ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!

ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!

ಬರಹ

ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!

ಗಿರೀಶ್ ಕಾರ್ನಾಡರು ತಮ್ಮ `ತಲೆದಂಡ' ನಾಟಕದ ಮುನ್ನುಡಿಯಲ್ಲಿ ನೋಯುವ ಹಲ್ಲಿನ ಕಡೆ ನಾಲಗೆ ಪದೇ ಪದೇ ಹೊರಳುವಂತೆ ಕನ್ನಡ ಪ್ರಜ್ಞೆ ಪದೇ ಪದೇ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಕಡೆ ಹೊರಳುವ ಕಡೆಗೆ ನಮ್ಮ ಗಮನ ಸೆಳೆದಿದ್ದಾರೆ. ಈ ಮಾತನ್ನು ಆನಂತರ ನಮ್ಮ ಅನೇಕ ಸಂಸ್ಕೃತಿ ಚಿಂತಕರು ಮತ್ತು ಲೇಖಕರು ತಮ್ಮ ಸಾಹಿತ್ಯ - ಸಂಸ್ಕೃತಿ ಚಿಂತನೆಗಳ ಮಧ್ಯೆ ಪ್ರಸ್ತಾಪಿಸಿದ್ದಾರೆ. ಆದರೆ ಇವರೆಲ್ಲ ಕಾರ್ನಾಡರ ಈ ಮಾತನ್ನು ಕನ್ನಡ ಸಂಸ್ಕೃತಿಯಲ್ಲಿ ಕಲ್ಯಾಣ ಕ್ರಾಂತಿಯ ಮಹತ್ವವನ್ನು ಸೂಚಿಸಲಷ್ಟೇ ಬಳಸಿರುವಂತೆ ತೋರುತ್ತದೆಯೇ ಹೊರತು, ಆ ಮಾತಿನಲ್ಲಿರುವ `ನೋಯುವ ಹಲ್ಲು' ಎಂಬ ಪದಪುಂಜದ ಕಡೆ ಗಮನ ಕೊಟ್ಟಂತೆ ತೋರುವುದಿಲ್ಲ. ಅವರು ಹಾಗೆ ಗಮನ ಕೊಟ್ಟಿದ್ದರೆ `ತಲೆದಂಡ' ನಾಟಕವೂ ಸೇರಿದಂತೆ ಕಲ್ಯಾಣ ಕ್ರಾಂತಿ ಕುರಿತು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೂಡಿರುವ ಸೃಜನ ಮತ್ತು ಸೃಜನೇತರ ಕೃತಿಗಳ ಬಗ್ಗೆ ಈಗ ಬಂದಿರುವ ಕೇವಲ `ಚಿಂತನಶೀಲ' ಬರಹಗಳ ಜೊತೆ ಜೊತೆಗೇ `ಕ್ರಿಯಾಶೀಲ' ಬರವಣಿಗೆಯೂ ಹೊಮ್ಮಿರುತ್ತಿತ್ತೇನೋ! ಅಂದರೆ ಕನ್ನಡ ಸಮಾಜದಲ್ಲಿ ಒಂದು ನಿರ್ಣಾಯಕ ಸಾಮಾಜಿಕ ಬದಲಾವಣೆಗೆ - ತಮಿಳ್ನಾಡಿನಲ್ಲಿ ಆದಂತೆ - ಇಂಬುಕೊಡುವ ಒಂದು ಪ್ರಬುದ್ಧ ಸಾಹಿತ್ಯಕ, ಸಾಂಸ್ಕೃತಿಕ ಸಂವಾದ ಕನ್ನಡ ಸಾಹಿತ್ಯದ ಚೈತನ್ಯದ ಶಕ್ತಿಯಾಗಿರುತ್ತಿತ್ತೇನೋ...

ಇಂತಹ ಸಂವಾದ ಕನ್ನಡ ಸಾಹಿತ್ಯದಲ್ಲಿ ನಡೆದಿಲ್ಲ ಎಂದಲ್ಲ. ಆದರೆ ಅದು ಕನ್ನಡ ಸಾಹಿತ್ಯದ ಚೈತನ್ಯಶಕ್ತಿ (driving force) ಆಗಿಲ್ಲ. ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು'ವನ್ನೂ, ಭೈರಪ್ಪನವರ `ಆವರಣ'ವನ್ನೂ ಒಟ್ಟಿಗೇ ಶ್ರೇಷ್ಠ ಕೃತಿಗಳು ಎಂದು `ಪ್ರಾಮಾಣಿಕ'ವಾಗಿ ಗುರುತಿಸುವ, ಚರ್ಚಿಸುವ, ಸಮರ್ಥಿಸುವ ಒಂದು ದೊಡ್ಡ ಸಾಂಸ್ಕೃತಿಕ ಧಾರೆಯೇ ಇಂದು ಕನ್ನಡ ಸಾಹಿತ್ಯ ಸಂಕಥನದ ಮಧ್ಯೆ ಜೀವಂತವಿದೆ! ನಾನು ಹೇಳುತ್ತಿರುವುದು ಈ ಅಸಾಂಗತ್ಯದ ಬಗ್ಗೆ; ಇದು ಸೂಚಿಸುವ ಸಾಹಿತ್ಯದ ಲೋಕಾಭಿರಾಮೀಕರಣದ ಹಿಂದಿರುವ ಸಾಂಸ್ಕೃತಿಕ ದೃಷ್ಟಿ ಕೇಂದ್ರದ ಪ್ರಕ್ಷೇಪದ ಬಗ್ಗೆ - ಕನ್ನಡ ಸಾಹಿತ್ಯ ಕಲ್ಯಾಣ ಕ್ರಾಂತಿಯಿಂದ ಸ್ಫೂರ್ತಿ ಪಡೆದು, ಒಂದು ದೊಡ್ಡ ಸಾಮಾಜಿಕ ಕ್ರಾಂತಿಗೆ ಕಾರಣವಾಗಿರಬೇಕಿತ್ತು ಎಂದಲ್ಲ. ನಿಜ, ಕಲ್ಯಾಣ ಕ್ರಾಂತಿ ಈಗಲೂ ಕನ್ನಡ ಸಂವೇದನೆಯ ಹೃದಯ ಸ್ಥಾನದಲ್ಲಿದೆ. ಆದರೆ ಒಂದು ಒಣ ಹೆಮ್ಮೆಯ ವಿಷಯವಾಗಿ. ಕನ್ನಡ ಸಮಾಜ - ಅದರ ರಾಜಕಾರಣ, ಭಾಷೆ, ಸಂವೇದನೆ ಎಲ್ಲವೂ ಒಟ್ಟಿಗೆ ಏರಿದ್ದ ಹೊಸ ಎತ್ತರಗಳ ದ್ಯೋತಕವಾಗಿ ಅದನ್ನು ನೋಡುತ್ತೇವೆ. ಆದರೆ ಅದು ಕಾರ್ನಾಡರು ಹೇಳುವ ಹಾಗೆ `ನೋಯುವ ಹಲ್ಲು' ಕೂಡಾ ಆಗಿದೆಯಲ್ಲವೇ? ಅಂದರೆ ಕಲ್ಯಾಣ ಕ್ರಾಂತಿಯ ನೆನಪು ಆ ಹೊಸ ಎತ್ತರಗಳನ್ನು ಕನ್ನಡ ಸಮಾಜ, ರಾಜಕಾರಣ, ಸಂವೇದನೆ ಮತ್ತು ಭಾಷೆಗಳು ಬೀಜರೂಪಿಯಾಗಿ ಉಳಿಸಿಕೊಳ್ಳಲಾಗದೇ ಹೋದ ವೇದನೆಯಾಗಿ ನಮ್ಮನ್ನು ಕಾಡಬೇಕಲ್ಲವೆ? ಆದರೆ ಇಂದು ಹಾಗೆ ಅದು ನಮ್ಮನ್ನು ಕಾಡುತ್ತಿದೆಯೇ!

