ಕಾಂಪ್ಲೆಕ್ಸ್ ಗೊಬ್ಬರ - ನೇರ ಗೊಬ್ಬರ ಯಾವುದು ಒಳ್ಳೆಯದು?
ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಾಂಪ್ಲೆಕ್ ಗೊಬ್ಬರ ಮತ್ತು ನೇರ ಗೊಬ್ಬರ ಇವೆರಡರ ಬಗ್ಗೆ ಬಹಳಷ್ಟು ಕೃಷಿಕರಿಗೆ ಗೊತ್ತಿದೆ. ಕೆಲವರಿಗೆ ಗೊತ್ತಿಲ್ಲ. ರೈತರಾದವರಿಗೆ ಇದು ಒಂದು ಎರಡನೇ ಕ್ಲಾಸಿನ ಪಾಠ. ಸಣ್ಣ ಕ್ಲಾಸಿನಲ್ಲಿ ಮಗ್ಗಿ ಹೇಗೆ ಬಾಯಿಪಾಠ ಬರಬೇಕೋ ಅದೇ ತರಹ ಕೃಷಿಕರಾದವರಿಗೆ ಬೆಳೆ ಪೋಷಕ ಗೊಬ್ಬರ ಮತ್ತು ಅದರ ಸತ್ವಗಳ ಬೆಗ್ಗೆ ಗೊತ್ತಿರಬೇಕು. ಈ ಮಟ್ಟಕೆ ರೈತ ಬೆಳೆದರೆ ತುಂಬಾ ಉಳಿತಾಯವನ್ನೂ ಮಾಡಬಹುದು. ಅಧಿಕ ಇಳುವರಿಯನ್ನೂ ಪಡೆಯಬಹುದು.
ಹಿಂದೆ ನಾವು ಅಕ್ಕಿ ಉಪ್ಪಿಟ್ಟು ಮಾಡಬೇಕಿದ್ದರೆ ಅಕ್ಕಿಯನ್ನು ಕಡೆಯುವ ಕಲ್ಲಿನಲ್ಲಿ ಹಾಕಿ ಸ್ವಲ್ಪ ಹುಡಿಯಾಗುವಂತೆ ಅರೆದು ನಂತರ ಅದನ್ನು ಬೇಯಿಸಿ ಉಪ್ಪಿಟ್ಟು ಮಾಡುತ್ತಿದ್ದೆವು. ಈಗ ಹಾಗಿಲ್ಲ ಉಪ್ಪಿಟ್ಟಿಗಾಗಿಯೇ ಅಕ್ಕಿ ಹುಡಿ ಬರುತ್ತದೆ.ಅದೇ ರೀತಿಯಲ್ಲಿ ಇಡ್ಲಿ ಮಾಡಬೇಕಿದ್ದರೆ ಅಕ್ಕಿ, ಉದ್ದು ಎರಡನ್ನೂ ಪ್ರಮಾಣ ಪ್ರಕಾರ ಪ್ರತ್ಯೇಕವಾಗಿ ಅರೆದು ಅದನ್ನು ಮಿಶ್ರಣ ಮಾಡಿ ಹುಳಿ ಬರಿಸಿ ಇಡ್ಲಿ ಮಾಡುತ್ತಿದ್ದೆವು. ಈಗ ಇಡ್ಲಿ ಮಾಡಲು ಅಕ್ಕಿ ಹುಡಿ ಸಿಗುತ್ತದೆ. ಉದ್ದು ಮಾತ್ರ ಅರೆದು ಅಕ್ಕಿ ಹುಡಿಯೊಂದಿಗೆ ಮಿಶ್ರಣ ಮಾಡಿದರೆ ಸಾಕು. ಇನ್ನೂ ಮುಂದುವರಿದು ಕೆಲವರು ಇನ್ಸ್ಟಂಟ್ ಇಡ್ಲಿ ಪುಡಿಯನ್ನೂ ತಯಾರಿಸಿರುತ್ತಾರೆ. ನೇರವಾಗಿ ದೋಸೆ ಮಾಡಲು ದೋಸೆ ಹಿಟ್ಟು ಸಹಾ ಮಾರುಕಟ್ಟೆಗೆ ಬಂದಿದೆ. ಅದೇ ರೀತಿಯಲ್ಲಿ ದೋಸೆ ಹುಡಿಯನ್ನೂ. ಹೀಗೆ ಸಾಮಾಗ್ರಿಗಳನ್ನು ಒಟ್ಟುಗೂಡಿಸಿ ನಾವೇ ಬೇಕಾದಂತೆ ತಯಾರಿಸುವ ಇಡ್ಲಿ, ದೋಸೆ ಸಾಂಬಾರ್ ಹುಡಿಯಂತೆ ನೇರ ಗೊಬ್ಬರ. ಎಲ್ಲವೂ ಮಿಶ್ರಣ ಮಾಡಿ ನೇರವಾಗಿ ಬಳಸುವಂತದ್ದು ಕಾಂಪ್ಲೆಕ್ಸ್ ಗೊಬ್ಬರ. ಕಾಂಪ್ಲೆಕ್ಸ್ ಗೊಬ್ಬರ ಇರಲಿ ನೇರ ಗೊಬ್ಬರ ಇರಲಿ ಇವುಗಳಲ್ಲಿ ಇರುವ ಪೋಷಕ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಗಳು.
