ಕಾರ್ಯೋತ್ತಮರು

ಕಾರ್ಯೋತ್ತಮರು

ತಾನು ಕೈಗೆತ್ತಿದ ಕಾರ್ಯವು ಯಶಸ್ವಿಯಾಗಬೇಕೆಂಬುದು ಎಲ್ಲರ ಅಪೇಕ್ಷೆ. ಹೊಸದಾದ ಕೆಲಸವನ್ನು ಕೈಗೆತ್ತಿಕೊಳ್ಳುವಾಗ ಹಿರಿಯರ ಶುಭಾಶೀರ್ವಾದ ಬೇಡುವುದು, ಗಣಪತಿ ಹವನ ಅಥವಾ ಇನ್ನಿತರ ಪೂಜೆಗಳ ಮೂಲಕ ಭಗವಂತನಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥನೆ ಮಾಡುವುದು ಭಾರತೀಯರ ಸಂಸ್ಕಾರ. ಏನಿಲ್ಲೆಂದರೂ ದೀಪವನ್ನಾದರೂ ಹಚ್ಚಿಟ್ಟು ಭಗವದನುಗ್ರಹ ಬೇಡುತ್ತೇವೆ. ತಮ್ಮ ಹೊಸ ಕಲ್ಪನೆಗಳು ಅಥವಾ ಸಾಂಪ್ರದಾಯಿಕ ವಿಧಾನಗಳ ಮೂಲಕ ದೇವರನ್ನು ಪ್ರಾರ್ಥಿಸಿ ಕೆಲಸವನ್ನು ಶುಭ ಮುಹೂರ್ತದಲ್ಲಿ ಆರಂಭ ಮಾಡುತ್ತೇವೆ. ಕಟ್ಟಡ ನಿರ್ಮಾಣ, ಜಲ ಶೋಧನ, ಕಟ್ಟಡ ಕಾಮಗಾರಿಗೆ ಮೊದಲು ಭೂಮಿ ಪೂಜೆಯೂ ನಡೆಯುತ್ತದೆ. ಹೊಸ ಕೃಷಿಕೆಲಸದ ಆರಂಭ, ಹೊಸದಾದ ಉದ್ಯಮ ಆರಂಭ, ವಿದ್ಯಾರಂಭ, ವಿವಾಹ, ಉಪನಯನ ಮೊದಲಾದವುಗಳೆಲ್ಲವೂ ಕಾರ್ಯಕ್ರಮಗಳೇ ಆಗಿವೆ.

ಹಳ್ಳಿಯಲ್ಲಿ ಒಂದು ಸಾಮಾನ್ಯ ಮಾತಿದೆ. “ಕೆಲಸ ತುದಿ ಮುಟ್ಟಿಸುವುದು”. ತುದಿಮುಟ್ಟಿದೆಯೆಂದಾದರೆ ಆ ಕೆಲಸ ಯಶಸ್ವಿಯೆಂದೇ ಅರ್ಥ. ಪಹಲ್ಗಾಂ ರೌದ್ರ ಕೃತ್ಯಗಳಿಗೆ ಪ್ರತಿಯಾಗಿ “ಸಿಂಧೂರ ಕಾರ್ಯಾಚರಣೆ” ಜರಗಿತು. ಆಗಲೂ ಅಗತ್ಯವಿತ್ತೇ? ಗುರಿ ಸಾಧ್ಯವೇ? ನಮ್ಮಲ್ಲಿ ಒಂದು ದೇಶವನ್ನು ಬಗ್ಗು ಬಡಿದು ಕ್ರೂರಿಗಳನ್ನು ಮಟ್ಟ ಹಾಕುವ ಶಕ್ತಿಯಿದೆಯೇ? ಹೀಗೆ ಹಲವಾರು ಯೋಚನೆಗಳು ಹುಟ್ಟಿವೆ; ವಿಶ್ವದಾದ್ಯಂತವೂ ಸಂದೇಹದ ಅಲೆಯಿತ್ತು. ದೇಶದ ಉದ್ದೇಶಿತ ಗುರಿಯು ಸುಲಭದಲ್ಲಿ ಕೈಗೆಟುಕಿದೆಯೆಂದಾದರೆ ಕಾರ್ಯಕ್ರಮದಲ್ಲಿ ತೊಡಗಿಸಿದವರ ಕ್ರಿಯಾ ಬದ್ಧತೆಯೇ ಪ್ರಮುಖವಾಗಿರುತ್ತದೆಯೆಂಬುದನ್ನು ಗಮನಿಸಬೇಕಾಗುತ್ತದೆ.

