ಕಾಲ ಪ್ರಯಾಣ - ಭಾಗ ೧.

ಕಾಲ ಪ್ರಯಾಣ - ಭಾಗ ೧.

ಬರಹ

ನಾನು ಆರ್ಕಿಯಾಲಾಗಿಕಲ್ ಸರ್ವೇ ಆಫ್ ಇಂಡಿಯಾದ ಒಬ್ಬ ವಿಜ್ಞಾನಿ. ಮೂಲತಃ ಕನ್ನಡವನಾದರೂ ಹರಿಯಾಣಾ ರಾಜ್ಯದ ಬಳಿ ಹಳ್ಳಿಯೊಂದರಲ್ಲಿ ಸಂಶೋಧನೆ ನಡೆಯುತ್ತಿದ್ದ ಕಾರಣ ನಾನು ಅಲ್ಲಿಗೆ ಹೋಗಬೇಕಾಗಿ ಬಂದಿತ್ತು. ನಾನು ಅಲ್ಲಿ ಕೆಲಸ ಮಾಡಬೇಕಾಗಿದ್ದ ಕಾಲಕ್ಕೆ ಆ ಹಳ್ಳಿಯ ಬಳಿ ಇದ್ದ ಪ್ರವಾಸಿ ಮಂದಿರದಲ್ಲಿ ನನ್ನ ವಾಸಕ್ಕೆ ಏರ್ಪಾಡು ಮಾಡಲಾಗಿತ್ತು. ಸರಸ್ವತೀ ನಾಗರೀಕತೆ - ಪ್ರಪಂಚವು ಹೆಚ್ಚಾಗಿ ಸಿಂಧು ಕಣಿವೆ ನಾಗರೀಕತೆಯೆಂದೇ ಅರಿತಿದ್ದ - ಮತ್ತು ಆ ಜನಾಂಗದ ಒಂದು ಊರಿನ ಅವಶೇಶಗಳನ್ನು ಅಗಿದು ಹೊರತೆಗೆಯುತ್ತಿದ್ದೆವು.

ಅಂದು ಸಾಧಾರಣ ದಿನಗಳಿಗಿಂತ ಸ್ವಲ್ಪ ವಿಚಿತ್ರವಾದ ಹವಾಮಾನವಾಗಿತ್ತು. ದಿನವಿಡೀ ಮೋಡ ಕವಿದಿದ್ದು ಮಳೆರಾಯ ಹುಯ್ಯುವ ಬೆದರಿಕೆ ಹಾಕುತ್ತಿದ್ದ. ಮಳೆಯನ್ನು ಹೆದರಿ ನಮ್ಮ ಭೂಶೋಧನೆ ಬಹು ವೇಗದಿಂದ ಸಾಗಿತ್ತು. ಸಂಜೆಯಾಗಿತ್ತು, ಇನ್ನೇನು ಪ್ರವಾಸಿ ಮಂದಿರಕ್ಕೆ ಹಿಂತಿರುಗುವ ಸಮಯ. ಕೊನೆ ಘಳಿಗೆಯಲ್ಲಿ ಒಂದು ಪುಟ್ಟ ಆಕಾರದ ಮನುಷ್ಯನ ಮೂರ್ತಿ ನೆಲದಲ್ಲಿ ದೊರಕಿತು.

