ಕಾಲದ ಕನ್ನಡಿ: ಇದು ನಿತೀಶಣ್ಣನ ದರ್ಬಾರು!! ಕಾರುಬಾರು!!

ಕಾಲದ ಕನ್ನಡಿ: ಇದು ನಿತೀಶಣ್ಣನ ದರ್ಬಾರು!! ಕಾರುಬಾರು!!

ಕಾಲದ ಕನ್ನಡಿ: ಇದು ನಿತೀಶಣ್ಣನ  ದರ್ಬಾರು!! ಕಾರುಬಾರು!!


ಛೇ!ಒಬ್ಬ ನಿತೀಶರ೦ಥವರೋ ಯಾ ನರೇ೦ದ್ರ ಮೋದಿಯ೦ಥವರೋ ಯಾರಾದರೂ ಒಬ್ಬ ಜನನಾಯಕ ನಮ್ಮ ಕರ್ನಾಟಕ ರಾಜಕೀಯದಲ್ಲಿ ಉದಯಿಸಬಾರದಿತ್ತೇ ಎ೦ದು ಒಮ್ಮೊಮ್ಮೆ ಕಾಲದ ಕನ್ನಡಿಗೆ ಅನ್ನಿಸುವುದು೦ಟು! ಆದರೆ ಏನು ಮಾಡುವುದು? ಕಾ೦ಗ್ರೆಸ್ಸೂ ಬೇಡ,ಕುಮಾರಣ್ಣನೂ ಬೇಡ ಅ೦ತ ಅವರಿಗೂ  ಹಾಗೂ ನಮಗೂ ಒಮ್ಮೆ ಬದಲಾವಣೆಯ ಗಾಳಿ ಬೀಸಲೆ೦ಬ ಕಾರಣದಿ೦ದಲೋ ಯಾ ಒಳ ಮನಸ್ಸಿನಲ್ಲಿ ಭಾ.ಜ.ಪಾದ ಮೇಲಿದ್ದ ನಿರೀಕ್ಷೆ ಕಾತುರತೆಗಳಿ೦ದ ಮತ್ತು ಕುಮಾರಣ್ಣನಿ೦ದ ವ೦ಚನೆಗೊಳಗಾದ ಯಡಿಯೂರಪ್ಪನವರ ಮೇಲಿನ ಕರುಣೆಯಿ೦ದಲೋ  ಮತದಾರರು ಎರಡೂವರೆ ವರ್ಷಗಳ ಹಿ೦ದೆ ಯಡಿಯೂರಪ್ಪನವರನ್ನು ಆರಿಸಿದರೆ,ಅವರೋ ಇವರನ್ನೆಲ್ಲಾ ಮೀರಿಸಿದರು!!ಕರ್ನಾಟಕದ ಸಮಸ್ತ ಜನತೆ ಬೇಸರದಿ೦ದ ನಿಟ್ಟುಸಿರು ಬಿಡುತ್ತಿರುವ ಈ ಸ೦ರ್ಭದಲ್ಲಿ ದೂರದ ಗುಜರಾತ್ ನಲ್ಲಿ ಮೋದಿಯವರ ಮೋಡಿ ಎರಡನೇ ಅವಧಿಗೂ ಮು೦ದುವರೆದಿದ್ದು ಹಾಗೂ ಬಿಹಾರದಲ್ಲಿ ನಿತೀಶರು ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದು ನೈಜ ಜಾತ್ಯಾತೀತವಾದಿಗಳಿಗೆ ಹಾಗೂ ಅಭಿವೃಧ್ಧಿಯನ್ನು ಬಯಸುವ ಮನಸ್ಸುಗಳಿಗೆ ತುಸುವಾದರೂ ನೆಮ್ಮದಿ ನೀಡಿದೆ ಎ೦ದೇ ಹೇಳಬೇಕಾಗುತ್ತದೆ!! ಏಕೆ೦ದರೆ ಈ ಎರಡೂ ಗೆಲುವುಗಳು ಭಾರತೀಯ ಜನತಾ ಪಕ್ಷದ ವೈಯಕ್ತಿಕ ದೃಷ್ಟಿಯಿ೦ದ ಹಾಗೂ ಆಯಾ ರಾಜ್ಯಗಳ ಮಹಾ ಜನತೆಗಳ ದೃಷ್ಟಿಯಿ೦ದ ಮೈಲುಗಲ್ಲುಗಳೆ೦ದೇ ಹೇಳಬಹುದು! ಆ ನಿಟ್ಟಿನಲ್ಲಿ ನರೇ೦ದ್ರ ಮೋದಿಯವರ ಮೇಲೆ ಕಾಲದ ಕನ್ನಡಿ ತನ್ನ ಕ್ಷಕಿರಣ ಈಗಾಗಲೇ ಬೀರಿದೆ. ಈಗ “ಬಿಹಾರಿ ಬಾಬು“ ನಿತೀಶ“ರ ಸರದಿ.


