೆ ಇಷ್ಟಕಾಯಕದ ಗತಿಯೇನು? ಇಷ್ಟಲಿಂಗದ ಗತಿಯೇನು? ಎಂಬ ಚಿಂತೆ ಈ ದಂಪತಿಗಳಿಗೆ ಉಂಟಾಯಿತು. ಅದಕ್ಕಾಗಿ ಅವರು, ’ಲಿಂಗವಿಲ್ಲದ ಭವಿಯ ಸೇವೆ ಮಾಡಲಾರೆವು’ ಎಂದು ಭತ್ತವನ್ನು ವಾಪಸ್ಸು ಕಳಿಸಿದರು. ಇದರಿಂದ ಸಿಟ್ಟಿಗೆದ್ದ ಸಿದ್ಧರಾಮ, ’ಹೇಳಿದ ಕೆಲಸ ಮಾಡದವರು ಊರು ಬಿಡಬೇಕಾಗುತ್ತದೆ’ ಎಂದು ಎಚ್ಚರಿಸಿದ. ಸಿದ್ಧರಾಮನನ್ನು ’ಕರ್ಮಯೋಗದ ಭವಿ’ ಎಂದ ಬಗೆದು, ಊರು ಬಿಡಲು ನಿರ್ಧರಿಸುತ್ತಾರೆ. ದಂಪತಿಗಳಿಬ್ಬರೂ ನಿತ್ಯಕ್ಕೆ ಬೇಕಾದ ಸಾಮಾನುಗಳನ್ನೆಲ್ಲವನ್ನೂ ಮೂರು ಗಂಟುಗಳನ್ನಾಗಿ ಮಾಡಿಕೊಂಡು, ತಲಾ ಒಂದೊಂದನ್ನು ಹೊತ್ತುಕೊಳ್ಳುತ್ತಾರೆ. ಉಳಿದ ಒಂದು ಗಂಟನ್ನು ಯಾರು ಹೊತ್ತುಕೊಳ್ಳಬೇಕು ಎಂಬ ಸಮಸ್ಯೆ ಎದುರಾಗುತ್ತದೆ. ಆಪತ್ತನಿಲ್ಲಿ ಆದವನೇ ನೆಂಟ ಅಥವಾ ದೈವವೆಂಬಂತೆ, ದೈವಕೃಪೆಯೋ ಎಂಬಂತೆ ಶಿವರೂಪಿಯಾದ ಜಂಗಮನೊಬ್ಬ ಬಂದು ಆ ಗಂಟನ್ನು ಹೊತ್ತುಕೊಳ್ಳುತ್ತಾನೆ. ಮೂವರೂ ನಡೆದು ಪಕ್ಕದ ಶಿವಪುರ ಎಂಬ ಗ್ರಾಮದಲ್ಲಿ ನೆಲೆಸುತ್ತಾರೆ. ಮಾರನೆಯ ದಿನ ಅವರು ಊರು ಬಿಟ್ಟ ಸುದ್ದಿ ತಿಳಿದ ಸಿದ್ಧರಾಮ, ಅವರ ಬಗ್ಗೆಯೇ ಯೋಚಿಸುತ್ತಾ ತನ್ನ ಇಷ್ಟದೈವವಾದ ಮಲ್ಲಿಕಾರ್ಜುನನಿಗೆ ಪೂಜೆ ಮಾಡಲು ಬರುತ್ತಾನೆ. ಲಿಂಗಕ್ಕೆ ಅಭಿಷೇಕ ಮಾಡಹೋದಾಗ ’ತಲೆಯನ್ನು ಮುಟ್ಟಬೇಡ ಗಂಟು ಹೊತ್ತು ತಲೆಯಲ್ಲಿ ಗಾಯವಾಗಿದೆ’ ಎಂಬ ಧ್ವನಿ ಕೇಳಿಸಿತು. ’ಯಾರ ಗಂಟು?’ ಎಂದು ಸಿದ್ಧರಾಮ ತನ್ನಲ್ಲಿ ತಾನು ಪ್ರಶ್ನಿಸಿಕೊಳ್ಳಲು, ’ದೇವಯ್ಯಗಳ ಮೂಟೆಯನ್ನು ಹೊತ್ತು ಆದದ್ದು’ ಎಂಬ ಉತ್ತರ ದೊರೆಯಿತು. ತಕ್ಷಣ ಸಿದ್ಧರಾಮನಿಗೆ ಅಮುಗೆ ದಂಪತಿಗಳು ಎಂಥ ದೊಡ್ಡ ಶಿವಭಕ್ತರೆಂದು