ಕುಳಿತಿರುವ ಓರ್ವ ಋತ್ವಿಕ-ರಾಜನ ಮೂರ್ತಿಯದು. ಹಣೆಯ ಸುತ್ತ ಯಾವುದೋ ಒಂದು ಆಭರಣ ಧರಿಸಿದ್ದ, ಹಣೆಯ ಮಧ್ಯದಲ್ಲಿ ಚಕ್ರಾಕಾರ ಪದಕ. ತಲೆಯ ಕೂದಲು ಹಿಂದೆ ಬಾಚಿದಂತೆ ಕಾಣಿಸುತ್ತಿತ್ತು. ಗಡ್ಡ ಮೀಸೆಗಳು ಆ ಮೂರ್ತಿಗೆ ಕೆತ್ತಲಾಗಿದ್ದವು. ಉದ್ದನೆಯ ಕಿವಿ ಹಾಳೆಗಳು, ಕಿವಿಯಲ್ಲಿ ಏನೋ ಆಭರಣ. ಮೂಗು ಸ್ವಲ್ಪ ಮುರಿದಂತೆ ಕಾಣಿಸುತ್ತಿತ್ತು. ಆತ ಎಡಗಡೆ ಹೆಗಲಿನ ಮೇಲಿಂದ ಬಲ ಸೊಂಟಕ್ಕೆ - ಬಲಗೈ ಕೆಳಗೆ - ಒಂದು ಅಂಚುಳ್ಳ ಶಲ್ಯ ಹೊದ್ದುಕೊಂಡ ಹಾಗಿತ್ತು. ಬಲಗೈ ತೋಳಿನಲ್ಲಿ ಮತ್ತೊಂದು ಚಕ್ರಾಕಾರ ಪದಕವುಳ್ಳ ಆಭರಣ. ಇದರಿಂದ ಕೆಳಗೆ ಎಲ್ಲವೂ ಮುರಿದು ನಷ್ಟವಾಗಿದ್ದರೂ, ನೆಲದ ಮೇಲೆ ನಿಲ್ಲಲ್ಲು ಒಂದು ಚಪ್ಪಟ್ಟೆ ಬುಡವಿತ್ತು. ಈ ಮೂರ್ತಿ ಸುಮಾರು ೧೭ ಸಿಂಟಿಮೀಟರ್ ಉದ್ದ ಹಾಗು ೧೧ ಸಿಂಟಿಮೀಟರ್ ಅಗಲವಿತ್ತು.

ಮಳೆ ರಭಸದಿಂದಾಗಮಿಸಲು, ನಾನು ಆ ಮೂರ್ತಿಯನ್ನು ಜೋಪಾನ ಮಾಡಲು ನನ್ನ ಚೀಲದೊಳಗೆ ಇರಿಸಿ ನನಗಾಗಿ ಕಾದಿದ್ದ ಜೀಪ್ ಹತ್ತಿ ಪ್ರವಾಸಿ ಮಂದಿರವನ್ನು ಸೇರಿದೆ. ಚೀಲವನ್ನು ಕೋಣೆಯಲ್ಲಿರಿಸಿ, ಬೆಳಗ್ಗಿನಿಂದ ಆಚೆ ಇದ್ದು ಬೆವರು, ಮಣ್ಣು, ಧೂಳುಗಳು ಅಂಟಿದ್ದ ಕಾಯವನ್ನು ತೊಳೆಯಲು ಸ್ನಾನದ ಕೋಣೆಗೆ ಹೋದೆ. ಹೊರಗೆ ಬಂದು ಎಂದಿನಂತೆ ಮಾಣಿ ತಂದು ಮೇಜಿನ ಮೇಲೆ ಇರಿಸಿದ್ದ ಕಾಪಿ ಕುಡಿಯುತ್ತಿದ್ದಾಗ ಮಳೆಯು ಸಿಡಿಲಬ್ಬರದ ಬಿರುಗಾಳಿಗಳಿಂದ ಕೂಡಿ, ವಾತವರಣವು ರೋಷ ತುಂಬಿಕೊಂಡಂತೆ ಕಾಣಿಸುತ್ತಿತ್ತು. ಸಿಡಿಲೊಂದು ಬಂದು ಮೇಜಿನ ಮೇಲೆ ಇರಿಸಿದ್ದ ನನ್ನ ಚೀಲಕ್ಕೆ ತಾಕಿದಹಾಗೆನಿಸಿತು. ತಿರುಗಿ ನೋಡಿದರೆ ನಿಂತಿದ್ದ ನನ್ನ ಚೀಲ ಅಲ್ಲಿಯೇ ಉರುಳಿಕೊಂಡಿತ್ತು. ಅದನ್ನು ಪುನಃ ನಿಲ್ಲಿಸಿ, ಆ ಮೂರ್ತಿಯನ್ನು ಹೊರತೆಗೆದಿಟ್ಟು. ದಿನಪತ್ರಿಕೆಯನ್ನು ಹಿಡಿದು ಕುರ್ಚಿಯಲ್ಲಿ ಕುಳಿತೆ.