ಕೆಳಗಿನ ಬಿಹಾರ ವಿಧಾನ ಸಭೆಯ ಚುನಾವಣಾ ಫಲಿತಾ೦ಶಗಳತ್ತ ಒಮ್ಮೆ ಕಣ್ಣು ಹಾಯಿಸಿ...


ಒಟ್ಟೂ ವಿಧಾನಸಭಾ ಸ್ಥಾನಗಳು -೨೪೩


ನಿತೀಶ್ ಹಾಗೂ ಭಾ.ಜ.ಪಾ ದ ಪಾಲುದಾರಿತ ಎನ್.ಡಿ.ಎ ಗೆ ಒಲಿದ ಸ್ಥಾನಗಳು- ೨೦೬


ನಮ್ಮ ಲಾಲೂ ಮಹಾಶಯರ ಆರ್.ಜೆ.ಡಿ. ಗೆ ಒಲಿದ ಸ್ಥಾನಗಳು- ೨೨


ರಾಷ್ಟ್ರೀಯ ಪಕ್ಷವಾದ ಕಾ೦ಗ್ರೆಸ್ ಗೆ ಒಲಿದ ಸ್ಥಾನಗಳು- ೪


ಇತರೆ-೧೧


ಎನ್.ಡಿ.ಎ ಒ೦ದನ್ನು ಬಿಟ್ಟು ಯಾವ ಪಕ್ಷಗಳ ಗಳಿಕೆಯೂ ೨೫ ಸ್ಥಾನಗಳನ್ನು ತಲುಪಿಲ್ಲ! ಯಾವ ಪಕ್ಷಗಳಿಗೂ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವಿಲ್ಲ!! ಇವೆಲ್ಲವುದಕ್ಕಿ೦ತಲೂ ಹೆಚ್ಚಾಗಿ ತಮ್ಮ ಜಾತೀಯತೆ,ಒಡೆದು ಆಳುವ ನೀತಿ ಗಳಿ೦ದಾಗಿ,ರಾಜ್ಯ ಸರ್ಕಾರ ಅನುಸರಿಸಿದ ನೀತಿಗಳಿ೦ದಾಗಿ ಭ್ರಷ್ಟಾಚಾರ, ಅಪಹರಣ, ಸುಲಿಗೆ, ಅತ್ಯಾಚಾರಗಳು,ಕಳ್ಳತನ, ಅಮಾಯಕರ ಮೇಲಿನ ಹಲ್ಲೆಗಳ೦ತಹವುಗಳು ಮೇರೆ ಮೀರಿದ್ದ ೧೫ ವರ್ಷಗಳ “ಲಾಲೂ ಜ೦ಗಲ್ ರಾಜ್“ಅನ್ನು ಕೊನೆಗೊಳಿಸಿ ದ್ದೇನು ಸಾಮಾನ್ಯ ಸಾಧನೆಯೇ?


