ಕಾ ಕಾ ಐಸ್ ಕ್ರೀಮ್ ಇಡ್ಬೋದಾ??

ಕಾ ಕಾ ಐಸ್ ಕ್ರೀಮ್ ಇಡ್ಬೋದಾ??

ಬರಹ

ಕಳೆದು ಹೋದ ಸಮಯವನ್ನ ಮೆಲುಕು ಹಾಕೋದು ಒಂದು ರೀತಿಯ ಅತ್ಯುತ್ತಮ ಟೈಂ ಪಾಸ್ ಅನ್ನಬಹುದು, ನಾಸ್ಟಾಲ್ಜಿಕ್ ಅಂತ ಕೆಲವೊಮ್ಮೆ ಅನ್ನಿಸಿದರೂ ಅದರಲ್ಲಿರೋ ಖುಷಿ ಇನ್ಯಾವುದ್ರಲ್ಲೂ ಇಲ್ಲ ಅಂದ್ರೆ ಅತಿಶಯೋಕ್ತಿ ಅಲ್ಲ.

ಚಿಕ್ಕವರಿದ್ದಾಗ ಮನೆ ಇದ್ದಿದ್ದು ತುಂಬಾ busy ಅನ್ನಿಸೋ ಅವೆನ್ಯೂ ರಸ್ತೆಯಲ್ಲಿ, ಬೆಂಗಳೂರಿನ ಹೃದಯಭಾಗ ಅನ್ನೋ ಒಂದು ಹೆಗ್ಗಳಿಕೆ ಜೊತೆಗೆ ಅಲ್ಲಿ ಸಿಗದ ವಸ್ತುಗಳೇ ಇಲ್ಲ ಅನ್ನೋ ಹೆಮ್ಮೆ ನಮಗೆ! ಇದರಿಂದ ನಿಮಗೇನು ಲಾಭ ಅಂತೆಲ್ಲಾ ಕೇಳಬೇಡಿ. :-)

ಬೆಂಗಳೂರಿನ ನಗರ್ತರ ಪೇಟೆ, ಬೆಂದಕಾಳೂರಿನ ಮೂಲನಿವಾಸಿಗಳು ಅನ್ನಬಹುದಾದ ದೇವಾಂಗದವರೇ ಹೆಚ್ಚಾಗಿರುವ ಕಬ್ಬನ್ ಪೇಟೆ, ಮಾಮೂಲು ಪೇಟೆ, ಕುಂಬಾರ ಪೇಟೆ, ಚಿಕ್ಕ ಪೇಟೆ, ದೊಡ್ಡ ಪೇಟೆ, ಮನೆವಾರ್ತೆ ಪೇಟೆ, ಬಳ್ಳಾಪುರ ಪೇಟೆ ಇವುಗಳಿಂದ ಸುತ್ತುವರೆದ ನಮ್ಮ ಮನೆಯಲ್ಲಿ ಯಾವಾಗಲೂ ಒಂದಲ್ಲಾ ಒಂದು ಕಾರಣದಿಂದ ಜನ ತುಂಬೇ ಇರೋವ್ರು. ಬೆಂಗಳೂರಿನಲ್ಲಿ ನಮ್ಮ ಬಂಧು-ಬಳಗ ಇದ್ದುದೆಲ್ಲ ಬಹುತೇಕ ಮಲ್ಲೇಶ್ವರದಲ್ಲಿ. ಅಲ್ಲಿಂದ ಕರಗದ ಸಮಯದಲ್ಲಿ ಕರಗ ನೋಡೋಕ್ಕೆ ಬರೋ ಜನ ಒಂದು ಕಡೆ, ಬೇರೆ ವೇಳೆಯಲ್ಲಿ ಚಿಕ್ಕಪೇಟೆಗೆ ಆಭರಣ, ಸೀರೆ ತೊಗೊಳ್ಳೋಕೆ ಬರೋ ನೀರೆಯರು, ಎಸ್. ಪಿ. ರೋಡ್ ಗೆ ಟೂಲ್ಸ್ ಇತ್ಯಾದಿ ತೊಗೊಳ್ಳೋಕ್ಕೆ ಬರೋ ಧೀರರು, ಸುಭಾಷ್ ಸ್ಟೋರ್ಸ್-ಗೆ ಬುಕ್ಸ್ ತೊಗೊಳ್ಳೋಕೆ ಬರೋ ವಿದ್ಯಾರ್ಥಿಗಳು, ಮಾಮೂಲು ಪೇಟೆಗೆ ವುಲ್ಲನ್ ತೊಗೊಳ್ಳಕ್ಕೆ ಬರೋ ಅಜ್ಜಿಯರು, ಇವರೆಲ್ಲರಿಗೂ ನಮ್ಮ ಮನೆ ಒಂದು ತಂಗುದಾಣ. ಇವೆಲ್ಲದರ ಜೊತೆಗೆ ಅಪ್ಪನ ಅಂಗಡಿಗೆ ಬರುತ್ತಿದ್ದ ನಮ್ಮ ಅನ್ನದಾತ ಗ್ರಾಹಕ ಬಂಧುಗಳನ್ನ ಮರೆಯೋದಕ್ಕೆ ಸಾಧ್ಯಾನೇ ಇಲ್ಲ.