ಈ ಪ್ರಶ್ನೆಗೆ ಉತ್ತರ ನಾವು ಕಲ್ಯಾಣ ಕ್ರಾಂತಿಯನ್ನು ಒಂದು ಪರಿಕಲ್ಪನೆಯಾಗಿ ಹೇಗೆ ಗ್ರಹಿಸುತ್ತೇವೆ ಎಂಬುದನ್ನು ಅವಲಂಬಿಸಿದೆ ಎಂದು ತೋರುತ್ತದೆ. ಇಲ್ಲಿ ಕ್ರಾಂತಿ ಎಂದರೆ ಅಲ್ಲಮಪ್ರಭುಗಳ ಪ್ರಭಾವದಲ್ಲಿ, ಬಸವಣ್ಣನ ನೇತೃತ್ವದಲ್ಲಿ ನಡೆದ ವೈಚಾರಿಕ ಕ್ರಾಂತಿಯೋ ಅಥವಾ ಇದರ ಪರಿಣಾಮವಾಗಿ ನಡೆದುವೆಂದು ಹೇಳಲಾದ ಬಿಜ್ಜಳನ ಕೊಲೆ, ಶರಣರ ಸಾಮೂಹಿಕ ಹತ್ಯೆ ಮತ್ತು ಬಸವಣ್ಣನ `ಲಿಂಗೈಕ್ಯತೆ' ಇತ್ಯಾದಿಗಳು ಸೂಚಿಸುವ ರಕ್ತ ಕ್ರಾಂತಿಯೋ? ಇದಕ್ಕೆ ನಿಶ್ಚಿತ ಉತ್ತರ ಕಂಡುಕೊಳ್ಳಲಾಗದ ಕನ್ನಡ ಸಮಾಜ ತನ್ನೊಳಗೇ ವೀರಶೈವ ಸಮಾಜವೆಂಬುದೊಂದನ್ನು ಸೃಷ್ಟಿಸಿಕೊಂಡು, ಪಡಬಾರದ ಪಡಿಪಾಟಲನ್ನು ಪಡುತ್ತಿದೆ. ಇದರ ಪರಿಣಾಮವಾಗಿ ತನ್ನ ನಿಜವಾದ ನಾಯಕನನ್ನೇ ಕಳೆದುಕೊಂಡು ಅನಾಥವಾಗಿದೆ. ಕಿರೀಟ ಧರಿಸಿಕೊಂಡು ಕುದುರೆ ಮೇಲೆ ಕೂತ ಬಸವಣ್ಣನ ಪ್ರತಿಮೆ ಕನ್ನಡ ಸಮಾಜದ ಈ ದುರಂತವನ್ನು ಅಣಕಿಸಿ ಹೇಳುವಂತಿದೆ. ಬಸವಣ್ಣನನ್ನು ನಿಜವಾಗಿ ಕೊಂದವರು ಯಾರು, ಹೇಗೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ವರ್ಗವೊಂದರ ಧಾಷ್ಟ್ರ್ಯವನ್ನು ಸೂಚಿಸುವಂತಿದೆ.