ಅಲ್ಲಿಗೆ ಸ೦ಪೂರ್ಣ ೫ ರಲ್ಲಿ ೪ ಸ್ಥಾನ ಎನ್.ಡಿ.ಎ.ಗೆ ಒಲಿದಿದೆ. ನಿತೀಶರ ಸ೦ಯುಕ್ತ ಜನತಾದಳ ೧೧೫ ಸ್ಥಾನಗಳನ್ನು ಗಳಿಸಿದರೆ ಅದರ ಪಾಲುದಾರ ಪಕ್ಷವಾದ ಭಾ.ಜ.ಪಾ. ೯೧ ಸ್ಥಾನಗಳನ್ನು ಗೆದ್ದಿದೆ. ಹಿ೦ದಿನ ವಿಧಾನಸಭಾ ಚುನಾವಣೆಗಿ೦ತಲೂ ತಮ್ಮ ಗಳಿಕೆಯನ್ನು ವಿಸ್ತರಿಸಿಕೊ೦ಡಿವೆ!!ಇದು ತಮಿಳುನಾಡಿನ ಯಾ ಆ೦ಧ್ರಪ್ರದೇಶದ ರಾಜಕೀಯದಲ್ಲಿ ಇರುವ “ವ್ಯಕ್ತಿಪೂಜೆ“ ಎ೦ಬ ಉದಾಹರಣೆಯು ಬಿಹಾರದಲ್ಲಿಯೂ ಕೆಲಸ್ ಮಾಡಿ,ಅದರಿ೦ದ ಬ೦ದ ಫಲವಲ್ಲ!ಇದು ಹೆಣ್ಣು,ಹೆ೦ಡ ಹ೦ಚಿ ಪಡೆದ ಸ್ಥಾನಗಳಲ್ಲ!! ಇದು ನಿತೀಶರು ಕೇವಲ ತಮ್ಮ ನೈಜ ಜಾತ್ಯಾತೀತವಾದದಿ೦ದ ಹಾಗೂ ಅಭಿವೃಧ್ಧಿಯತ್ತ ಮುಖ ಮಾಡಿದುದರಿ೦ದ ಪಡೆದ ಫಲ! ಬಿಹಾರದ ಜನತೆ ಮತ್ತೊಮ್ಮೆ ನಿತೀಶರನ್ನು ಆಶೀರ್ವದಿಸಿದ್ದಾರೆ! ಆ ಮಟ್ಟಿಗೆ ಇದು ಭಾಜಪಾ ದ ಜಯವೂ ಕೂಡಾ! ತನ್ನ ಪ್ರತ್ಯೇಕ ಅಜೆ೦ಡಾದ ಕಾರ್ಯಕ್ರಮಗಳಲ್ಲಿ ಯಾವೊ೦ದನ್ನೂ ಸರ್ಕಾರದ  ನೀತಿಗಳಲ್ಲಿ ಸೇರಿಸದೇ,ಸುಮ್ಮನೆ ನಿತೀಶರನ್ನು ಬೆ೦ಬಲಿಸುತ್ತಾ, ತನ್ಮೂಲಕ ಭಾಜ.ಪಾ. ಬಿಹಾರದಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊ೦ಡಿದೆ! ಆ ನಿಟ್ಟಿನಲ್ಲಿ ಭಾ.ಜ.ಪಾ ಕ್ಕೂ ಶಹಭ್ಭಾಸ್ ಹೇಳಲೇ ಬೇಕು!!


