ಕಾವ್ಯ ಸಂಭವ

ಕಾವ್ಯ ಸಂಭವ

ಬರಹ

ಪದಗಳ ನಡುವಿನಿಂದ ಬೆಳಕೊಂದು ಹೊರಟಿದೆ
ಭಾವ ಸಾಗರವ ಉದ್ದೀಪಿಸುತ
ಗಾಳಿಗೆ ಸಿಕ್ಕ ಹೊಗೆಯಂತೆ
ಸಾಗಿದೆ ಅಮೂರ್ತ ರೂಪಗಳ ಪಡೆಯುತ

ಭಾಷೆ-ಪ್ರಾಸಗಳ ಸಂಕೋಲೆಗಳ ಲೆಕ್ಕಿಸದೆ
ಪ್ರಶ್ನೆ-ತರ್ಕಗಳ ಹಿಡಿತಗಳಿಗೆ ನಿಲುಕದೆ
ಭಾಸಗಳ ಜಗವ ಹುಟ್ಟು ಹಾಕುತ
ಅಗೋಚರ ದಿಕ್ಕುಗಳ ಕವಲುಗಳ ಹೊಳೆಸಿದೆ

ಬದುಕಿನ ಸಂದುಗೊಂದುಗಳಲಿ ನುಸುಳುತ
ಸಂವೇದನೆಗಳ ಹಾಯ್ದು ಹಂದರದಂತೆ ಹಬ್ಬುತಲಿದೆ
ನೆರಳೊಳು ಪ್ರತಿಮೆಯ ಮೂಡಿಸಿ
ಎಲ್ಲವನು ವ್ಯಾಪಿಸುತ ಹಿಗ್ಗುತಿದೆ

ಅನುಭವಗಳ ಲೋಕದಿಂದ ಅನುಭಾವದ ಕ್ಷಿತಿಜದೆಡೆಗೆ
ಮನವ ತೇಲಿಸಿಕೊಂಡು ಕರೆದೊಯ್ಯುತಲಿದೆ
ಹಿಂದೆ ಕಾಣದ ಒಳನೋಟವೊಂದು ತೆರೆದುಕೊಳ್ಳುತಿರಲು
ಕವಿತೆಯೊಂದು ಜನ್ಮತಾಳಿ ನಿಂತಿದೆ