ಇದೆಲ್ಲ ನನ್ನ ಮನಸ್ಸಿನಲ್ಲಿ ಹಾದು ಹೋದದ್ದು, ಇತ್ತೀಚೆಗೆ ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕ ಗೆಳೆಯರೊಬ್ಬರು, ಇಡೀ ವಚನ ಸಾಹಿತ್ಯವನ್ನು ಹುಡುಕಿದರೂ ಜಾತಿ ವಿರೋಧಿಯಾದ ಒಂದು ವಚನವೂ ಸಿಕ್ಕಲಾರದು ಎಂದು ಹೇಳಿ ನನ್ನನ್ನು ದಂಗುಬಡಿಸಿದಾಗ! ಕಲ್ಯಾಣ ಕ್ರಾಂತಿ ಎಂದರೆ, ವಚನ ಚಳುವಳಿ ಎಂದರೆ, ಜಾತಿ ವಿರೋಧಿ ಚಳುವಳಿ ಎಂದು ಕನ್ನಡದ ಜನ ಶತ ಶತಮಾನಗಳಿಂದ ನಂಬಿ, (ಹುಸಿ) ಹೆಮ್ಮೆಪಡುತ್ತಾ, ಚರ್ಚಿಸುತ್ತಾ, ಮಠ - ಮಂದಿರಗಳನ್ನೂ ಕಟ್ಟುತ್ತಾ ಬರುತ್ತಿರುವಾಗ ಇವರೇನು ಹೀಗೆ ಹೇಳುತ್ತಿದ್ದಾರೆಂದು ವಿವರವಾಗಿ ವಿಚಾರಿಸಿದೆ. ಅವರು ತಮ್ಮ ಮಾತನ್ನು ವಿವರಿಸಿದ್ದು ಹೀಗೆ: ಜಾತಿ ವಿರುದ್ಧ ನಿಂತ ಶರಣರದೇ ಇಂದು ಒಂದು ಜಾತಿಯಾಗಿದೆ ಎಂದು ನಾವು ಸೋಜಿಗ ಅಥವಾ ವಿಷಾದಪಡುವ ಅಗತ್ಯವಿಲ್ಲ. ಏಕೆಂದರೆ ಬಸವಣ್ಣ ಮಾಡಿದ್ದು ಶರಣ ಚಳುವಳಿಯೇ ಹೊರತು, ಜಾತಿ ವಿರೋಧಿ ಚಳುವಳಿಯಲ್ಲ. ಆತ ಶರಣರಾದವರಿಗೆ ಜಾತಿ ಇಲ್ಲವೆಂದನೇ ಹೊರತು, ಜಾತಿ ವ್ಯವಸ್ಥೆಯ ತಾತ್ವಿಕತೆ ಮತ್ತು ರಾಜಕಾರಣದ ವಿರುದ್ಧ ಮಾತನಾಡಲಿಲ್ಲ.

ಇವರ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ವಚನಗಳನ್ನು ಓದಿದರೆ, ವಚನಗಳೆಲ್ಲ ಹಾಗೇ ಕಾಣುತ್ತವೆ! ಜಾತಿ ಉಲ್ಲೇಖವಿರುವ ಎಲ್ಲ ವಚನಗಳೂ `ಶಿವಭಕ್ತನೇ ಕುಲಜ' ಎಂಬ ನಂಬಿಕೆಯ ಆಧಾರದ ಮೇಲೆ ಕಾಯಕದ ಘನತೆ ಮತ್ತು ದಾಸೋಹದ ಮಹತ್ವಗಳನ್ನು ಹೇಳುತ್ತಾ, ಶರಣಸಂಕುಲವೆಂಬ ಕಾಯಕ ಜೀವಿಗಳ ಹೊಸದೊಂದು ಸಮುದಾಯದ ಶೀಲ ಮತ್ತು ಐಕ್ಯತೆಯನ್ನು ಕಟ್ಟುವ ಕಡೆಗೆ ಮುಖಮಾಡಿರುವಂತೆ ತೋರುತ್ತವೆಯೇ ಹೊರತು, ಜಾತಿ ವ್ಯವಸ್ಥೆಯನ್ನು ಇಡಿಯಾಗಿ ಮುಖಾಮುಖಿಯಾಗಿಸಿಕೊಳ್ಳುವ ಪ್ರಯತ್ನಗಳು ಕಾಣುವುದಿಲ್ಲ. `ಕೆಳ' ಮತ್ತು `ಕೀಳು' ಎಂದು ಹೇಳಲಾಗುವ ಜಾತಿ ಮತ್ತು ವೃತ್ತಿಗಳ ವಚನಕಾರರೂ ತಮ್ಮ ವಚನಗಳಲ್ಲಿ ಮೇಲ್ಜಾತಿಗಳ (ವಿಶೇಷವಾಗಿ ವೈದಿಕರ) ಆಚರಣೆಗಳು ಮತ್ತು ಅವರ ವೃತ್ತಿ - ವ್ಯವಹಾರಗಳ ಬಗ್ಗೆ ಖಂಡನೆ - ವಿಡಂಬನೆ ಮಾಡುವರಾದರೂ, ಅದು ತಮ್ಮ `ಶರಣಕುಲ'ದ ಹಿರಿಮೆಯನ್ನು ಸ್ಥಾಪಿಸುವ ಉದ್ದೇಶವನ್ನಷ್ಟೇ ಹೊಂದಿದಂತೆ ತೋರುತ್ತದೆ. ಜಾತಿ ಕುರಿತ ಬಸವಣ್ಣನ ನಿಲುವು ಅತ್ಯಂತ ತೀವ್ರವಾಗಿ ವ್ಯಕ್ತವಾಗುವ

ಸೂಳೆಗೆ ಹುಟ್ಟಿದ ಕೂಸಿನಂತೆ
ಆರನಾದರೆಯೂ `ಅಯ್ಯ' `ಅಯ್ಯ' ಎನಲಾರೆನಯ್ಯ
ಚೆನ್ನಯ್ಯನೆಮ್ಮಯ್ಯನು
ಚೆನ್ನಯ್ಯನ ಮಗ ನಾನು;
ಕೂಡಲಸಂಗನ ಮಹಾಮನೆಯಲ್ಲಿ
ಧರ್ಮಸಂತಾನ ಭಂಡಾರಿ ಬಸವನು!
ಎಂಬ ವಚನದಲ್ಲೂ ಎದ್ದು ಕಾಣುವುದು ಶರಣ ಸಂಸ್ಕೃತಿಯ ಆಶಯದಂತೆ ಕೆಳ ಜಾತಿಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳುವ ಹಂಬಲವೇ ಹೊರತು, ಜಾತಿ ವಿರೋಧಿ ಧೋರಣೆಯಲ್ಲ ಅನ್ನಿಸುತ್ತದೆ.