ಸ್ವಲ್ಪ ಕಾಲ ಕಳೆದ ನಂತರ, ಇನ್ನೇನು ಊಟದ ಸಮಯವಾಯಿತೆಂದು ಯೋಚಿಸುತ್ತ, ಮಾಣಿಯು ಊಟ ತರುವುದನ್ನು ಎದುರು ನೋಡುತ್ತ ಕುಳಿತೆ. ಬಾಗಿಲನ್ನು ಯಾರೋ ಬಡಿದ ಶಬ್ಧ ಕೇಳಿಸಿತು. ಹೋಗಿ ಬಾಗಿಲನ್ನು ತೆರೆದು ನೋಡದೆಯೇ ನನ್ನ ಕುರ್ಚಿಗೆ ಹಿಂತಿರುಗಿದೆ. ಏಕೋ ಏನೋ ಎಂದಿನಂತೆ ಮಾಣಿ ಊಟ ಹಿಡಿದು ಒಳಗೆ ಬಂದಿದ್ದು ಕೇಳಿಸಲಿಲ್ಲ. ಬದಲಿಗೆ ವಿಚಿತ್ರ ರೀತಿಯ ಶಬ್ಧ ಕೇಳಿಸಿತು. ಯಾರೋ ಬೇರೆ ಇರಬಹುದೇ ಎಂದು ಯೋಚಿಸಿ ಬಾಗಿಲಲ್ಲಿ ನೋಡಿದರೆ, ಆಶ್ಚರ್ಯ!

ಪ್ರವಾಸೀ ಮಂದಿರದ ಕೋಣೆಯ ಹೊರಗೆ ಕಾಣುವ ನೋಟ ಕಾಣಿಸಲಿಲ್ಲ. ಬದಲಾಗಿ ಕಾಡೊಂದು ಕಾಣಿಸಿತು! ನನಗೆ ನಂಬಲಾರದಾಗಿತ್ತು! ಪುನಃ ಬಾಗಿಲ ಬಳಿ ಹೋಗಿ ಇಣುಕಿ ನೋಡಿದೆ. ಪರಮಾಶ್ಚರ್ಯ! ದೈತ್ಯ ಹಲ್ಲಿ - ಡೈನೋಸಾರ್‌ಗಳು! ಬೆರಗಾಗಿ ನೋಡುತ್ತ ನಿಂತೆ. ನೆಲ ನಡುಗುವ ಆಭಾಸ ನನ್ನ ಭ್ರ್‍ಆಂತಿಯನ್ನು ಮುರಿಯಿತು. ಎಡಕ್ಕೆ ತಿರುಗಿ ನೋಡಿದರೆ ದೈತ್ಯವೊಂದು ನನ್ನೆಡೆಗೆ ಬರುತ್ತಿದೆ. ಬಾಯ್ತೆಗೆದು ಒಮ್ಮೆ ಅರಚಿತು. ಭೀತಿಯಿಂದ ಬಾಗಿಲನ್ನು ಜೋರಾಗಿ ಬಡಿದೆ.

