ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಪರಿಸ್ಥಿತಿ ಹದಗೆಟ್ಟು ಕೈ ಮೀರುವಂತಾಗ, ಪಾತಕಿಗಳ ಕಿರುಕುಳ ಅತಿಯಾಗಿ ಅವರ ಇರುವಿಕೆಯೆ ಸಮಾಜದ ಸ್ವಾಸ್ಥ್ಯಕ್ಕೆ ಅಪಾಯಕರ ಎನಿಸಿದಾಗ ಅಂತಹವರ ನಿವಾರಣೆಗಾಗಿ ಪೋಲಿಸರು ಬಳಸುವ 'ಕಂಡಲ್ಲಿ ಗುಂಡು' ತರಹದ ಪಾಲಿಸಿ ನೆನಪಾಗುವುದು ಸಹಜ. ಆದರೆ ಸುರಾಪ್ರಿಯರಿಂದ 'ಗುಂಡು' ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಕುಡುಕರ ಸಂಜೀವಿನಿ 'ಮದಿರೆ'ಯ ಕತೆಯೆ ಬೇರೆ. ಇಲ್ಲಿ ಕ್ಲಬ್ಬು, ಬಾರು, ಗಡಂಗುಗಳು ಕಂಡಾಗೆಲ್ಲ 'ಗುಂಡು' ಹಾಕುವ ಸ್ವೇಚ್ಛೆ ಕುಡುಕ ಬಂಧುಗಳದು. ಕಟ್ಟಾ ಅಭಿಮಾನಿಗಳಿಗಂತು ಅದಕ್ಕೆ ಹಗಲೂ, ಇರುಳೆಂಬ ಪರಿವೆಯೂ ಇರಬೇಕಿಲ್ಲ. ಮಾರುವ ಜಾಗ ತೆರೆದಿದ್ದರೆ ಸರಿ, ಜತೆಗೊಬ್ಬರು ಸಿಕ್ಕರಂತು ಇನ್ನೂ ಸರಿ..! ಅದರಲ್ಲೂ ಪೋಲಿ ಐಕಳ ಗುಂಪುಗಳು ಒಟ್ಟಾಗಿ ಧಾಳಿಯಿಕ್ಕಲು ಹೊರಟುಬಿಟ್ಟರೆ ಮಾತನಾಡುವಂತಿಲ್ಲ. ಈ ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' ಕುಡಿವ ದಣಿಗಳಿಗೆಷ್ಟು ಅಪಾಯಕರವೊ, ತೆರಿಗೆ ಹಾಕಿ ಆದಾಯದ ಸುಲಭ ದಾರಿ ಮಾಡಿಕೊಳ್ಳುವ ಪ್ರಭೃತಿಗಳಿಗಷ್ಟೆ ಆಪ್ಯಾಯಮಾನಕರ. ಬರಿ ಆಗೀಗೊಮ್ಮೆ ಶಿಷ್ಟಾಚಾರಕ್ಕೆ ಕುಡಿವ ನಡುವರ್ಗದವರು ಈ ಗುಂಪಿಗೆ ಸೇರದವರಾದರು ಅವರು ಆಗಿಗೊಮ್ಮೆ ಗುಂಡೇರಿಸಿ ರಂಗಾಗುತ್ತ ತಮ್ಮ ಕೈಲಾದ ಕರಸೇವೆ ಮಾಡುತ್ತಲೆ ಇರುತ್ತಾರೆ.