ನನ್ನ ಅಧ್ಯಾಪಕ ಮಿತ್ರರ ವಾದದ ಕಣ್ಣಿನಲ್ಲಿ ಕಾಣುವಂತಹ ಇಂತಹ ನೋಟದ ಹಿಂದೆ ಒಂದು ತಾತ್ವಿಕತೆ ಇದೆ. ಅದು ಇತ್ತೀಚೆಗೆ ಕೆಲವು ಸಮಾಜ ಶಾಸ್ತ್ರಜ್ಞರು, ರಾಜಕೀಯ ಶಾಸ್ತ್ರಜ್ಞರು, ಇತಿಹಾಸಜ್ಞರು ಮತ್ತು ಸಂಸ್ಕೃತಿ ಚಿಂತಕರ ವಿಶೇಷ ಗಮನ ಸೆಳೆಯುತ್ತಿರುವ (ಕನ್ನಡಿಗರೇ ಆದ) ಬೆಲ್ಜಿಯಂ ನಿವಾಸಿ ಭಾರತೀಯ ಶಾಸ್ತ್ರಜ್ಞರಾದ ಬಾಲಗಂಗಾಧರರ ಸಾಮಾಜಿಕ ಚಿಂತನೆ. ಅವರ ಪ್ರಕಾರ, `ಹಿಂದೂ ಧರ್ಮ'ವೆಂಬುದೇ ಒಂದು ಕೃತಕ ರಾಜಕೀಯ ರಚನೆ. ವಿಶೇಷವಾಗಿ ಪಾಶ್ಚಾತ್ಯರು ತಮ್ಮ `ಕ್ರಿಶ್ಚಿಯನ್' ಧರ್ಮದ ಎರಕದಲ್ಲಿ ರೂಪಿಸಿದ ಹಿಂದೂ ಧರ್ಮವದು. ಹಾಗೆ ನೋಡಿದರೆ, ಹಿಂದೂ ಧರ್ಮವೆಂಬುದೇ ಇಲ್ಲ. ಅದೊಂದು ಸಂಪ್ರದಾಯಗಳ ಪರಂಪರೆ ಅಷ್ಟೆ. ಅದಕ್ಕೆ ಕ್ರಿಶ್ಚಿಯಾನಿಟಿ ಅಥವಾ ಇಸ್ಲಾಂನಂತೆ (ಅಥವಾ ಇನ್ನಾವುದೇ ಮಧ್ವಪ್ರಾಚ್ಯ ಮೂಲವಾದ `ರಿಲಿಜನ್'ನಂತೆ) ಸಾಮಾನ್ಯವಾದ ಒಂದು ಅನನ್ಯ ದೈವವಾಗಲಿ, `ದೈವದತ್ತ' ಧರ್ಮಗ್ರಂಥವಾಗಲೀ. ತಾತ್ವಿಕತೆಯಾಗಲೀ ಅಥವಾ ಧಾರ್ಮಿಕ ಸಂಸ್ಥೆಯಾಗಲೀ ಇಲ್ಲ. ಹಾಗಾಗಿ ಅದು ಅವರ `ರಿಲಿಜನ್'ನಂತಹ ರಿಲಿಜನ್ ಅಲ್ಲ. ಹಾಗಾಗಿ ಭಾರತದ 'ಧರ್ಮ' ಎಂಬ ಸಾರ್ವತ್ರಿಕ ಶಬ್ದ ನಮ್ಮ ಆಧುನಿಕ ಚರ್ಚೆ ವ್ಯವಹಾರಗಳಲ್ಲಿ `ರಿಲಿಜನ್' ಎಂಬ ನಿರ್ದಿಷ್ಟ ಅರ್ಥ ಪಡೆದು ತರ್ಜುಮೆಯಾದುದರಿಂದ ಅನೇಕ ಅನಾಹುತಗಳಾಗಿವೆ. ಜಾತಿ ವ್ಯವಸ್ಥೆ ಕುರಿತಂತೆ ನಾವು ಕಟ್ಟಿಕೊಂಡಿರುವ ಚರಿತ್ರೆಯೂ ಇಂತಹ ಅನಾಹುತಗಳಲ್ಲೊಂದು. ಹಾಗಾಗಿ ವಚನ ಚಳುವಳಿಯನ್ನು ಜಾತಿ ವಿರೋಧಿ ಚಳುವಳಿಯನ್ನಾಗಿ ನೋಡುವ ನಮ್ಮ ಕ್ರಮವೇ ತಪ್ಪಾಗಿದ್ದು, ಅದರ ಸಾಮಾಜಿಕ ಚಲನಶೀಲತೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲೇ ಎಡವುತ್ತಿದ್ದೇವೆ.