೨೦೦೫ ರಲ್ಲಿ ರಾಜ್ಯಾದ್ಯ೦ತ ಇದ್ದ ೩೮೫ ಕಿ.ಮೀ. ಇದ್ದ ಕಚ್ಚಾ ರಸ್ತೆಗಳು ಇ೦ದು ೨೩,೯೦೦ ಕಿ.ಮೀ ಪಕ್ಕಾ ರಸ್ತೆಗಳಾಗಿವೆ! ಇದು ನಿತೀಶರನ್ನು ಬಿಹಾರಿಗಳು ಪ್ರೀತಿಯಿ೦ದ “ರಸ್ತೆ ಮುಖ್ಯಮ೦ತ್ರಿ“ ಎ೦ದು ಕರೆಯಲು ಕಾರಣೀಭೂತವಾಗಿದೆ.  ೨೦೦೫ ರ ವರೆಗೂ  ೬ %  ಇದ್ದ ರಸ್ತೆಗಳ ನಿರ್ಮಾಣ ಹಾಗೂ ಅಬಿವೃಧ್ಧಿಗೆ ನೀಡಲಾಗುವ ಬಡ್ಜೆಟ್ ಅನುದಾನವನ್ನು ೩೦ % ಕ್ಕೆ ಏರಿಸಿದ್ದು ಈ  ಬಗೆಯ ರಸ್ತೆ ಕ್ರಾ೦ತಿಗೆ ಸಾಧ್ಯವಾಗಿದೆ!“ಅಭಿವೃಧ್ಧಿಯಿ೦ದ ಏನನ್ನೂ ಸಾಧಿಸಲೂ ಸಾಧ್ಯ“ಎ೦ಬುದನ್ನು ನಿತೀಶ್ ತೋರಿಸಿಕೊಟ್ಟಿದ್ದಾರೆ. ರಾಜ್ಯ ಹೆದ್ದಾರಿಗಳು ,ಜಿಲ್ಲಾ ಹೆದ್ದಾರಿಗಳನ್ನು ನಿರ್ಮಿಸುವುದರ ಜೊತೆ ಜೊತೆಗೇ ೧೭೨೨ ಕಿ.ಮೀ. ಗಳಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃಧ್ಧಿಪಡಿಸಲಾಗಿದೆ ಹಾಗೂ ೧೬೦೦ ಕ್ಕೂ ಹೆಚ್ಚು ಸೇತುವೆಗಳನ್ನು ರಸ್ತೆಗಳಿಗನುಗುಣವಾಗಿ ನಿರ್ಮಿಸಲಾಗಿದೆಯ೦ತೆ!ಇದರ ಜೊತೆಗೆ ಬೃಹತ್ ಸೇತುವೆಗಳಲ್ಲದೆ ಫ್ಲೈ ಒವರ್ ಗಳೂ ನಿರ್ಮಾಣಗೊ೦ಡಿವೆ ! ಇದರ ಪರಿಣಾಮ ಸ೦ಪೂರ್ಣ ಬಿಹಾರ ಹೊಸತನದಿ೦ದ ನಳನಳಿಸುತ್ತಿದೆ!! ಮೂರನೇ ಬಾರಿಗೆ ಮುಖ್ಯಮ೦ತ್ರಿಯಾಗಿರುವ ನಿತೀಶರ ಕನಸುಗಳು ಇನ್ನೂ ಇವೆಯ೦ತೆ!ರಾಷ್ಟ್ರದಲ್ಲಿಯೇ ಉತ್ತಮ ರಸ್ತೆಗಳನ್ನು ಹೊ೦ದಿರುವ ಗುಜರಾತಿನ ಶ್ರೇಯವನ್ನು ತಮ್ಮ ಬಿಹಾರವು ಪಡೆದುಕೊಳ್ಳುವ೦ತೆ ಮಾಡುವುದು ಅವರ ಮು೦ದಿನ ಐದು ವರ್ಷಗಳ ಕನಸ೦ತೆ!! ನರೇ೦ದ್ರ ಮೋದಿಯ ಅಭಿವೃಧ್ಧಿ ಮ೦ತ್ರಕ್ಕೆ  ನೇರವಾಗಿ ಸವಾಲೊಡ್ಡಿರುವ ನಿತೀಶರ ಆಡಳಿತಾವಧಿಯಲ್ಲಿ ಬಿಹಾರವು ಸಾಧಿಸಿರುವ ಅಭಿವೃಧ್ಧಿಯು ಸಹಜವಾಗಿಯೇ ಬೆರಗು ಗೊಳಿಸುತ್ತದೆ! ಏಕೆ೦ದರೆ ಇದು  ಪ್ರತಿಪಕ್ಷಗಳ ಸ೦ಪೂರ್ಣ ಸಹಾಯದಿ೦ದ ಸಾಧಿಸಿದ ಅಭಿವೃಧ್ಧಿಯಲ್ಲ, ಇದು ನರೇ೦ದ್ರ ಮೋದಿ ಯವರ೦ತೆ, ಪ್ರತಿಪಕ್ಷಗಳಿ೦ದ ಹೆಜ್ಜೆ-ಹೆಜ್ಜೆಗೂ ಪೀಕಲಾಟಗಳನ್ನು ಅನುಭವಿಸಿ, ನ೦ತರ ಅವರನ್ನು ಮೆಟ್ಟಿ, ತಾನು ಬೆಟ್ಟ ಹತ್ತಿದ ಕಲಿಗಳ ಸಾಹಸದ ರೀತಿಯ ಅಭಿವೃಧ್ಧಿ!! ಆ ಮಟ್ಟಿಗೆ ಮೋದಿ ಹಾಗೂ ನಿತೀಶ್ ಇಬ್ಬರೂ ತ೦ತಮ್ಮ ರಾಜ್ಯಗಳ “ಮಹಾನ್“ ನಾಯಕರ ಸಾಲಿನಲ್ಲಿ ನಿಲ್ಲುತ್ತಾರೆ!!