ಮೀಸೋಝೋಯಿಕ್ ಕಾಡಿನ ಗದ್ದಲದ ನಡುವೆಯೋ, ನಾನೇ ಆ ಕಾಡಿನಲ್ಲಿ ವ್ಯಸ್ಥನಾಗಿದ್ದೆನೋ, ಅಥವ ಹೊಸದಾಗಿ ಶುರುವಾಗಿತ್ತೋ ತಿಳಿಯದು. ಇದ್ದಕ್ಕಿದ್ದಂತೆ ಶಾಂತವಾದ ಕೋಣೆಯಲ್ಲಿ ಈಗ ಬೇರೆ ರೀತಿಯ ಶಬ್ಧಗಳು ಕೇಳಿಸತೊಡಗಿದವು. ಯುದ್ಧದ ಕೋಲಾಹಲ, ಕೂಗಾಟ. ಕುದುರೆ, ಆನೆಗಳ ಧಾಂಧಲೆ, ಮನುಷ್ಯರ ಅರಚಾಟ. ಕಿಟಕಿಯೊಂದು ಪೂರ್ಣವಾಗಿ ಮುಚ್ಚಿರಲಿಲ್ಲ - ಸ್ವಲ್ಪ ತೆರೆದಿತ್ತು. ಅದರಾಚೆಯಿಂದ ಬರುತ್ತಿದ್ದ ಶಬ್ಧಗಳವು. ಕಿಟಕಿಯ ಬಳಿ ಹೋಗಿ ನಿಂತೆ. ಮತ್ತೊಂದು ಕಾಣದಂತಹ ದೃಷ್ಯ. ಇತಿಹಾಸದಲ್ಲಿ ನೋಡಿದ ಚಿತ್ರಗಳಂತಹ ಗ್ರೀಕ್ ಸೈನಿಕರು ಯುದ್ಧದಲ್ಲಿ ವ್ಯಸ್ಥರಾಗಿದ್ದರು. ಎದುರಿಗೆ ನಮ್ಮ ಭಾರತೀಯರ ಸೇನೆಯೊಂದು. ಬಿಲ್ಲು ಬಾಣ, ಈಟಿ, ಕತ್ತಿಗಳ ಸಹಾಯದಿಂದ ನಡೆಯುತ್ತಿದ್ದ ಯುದ್ಧ. ನಮ್ಮವರೇ ಮೇಲುಗೈ ಸಾಧಿಸುತ್ತಿದ್ದಂತಿತ್ತು. ಅಲೆಕ್ಸಾಂಡರ್, ಮೌರ್ಯ ಎಂಬ ಹೆಸರುಗಳು ಆ ಕೋಲಾಹಲದಲ್ಲಿ ಕಿವಿಗೆ ಬಿದ್ದವು. ಬಾಣವೊಂದು ತೆರೆದ ಕಿಟಕಿಯೊಳಗೆ ಬಂದು ನನ್ನ ಬೆನ್ನಿನ ಹಿಂದಿದ್ದ ಕುರ್ಚಿಯ ದಿಂಬಿಗೆ ನಾಟಿತು. ಆತುರದಿಂದ ಥಪಕ್ಕನೆ ಕಿಟಕಿಯನ್ನು ಮುಚ್ಚಿದೆ.