ಭರ್ತೃಹರಿಯ ನೀತಿ ಶತಕದಲ್ಲಿ ಕೆಳಗಿನ ಶ್ಲೋಕವೊಂದಿದೆ. ಈ ಶ್ಲೋಕವು ಕಾರ್ಯಸಾಧನೆಗೆ ಜನರ ಮನೋಸ್ಥಿತಿಯು ಹೇಗಿರಬೆಕೇಂಬುದನ್ನು ಸೂಚ್ಯವಾಗಿ ವಿವರಿಸುತ್ತದೆ....

ಪ್ರಾರಭ್ಯತೇ ನ ಖಲು ವಿಘ್ನಭಯೇನ ನೀಚೈಃ

ಪ್ರಾರಭ್ಯ ವಿಘ್ನವಿಹತಾ ವಿರಮಂತಿ ಮಧ್ಯಾಃ ।

ವಿಘ್ನೈಃ ಪುನಃ ಪುನರಪಿ ಪ್ರತಿಹನ್ಯಮಾನಾಃ

ಪ್ರಾರಬ್ಧಂ ಉತ್ತಮಜನಾ ನ ಪರಿತ್ಯಜಂತಿ ॥1.27

ಕೆಲವರು ವಿಘ್ನಭಯದಿಂದ ಕಾರ್ಯವನ್ನೇ ಆರಂಭಿಸುವುದಿಲ್ಲ. ಕೈಗೆತ್ತಿಕೊಳ್ಳಲಿರುವ ಕಾರ್ಯವು ಯಶಸ್ವಿಯಾಗುತ್ತದೆಯೆಂಬ ವಿಶ್ವಾಸದ ಕೊರತೆಯಿಂದ ನರಳುವ ಮನಸ್ಸಿನವರಿಗೆ ವಿಘ್ನಭಯವೇ ಅಧಿಕ. ವಿಘ್ನನಿವಾರಕನಾದ ಶ್ರೀಗಣೇಶನೇ ಬಂದು, “ವತ್ಸಾ, ನೀನು ಕೈಗೆತ್ತಿದ ಕೆಲಸವನ್ನು ಮುನ್ನಡೆಸು, ವಿಘ್ನ ಭಯಬೇಡ! ಯಶಸ್ವಿಯಾಗುವೆ” ಎಂದರೂ ವಿಘ್ನ ಭಯಾನ್ವಿತರು ಸುತಾರಾಂ ಒಂದಡಿಯೂ ಮುಂದೆ ಸಾಗುವುದಿಲ್ಲ. ಆತ್ಮಬಲಹೀನನಿಗೆ ವಿಘ್ನಗಳೇ ಕಣ್ಣಿಗೆ ಗೋಚರಿಸುತ್ತವೆ. ಇದರಿಂದಾಗಿ ಕೆಲಸ ಆರಂಭವೇ ಆಗದು.