ಕಾಂಪ್ಲೆಕ್ಸ್ ಗೊಬ್ಬರದ ಅನುಕೂಲಗಳು: ಕಾಂಪ್ಲೆಕ್ಸ್ ಗೊಬ್ಬರಗಳನ್ನು ಆಯಾ ಬೆಳೆಯ ಪೋಷಕಾಂಶದ ಅಗತ್ಯಕ್ಕೆ ಅನುಗುಣವಾಗಿ ಪ್ರಮಾಣವನ್ನು ಹಂಚಿ ತಯಾರಿಸುತ್ತಾರೆ. ಇಂತಿಷ್ಟು ಸಾರಜನಕ, ಇಂತಿಷ್ಟು ರಂಜಕ ಮತ್ತು ಪೊಟ್ಯಾಶ್ ಸೇರಿಸಿ ಒಂದೇ ಗೊಬ್ಬರ ಮಾಡುವುದು ಕಾಂಪ್ಲೆಕ್ಸ್ ಗೊಬ್ಬರ. ಇದನ್ನು ಒಂದನ್ನೇ ನೇರವಾಗಿ ಬೆಳೆಗಳಿಗೆ ಬಳಕೆ ಮಾಡುವುದು. ಅಗ NPK ಮೂರೂ ಸಿಗುತ್ತದೆ. ಗೊಬ್ಬರದ ಚೀಲದಲ್ಲಿ ಬರೆದಿರುವ NPK ಅಕ್ಷರ ಕೆಳಗೆ ನಮೂದಿದ್ದು ಅದರಲ್ಲಿ ಇರುವ NPK ಪ್ರಮಾಣ. ಅದು 100 ಗ್ರಾಂಗೆ ಇಂತಿಷ್ಟು ಎಂದರ್ಥ. ಇದರಲ್ಲಿ ಸಿದ್ದ ರೂಪದಲ್ಲಿ ಮೂರೂ ಪೋಷಕಾಂಶಗಳೂ ಇರುವ ಕಾರಣ ಬೇರೆ ಬೇರೆಯಾಗಿ ಪ್ರಮಾಣವನ್ನು ಲೆಕ್ಕಾಚಾರ ಹಾಕಿ ಹಾಕಬೇಕಾದ ಕೆಲಸ ಇರುವುದಿಲ್ಲ. ಇದನ್ನು ತಯಾರಿಸುವಾಗ ಕೆಲವು ಬಳಸುವ ಮೂಲವಸ್ತುಗಳನ್ನು ಬೇರೆ ಬೇರೆ ಮಾಡಿರುತ್ತಾರೆ. ಉದಾಹರಣೆಗೆ 15:15:15 ಈ ಗೊಬ್ಬರದಲ್ಲಿ ನೈಟ್ರೋ ಫೋಸ್ಫೇಟ್ ಸೇರಿಸಿರುತ್ತಾರೆ. ಇದು ತ್ವರಿತವಾಗಿ ಬೆಳೆಗಳಿಗೆ ಲಭ್ಯವಾಗುತ್ತದೆ. ಕೆಲವು ತಯಾರಕರು ಇದಕ್ಕೆ ಗಂಧಕ, ಸತು ಸೇರಿಸುತ್ತಾರೆ. ಉದಾಹರಣೆಗೆ 20:20:0:13 S ಈ ಕಾಂಪ್ಲೆಕ್ಸ್ ಗೊಬ್ಬರದಲ್ಲಿ ಸಾರಜನಕ ಮತ್ತು ರಂಜಕದ ಜೊತೆಗೆ 13% ಗಂಧಕವನ್ನು ಸೇರಿಸಿರುತ್ತಾರೆ. ಕೆಲವು ತಯಾರಕರು DAP ಜೊತೆಗೆ ಸತು (ZINK) ಸೇರಿಸುತ್ತಾರೆ. NPK ಹೊರತಾಗಿ ಸೇರಿಸಲ್ಪಟ್ಟ ಪೋಷಕಗಳ ಜೊತೆಗೆ ಈ ಪೋಷಕಗಳೂ ಬೆಳೆಗಳಿಗೆ ಲಭ್ಯವಾಗುತ್ತದೆ. ಬಳಕೆ ಸುಲಭ ಮತ್ತು ಫಲಿತಾಂಶ ಉತ್ತಮ ಎಂಬ ಕಾರಣಕ್ಕೆ ರೈತರು ಕಾಂಪ್ಲೆಕ್ಸ್ ಗೊಬ್ಬರವನ್ನು ಇಚ್ಚೆ ಪಡುತ್ತಾರೆ.