ಅರಿವಾಯಿತು. ಅವರನ್ನು ಹುಡುಕಿಕೊಂಡು ಶಿವಪುರಕ್ಕೆ ಬಂದು, ತಿರುಗಿ ಸೊನ್ನಲಾಪುರಕ್ಕೆ ಬರುವಂತೆ ಪ್ರಾರ್ಥಿಸಿದ. ಆದರೆ ಅದಕ್ಕೊಪ್ಪದ ಆ ದಂಪತಿಗಳು ಕಲ್ಯಾಣಕ್ಕೆ ಹೊರಟುಹೋಗುತ್ತಾರೆ. ಸಿದ್ಧರಾಮನ ಬಗ್ಗೆ ಯಾವ ದ್ವೇಷವೂ ಇರದ ಈ ದಂಪತಿಗಳು ಸಿದ್ಧರಾಮನ ಉದ್ಧಾರಕ್ಕಾಗಿ ಅಲ್ಲಮ ಸೊನ್ನಲಾಪುರಕ್ಕೆ ಹೋಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಸ್ವತಃ ಸಿದ್ಧರಾಮನೇ ತನ್ನೊಂದು ವಚನದಲ್ಲಿ, ’ನಿಷ್ಠಾಮಹೇಶ್ವರನೆನಿಪ ಅಮುಗೆ ದೇವಯ್ಯಗಳಿಂದ ಪ್ರಭುದೇವರೆಂಬ ಅನಾದಿ ಜಂಗಮವ ಕಂಡೆ’ ಎಂದು ಅಮುಗೆ ದೇವಯ್ಯ ದಂಪತಿಗಳನ್ನು ಪ್ರಸ್ತಾಪಿಸಿದ್ದಾನೆ.
ಹೀಗೆ ಕರ್ಮಯೋಗಿಯಾಗಿ ಶಿವನ ಆರಾಧನೆಯಲ್ಲಿ ಮುಳುಗಿದ್ದ ಸಿದ್ಧರಾಮನಿಗೆ ಅಲ್ಲಮನ ದರ್ಶನವಾಗುತ್ತದೆ. ಸಿದ್ಧರಾಮನ ಕರ್ಮಯೋಗದ ಫಲವಾಗಿ ಭೂಲೋಕದ ಸ್ವರ್ಗದಂತಿದ್ದ ಸೊನ್ನಲಿಗೆಯನ್ನು ನೋಡಿ ಅಲ್ಲಮನಿಗೆ ಆಶ್ಚರ್ಯವಾಗುತ್ತದೆ. ಸಕಲವಿಧದಲ್ಲಿ ಸಿದ್ಧರಮಾನನ್ನು ಪ್ರಶ್ನಿಸಿ, ಅವನ ಕರ್ಮಯೋಗದೊಂದಿಗೆ ಅಲ್ಲಮನ ಶರಣತತ್ವವೂ ಸೇರುವಂತೆ ಮಾಡುತ್ತಾನೆ. ಸಿದ್ಧರಾಮ ಶರಣಭಾವವನ್ನು ಸಂತೋಷದಿಂದಲೇ ಸ್ವೀಕರಿಸಿ ಅಲ್ಲಮನನ್ನು ’ನಿಜಜಂಗಮ’ನೆಂದು ಬಗೆಯುತ್ತಾನೆ. ಅವನಿಂದಲೇ ಉಪದೇಶ ಪಡೆದು ತಾನೂ ಶರಣನಾಗುತ್ತಾನೆ. ನಂತರ ಎಲ್ಲ ಶರಣರ ವಚನಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತಾನೆ. ಕರ್ಮಯೋಗಿಯಾಗಿದ್ದವನು ಶಿವಯೋಗಿಯೂ ಆಗುತ್ತಾನೆ. ಊರಿನಲ್ಲಿ ಇದ್ದು ಇಲ್ಲದಂತೆ ತೋರುವುದಾಗಿ ನಿಶ್ಚಯಿಸಿ ತಾನೇ ಕಟ್ಟಿಸಿದ್ದ ಕೆರೆಯ ನಡುವೆ ಇದ್ದ ಗುಹೆಯೊಂದರಲ್ಲಿ ನೆಲೆಸುತ್ತಾನೆ.