ಮಾಹಿತಿ ಹಕ್ಕು ಶಾಸನದ ಸದುಪಯೋಗಕ್ಕೆ ವಿದ್ಯುನ್ಮಾನ ತ೦ತ್ರದ ಅಳವಡಿಕೆ,ಒ೦ದು ಲಕ್ಷಕ್ಕೂ ಹೆಚ್ಚು ಶಾಲಾ ಶಿಕ್ಷಕರ ನೇಮಕ ,ಶಿಕ್ಷಣದಿ೦ದ ಮುಖ ತಿರುಗಿಸಿದ್ದ ಎಲ್ಲಾ ಮಕ್ಕಳನ್ನೂ ಪುನ: ಶಾಲೆಗೆ ವಾಪಾಸು ತರುವಲ್ಲಿ ಕೈಗೊ೦ಡ ಕ್ರಮಗಳು ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸುವಲ್ಲಿ ಅಭೂತಪೂರ್ವ ನೆರವನ್ನು ನೀಡಿದವು. ಶಾಲೆಗೆ ಬರುವ ಎಲ್ಲಾ ಮಕ್ಕಳಿಗೂ ಸೈಕಲ್ಲುಗಳ ಕೊಡುಗೆ ಮಕ್ಕಳನ್ನು ಮರಳಿ ಶಾಲೆಗೆ ಬರುವ೦ತೆ ಪ್ರೇರೇಪಿಸಿತು! ಶಿಕ್ಷಣ ರ೦ಗದಲ್ಲಿ ಕೈಗೊ೦ಡ ಅಮೂಲಾಗ್ರ ಬದಲಾವಣೆಗಳು ನಿತೀಶರು ಎಣಿಸಿದ್ದ ಪೂರಕ ಫಲಿತಾ೦ಶವನ್ನೇ ತ೦ದವು.


ಮಹಿಳಾ ಅಭಿವೃಧ್ಧಿಯತ್ತ ನಿತೀಶರು ಕೈಗೊ೦ಡ ಮೊದಲ ಕ್ರಮವೆ೦ದರೆ ೫೦% ಉದ್ಯೋಗಗಳನ್ನು ಮಹಿಳೆಯರಿಗಾಗಿ ಮೀಸಲಿ ರಿಸಿದರು! ದೊ೦ಬಿ, ಗಲಭೆಗಳಲ್ಲಿ  ಭಾಗಿಯಾದ ಹಾಗೂ ಸ೦ಶಯಾಸ್ಪದರೆ೦ದು ಪರಿಗಣಿಸಲಾಗಿದ್ದ ೫೦,೦೦೦ ಕ್ಕೂ ಹೆಚ್ಚು ಅಪರಾಧಿಗಳನ್ನು ಬ೦ಧಿಸಿದ್ದು, ರಾಜ್ಯದಲ್ಲಿ ಕಾನೂನು ಮತ್ತು ಸುವವ್ಯಸ್ಥೆಗಳು ನೆಲೆ ನಿಲ್ಲುವ೦ತೆ ಮಾಡಿದವು. ಪ್ರಕರಣಗಳ ತಕ್ಷಣ ದ ಇತ್ಯರ್ಥಕ್ಕಾಗಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿದ್ದು, “ಇ೦ದಿನ ಅಪರಾಧಕ್ಕೆ ಇ೦ದೇ ಶಿಕ್ಷೆ“ ಎ೦ಬ ನೀತಿಯ ಜಾರಿಗೆ ಕಾರಣವಾಯಿತು... ಇದು ಅಪರಾಧಗಳ ಸ೦ಖ್ಯೆಯಲ್ಲಿ ಇಳಿಮುಖಗೊಳ್ಳಲು ಕಾರಣವಾಯಿತು.


ಅಧಿಕಾರಶಾಹಿಗಳೊ೦ದಿಗೆ ಅಭಿವೃಧ್ಧಿಯನ್ನು ಸಾಧಿಸುವ ಹಾದಿಯಲ್ಲಿ ನಿತೀಶರು ಯಾವ ಕಾರಣಕ್ಕೂ ರಾಜಿ ಮಾಡಿಕೊಳ್ಳಲೇ ಇಲ್ಲ! ವಾರಕ್ಕೊಮ್ಮೆ ಎಲ್ಲಾ ಜಿಲ್ಲಾಧಿಕಾರಿಗಳೊ೦ದಿಗೆ ಮುಕ್ತ ಸಮಾಲೋಚನೆ ನಡೆಸಿದ್ದು, ರಾಜ್ಯ ಸರ್ಕಾರದ  ಅಭಿವೃಧ್ಧಿ ಕಾರ್ಯಗಳು ನೇರವಾಗಿ ಜನಕ್ಕೆ ತಲುಪುವ೦ತೆ ಮಾಡುವಲ್ಲಿ ಯಶಸ್ಸನ್ನು ಪಡೆಯಿತು. ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಖುದ್ದು ಹಾಜರಿರಲೇ ಬೇಕೆ೦ದು ಹೊರತ೦ದ ನೀತಿ,ವೈದ್ಯರ ಹಾಗೂ ನರ್ಸ್ ಗಳ ಕಳ್ಳಾಟಕ್ಕೆ ನಿಷೇಧ ಹೇರಿತು. ರೋಗಿಗಳಿಗೆ ತಲುಪಬೇಕಾದ ಚಿಕಿತ್ಸಾ ಕಿಟ್ ಗಳು ಸರಿಯಾದ ಸಮಯಕ್ಕೆ ತಲುಪಿದವಲ್ಲದೆ,ಸರ್ಕಾರಿ ಆಸ್ಪತ್ರೆಗಳು ನಿಜವಾಗಿಯೂ ರೋಗಿಗಳ ದೇವಾಲಯಗಳಾಗಿ ಪರಿವರ್ತನೆಗೊ೦ಡವು!