ನೇರ ಗೊಬ್ಬರಗಳು ಯಾವುದು?:
ನೇರ ಗೊಬ್ಬರಗಳು (Straight fertilisers) ಎಂದರೆ ಸಾರಜನಕ ಮೂಲದ ಯೂರಿಯಾ, ರಂಜಕ ಮೂಲದ ಶಿಲಾ ರಂಜಕ, ಸೂಪರ್ ಫೋಸ್ಫೇಟ್, ಮತ್ತು ಮ್ಯುರೇಟ್ ಆಫ್ ಪೊಟ್ಯಾಶ್ ಗಳು. ಸಾರಜನಕ ಮೂಲದ ಯೂರಿಯಾ, ಅಮೋನಿಯಮ್ ಸಲ್ಫೇಟ್, ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್, ಅಮೋನಿಯಂ ಕ್ಲೋರೈಡ್ ಇವೆಲ್ಲಾ ನೇರ ಸಾರಜನಕ ಗೊಬ್ಬರಗಳ ಸಾಲಿನಲ್ಲಿ ಬರುತ್ತವೆ.
ರಂಜಕ ಮೂಲದ ನೇರ ಗೊಬ್ಬರಗಳೆಂದರೆ ಸಿಂಗಲ್ ಸೂಪರ್ ಫೋಸ್ಫೇಟ್ ಮತ್ತು ಟ್ರಿಪಲ್ ಸೂಪರ್ ಫೋಸ್ಫೇಟ್ ಗಳು. ಸಿಂಗಲ್ ಸೂಪರ್ ಫೋಸ್ಫೇಟ್ ಅಂದರೆ ಕರಗದೇ ಇರುವ ನೈಸರ್ಗಿಕ ರಂಜಕ (ಶಿಲಾ ರಂಜಕದ ಹುಡಿ) ಕ್ಕೆ ಗಂಧಕಾಮ್ಲ ದಿಂದ ಉಪಚಾರ ಮಾಡುವುದಾಗಿರುತ್ತದೆ. ಇದು ಕ್ಯಾಲ್ಸಿಯಂ ಸಲ್ಫೇಟ್ ಆಗಿರಬಹುದು ಅಥವಾ ಕ್ಯಾಲ್ಸಿಯಂ ಫೋಸ್ಫೇಟ್ ಆಗಿರಬಹುದು. ಹೀಗೆ ಮಾಡಿದಾಗ ಅದರಲ್ಲಿರುವ ರಂಜಕ ಸಸ್ಯಗಳು ಬಳಸಿಕೊಳ್ಳುವ ತರಹ ಇರುತ್ತದೆ. ಸಿಂಗಲ್ ಸೂಪರ್ ಫೋಸ್ಫೇಟ್ ನಲ್ಲಿ ಕ್ಯಾಲ್ಸಿಯಂ, ಸಲ್ಫರ್ ಮತ್ತು ಫೋಸ್ಫರಸ್ ಈ ಮೂರು ಅಂಶಗಳು ಇರುತ್ತವೆ. ಕೆಲವು ಮೂಲಗಳ ಪ್ರಕಾರ ಇದರಲ್ಲಿ 16-18 % ರಂಜಕ , 11 % ಗಂಧಕ ಮತ್ತು 21 % ಸುಣ್ಣದ ಅಂಶ ಇರುತ್ತದೆ. ಶಿಲಾ ರಂಜಕ ಎಂಬುದು ನೇರ ರಂಜಕ ಗೊಬ್ಬರ ಆದರೂ ಅದು ಹುಳಿ ಮಣ್ಣಿನಲ್ಲಿ ಮಾತ್ರ ನಿಧಾನವಾಗಿ ಕರಗುವ ಗುಣ ಪಡೆದಿದೆ. ಇದು ರಂಜಕ ಒಳಗೊಂಡ ಮೆದು ಶಿಲೆಯನ್ನು ಹುಡಿ ಮಾಡಿ ಪಡೆದದ್ದು.