ಈ ವಾದ, ಶರಣರನ್ನು ಒಂದು ಜಾತಿಯಾಗಿ (ಮತ್ತು ಅದರೊಳಗೆ ಹಲವು ಉಪಜಾತಿಗಳನ್ನಾಗಿ) ಜಡಗೊಳಿಸಿ `ಕಾಪಾಡು'ತ್ತಿರುವ ನಮ್ಮ ಮಠಾಧೀಶರಿಗೆ ಪ್ರಿಯವಾಗಬಹುದು. ಆದರೆ ವಚನ ಚಳುವಳಿ ನಿಜವಾಗಿ ಜಾತಿ ವ್ಯವಸ್ಥೆ ವಿರುದ್ಧ ದಂಗೆಯೇಳಲಿಲ್ಲವೇ? ಹಾಗಿಲ್ಲದಿದ್ದರೆ, ಬಿಜ್ಜಳನಿಗೇಕೆ ಕಷ್ಟವೊದಗಿ ಆತ ತನ್ನ ಪ್ರಿಯ ಮಿತ್ರನೇ ಆಗಿದ್ದ ಬಸವಣ್ಣನ ಕಾರ್ಯಾಚರಣೆಗಳ ವಿರುದ್ಧ ತಿರುಗಿ ಬೀಳುತ್ತಿದ್ದ? ಇಂತಹ ಬರೀ ಚೂಪಾದ ಪ್ರಶ್ನೆಗಳಿಗೆ ಅವಕಾಶ ಒದಗಿಬರುವುದು, ನಾವು ಬಸವಣ್ಣನ ಕ್ರಾಂತಿಯನ್ನು ಆಧುನಿಕ ಕಾಲದ ಕ್ರಾಂತಿಗಳ ಕಲ್ಪನೆಯ ಚೌಕಟ್ಟಿನಲ್ಲಿಟ್ಟು ಅರ್ಥ ಮಾಡಿಕೊಳ್ಳಲೆತ್ನಿಸುವುದರಿಂದ. ಹಾಗಾಗಿಯೇ ನಾವು (ಮತ್ತು ಹಲವು ಸಾರ್ವಜನಿಕ ಭಾಷಣಕಾರರು) ಸುಲಭವಾಗಿ ಬಸವಣ್ಣನೇ ಜಗತ್ತಿನ ಮೊದಲ ಸಮಾಜವಾದಿ, ಕಮ್ಯೂನಿಸ್ಟ್ ಎಂದೆಲ್ಲ ಹೆಮ್ಮೆಯಿಂದ ಘೋಷಿಸತೊಡಗುತ್ತೇವೆ. ಇದೆಲ್ಲ ಸಮಾಜವಾದವೆಂದರೇನು, ಕಮ್ಯೂನಿಸಂ ಎಂದರೇನು ಎಂದು ನಿಜವಾಗಿ ತಿಳಿಯದವರ ಮಾತು. ಬಸವಣ್ಣ ತನ್ನ ಕಾಲ - ದೇಶಗಳ ಕೂಸು. ಅವನಿಗೆ ಅವನದೇ ಆದ - ರೂಪಿಸಿಕೊಂಡ - ರಾಜಕೀಯ ಪರಿಭಾಷೆ ಇದೆ. ಆ ಮೂಲಕ - ಅದರ ಮಾತೃಕೆಗಳಲ್ಲಿ - ಅವನ ಕ್ರಾಂತಿ ಸಂಭವಿಸಿದೆ. ಆ ರಾಜಕೀಯ ಪರಿಭಾಷೆಯನ್ನು ಅರಿಯದ ಹೊರತು ನಾವು ಆ ಕ್ರಾಂತಿಯನ್ನು, ಅದರ ವೈಫಲ್ಯವನ್ನು, ಅದರ ಹಿಂದಿನ ಕಾರಣಗಳನ್ನು ಮತ್ತು ಅದರ ಇಂದಿನ ಅವಶೇಷ ರೂಪಗಳನ್ನು ಅರ್ಥಮಾಡಿಕೊಳ್ಳಲಾರೆವು.

ಆದರೆ ದುರದೃಷ್ಟಕರ ಸಂಗತಿಯೆಂದರೆ, ವಚನ ಸಾಹಿತ್ಯದ ಹೊರತಾಗಿ ಈ ಸಾಹಸವನ್ನರಿಯಲು ಇನ್ನಾವ ಆಕರಗಳು ನಮಗೆ ಸಿಗುತ್ತಿಲ್ಲ. ಲಭ್ಯ ಶಾಸನಗಳು ಹಾಗೂ ಜಾನಪದ ಐತಿಹ್ಯಗಳನ್ನು ಸಾಹಿತ್ಯದ ಜೊತೆ ಸಮನ್ವಯಿಸಿ ಹೊಸ ಆಕರ ಆಧಾರಗಳನ್ನು ನಿರ್ಮಿಸಿಕೊಳ್ಳ ಹೊರಟರೆ, ಆ ಆಧಾರಗಳು ಸೂಚಿಸುವ ತೀರ್ಮಾನಗಳು ಇಂದಿನ ಬಸವವಾದಿಗಳಿಗೆ ಪಥ್ಯವಾಗುವುದಿಲ್ಲ. ಉದಾಹರಣೆಗೆ ಇತ್ತೀಚೆಗೆ ಬಂಜಗೆರೆ ಜಯಪ್ರಕಾಶರು `ಅನುಮಾನಿತ ಸತ್ಯ'ವೆಂದು ಪ್ರಸ್ತುತ ಪಡಿಸಿದ ಬಸವಣ್ಣನ ಜಾತಿ ಮೂಲ ಕುರಿತ ಚರ್ಚೆಯನ್ನು ಅದು ಬಸವಣ್ಣನ ತಾಯಿಯ ಶೀಲವನ್ನೇ ಪ್ರಶ್ನಿಸುವಂತಿದೆ ಎಂಬ ಅಶಿಕ್ಷಿತ ನೆಪವೊಡ್ಡಿ, ಅದಕ್ಕೆ ಅಧಿಕೃತ ಬಹಿಷ್ಕಾರವನ್ನೇ ಹಾಕಿಸಲಾಯಿತು. ಆದರೆ ಬಸವಣ್ಣನ ಹೆಸರಿನಲ್ಲೇ ಇರುವ ಮತ್ತು ಅನೇಕ ಕಟ್ಟಾ ವೀರಶೈವ ಸಂಶೋಧಕರ ಮತ್ತು ವಿದ್ವಾಂಸರ ಸಂಪಾದಕತ್ವದಲ್ಲೇ ಹಲವು ಕಡೆ ದಾಖಲಾಗಿರುವ ಈ ವಚನ ಸೂಚಿಸುವ ಶೀಲ ಸಂಸ್ಕೃತಿಯಾದರೂ ಎಂತಹುದು? ಅದು ಇಂದಿನ ಈ `ಶೀಲವಾದಿ'ಗಳ ಶೀಲ ಕಲ್ಪನೆಯನ್ನೇ ಒಡೆದು ಹಾಕುವಂತಿದೆಯಲ್ಲಾ?:
... ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆ ಚೆಲುವೆ
ಆಕೆಯನ್ನು ಸಂಗಮದೇವಾ, ನೀ ಜಂಗಮ ರೂಪವಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿದ್ದ ಸತಿಯೆಂದು ಮಾಯಕ್ಕೆ ಮರುಗಿನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಗೆ ಮನದೊಡೆಯ...
ಹಾಗೇ, ಈ ವಚನ ಭಾಗದೊಂದಿಗೇ ಇನ್ನೊಂದಿಷ್ಟು ವಚನಗಳನ್ನು ಉದ್ಧರಿಸುತ್ತಾ ಖ್ಯಾತ ಸ್ತ್ರೀವಾದಿ ವಿಮರ್ಶಕಿ ಡಾ. ಎಂ.ಎಸ್.ಆಶಾದೇವಿ ಅವರು ಹೆಣ್ಣನ್ನು ಕುರಿತ ಬಸವಣ್ಣನ `ಊಳಿಗಮಾನ್ಯಶಾಹಿ' ನಿಲುವನ್ನು ವಿಷದೀಕರಿಸಿದ್ದಾರಲ್ಲಾ? (ಹಾಗಾದರೆ ಬಸವಣ್ಣ ಎಂತಹ ಸಮಾಜವಾದಿ?) ಆಶಾದೇವಿಯವರು ಮುಂದುವರಿದು, ಬಸವಣ್ಣನ ಕ್ರಾಂತಿ, ಕೆಳ - ದಲಿತ ಜಾತಿಗಳ ವಿಷಯದಲ್ಲಿ ನಿಜವಾದಷ್ಟು ಹೆಣ್ಣಿನ ವಿಷಯದಲ್ಲಿ ಆಗಿಲ್ಲ ಎಂದೂ ಹೇಳುವರಲ್ಲಾ? (ಅವರ 'ಸ್ತ್ರೀಮತವನ್ನುತ್ತರಿಸಲಾಗದೆ' ನೋಡಿ)