ಇರಲಿ, ಮುಖ್ಯ ವಿಷಯಕ್ಕೆ ಬರ್ತೀನಿ, ಟಿಪಿಕಲ್ ಮಧ್ಯಮ ವರ್ಗದವರಾಗಿದ್ದ ನಮಗೆ , ಅಂದ್ರೆ ನನಗೆ ಮತ್ತೆ ಅಕ್ಕನಿಗೆ ಆವತ್ತು ಐಸ್ ಕ್ರೀಂ ಮಾಡಿ ತಿನ್ಬೇಕು ಅನ್ನೋ ಆಸೆ ತುಂಬಾ ಆಗಿಬಿಡ್ತು. ಅಪ್ಪನ ಹತ್ತಿರ ಗೋಗರೆದು, ಐಸ್ ಕ್ರೀಂ ಮಿಕ್ಸ್ ತಂದು ಅದರ ಹಿಂದಿದ್ದ ಕ್ರಮ– ವಿಧಾನ ಅನುಸರಿಸಿ ಐಸ್ ಕ್ರೀಂ ತಯಾರಿಸಿದೆವು. ಆಗ ನಮಗೆ ಎದುರಾಗಿದ್ದು ನಿಜವಾದ ಸಮಸ್ಯೆ. ಐಸ್ ಕ್ರೀಂ ಏನೋ ಮಾಡಿದ್ವಿ ಆದ್ರೆ ಅದನ್ನ ಸೆಟ್ ಮಾಡಕ್ಕೆ ಆಗ ನಮ್ಮ ಮನೇಲ್ಲಿ ತಂಗಳು ಪೆಟ್ಟಿಗೇನೆ (Fridge) ಇರ್ಲಿಲ್ಲ…… ಸುಮಾರು ಹೊತ್ತು ಯೋಚಿಸಿದ ಮೇಲೆ ಹೊಳೆದಿದ್ದು; ನಮ್ಮ ರಸ್ತೆಯ ಕೊನೇಲ್ಲಿರೋ ಕಾಕಾ ಅಂಗಡಿಯ fridgeನಲ್ಲಿ ಇಡಬಹುದಲ್ಲ ಅಂತ.