ಈ ಕೆಳಗಿನ ಪದ್ಯ ಕಟ್ಟಾ ಮದಿರಾಭಿಮಾನಿಗಳದು - ಕಂಡಲ್ಲಿ ಗುಂಡೇರಿಸುವ ಸಾಹಸಿಗಳ ಕುರಿತು ಹೆಣೆದದ್ದು. ಇಲ್ಲಿ ಕುಡಿತ ಸರಿಯೆ ತಪ್ಪೆ ಅನ್ನುವ ಜಿಜ್ಞಾಸೆಗಿಂತ ಆ ಸಂಧರ್ಭ ಸನೀವೇಶಗಳ 'ವೈಭವ' ವರ್ಣನೆಯಷ್ಟೆ ಪರಿಗಣಿತ. ಕುಡುಕರ ಪರವಾಗಿ ಬರೆದದ್ದು ಕಮ್ಮಿ ಎನ್ನುವ ಅಪವಾದಕ್ಕೆ ಎಡೆಗೊಡದಂತಿರಲು ಹೆಣೆದ ಒಂದು ಲಘು ಕವನ. ಓದಿ ಮತ್ತೇರಿದಂತಾದರೆ ಕುಡಿದವರಂತೆ ಖುಷಿ ಪಡಿ - ಆದರೆ ಕಂಡಲ್ಲಿ ಗುಂಡು ಹಾಕಲು ಮಾತ್ರ ಹೋಗಬೇಡಿ. ಅದು ಪಕ್ಕಾ ಕುಡುಕರ ಜನ್ಮ ಸಿದ್ದ ಹಕ್ಕು ಮಾತ್ರ - ನಮ್ಮಾ ನಿಮ್ಮದಲ್ಲ :-)
'ಕಂಡಲ್ಲಿ ಗುಂಡು'
______________________________
ಕುಡುಕರಾ ರಾಜ್ಯದ, ಕಾನೂನು ಕಣೊ ಗುಗ್ಗು
ಗುಟ್ಟೂಗಿಟ್ಟೊಂದು ಇಲ್ಲ, ಬಿದ್ದ ಮೇಲೆ ಪೆಗ್ಗು
ಕಟು'ನಿಷ್ಠೆ', ಗೋಳೆ'ಬಾರ','ಪೋಲಿ'ಸ್ ದಂಡು
ಕುಡುಕರದೀ ರಾಜ್ಯದಲ್ಲಿ, ಕಂಡಲ್ಲೆಲ್ಲ ಗುಂಡು! ||
ರಾತ್ರಿಗಷ್ಟೆ ಸ್ವಲ್ಪ ನೈಂಟಿ, ಚಳಿಗಿರಬೇಕಪ್ಪ
ಆಮೇಲೆ ಥರ್ಟೀ ಸಿಕ್ಸ್ಟೀ, ಜತೆಗಿದ್ದರೆ ತಪ್ಪ?
ಎತ್ತೊ ಮೊದಲಷ್ಟೆ ಶ್ಯಾನೆ, ಆಣೆ ಗ್ಯಪ್ತಿ ನೆಪ್ಪು
ಪರಮಾತ್ಮಾ ಇಳಿದಂಗೆ, ಭಗವಂತನು ಬೆಪ್ಪು ||
ಹಗಲಲ್ಲೂ ಸೂರ್ಯಾನೆ, ಚಂದ್ರ ಎದ್ದೇಳಣ್ಣ
ತಲೆ ಭಾರಕೆ ಕಣ್ಕೆಂಪು, ಸೇಂದಿಯೆ ಹಂಗಣ್ಣ
ಮೋರೆಗ್ಮೂರು ನೀರೆರಚಿ, ಹಾಕ್ ಹೆಜ್ಜೆ ಭಾರ
ಬೀದಿ ಕೊನೆ ಕಳ್ಳಂಗ್ಡಿಗಿಲ್ಲ, ಪಾಪ ವ್ಯಾಪಾರ! ||
ಜಗುಲಿ ಹತ್ತಿದ್ದಷ್ಟೆ ಅಂಗ್ಡಿ, ಸೀನಣ್ಣ ಮಾತಾಟ
ಜಾಸ್ತಿಯಾಯ್ತು ಬ್ಯಾಡಪ್ಪ, ನೆನ್ನೇನೆ ಕೂತಾಟ
ತಗಳಣ್ಣ ಥರ್ಟಿ ತಾನೆ, ನಿಂಗ್ಯಾವ್ದೊಡ್ ಲೆಕ್ಕಾ
ಕಡ್ಲೆಬೀಜ ಬಿಸೀ ಪಕೋಡ, ತಂದಿಡ್ತಿನಿಲ್ಲೆ ಪಕ್ಕ! ||
ಬ್ಯಾಡ ಬ್ಯಾಡ ವಲ್ಲೆ ವಲ್ಲೆ, ಬರಿ ಎಲ್ಲ ಮಾತಲ್ಲೆ
ಜನ್ಮಜನ್ಮದನುಬಂಧ ಕಣಣ್ಣ, ಗ್ಲಾಸು ಕೈಯಲ್ಲೆ
ಕಿಕ್ಕಿರಿದರು ಕಿಕ್ಕೇರದವ, ಅಲ್ಲಾಡದಾ ಪಾರ್ಟಿ
ಅನ್ಕೊಂಡೇನೆ ಮುಟ್ಟೆಬಿಡ್ತೆ ಎರಡ್ನೆ ಗ್ಲಾಸ್ಗೆ ನೈಂಟಿ! ||
ಬಾಡೂಟದ ವಾಸನೆಗೆ, ಮೂಗ್ಹೊಳ್ಳೆಲೆ ಯಜ್ಞ