ಬಸವಣ್ಣನ ಕ್ರಾಂತಿಯನ್ನು ನಮ್ಮ ಪ್ರಜ್ಞೆಯಾಳದ ನೋವಿನ ಹಲ್ಲಿನಂತೆ ಸಂವೇದಿಸದೆ, ನಮ್ಮೆಲ್ಲ ಆಧುನಿಕ ನಿರೀಕ್ಷೆಗಳನ್ನು ಅದರಲ್ಲಿ ಕಂಡು ನಲಿಯಲು ಅಥವಾ ನುಲಿಯಲೆತ್ನಿಸುವ ಪ್ರವೃತ್ತಿಯೇ ಇಷ್ಟೆಲ್ಲ ತಾತ್ವಿಕ, ಭಾವನಾತ್ಮಕ ಪಡಿಪಾಟಲುಗಳಿಗೆ ಕಾರಣವಾಗಿದೆಯೆಂದು ನನಗನ್ನಿಸುತ್ತದೆ. ವರ್ತಮಾನವನ್ನು ಚರಿತ್ರೆಯ ಮುಂದುವರಿದ ರೂಪವಾಗಿಯಷ್ಟೇ ನೋಡುವ ಸರಳ ಚಾರಿತ್ರಿಕ ದೃಷ್ಟಿಯೇ ಇದಕ್ಕೆ ಕಾರಣವಾಗಿದೆ. ಇದು ಕಲ್ಯಾಣ ಕ್ರಾಂತಿಯ ಹಿಂದೆ ಯಾವೆಲ್ಲ ಕಾಲ, ದೇಶ ವಿಶಿಷ್ಟ ಚಾರಿತ್ರಿಕ ಒತ್ತಡಗಳು ಕೆಲಸ ಮಾಡಿವೆ ಎಂಬುದರ ಕಡೆ ಗಮನವನ್ನೇ ಹರಿಸದ ನಮ್ಮ ನೋಟದಲ್ಲಿನ, ವರ್ತಮಾನ ಸ್ಥಿತವಾದ `ತುಂಬು' ಸಾಮಾಜಿಕ - ಸಾಹಿತ್ಯಕ - ಸಾಂಸ್ಕೃತಿಕ ಸ್ಥೂಲತೆಯೇ ಆಗಿದೆ. ಕಲ್ಯಾಣ ಕ್ರಾಂತಿಗೆ ಜಾತಿ - ಧರ್ಮಗಳಲ್ಲದೇ ಆ ಕಾಲಕ್ಕೆ ವಿಶಿಷ್ಟವಾದ ರಾಜಕೀಯ ಅರ್ಥಶಾಸ್ತ್ರದ ಆಯಾಮಗಳೂ ಇರಬಹುದಲ್ಲವೇ? ಜಾತಿ ವ್ಯವಸ್ಥೆಯ `ಬಂಧನ'ಗಳೇ ಅವುಗಳೊಳಗಿನ ಜಾತಿಗಳ `ಬಿಡುಗಡೆ'ಯ ಶಕ್ತಿಗಳನ್ನು ಉತ್ಪಾದಿಸುತ್ತಿದ್ದು; 12ನೇ ಶತಮಾನದ ಹೊತ್ತಿಗೆ ಜಾತಿ ವ್ಯವಸ್ಥೆಯೊಳಗಿನ ಈ ರಾಜಕಾರಣ ಯಾವ ಹಂತ ತುಲುಪಿತ್ತು ಎಂಬುದನ್ನು ಪರಿಶೀಲಿಸಬೇಕಲ್ಲವೇ? ಈ ಕಾಲಾವಧಿಯಲ್ಲಿನ ಆರ್ಥಿಕ ಚಟುವಟಿಕೆಗಳು ವಿನ್ಯಾಸಗೊಳ್ಳುತ್ತಿದ್ದ ರೀತಿ, ಅವು ರೂಪಿಸುತ್ತಿದ್ದ ಹೊಸ ಹಿತಾಸಕ್ತಿಗಳು ಮತ್ತು ಆ ಮೂಲಕ ಸೃಷ್ಟಿಯಾಗುತ್ತಿದ್ದ ಸಾಮಾಜಿಕ ವೈರುಧ್ಯಗಳು ಹಾಗೂ ಅವು ಮತ್ತೆ ಧಾರ್ಮಿಕ ನೆಲೆಯಲ್ಲಿ ಉಂಟುಮಾಡುತ್ತಿದ್ದ ಪರಿಣಾಮಗಳ ಅಧ್ಯಯನವನ್ನು ನಮ್ಮ ಸಾಮಾಜಿಕ - ಸಾಂಸ್ಕೃತಿಕ - ಸಾಹಿತ್ಯಕ ಅಧ್ಯಯನದ ಜೊತೆಗೆ ಜೋಡಿಸಿ ನೋಡಬೇಕಲ್ಲವೆ?