ಪ್ರತಿಯೊಂದು ಬಡಾವಣೆಯಲ್ಲಿರುವಂತೆ ಎಲ್ಲರಿಗೂ ಮುಂಚೆ ಅಂಗಡಿ ಇಟ್ಟಿದ್ದು ಆ ಮಲೆಯಾಳಿ ಕಾಕಾ, ಕಾಕಾ ಎಂದು ಕರೆದರೆ ಕೋಪದಿಂದ ಎದುರಿಗಿದ್ದ ಮರದ ಮೇಲಿದ್ದ ಕಾಗೆ ತೋರಿಸ್ತಿದ್ರೂ ಆ ಅಂಗಡಿಯವರ ಜೊತೆ ಎಲ್ಲರದ್ದೂ ಒಂದು ರೀತಿಯ ಹಾರ್ದಿಕ ಸಂಬಂಧ! “ಉದರಿ ಇಲ್ಲ“ ಅನ್ನೋ ಬೋರ್ಡ್ ಕೂಡ ಅಲ್ಲಿರಲಿಲ್ಲ!! ಈಗಿನ ಮಾಲ್/ ಸೂಪರ್ ಬಜಾರ್ ಗಳಲ್ಲಿ ಇಲ್ಲದ ಆತ್ಮೀಯತೆ! ಬೇಳೆ, ನೆಲಗಡಲೆ, ರವೆ ಏನೇ ಕೊಂಡರೂ, ಚಕಚಕನೆ ಪೇಪರ್-ನಲ್ಲಿ ಟೋಪಿಯಂತೆ ಸುತ್ತಿ, ಕೊಂಡದ್ದನ್ನ ಅದರಲ್ಲಿ ತುಂಬಿ, ಅಲ್ಲೇ ಮೇಲೆ ನೇತಾಡುವ ದಾರ ಎಳೆದು ಅದನ್ನ ಭದ್ರಪಡಿಸಿಕೊಡುತ್ತಿದ್ದ ರೀತಿ, ಈಗಿನ ಜಿಪ್ ಲಾಕ್ ಕವರುಗಳನ್ನ ಹಿಮ್ಮೆಟ್ಟಿಸುವಂತಿರುತ್ತಿತ್ತು ಅಂದ್ರೆ ಸುಳ್ಳಲ್ಲ.

ಸರಿ ಹೋಗಿ ಇಬ್ಬರೂ ಆ ಕಾಕಾನ ಬಳಿ ಗೋಗರೆದೆವು, ಐಸ್ ಕ್ರೀಂ ಇಡಲು ಅನುವು ಮಾಡಿಕೊಡಿ ಅಂತ, ಅಷ್ಟು ಸುಲಭವಾಗಿ ಒಪ್ಪಲಿಲ್ಲ ಪ್ರಾಣಿ, ಕೊನೆಗೂ ಅವರಿವರಿಂದ ಶಿಫಾರಸ್ಸು ಮಾಡಿಸಿದ ಮೇಲೆ, ಸಣ್ಣ ಪಾತ್ರೆಯಾದರೆ ಯೋಚಿಸುವ ಎಂದ, ಅದ್ರಲ್ಲೂ ಹಿಂಡಾಲಿಯಂ ಪಾತ್ರೇನೆ ತನ್ನಿ ಬೇಗ ಸೆಟ್ ಆಗತ್ತೆ, ಮತ್ತೆ ನಾನು ಅಮೇಲೆ ತಂಪು ಪಾನೀಯಗಳನ್ನ ಅದ್ರಲ್ಲಿ ಇಡ್ಬೇಕು ಅಂತ ಸೇರಿಸಲು ಮರೆಯಲಿಲ್ಲ. ಮನೆಗೆ ಧಾವಿಸಿ, ಕುಕ್ಕರ್ ಪಾತ್ರೆಯಲ್ಲಿ ಐಸ್ಕ್ರೀಂ ಸುರುವಿ, ಅಂಗಡಿಗೆ ಒಯ್ದರೆ, ಇದು ತೀರ ದೊಡ್ಡದು ,ಇನ್ನೂ ಸಣ್ಣದ್ದು ತನ್ನಿ ಅಂತ ಮತ್ತೆ ಓಡಿಸಿದ. ಅದನ್ನ ಅವನ ತಲೆ ಮೇಲೆ ಕುಕ್ಕಬೇಕು ಅನ್ನಿಸಿದ್ರೂ ಅದು ಅವನು ನಮಗೆ ಮಾಡುತ್ತಿದ್ದ ಉಪಕಾರ ಎಂದು ಅರಿತು ಸುಮ್ಮನಾದೆವು.