ಟ್ರಿಪಲ್ ಸೂಪರ್ ಫೋಸ್ಫೇಟ್ ಎಂಬ ತಯಾರಿಕೆಯೂ ನೇರ ರಂಜಕ ಗೊಬ್ಬರವಾಗಿರುತ್ತದೆ. ಇದು ರಂಜಕ ಅಂಶ ಉಳ್ಳ ಶಿಲಾ ಪುಡಿಗೆ ಅಧಿಕ ಸಾಂದ್ರದಲ್ಲಿ ಸಲ್ಫ್ಯೂರಿಕ್ ಆಮ್ಲವನ್ನು ಸೇರಿಸಿ ಪಡೆಯುವ ಗೊಬ್ಬರವಾಗಿರುತ್ತದೆ. ಇದರಲ್ಲಿ ಸಿಂಗಲ್ ಸೂಪರ್ ಫೋಸ್ಫೇಟ್ ಗಿಂತ 3 ಪಟ್ಟು ರಂಜಕದ ಅಂಶ ಇರುತ್ತದೆ. ಪೊಟ್ಯಾಶ್ ಪೋಷಕದಲ್ಲಿ ನೇರ ಗೊಬ್ಬರ ಮ್ಯುರೇಟ್ ಆಫ್ ಪೊಟ್ಯಾಶ್ ಅಥವಾ ಪೊಟ್ಯಾಶಿಯಂ ಕ್ಲೋರೈಡ್, ಮತ್ತು ಪೊಟ್ಯಾಶಿಯಂ ಸಲ್ಫೇಟ್ ಇವು ಎರಡೇ. MOP ಇದು ಕೆಲವು ದೇಶಗಳಲ್ಲಿ ಸಿಗುವ ಒಂದು ಶಿಲೆಯ ಹುಡಿ ಆಗಿರುತ್ತದೆ.
ಕಾಂಪ್ಲೆಕ್ಸ್ ಗೊಬ್ಬರ ಅಥವಾ ಸಂಯುಕ್ತ ಗೊಬ್ಬರಗಳು: ಒಂದಕ್ಕಿಂತ ಹೆಚ್ಚು ಪೋಷಕಗಳನ್ನು ಸೇರಿಸಿ ತಯಾರಿಸುವ ಗೊಬ್ಬರಕ್ಕೆ ಸಂಯುಕ್ತ ಗೊಬ್ಬರ ಎನ್ನುತ್ತಾರೆ. ನಾವೆಲ್ಲಾ ಬಳಕೆ ಮಾಡುವ ಸುಫಲಾ, DAP, 20:20:0:13, 10:26:26, 12:32:16,17:17:17, ಇವೆಲ್ಲಾ ಸಂಯುಕ್ತ ಗೊಬ್ಬರಗಳು. ಈ ಗೊಬ್ಬರಗಳಲ್ಲಿ NPK ಪ್ರಮಾಣಗಳು ಭಿನ್ನವಾಗಿರುತ್ತದೆ. ಇದಕ್ಕೂ ಮೂಲವಸ್ತು ಸಾಮಾನ್ಯವಾಗಿ ನೇರ ಗೊಬ್ಬರಗಳೇ ಆಗಿರುತ್ತವೆ.