ಬಂಜಗೆರೆ ಜಯಪ್ರಕಾಶರ `ಕನ್ನಡ ರಾಷ್ಟ್ರೀಯತೆ' ಸಂಪ್ರಬಂಧದಲ್ಲಿ ಕಾಣುವ ಇಂತಹದೊಂದು ಬಹುಶಿಸ್ತೀಯ ಅಧ್ಯಯನದ ಪ್ರಯತ್ನದ ಹೊರತಾಗಿ ನಮ್ಮ ಇತಿಹಾಸಕಾರರಾಗಲಿ, ಸಮಾಜಶಾಸ್ತ್ರಜ್ಞರಾಗಲಿ ಈ ದಿಕ್ಕಿನಲ್ಲಿ ಯಾವುದೇ ಗಮನಾರ್ಹ ಕೆಲಸ ಮಾಡಿರುವುದು ನನ್ನ ಗಮನಕ್ಕಂತೂ ಬಂದಿಲ್ಲ. ಹಾಗಾಗಿಯೇ ಕಲ್ಯಾಣ ಕ್ರಾಂತಿ ಎಂಬುದು ಸಾಹಿತ್ಯ ವಿಮರ್ಶಕರ, ಸಂಸ್ಕೃತಿ ಚಿಂತಕರ, ರಾಜಕಾರಣಿಗಳ ಮತ್ತು ಮಠಾಧಿಪತಿಗಳ `ಕಲ್ಪನಾಶೀಲ' ಚಟುವಟಿಕೆಗಳ ಆಡೊಂಬಲವಾಗಿದೆ! ಹನ್ನೆರಡನೇ ಶತಮಾನದ ಹೊತ್ತಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಯಗಾರ - ಶೂದ್ರ - ವರ್ಗವೇ ವ್ಯಾಪಾರೀ - ವೈಶ್ಯ - ವರ್ಗವಾಗಿ ಬೆಳೆದು, ಜಾತಿ ನೆಲೆಯ ಸಂಬಂಧಗಳನ್ನು ತಲೆಕೆಳಗು ಮಾಡತೊಡಗಿತ್ತು. ಮತ್ತು ಈ ಸಾಮಾಜಿಕ ಸ್ಥಿತ್ಯಂತರದ ಸಂದರ್ಭವನ್ನು ನಿಭಾಯಿಸುವ ಜವಾಬ್ದಾರಿ ಮಂತ್ರಿಯಾಗಿದ್ದ ಬಸವಣ್ಣನದಾಗಿತ್ತು; ಈ ನಿಭಾವಣೆಯ ಕಥೆಯೇ ಕಲ್ಯಾಣ ಕ್ರಾಂತಿಯ ಕಥೆ ಎಂದು ಬಂಜಗೆರೆಯವರು, ಆರ್.ಎನ್.ನಂದಿಯವರ ಸಂಶೋಧನೆಗಳನ್ನು - ಇದು ಬಲವಂತದ ಮಾರ್ಕ್ಸವಾದಿ ವ್ಯಾಖ್ಯಾನ ಎಂದು ಹೇಳಲಾಗುವುದಾದರೂ - ಉಲ್ಲೇಖಿಸಿ ಆಡಿರುವ ಮಾತುಗಳಿಗೆ ಇನ್ನಷ್ಟು ಆಧಾರಗಳೂ, ಬೆಂಬಲವೂ ಬೇಕಿದೆ, ನಿಜ. ಆದರೆ ನಮ್ಮ ಹೆಮ್ಮೆಯಾಗಿರುವ ಕಲ್ಯಾಣ ಕ್ರಾಂತಿಯನ್ನು ಇಂದಿನ ಸಂದರ್ಭಕ್ಕೆ ಪ್ರಸ್ತುತಪಡಿಸಿಕೊಂಡು ಅರ್ಥಮಾಡಿಕೊಳ್ಳಬೇಕಾದರೆ, ಈ ಒಂದು `ಲೌಕಿಕ' ದೃಷ್ಟಿಯೂ ಅವಶ್ಯಕ. ಆಗ ಬಸವಣ್ಣ, ಸ್ಥಿತ್ಯಂತರದಲ್ಲಿರುವ ವರ್ಗವೊಂದರ ಲೌಕಿಕ ನಾಯಕನಾಗಿಯೇ ಕಾಣತೊಡಗಿ; ಕಲ್ಯಾಣ ಕ್ರಾಂತಿಯ ರೋಮಾಂಚನದ ಹಲವು ಆಯಾಮಗಳು ತುಸು ಮಸುಕಾಗ ತೊಡಗಿ, ಚಾರಿತ್ರಿಕ ವಾಸ್ತವದ ನೆಲೆಗಳು ಮುನ್ನೆಲೆಗೆ ಬರತೊಡಗುತ್ತವೆ. ಮತ್ತೂ ಮುಖ್ಯವಾಗಿ, ಈ `ಕ್ರಾಂತಿ' ಎಲ್ಲರಿಗೂ ಎಲ್ಲ ಕನಸುಗಳನ್ನೂ ಒದಗಿಸುವ ಇಕ್ಕಟ್ಟಿನಿಂದ ಪಾರಾಗುತ್ತದೆ. ಬಸವಣ್ಣ ತನ್ನ ಕಾಲ ದೇಶಗಳ ಮಿತಿಗಳೊಳಗೆ ಒಬ್ಬ ಮನುಷ್ಯ ಮಾತ್ರನಾಗಿ ಏನೆಲ್ಲ ಎತ್ತರಗಳನ್ನು ಏರಬಲ್ಲವನಾಗಿದ್ದನೋ ಅಷ್ಟು ಎತ್ತರಗಳನ್ನು ಮಾತ್ರ ಏರಿದ, ಕಟು `ಚಾರಿತ್ರಿಕ ವಾಸ್ತವ'ದ ಚಿತ್ರ ದೊರಕುತ್ತದೆ.