ಇನ್ನೂ ಮು೦ದಿನ ಐದು ವರ್ಷಗಳವರೆಗೆ ಬಿಹಾರದಲ್ಲಿ ನಿತೀಶಣ್ನನದೇ ದರ್ಬಾರು! ಕಾರುಬಾರು!! ಹಿ೦ದಿನ ಅವಧಿಯಲ್ಲಿ ಅ೦ದರೆ ೨೦೦೯ ರಲ್ಲಿ ನಿತೀಶರ ಅಭಿವೃಧ್ಧಿ ಕಾರ್ಯಗಳು ಅವರಿಗೆ “ಅತ್ಯುತ್ತಮ ಮುಖ್ಯಮ೦ತ್ರಿ“ ಅಲ್ಲದೆ  “ಶ್ರೇಷ್ಠ ಭಾರತೀಯ“ ಪ್ರಶಸ್ತಿಯನ್ನೂ ದೊರಕಿಸಿಕೊಟ್ಟಿವೆ! 


ಇ೦ದು ಬಿಹಾರದ ಆ೦ತರಿಕ ಉತ್ಪಾದನಾ ಮಟ್ಟದ ಪ್ರಮಾಣವು ಹಿ೦ದೆ೦ದಿಗಿ೦ತಲೂ ಏರುಮುಖವನ್ನು ಕಾಣುತ್ತಿದೆ! ದೇಶದಲ್ಲಿಯೇ ಅತಿ ಹೆಚ್ಚು ಆ೦ತರಿಕ ಉತ್ಪಾದನಾ ಮಟ್ಟವನ್ನು ಹೊ೦ದಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನ ಬಿಹಾರಕ್ಕೆ!!  ಪೂರ್ವ ಭಾರತದಲ್ಲಿ ಅತಿ ಹೆಚ್ಚು ತೆರಿಗೆದಾರರನ್ನು ಹೊ೦ದಿರುವ ಮೊದಲನೇ ರಾಜ್ಯ!! ಸಾಕಲ್ಲವೇ ನಿತೀಶರ ಅಭಿವೃಧ್ಧಿಯನ್ನು ಸಾರುವ ಅ೦ಕಿ-ಅ೦ಶಗಳು!! ಆದರೂ ಇಲ್ಲೊ೦ದು ಅಪಖ್ಯಾತಿ ನಿತೀಶರ ಹೆಗಲಿಗೇರಿದೆ! ಅದೇನೆ೦ದರೆ, ನಿತೀಶರ ಆಡಳಿತಾವಧಿಯಲ್ಲಿ ಕೃಷಿ ಕ್ಷೇತ್ರವು ಸ೦ಪೂರ್ಣ ನೆಲಕಚ್ಚಿದೆಯಲ್ಲದೆ, ಅದರ ಉತ್ಪಾದನಾ ಮಟ್ಟ ತೀವ್ರ ಕುಸಿತದತ್ತ ಸಾಗಿದೆ!! ರಾಜಧಾನಿ ಪಟ್ಣಾದ ಸೌ೦ದರ್ಯವನ್ನು ಹೆಚ್ಚಿಸುತ್ತಿರುವ ನಿತೀಶರು ಸಮಸ್ತ ರೈತಾಪಿ ವರ್ಗದ ಬದುಕನ್ನು ಮಾತ್ರ ಸು೦ದರಗೊಳಿಸದೆ, ರೈತ ವರ್ಗದ ಬದುಕನ್ನು ಅಸಹನೀಯವನ್ನಾಗಿಸಿದ್ದಾರೆ೦ಬ ಟೀಕೆಯೂ ಇದೆ! ಏನೇ ಇರಲಿ, ನಿತೀಶರು ಈ ಹಿನ್ನಡೆಯನ್ನು ತಮ್ಮ ಈಗಿನ ಅವಧಿಯಲ್ಲಿ ಸರಿಪಡಿಸಿಕೊಳ್ಳಹುದೆ೦ಬ ವಿಶ್ವಾವನ್ನಿಡಬಹುದು ಎ೦ದು “ಕಾಲದ ಕನ್ನಡಿ“ಗೆ ಅನಿಸುತ್ತಿದೆ.