ಕರಿ ಸಾಂಬಾರಲಿ ಮೀನಿದ್ದರೆ, ವಾಸನೆಗೆ ಲಗ್ನ
ಜುಗಲ್ಬಂಧಿ ಕಟ್ಬೇಕು ಕಣ್ಲ, ಕುಡಿಸಿ ಬಾಯ್ತುಂಬ
ತೇಗಲ್ಲುರಿ ಬರುತಿದ್ದರೆ, ವಾಸನೆಗೆಷ್ಟೊಂದ್ಜಂಬಾ! ||
ಕುಡುಕರ ಸಾವಾಸವೆ ಕುಡಿತ, ಬಿಡ್ತಾನೆ ದಿನಾ
ಕಟ್ಕೊಂಡ್ ಹೆಂಡಿರ ಹಂಗೆ ಬೆಳಿಗ್ಗೇನೆ ಒಡೆತನ
ಹಗಲೂ ರಾತ್ರಿ ಯಾವ್ಲೆಕ್ಕ, ಕುಡಿತಾನ್ಹಂಗೆ ಬೆಕ್ಕ
ಕಣ್ಮುಚ್ಚಿ ಕುಡಿದೆ ಹಾಲು, ಕೈಗೆಲ್ಲಿ ತಾನೆ ಸಿಕ್ಕಾ! ||
Comments
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಹ್ಹೆ..ಹ್ಹೆ..ನಾಗೇಶರೆ, ಗುಂಡಿನ ಮತ್ತೇರಿಸಿದಿರಿ..
"ಕಷ್ಟಪಟ್ಟು ದುಡಿದದ್ದು ಯಾಕೆ ಹೀಗೆ ಕುಡಿದು ಹಾಳು ಮಾಡುತ್ತಿ" ಎಂದು ಒಬ್ಬ ಕುಡುಕನಿಗೆ ಬುದ್ಧಿವಾದ ಹೇಳಿದಾಗ ಆತ " ಸರ್.ಪ್ರತಿದಿನ ಸರ್, ಕೆಲಸ ಬಿಟ್ಟು ಬರುವಾಗ ಕುಡಿಯುವುದಿಲ್ಲ ಎಂದು ತೀರ್ಮಾನಿಸಿಯೇ ಹೊರಡುವೆ. ಒಂದೆರಡು ಬಾರ್ ದಾಟುವವರೆಗೆ ಕಂಟ್ರೋಲ್ ಮಾಡುವೆ...ನಂತರ ಸಾಧ್ಯವಿಲ್ಲ ಸರ್..ಬೀದಿಯಲ್ಲಿ ಸಾಲು ಸಾಲು ಬಾರ್ಗಳನ್ನು ಸರಕಾರಕ್ಕೆ ಹೇಳಿ ಮುಚ್ಚಿಸಿ ಸಾರ್" ಎಂದು ನನಗೇ ಬೇಡಿಕೆ ಸಲ್ಲಿಸಿದ..
In reply to ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು) by ಗಣೇಶ
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಪ್ರತಿಕ್ರಿಯೆ ಹಾಕುವಾಗಲೇ ೪ ಸ್ಟಾರ್ ಬರುತ್ತಿದೆ!
In reply to ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು) by ಗಣೇಶ
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಗಣೇಶ್ ಜಿ,
ನೋಡಿ ಅಲ್ಲೂ ತಪ್ಪು ಲೆಕ್ಕಾಚಾರ! ಡೀಫಾಲ್ಟ್ ಹಾಕಿದರು ಐದಕ್ಕೆ ಐದು ನೀಡಬೇಕು ಒಳ್ಳೆಯ ಕಾಮೆಂಟುಗಳಿಗೆ! ಚಿಂತೆಯಿಲ್ಲ ಬಿಡಿ ನಾನು ಅದನ್ನು ಐದಾಗಿಸಿದ್ದೇನೆ !!
:-) ಅಂದ ಹಾಗೆ ನಿಮ್ಮ ಮಾತು ನಿಜ - ಎಲ್ಲಾ ಕಾಮೆಂಟು ನಾಲ್ಕು ನಕ್ಷತ್ರ ಹಾಕಿಕೊಂಡೆ ಉದ್ಭವಿಸುತ್ತಿದೆ.