ಹಾಗೇ ಈ ಕ್ರಾಂತಿ 15 - 16ನೇ ಶತಮಾನದ ಹೊತ್ತಿಗೆ ಸೃಷ್ಟಿಸಿದ್ದ ಪ್ರತಿ ಕ್ರಾಂತಿಯ ಪರಿಣಾಮಗಳ - ಹಲವು ಶೂನ್ಯ ಸಂಪಾದನೆಗಳೂ ಸೇರಿದಂತೆ, ಕಲ್ಲುಮಠದ ಪ್ರಭುದೇವರ 'ಲಿಂಗಲೀಲಾ ವಿಲಾಸ ಚಾರಿತ್ರ'ದಿಂದ ಹಿಡಿದು ವಿರೂಪಾಕ್ಷ ಪಂಡಿತನ `ಚೆನ್ನಬಸವ ಪುರಾಣ'ದವರೆಗಿನ ವೀರಶೈವ ಧರ್ಮದ ಸಂಸ್ಥೀಕರಣ ಮತ್ತು ಸಂಸ್ಕೃತೀಕರಣದ ಪ್ರಯತ್ನಗಳು - ಒಡಲಿನಿಂದಲೇ ಏಕೆ ಮತ್ತು ಹೇಗೆ ಕರ್ನಾಟಕದ ತತ್ವಪದಗಳ ಮತ್ತು ಮಲೆಮಾದೇಶ್ವರ, ಮಂಟೇಸ್ವಾಮಿ ಇತ್ಯಾದಿ ಜನಪದ ಮಹಾಕಾವ್ಯಗಳ ವಿಶಿಷ್ಟ ಸಾಮಾಜಿಕ (ಬರೀ ಸಾಹಿತ್ಯಕವಲ್ಲ ಎನ್ನುವ ಅರ್ಥದಲ್ಲಿ) ಪ್ರತಿಭಟನೆಗಳು ಪರಂಪರೆ ಆರಂಭವಾಯಿತು ಎಂಬುದು ಗೊತ್ತಾಗುತ್ತದೆ. ಆ ಮೂಲಕವೇ ನಿಜವಾದ ಬಸವ ಪರಂಪರೆ ಎಲ್ಲಿ, ಯಾವ ನೆಲೆಯಲ್ಲಿ ಹೇಗೆ ಮುಂದುವರಿದಿದೆ ಎಂಬುದೂ ಅರಿವಿಗೆ ಬರುತ್ತದೆ. ಆಗ ಕಲ್ಯಾಣ ಕ್ರಾಂತಿ ಕನ್ನಡ ಪ್ರಜ್ಞೆಯ ಪಾಲಿಗೆ ಏಕೆ ಮತ್ತು ಹೇಗೆ ನೋವಿನ ಹಲ್ಲಾಗಿದೆ ಎಂಬುದೂ ಗೊತ್ತಾಗುತ್ತದೆ. ಜೊತೆಗೇ ಬಾಲಗಂಗಾಧರರ ಶಿಷ್ಯರಿಗೂ, ಸ್ತ್ರೀವಾದಿ ಅಥವಾ ಇನ್ನಾವದೇ ವಾದಿಗಳಾದ ವಿಮರ್ಶಕರಿಗೂ ತಮ್ಮ ನೋಟಗಳು ಹೇಗೆ ಕೇವಲ ಶಿಕ್ಷಿತ ನೋಟಗಳಾಗಿ - ಅಧ್ಯಯನಗಳಿಂದ ತಮಗೆ ಬೇಕಾದ್ದನ್ನಷ್ಟೇ ಪಡೆಯುವ - ಆಧುನಿಕ ಅಧ್ಯಯನಗಳ `ಸ್ವಾರ್ಥಪರತೆ'ಯ ಪ್ರತೀಕಗಳಾಗಿವೆ ಎಂಬುದೂ ತಿಳಿಯುತ್ತದೆ.

ಇನ್ನೂ ಮುಂದುವರಿದು ಹೇಳುವುದಾದರೆ, ಇದು ನಮ್ಮ ವೀರಶೈವ ಮಠಾಧಿಪತಿಗಳ ಆತ್ಮ ಸಾಕ್ಷಿಯನ್ನೂ ಕೆಣಕಿ, ಬಸವ ಪರಂಪರೆಯ ನಿಜವಾದ ವಾರಸುದಾರಿಕೆ ಎಂದರೆ ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲಿಗೆ ನೋವು ನಿವಾರಕಗಳ ಚಿಕಿತ್ಸೆಗೆ ಬದಲಾಗಿ ಬೇರು ಮುಟ್ಟದ(Root canal?) ಚಿಕಿತ್ಸೆ ನೀಡುವುದೇ ಆಗಿದೆ ಎಂಬ ಅರಿವನ್ನೂ ಹುಟ್ಟಿಸಬಹುದಾಗಿದೆ. ಅದಕ್ಕಾಗಿ ಅವರು ಬಸವ ಪರಂಪರೆಯ ನಿಜವಾದ ಬೇರು ಈಗ ಎಲ್ಲಿದೆ ಎಂಬುದರ ಕಡೆಗೆ ಗಮನ ಹರಿಸಬೇಕಾಗಿದೆ.