೪-೫ ಬಾರಿ ಆಚೆ-ಈಚೆ ಓಡಾಡಿಸಿದ ನಂತರ ಯಾವ ಪಾತ್ರೆಯೂ ಸರಿ ಹೋಗದೇ, ಪಕ್ಕದ ಮನೆಯವರಲ್ಲಿ ಕಾಡಿ ಬೇಡಿ ಅವರ ಮನೆಯ ಹೊಸಾ ಬಟ್ಟಲು ಸಾಲ ತೊಗೊಂಡ್ವಿ. ಆದರೂ ಅದರಲ್ಲಿ ಹಿಡಿಸಿದ್ದು ಮಾಡಿದ್ದರಲ್ಲಿ ಕೇವಲ ಅರ್ಧದಷ್ಟೇ ಐಸ್ ಕ್ರೀಂ, ಅದನ್ನೇ ಕಾಕಾ ಅಂಗಡಿಯ fridgeನಲ್ಲಿಟ್ಟು ಬಂದರೆ …. ಹೊಂಚು ಹಾಕುತ್ತಿದ್ದ ದುರಾದೃಷ್ಟ ಕಾಡಿಯೇ ಬಿಟ್ಟಿತು. ಇನ್ನೂ ನೀರಾಗಿಯೇ ಇದ್ದ ಐಸ್ ಕ್ರೀಂ ಗಟ್ಟಿಯಾಗೋ ಅಷ್ಟರಲ್ಲಿ ಕರೆಂಟ್ ಕೈ ಕೊಟ್ಟಿತ್ತು. ಕಾಕಾ ಹೇಳಿ ಕಳುಸಿದ, ನಾವೂ ಬೆಂಬಿಡದ ಬೇತಾಳದಂತೆ ಅವನನ್ನು ಕಾಡಿದೆವು, ಕರೆಂಟ್ ಬಂದ ಮೇಲೆ ಮತ್ತೆ ಇಡಲು ಕೊಡಿ ಅಂತ, ಈ ಬಾರಿ ಅವನಿಗೂ ನಮ್ಮ ಮೇಲೆ ಕೊಂದ
ದಯೆ ಬಂದಿರಬೇಕು, ಸರಿ ಕರೆಂಟ್ ಬಂದ ಮೇಲೆ ಮತ್ತೆ ತನ್ನಿ ಅಂದ. ಅವನ ಆಣತಿಯನ್ನ ಶಿರಸಾವಹಿಸಿ ಪಾಲಿಸಿದೆವು.

ಸ್ವಲ್ಪ ಹೊತ್ತಿನಲ್ಲೇ ಕರೆಂಟ್ ಬಂತು, ಮೊದಲೇ ಕಾಕಾನ ಮನವೊಲಿಸಿದ್ದರಿಂದ ಈಗ ಕಷ್ಟವಾಗಲಿಲ್ಲ. ಮತ್ತೆ ಐಸ್ ಕ್ರೀಂ ಇಟ್ಟೆವು. ಕೆಲವು ಗಂಟೆಗಳ ನಂತರ ತಯಾರಾಗಿ ಬಂತು ನಮ್ಮ ಐಸ್ ಕ್ರೀಂ. ಅದರಲ್ಲಿ ಒಂದು ಬಟ್ಟಲು ಕಾಕಾಗೆ, ಇನ್ನೊಂದು ಬಟ್ಟಲು ಪಾತ್ರೆ ಎರವಲು ಕೊಟ್ಟ ಶೆಟ್ಟಮ್ಮನಿಗೆ ಕೊಟ್ಟು, ಮನೆಯವರಿಗೆಲ್ಲಾ ಹಂಚಿದ ಮೇಲೆ ನಮಗೆ ಉಳಿದಿದ್ದು ಎರಡೆರಡು ಚಮಚ ರುಚಿಕಟ್ಟಾದ ಚಾಕೊಲೇಟ್ ಐಸ್ ಕ್ರೀಂ, ಜೊತೆಗೆ
ಇನ್ಮೇಲೆ ಮನೆಗೇ fridge ತರೋವರೆಗೂ ಐಸ್ ಕ್ರೀಂ ಮಾಡಲ್ಲ ಅನ್ನೋ ನಿರ್ಧಾರ.

ಮೊನ್ನೆ ಮನೇಲ್ಲಿ ಕಸ್ಟರ್ಡ್ ಮಾಡುವಾಗ ಇಷ್ಟೆಲ್ಲಾ ನೆನಪಿಗೆ ಬಂದಿದ್ದರ ಪ್ರಭಾವ ಈ ಲಘು ಬರಹ :-)