In reply to ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು) by ಗಣೇಶ
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಗಣೇಶ್ ಜಿ,
ನಾನೂ ಸುಮಾರು ಕುಡುಕರ ಪದ್ಯ ಬರೆದೆ. ಹಾಳಾದ್ದು ಒಬ್ಬಿಬ್ಬ ಪ್ರೊಪೆಶನಲ್ ಕುಡುಕರಾದರು ಓದಿ 'ಜೈ' ಅನ್ನಬಾರದೆ ? ಎಲ್ಲಾ ನಿಮ್ಮಂತಹ ಸಹೃದಯರದೆ ಆಯ್ತು. ಯಾರಾದರೂ ಮಹಾನ್ ಕುಡುಕರು ಓದಿ ' ಏನಣ್ಣಾ... ಇದ್ದದ್ ಇದ್ದಂಗೆಯ ಬರ್ಕೊಂಡಿದ್ದೀಯಾ... ಏನು ಕುಡ್ಕೊಂಡ್ ಟೈಟಾಗೆ ಬರ್ದಿದ್ದಾ?' ಅಂತ ಕೇಳ್ತಾರೇನೊ ಅನ್ಕೊಂಡಿದ್ದೆ. ಹೋಗಲಿ ಬಿಡಿ, ಬೆಟರ್ ಲಕ್ ನೆಕ್ಸ್ಟ್ ಟೈಮ್ ಅಂದುಬಿಡೋಣ! :-)
In reply to ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು) by nageshamysore
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಗಣೇಶ್ ಜಿ - 8 ವರುಷ 1 ತಿಂಗಳುಗಳು ಆಯ್ತು -ನೀವು ಸಂಪದ ಸೇರಿ..!
53 ಬ್ಲಾಗ್ ಬರಹಗಳು-ಅಸಂಖ್ಯಾತ ಪ್ರತಿಕ್ರಿಯೆಗಳು ಅದ್ಕೆ ನಿಮಗೆ ನನ್ನಿ .ಸಂಪದ ಓದುಗ ಮಿತ್ರರೇ -ನಿಮ್ಮ ಮನಸಿಗೆ ಮುದ ನೀಡುವ ಹಳೆಯ ಬರಹಗಳು ಗಣೇಶ್ ಅಣ್ಣಾ ಅವರ ಇದೆ ಸಂಪದ ಬ್ಲಾಗ್ನಲ್ಲಿವೆ ಲಿಂಕ್ ಇಲ್ಲಿದೆ ಓದಿ ಖುಷಿ ಪಡಿ.http://bit.ly/1JgLj3t
ಹಿಂದೆ ನಿಮ್ಮ ಎರಡು ಬರಹಗಳಿಗೆ -ಗುಂಡೂ ,http://bit.ly/1CWySII ಮತ್ತು ಇನ್ನೊಂದು ಕುಡುಕ ಸಾಯಿತಿ ಬಗ್ಗೆ ಬರೆದಿದ್ದಕ್ಕೆ http://bit.ly/1Dxs3sc
http://bit.ly/1g7S5xm
http://bit.ly/1Kmje9u
ನಾ ನು ಸೇರಿ ಹಲವ್ರು ಪ್ರತಿಕ್ರಿಯಿಸಿದ್ದಾರೆ..!!