ಏನೂ ಅರ್ಥವಾಗಲಿಲ್ಲ. ನನಗೆ ಹುಚ್ಚು ಹಿಡಿದಿದೆಯೇ, ಇಲ್ಲವೇ ಭ್ರಾಂತಿಯುಂಟಾಗಿದೆಯೇ, ಯಾವುದೂ ತಿಳಿಯಲಿಲ್ಲ. ತಲೆ ಕೆಟ್ಟು, ಕನಸು ಕಂಡಿರಬಹುದೇ ಎಂದು ಯೋಚಿಸಿ ಅಲ್ಲೇ ಬಿದ್ದಿದ್ದ ರಿಮೋಟ್ ಕೈಗೆತ್ತಿಕೊಂಡು ಟಿವಿಯನ್ನು ಹಾಕಿದೆ. ಸ್ವಾತಂತ್ರ್ಯ ಹೋರಾಟದ ಒಂದು ದೃಷ್ಯ. ಬ್ರಿಟೀಷರ ವಿರುದ್ಧ ನಾರೆಗಳು, "ಭಾರತ ಬಿಟ್ಟು ತೊಲಗಿ" ಎಂಬ ಕೂಗು ಗನಕ್ಕೇರಿತ್ತು. ಅಷ್ಟರಲ್ಲಿ ಆ ಚಳುವಳಿಗಾರರ ಮೇಲೆ ಬ್ರಿಟೀಷ್ ಪೋಲೀಸರ ಧಾಳಿ ನಡೆಯಿತು. ಬಿಳಿಯನೊಬ್ಬ ಟಿವಿಯ ಸ್ಕ್ರ್‍ಈನಿಗೊಂದು ಗುಂಡು ಹಾರಿಸಿದ. ನನ್ನಾಶ್ಚರ್ಯಕ್ಕೆ ನಿಜಕ್ಕೂ ಸ್ಕ್ರ್‍ಈನ್ ಒಡೆದು ಹೋಯಿತು. ಆದರೂ ಒಡೆದ ಸ್ಕ್ರೀನಿನಿಂದ ಆ ಆಂದೋಳನ ಕಾಣಿಸುತ್ತಲೇ ಇತ್ತು. ಇದು ಹೇಗೆ ಸಾಧ್ಯ ಎಂದು ಯೋಚಿಸುವಷ್ಟರಲ್ಲಿ ಪೋಲೀಸ್ ಪ್ಯಾದೆಗಳು ಟಿವಿಯೊಳಗಿನಿಂದ ಹೊರ... ಅಲ್ಲ ನನ್ನ ಕೋಣೆಯೊಳಗೆ ಬರಹತ್ತಿದರು. ಹೆದರಿ ನಾನು ಸ್ನಾನದ ಕೋಣೆಯೊಳಗೆ ಓಡಿದೆ. ಓಡುತ್ತಿದ್ದಾಗ ಮೇಜಿನ ಮೇಲಿದ್ದ ಆ ಪುಟ್ಟ ಮೂರ್ತಿಯನ್ನೂ ಕೈಗೆತ್ತಿಕೊಂಡೆ.

ಸ್ನಾನದ ಕೋಣೆಯ ಬಾಗಿಲು ತೆಗೆದೇ ಇತ್ತು - ಬಹುಶಃ ಸ್ನಾನ ಮುಗಿಸಿ ಹೊರ ಬಂದಾಗ ಬಾಗಿಲನ್ನು ಮುಚ್ಚಿರಲಿಲ್ಲವೇನೋ. ಒಂದು ನಿಮಿಷ ಯೋಚಿಸುವ ಸಮಯ ದೊರಕಿತು. ನನ್ನ ಬಳಿಯಿದ್ದ ಆ ಪುಟ್ಟ ವಿಗ್ರಹ, ಹಾಗು ಬಡಿದ ಸಿಡಿಲು ಹೇಗೋ ಒಂದರೊಂದಿಗೊಂದು ಪ್ರತಿಕ್ರಿಯೆ ನಡೆಸಿ ಆ ಕೋಣೆಯನ್ನೇ ಒಂದು ಸಮಯ ಬದಲಾಯಿಸುವ ಯಂತ್ರವಾಗಿಸಿರ ಬೇಕು. ಕೋಣೆಯ ಒಂದೊಂದು ಬಾಗಿಲು-ಕಿಟಕಿಗಳೂ ಒಂದೊಂದು ಕಾಲಕ್ಕೆ ಹೆಬ್ಬಾಗಿಲುಗಳಾಗಿರಬೇಕು! ಸ್ನಾನದ ಕೋಣೆಯ ಬಾಗಿಲು ತೆರೆದೇ ಇದ್ದರಿಂದ ಈ ಕೋಣೆಗೆ ಆ ಪ್ರತಿಕ್ರಿಯೆ ತಗುಲಿರಲಿಲ್ಲವೇನೋ ಎಂದುಕೊಂಡೆ. ಕುತೂಹಲದಿಂದ ಆ ಮೂರ್ತಿಯನ್ನು ಗಮನಿಸ ತೊಡಗಿದೆ.