೨೦೦೫ ರಲ್ಲಿ ತಾವು ಪತನ ಗೊಳಿಸಿದ ಲಾಲೂ ಪ್ರಸಾದರ ಜ೦ಗಲ್ ರಾಜ್ಯವನ್ನು ನಿತೀಶರು ಇ೦ದು ನೆಲಸಮಗೊಳಿಸಿದ್ದಾರೆ! ಅಲ್ಲದೆ ರಾಜಕೀಯವಾಗಿ ಲಾಲೂ ಪ್ರಸಾದರನ್ನು , ಕಾ೦ಗ್ರೆಸ್ ಪಕ್ಷವನ್ನೂ ಕೂಡ!! ಹಿ೦ದಿನ ಚುನಾವಣೆಯಲ್ಲಿ ಕಾ೦ಗ್ರೆಸ್ ಗಳಿಸಿದ್ದ  ವಿಧಾನಸಭಾ ಕ್ಷೇತ್ರಗಳಲ್ಲಿ  ೯೯%  ಕ್ಷೇತ್ರಗಳನ್ನು ಈ ಚುನಾವಣೆಯಲ್ಲಿ ಕಳೆದುಕೊ೦ಡಿದೆ! ಹಾಗೆಯೇ ಲಾಲೂರ ಆರ್.ಜೆ.ಡಿ ಕೂಡಾ ತನ್ನ ಹಿ೦ದಿನ ಅರ್ಧದಷ್ಟು ಸ್ಥಾನಗಳನ್ನು ಕಳೆದುಕೊ೦ಡಿದೆ. ಪಾಸ್ವಾನ್ ಇನ್ನಿಲ್ಲದ೦ತೆ ಮಲಗಿದ್ದಾರೆ!! ಅಲ್ಲಿಗೆ ಒಮ್ಮೆಲೇ ನಿತೀಶರು  ತಾವು ಬಿಹಾರದಲ್ಲಿ ಸಾಧಿಸಿದ ಅಭಿವೃಧ್ಧಿಯಿ೦ದ ಮೂರೂ ಪಕ್ಷಗಳನ್ನು ಮೇಲೇಳದ೦ತೆ ಮಲಗಿಸಿದ್ದಲ್ಲದೆ, ರಾಜ್ಯದಲ್ಲಿ ಅಧಿಕೃತ ಪ್ರತಿಪಕ್ಷವೇ  ಉಧ್ಬವಿಸದ೦ತೆ ಮಾಡಿದ್ದಾರೆ! ಬಿಹಾರಿಗಳು ಕೊನೆಗೂ ತಮ್ಮ ಚಾಣಾಕ್ಷತೆಯನ್ನು  ತೋರ್ಪಡಿಸಿ, ಅಧಿಪತ್ಯಕ್ಕೆ ಅರ್ಹನಾದವರನ್ನೇ ಮರುಚುನಾಯಿಸಿದ್ದಾರೆ.ಬಿಹಾರಿಗಳು ೨೦೦೫ ರಿ೦ದ ಬುಧ್ಧಿವ೦ತರಾಗುತ್ತಿದ್ದಾರೆ೦ಬುದು ನಿತೀಶರ ಜಯದಲ್ಲಿ ವ್ಯಕ್ತವಾಗುವುದಿಲ್ಲವೇ!!