ಕಾಕ ತಾಳೀಯ ಎಂಬಂತೆ ಗಣೇಶ್ ಅಣ್ಣಾ ಅವರು ಹಿಂದೊಮ್ಮೆ ಬರೆದಿದ್ದ ಕುಡಿತದ ಬಗೆಗಿನ ಬರಹ ಕಣ್ಣಿಗೆ ಬಿತ್ತು - ಓಲ್ಡ್ ಈಸ್ ಗೋಲ್ಡ್-ಓದಿ
http://bit.ly/1eiM3rH
http://bit.ly/1InfnLY
http://bit.ly/1Dxs3sc
http://bit.ly/1g7S5xm
http://bit.ly/1Kmje9u
http://bit.ly/1OzjpzS
\|/
In reply to ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು) by venkatb83
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಸಪ್ತಗಿರಿವಾಸಿಯವರೆ, ದೇವರ ಸಂದರ್ಶನ ಓದಿ ಅದಕ್ಕೆ ಪ್ರತಿಕ್ರಿಯೆ ನೀಡಲು ಹೊರಟಿದ್ದೆ. ಆಗ ಶಾಸ್ತ್ರಿಯವರ ಸುದ್ದಿವಾಹಿನಿಗಳ ಮೇಲಾಟ ಕಣ್ಣಿಗೆ ಬಿತ್ತು. ಅದರಲ್ಲಿ ಬ್ರೇಕಿಂಗ್ ನ್ಯೂಸ್ ಬಗ್ಗೆ ಓದುವಾಗ ನಾನೂ ಒಂದು ಬ್ಲಾಗ್ ಇದರ ಬಗ್ಗೆ ಬರೆದಿದ್ದೆ ಎಂದು ಹುಡುಕಿದೆ. ಅದರ ಕೊಂಡಿ ಕೊಡುವಾಗ ತುಂಬಾನೆ ಉದ್ದವಾಗಿ, ತುಂಡರಿಸುವುದಕ್ಕೆ ನೀವು ಹೇಳಿದ ಕೊಂಡಿ ನೆನಪಾಗಲೇ ಇಲ್ಲ. ಬುಕ್ಮಾರ್ಕಲ್ಲೂ ಹುಡುಕಿದೆ ಸಿಗಲಿಲ್ಲ..ಆಗ ನಿಮ್ಮ ಪ್ರತಿಕ್ರಿಯೆ ಹುಡುಕಿದರೆ ಸಿಗುವುದು ಎಂದು ಹುಡುಕುತ್ತಾ ಬಂದೆ..ನೋಡಿದರೆ ಇಲ್ಲಿ ಪುನಃ ನನ್ನ ಬರಹಗಳ ಕೊಂಡಿಗಳನ್ನಷ್ಟೂ ಹುಡುಕಿ ಕೊಟ್ಟಿದ್ದೀರಿ. ನಿಮ್ಮ ಅಭಿಮಾನ, ಪ್ರೀತಿಗೆ ತುಂಬಾ ತುಂಬಾ ಧನ್ಯವಾದಗಳು.
ನಾಗೇಶರೆ, ಕುಡುಕರ ರಾಜ್ಯ ಬರಹ, ಕವಿತೆ ಸೂಪರ್ ಆಗಿದೆ. ಯಾವಾಗ ಪಾರ್ಟಿ ಇಡೋಣ :)
In reply to ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು) by ಗಣೇಶ
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಗಣೇಶ ಜಿ ಸ್ವಲ್ಪ ಮೆತ್ತಗೆ ಹೇಳಿ ಯಾರಿಗೂ ಕೇಳಿಸದ ಹಾಗೆ... ಗುಂಡು ಪಾರ್ಟಿ ನಡೆಸಿದರು ಸೀಕ್ರೆಟ್ಟಾಗಿಯೆ ನಡೆಸಬೇಕು (ಹೊರಗೆ ಪಾನ ಸಂಘ ಅಂತ ಬೋರ್ಡ್ ಹಾಕಿಕೊಂಡೆ ಪಾರ್ಟಿ ಮಾಡಬಹುದು)..!
ಅಂದ ಹಾಗೆ ಸಪ್ತಗಿರಿಗಳೇನೊ ಪಾಪ ಕಷ್ಟಪಟ್ಟು ಲಿಂಕು ಹುಡುಕಿಕೊಡುತ್ತಾರೆ - ನನ್ನ ಬರಹದ್ದು ಸೇರಿ. ಆದರೆ ಯಾಕೊ ಹಾಳು, ನಾನಿರುವ ಜಾಗದಲ್ಲಿ ಯಾವ ಲಿಂಕು ಸರಿಯಾಗಿ ಕೆಲಸ ಮಾಡುವುದೆ ಇಲ್ಲ...ಹೀಗಾಗಿ ಅವರು ಹುಡುಕಿಕೊಟ್ಟರು ಫಲವಿಲ್ಲದಂತಾಗಿದೆ ನನ್ನ ಪಾಲಿಗೆ :-(
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ನಾಗೇಶ ಮೈಸೂರುರವರಿಗೆ ವಂದನೆಗಳು
ಕುಡುಕರ ಹಾಡು ಒಂದು ತರಹ ಚೆನ್ನಾಗಿದೆ ನಿಮ್ಮ ಮಿದಾಸ್ ಸ್ಪರ್ಶಕ್ಕೆ ಎಲ್ಲವೂ ಬಂಗಾರ ರಹ ಕವನ ಎರಡೂ ಮಾರ್ಮಿಕವಾಗಿವೆ ಧನ್ಯವಾದಗಳು.