ಸ್ನಾನದ ಕೋಣೆಯಲ್ಲಿ ನೀರು ತುಂಬಲು ಒಂದು ಪುಟ್ಟ ಕೊಂಡವಿತ್ತು. ಅದರ ಕಟ್ಟೆಯ ಮೇಲೆ ಆ ಪುಟ್ಟ ಮೂರ್ತಿಯನ್ನು ಇರಿಸಿದ್ದೆ. ಆದರೆ ಅದು ಹೇಗೋ ಜಾರಿ ಕೊಂಡದೊಳಗೆ ಬಿದ್ದು ಬಿಟ್ಟಿತು. ನೀರನ್ನು ಮುಟ್ಟಿದ ಕೂಡಲೆ ಅದು ನೀರು ತುಂಬಿದ್ದ ಆ ಕೊಂಡಯೊಳಗೆ ಮುಳುಗಿತು. ಕೊಂಡದೊಳಗೆ ಬಗ್ಗಿ ನೋಡಿದೆ. ಬೆಳಕು ಅಷ್ಟಿಲ್ಲದಿದ್ದ ಕಾರಣ ಏನೂ ಕಾಣಿಸಲಿಲ್ಲ. ಅದನ್ನು ಉಳಿಸುವ ಯತ್ನದಲ್ಲಿ ನಾನೇ ಕೊಂಡದೊಳಗಿಳಿದೆ. ಬಹು ದಿನಗಳಿಂದ ತೊಳೆದಿರಲಿಲ್ಲವೋ ಏನೋ. ಅದರ ನೆಲದಲ್ಲಿ ಪಾಚಿ ಕಟ್ಟಿ, ಬಲು ಜಾರುತ್ತಿತ್ತು. ಕೊಂಡದ ಬುಡದಲ್ಲಿ ಕಾಲು ತಡವರಿಸಿದೆ. ಪಾಚಿ, ಒಂದೇ ಕಾಲಿನಮೇಲೆ ಶರೀರದ ಭಾರ, ಎಲ್ಲವೂ ಸೇರಿ ಜಾರಿ ನೀರಿನಲ್ಲಿ ಬಿದ್ದೆ.

ಕೊಂಡದಲ್ಲಿ ಮುಳುಗಿದವ ಎದ್ದಾಗ ಎಲ್ಲೋ ಹೊರಗೆ ಎದ್ದ ಆಭಾಸ. ನೋಡಿದರೆ ಒಂದು ಸಾರ್ವಜನಿಕ ಸ್ನಾನದ ಹೊಂಡ. ಇಳಿದು ಬರಲು ಸುತ್ತಲೂ ಕಲ್ಲಿನ ಮೆಟ್ಟಲುಗಳು. ಬೆಳಗಿನ ಜಾವವಾಗಿತ್ತು. ಸೂರ್ಯ ಆಗಿನ್ನೂ ಹುಟ್ಟುತ್ತಿದ್ದ. ಸುತ್ತಲೂ ಬೆಳಗಿನ ಪೂಜೆಗಳಲ್ಲಿ ವ್ಯಸ್ಥವಾಗಿದ್ದ ಜನರು. ಪುನಃ ನನ್ನ ಮನಸ್ಸಿನಲ್ಲಿ ಗೊಂದಲವುಂಟಾಯಿತು. ಕೊನೆಗೆ ಕೊಂಡದಲ್ಲಿ ಬಿದ್ದವನು ಯಾವುದೋ ಬೇರೆ ಕಾಲದಲ್ಲಿ ಎದ್ದಿರಬೇಕೆಂದು ತೀರ್ಮಾನಿಸಿದೆ. ದಡದಲ್ಲಿ ನೋಡಿದರೆ ಮತ್ತೊಂದು ಆಶ್ಚರ್ಯ ಕಾದಿತ್ತು! ನಾನು ಹೊರತೆಗೆದ, ಈ ಕಾಲ-ಪ್ರಯಾಣಕ್ಕೆ ಕಾರಣನಾದ ಆ ಋತ್ವಿಕ-ರಾಜ! ಪ್ರತ್ಯಕ್ಷವಾಗಿ, ಮಾಂಸ-ರಕ್ತಗಳಿಂದೊಡಗೂಡಿ!

(ಮುಂದುವರೆಯಲಿದೆ)