ಇನ್ನು ಕೆಲವರು “ಆರಂಭ ಶೂರರು” ಎಂಬ ವರ್ಗದವರಿದ್ದಾರೆ. ಭಾರೀ ಪ್ರಚಾರ ನೀಡಿ ವೈಭವದಿಂದ ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತಾರೆ. ಕೆಲಸ ಸಾಗುತ್ತಿದ್ದಂತೆ ಸಣ್ಣ ಅಡ್ಡಿಯೆದುರಾದರೂ ಕೈಗೆತ್ತಿದ ಯೋಜನೆಯನ್ನು ಕೈಬಿಡುತ್ತಾರೆ. ನಡುವೆ ಕೆಲಸ ಕೈಬಿಡುವವರಿಗೆ ನಷ್ಟವೇ ಅಧಿಕ. ಭರ್ತೃಹರಿ ಹೇಳುವಂತೆ ಇವರು ಎರಡನೇ ವರ್ಗದವರು. ನಮ್ಮಲ್ಲಿ ಆರಂಭ ಶೂರರು ಎಷ್ಟೋ ಇದ್ದಾರೆ. ಆರಂಭ ಶೂರರನ್ನು ಎಲ್ಲೆಡೆ ಕಾಣಬಹುದು.

ಇನ್ನು ಭರ್ತೃಹರಿ ಹೇಳುವ ಮೂರನೇ ವರ್ಗದವರ ಚಿಂತನೆ ಮಾಡುವುದಾದರೆ ಅವರು ಛಲದಂಕಮಲ್ಲರು, ಕೈಗೆತ್ತಿದರೆ ಮುಗಿಯಿತು, ಕೊನೆ ತಲುಪಲೇ ಬೇಕು ಎಂಬ ಧೋರಣೆಯವರು. ಇಂತಹವರಿಗೆ ವಿಘ್ನಗಳು ಬರುವುದಿಲ್ಲವೇ?. ಎಲ್ಲ ಕಾರ್ಯಗಳೂ ವಿಘ್ನಗಳನ್ನು ಎದುರಿಸಿಯೇ ಸಾಗಬೇಕು, ಸಾಗುತ್ತದೆ. ವಿಘ್ನಗಳೆಂದರೆ ಅವು ಸವಾಲುಗಳು. ಸವಾಲಿಗೆ ಸರಿಯಾದ ಉತ್ತರ ಹೇಳಬಲ್ಲವನಿಗೆ ಭಯವೇ ಇರದು. ಎಷ್ಟು ಅಡೆ ತಡೆ ಅಥವಾ ವಿಘ್ನಗಳು ಒಂದರ ಹಿಂದೆ ಒಂದರಂತೆ ಬಂದರೂ ತಾವು ಆರಂಭಿಸಿದ ಕೆಲಸವನ್ನು ಕೈಬಿಡದೆ ಯಶಸ್ವಿಗೊಳಿಸುತ್ತಾರೆ. ಆದರೆ ಅವರ ಸಾಗುವಿಕೆಯಲ್ಲಿ ಧನಾತ್ಮಕತೆಯೇ ಇರುತ್ತದೆ. ನಕಾರಾತ್ಮಕತೆಯಿರದು. ಮೊದಲ ಎರಡು ಗುಣದವರು ಹೆಚ್ಚು ನಕಾರಾತ್ಮಕ ಚಿಂತನೆಯವರು ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಯಾವುದೇ ಕಾರ್ಯದ ಚಿಂತನೆ ಮಾಡಿ ಆರಂಭಿಸದವರು ಮತ್ತು ಆರಂಭಿಸಿ ನಂತರ ಕೈಬಿಡುವವರು ಆತ್ಮವಿಶ್ವಾಸ ವುಳ್ಳವರಾಗಿರುವುದಿಲ್ಲ. ತಮ್ಮ ಬಗ್ಗೆ ಆತ್ಮ ವಿಶ್ವಾಸವಿರುವವರು ಜೀವನದಲ್ಲಿ ಯಸಸ್ನ್ನು ಕಾಣುತ್ತಾರೆ. ಆತ್ಮವಿಶ್ವಾಸರಹಿತರು ಸೋಲುಗಳನ್ನೇ ಕಾಣುತ್ತಾರೆ, ಅವರ ಉದ್ಧಾರ ಕನಸಿನ ಮಾತು.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