ಅಲ್ಲಮನ ಸಂಪರ್ಕದಿಂದ ಶರಣಯೋಗಿಯಾದ ಸಿದ್ಧರಾಮನ ರಚನೆಗಳು ಎಂದು ಹೇಳಲಾಗುವ ಎರಡ ಸಾವಿರಕ್ಕೂ ಹೆಚ್ಚು ವಚನಗಳು ಸಿಕ್ಕಿವೆ. ’ಕಪಿಲಸಿದ್ಧಮಲ್ಲಿಕಾರ್ಜುನ’ ಎಂಬುದು ಅವನ ವಚನಗಳ ಅಂಕಿತ. ಆದರೆ ಕಪಿಲಸಿದ್ಧಮಲ್ಲಿನಾಥ, ಯೋಗಿನಾಥ ಎಂಬ ಅಂಕಿತದಲ್ಲಿಯೂ ಸಿದ್ಧರಾಮನ ವಚನಗಳು ದೊರೆತಿವೆ. ಅವನ ವಚನಗಳಲ್ಲಿಯೇ ಸಿದ್ಧರಾಮ ಕೆರೆಕಟ್ಟಿಸಿದ್ದು, ಶಿವಾಲಯ ನಿರ್ಮಿಸಿದ್ದು, ಬಾವಿ-ಹೂದೋಟ ನಿರ್ಮಿಸಿದ್ದು, ಅಲ್ಲಮನ ಪ್ರಭಾವ ಮೊದಲಾದವುಗಳು ಅಭಿವ್ಯಕ್ತವಾಗಿವೆ. ಸಿದ್ಧರಾಮನ ವಚನಗಳಲ್ಲಿ ಉತ್ಸಾಹ ಎಂಬುದು ಸ್ಥಾಯಿಭಾವವಾಗಿ ಮೂಡಿಬಂದಿದೆ ಎಂಬ ಅನಿಸಿಕೆಯಿದೆ. ಸಹಜ ಕವಿತ್ವ ಸಿದ್ಧರಾಮನ ವಚನಗಳಲ್ಲಿ ವ್ಯಕ್ತವಾಗಿದೆ. ಲಿಂಗಪತಿ-ಶರಣಸತಿ ಭಾವವೂ ವ್ಯಕ್ತವಾಗಿದೆ. ಷಟ್ಸ್ಥಲ ವಚನಗಳೂ ಸೇರಿವೆ.
ಭಕ್ತನಾದೊಡೆ ಬಸವಣ್ಣನಂತಾಗಬೇಕು
ಜಂಗಮನಾದೊಡೆ ಪ್ರಭುವಿನಂತಾಗಬೇಕು
ಭೋಗಿಯಾದೊಡೆ ಚೆನ್ನಬಸವಣ್ಣನಂತಾಗಬೇಕು
ಯೋಗಿಯಾದೊಡೆ ನನ್ನಂತಾಗಬೇಕು
ನೋಡಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ
ಎಂಬ ವಚನದಲ್ಲಿ ಅವನ ಮೇಲಾಗಿರುವ ಶರಣಪ್ರಭಾವವನ್ನು ಗುರುತಿಸಬಹುದು. ಅವನ ವಚನವೊಂದರಲ್ಲಿ ವ್ಯಕ್ತವಾಗಿರುವ ’ನಾ ಮಾಡಿದ ಕೆರೆಯೆತ್ತ? ಕರಿಕಾಲಚೋಳ ಮಾಡಿದ ಕೆರೆಯೆತ್ತ?’ ಎಂಬ ಮಾತು ಅವನು ಕೆರೆ ಮಾಡಿಸಿದ್ದಕ್ಕೆ ಸಾಕ್ಷಿಯಂತಿದೆ. ವಚನಕಾರರಲ್ಲಿ ಸಮಾಜಿಕ ಹೊಣೆಗಾರಿಕೆಯನ್ನು ಹೆಚ್ಚು ಹೊತ್ತುಕೊಂಡಿದ್ದವರಲ್ಲಿ ಬಸವಣ್ಣನನ್ನು ಬಿಟ್ಟರೆ ಸಿದ್ಧರಾಮನೇ ಎಂಬುದು ಅವನ ಜೀವನದ ಘಟನೆಗಳನ್ನು ಗಮನಿಸಿದರೆ ತಿಳಿಯುತ್ತದೆ. ಹಾಗೆಯೇ ವೈಚಾರಿಕತೆಯಲ್ಲಿಯೂ ಅಷ್ಟೆ. ಅಲ್ಲಮ ಬಸವಣ್ಣರಿಗೆ ಸರಿಸಮನಾಗಿ ಸಿದ್ಧರಾಮ ಕಂಡುಬರುತ್ತಾನೆ.