ನೇರ ಗೊಬ್ಬರಗಳ ಅನುಕೂಲಗಳು: ನೇರ ಗೊಬ್ಬರ ಹಾಕುವುದಾದರೆ ಶಿಫಾರಸು ಪ್ರಮಾಣಕ್ಕೆ ಅನುಗುಣವಾಗಿ ಬಳಕೆ ಮಾಡುವುದು ಸುಲಭ. ಆಯಾ ಸಮಯಕ್ಕೆ ಯಾವ ಗೊಬ್ಬರ ಹೆಚ್ಚು ಬೇಕು, ಯಾವುದು ಕಡಿಮೆ ಬೇಕು ಅದನ್ನು ಮಾತ್ರ ಕೊಡಬಹುದು. ಹೀಗೆ ಮಾಡುವುದರಿಂದ ಗೊಬ್ಬರದ ಸಮರ್ಪಕ ಬಳಕೆ ಆಗುತ್ತದೆ. ನಷ್ಟ ಕಡಿಮೆಯಾಗುತ್ತದೆ. ಬೆಲೆ ಸಹ ನೇರಗೊಬ್ಬರಗಳಿಗೆ ಕಡಿಮೆ ಇರುತ್ತದೆ. ಭಾರತ ಸರಕಾರ ರಸಗೊಬ್ಬರ ಸಬ್ಸಿಡಿ ನೀಡುವುದು ನೇರ ಗೊಬ್ಬರಗಳಿಗೆ. ರೈತರು ನೇರ ಗೊಬ್ಬರಗಳನ್ನು ಮಿಶ್ರಣ ಮಾಡುವುದು ಕಷ್ಟವಾಗುತ್ತದೆ ಎಂದು ಸಂಯುಕ್ತ ಗೊಬ್ಬರಕ್ಕೆ ಹೋಗುತ್ತಾರೆ. ಇದನ್ನು ಮಿಶ್ರಣ ಮಾಡುವುದಕ್ಕಿಂತ ಪ್ರತ್ಯೇಕ ಪ್ರತ್ಯೇಕವಾಗಿ ಬಳಕೆ ಮಾಡಲೂ ಬಹುದು. ಆಗ ಹೆಚ್ಚು ಕಡಿಮೆ ಆಗುವ ಸಾದ್ಯತೆ ಕಡಿಮೆ.
ಸಂಯುಕ್ತ ಗೊಬ್ಬರಗಳ ಅನನುಕೂಲಗಳು: ಸಮರ್ಪಕ ತಿಳುವಳಿಕೆ ಇದ್ದು ಬಳಕೆ ಮಾಡಿದರೆ ಇದರಲ್ಲಿಯೂ ನೇರ ಗೊಬ್ಬರಗಳನ್ನು ಸೇರಿಸಿ ಸಮತೋಲನ ಗೊಬ್ಬರ ತಯಾರಿಸಬಹುದು. ಕಾಂಪ್ಲೆಕ್ಸ್ ಗೊಬ್ಬರ ಯಾವಾಗಲೂ ನೇರ ಗೊಬ್ಬರಗಳಿಂದ ಸ್ವಲ್ಪ ಹೆಚ್ಚು ಬೆಲೆಯದ್ದಾಗಿರುತ್ತದೆ. ಇಲ್ಲಿ ಪಿಲ್ಲರ್ ಮೆಟಿರೀಯಲ್ಸ್ (Pillar materials) ಸೇರಿಸಿರುತ್ತಾರೆ. ಸಾಮಾನ್ಯವಾಗಿ ಇದು ಹರಳು ರೂಪದಲ್ಲಿ ಇರುತ್ತದೆ. ರೈತರು NPK ಮೂರೂ ಇದೆ ಎಂದು ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. NPK ನಾವು ಬೆಳೆಯುವ ಬೆಳೆಗೆ ಬೇಕಾದಂತೆ ಇದೆಯೇ ಎಂದು ನೊಡುವುದಿಲ್ಲ. ಇದರಿಂದ ಗೊಬ್ಬರದ ಅಸಮತೋಲನ ಉಂಟಾಗುವ ಸಾಧ್ಯತೆ ಹೆಚ್ಚು.
ಇನ್ನೊಂದು ಮಿಶ್ರಣ ಗೊಬ್ಬರ (Mixed fertiliser) ಎಂಬುದಿದೆ. ಇದು ನೇರ ಗೊಬ್ಬರಗಳನ್ನು ಮಿಶ್ರಣ ಮಾಡಿ ಆಯಾಯಾ ಬೆಳೆಗೆ ಬೇಕಾದಂತೆ NPK ಪ್ರಮಾಣವನ್ನು ಸೇರಿಸಿರುವುದು. ಇದಲ್ಲದೆ ಇನ್ನೂ ಒಂದು ಬಗೆಯ ಗೊಬ್ಬರ ಇದೆ. ಅದನ್ನು ದ್ರವ ಗೊಬ್ಬರ ಎನ್ನುತ್ತಾರೆ. ಇದನ್ನು ನೀರಿನಲ್ಲಿ ಕರಗಿಸಿದಾಗ ಯಾವ ಕಶ್ಮಲಗಳೂ ಉಳಿಯುವುದಿಲ್ಲ. ನೇರ ಗೊಬ್ಬರ, ಸಂಯುಕ್ತ ಗೊಬ್ಬರ ಇವೆರಡಕ್ಕೂ ಘನ ಗೊಬ್ಬರ ( Solid Fertilisers) ಎಂಬುದಾಗಿಯೂ ಕರೆಯುತ್ತಾರೆ.
ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