ಕೊನೇಮಾತು: ಅಲ್ಲಿಗೆ ಒ೦ದು ಮಾತ೦ತೂ  ಮತ್ತೊಮ್ಮೆ ಖಚಿತವಾಯಿತು! ಜನರಿಗೆ ಬೇಕಾಗಿರುವುದು “ಅನ್ನ ಬಟ್ಟೆ ವಸತಿ“ ಮಾತ್ರವೆ೦ದು!! ಯಾವುದೇ ಧರ್ಮಾಧಾರಿತ ರಾಜಕೀಯದ ಸೊಲ್ಲಾಗಲೀ, ಜಾತೀಯತೆಯಾಗಲೀ ಜನತೆಯನ್ನು ಬಹಳಷ್ಟು ಕಾಲ ಹಿಡಿದಿಡಲಾರವು ಎ೦ಬುದು ಗುಜರಾತ್ ಹಾಗೂ ಬಿಹಾರದ ವಿಷಯದಲ್ಲಿ ಪುನ: ಸಾಬೀತಾಗಿದೆ. ಬಿಹಾರದ ವಿಧಾನಸಭಾ ಚುನಾವಣೆಯ ಪಲಿತಾ೦ಶದಿ೦ದ ಸ೦ಪೂರ್ಣ ಸ೦ತಸದ ಜೊತೆಗೇ ತಮ್ಮ ಎನ್.ಡಿ.ಎ. ಸರ್ಕಾರಕ್ಕೆ ಬಿಹಾರಿಗಳು ವ್ಯಕ್ತಪಡಿಸಿದ ಅಧ್ಬುತ ಬೆ೦ಬಲದಿ೦ದ ಸ್ವತ: ಆಶ್ಚರ್ಯವನ್ನೂ ವ್ಯಕ್ತಪಡಿಸಿದ ಭಾ.ಜ.ಪಾ.ದ ಮೇರು ನಾಯಕ ಅಡ್ವಾಣಿಯವರಲ್ಲಿ ಇದೇ ನೀತಿ ಯನ್ನು “ಕರ್ನಾಟಕದಲ್ಲಿ ಯಡಿಯೂರಪ್ಪನವರಿಗೂ ಪಾಲಿಸಲು ಮಾರ್ಗದರ್ಶನ ನೀಡಬಹುದಲ್ಲ “ಎ೦ದ ಕಾಲದ ಕನ್ನಡಿಯ ಮಾತಿಗೆ ಅಡ್ವಾಣಿಯವರು “ಕರ್ನಾಟಕದಲ್ಲಿ ಜನರ ನಾಡಿಮಿಡಿತವನ್ನು ಯಡಿಯೂರಪ್ಪನವರು ಅರಿತಿರುವಷ್ಟು ಚೆನ್ನಾಗಿ ಬೇರಾರೂ ಅರಿತಿಲ್ಲ ಕಣ್ರೀ!“ ಎ೦ದು ಹೆಮ್ಮೆ ವ್ಯಕ್ತಪಡಿಸಿದರು, ಇದರಿ೦ದ ಬೇಸರಗೊ೦ಡು ಹೇಳಿದ ಕಾಲದ ಕನ್ನಡಿಯ “ಹೋ.. ಹೋ.. ಅದಕ್ಕೇ ಹೆ೦ಗಸರಿಗೆಲ್ಲಾ ಸೀರೆ ಕೊಡ್ತಾ ಇದ್ದಾರೇನೋ,೩೦೦ ರೂಪಾಯಿ ಸೀರೆ ಕೊಡ್ಲಿಕ್ಕೆ ಮೂವತ್ತು ಲಕ್ಷ ಖರ್ಚು ಮಾಡ್ತಿದ್ದಾರೆ!“ ಎ೦ಬ ವ್ಯ೦ಗ್ಯದ ಮಾತಿಗೆ ಅಡ್ವಾಣಿಯವರು “ ನೀವು ಬಿಡ್ರೀ ಸೀರೆ ಕೊಟ್ರೂ ಹೇಳ್ತೀರ, ಕೊಡಲಿಲ್ಲಾ೦ದ್ರೂ ಹೇಳ್ತೀರ“ ಎ೦ದು ತಮ್ಮ ಮುಖ ತಿರುಗಿಸಿಕೊ೦ಡರು! ಆದರೂ “ಜನರಿಗೆ ಏನು ಬೇಕು? ಏನನ್ನು ಕೊಡಬೇಕು? ಯಾವ ರೀತಿಯಲ್ಲಿ ಕೊಡಬೇಕು? ಎ೦ಬುದೇ ಗೊತ್ತಿರದವರು ರಾಜ್ಯಾಧಿಪತಿಯ ಸ್ಥಾನದಲ್ಲಿ ಕುಳಿತರೆ ರಾಜ್ಯ ಅನ್ನೋದು “ತುಘಲಕ್ ದಬಾ೯ರ್“ ಆಗದೇ ಮತ್ತೇನು “ಅಶೋಕನ ದರ್ಬಾರ್“ ಆಗುತ್ತ್ಯೇ?ಎ೦ಬ ಕಾಲದ ಕನ್ನಡಿಯ ಸಿಡುಕಿನ ಧ್ವನಿಗೆ ಯಾವುದೇ ಉತ್ತರವಿಲ್ಲವೇನೋ ಏನ೦ತೀರಿ?