In reply to ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು) by H A Patil
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಪಾಟೀಲರೆ ನಮಸ್ಕಾರ ಮತ್ತು ಮೆಚ್ಚುಗೆಗೆ ಧನ್ಯವಾದಗಳು. ಮೈದಾಸ ಟಚ್ ಇರುವುದು ಬರಹಕ್ಕಿಂತ ಹೆಚ್ಚಾಗಿ ನಲ್ಮೆಯ ಹಾಗು ಪ್ರೋತ್ಸಾಹಕರ ಪ್ರತಿಕ್ರಿಯೆ, ಉತ್ತೇಜನಗಳಲ್ಲಿ... :-)
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಕುಡುಕರ ರಾಜ್ಯದಲ್ಲಿ ಕುಡಿಯದಿದ್ದವನೇ ಅಪರಾಧಿ! :)
In reply to ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು) by kavinagaraj
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಕುಡುಕರ ರಾಜ್ಯದಲ್ಲಿ ಕುಡಿಯದವನೆ ಅಪರಾಧಿ - (ಸಿವಿಲ್ ಸ್ತರದ್ದೆಂದುಕೊಂಡರೆ), ಕುಡಿಯಬೇಡ ಎಂದು ಬುದ್ಧಿ ಹೇಳುವವನು ಅದಕ್ಕೂ ಮೀರಿದ ಇನ್ನೂ ದೊಡ್ಡ ಅಪರಾಧಿ (ಕ್ರಿಮಿನಲ್ ಸ್ತರದ್ದು )! ಅದೆ ಇಬ್ಬರು ಅಪರಿಚಿತ ಕುಡುಕರಿಗೆ ಗೆಳೆಯರಾಗಲಿಕ್ಕೆ ಯಾವ ಹಿನ್ನಲೆಯ ಅಗತ್ಯವೂ ಇರುವುದಿಲ್ಲ - ಒಂದೆರಡು ಪೆಗ್ಗಿನ ನಂತರ ತಂತಾನೆ ಸಲೀಸಾಗಿ ಸಲಿಗೆ ಬೆಳೆದುಬಿಡುತ್ತದೆ. ಅದಕ್ಕೆ ಇರಬೇಕು ವ್ಯವಹಾರದ ಮತ್ತು ರಾಜಕೀಯದ ಬಹುತೇಕ ಡೀಲಿಂಗುಗಳೆಲ್ಲ ಪಾರ್ಟಿಗಳ ಹೆಸರಿನ ಮದಿರಾ ಸಾನಿಧ್ಯದಲ್ಲಿ ನಡೆಯುವುದು..!
In reply to ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು) by nageshamysore
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
"ರಾತ್ರಿಗಷ್ಟೆ ಸ್ವಲ್ಪ ನೈಂಟಿ, ಚಳಿಗಿರಬೇಕಪ್ಪ
ಆಮೇಲೆ ಥರ್ಟೀ ಸಿಕ್ಸ್ಟೀ, ಜತೆಗಿದ್ದರೆ ತಪ್ಪ?
ಎತ್ತೊ ಮೊದಲಷ್ಟೆ ಶ್ಯಾನೆ, ಆಣೆ ಗ್ಯಪ್ತಿ ನೆಪ್ಪು
ಪರಮಾತ್ಮಾ ಇಳಿದಂಗೆ, ಭಗವಂತನು ಬೆಪ್ಪು ||"
:()))))))
ನಾಗೇಶ್ ಅಣ್ಣಾ-ನಿಮ್ಮ ಈ ಬರಹ ಸೂಪರ್ ಕಿಕ್ಕು ...!!
ನಿಮ್ಮ ಈ ಬರಹದ ಕಾರಣ -ನಾ ಮತ್ತೆ ಗಣೇಶ್ ಅಣ್ಣಾ ಅವರ ಬೆನ್ನ ಹಿಂದೆ -
ಅಲ್ಲಲ್ಲ ಅವರ ಬರಹಗಳ ಹಿಂದೆ ಬಿದ್ದೆ -
ಹಲವು ಖುಷಿ ನೀಡುವ ಚಾಟಿ ಬೀಸುವ ಬರಹಗಳು ಸಿಕ್ಕವು.
ಅವುಗಳಲ್ಲಿ ಕೆಲವನ್ನು ಇಲ್ಲಿ ಹಾಕಿರುವೆ-ಅವರ ಬರಹಗಳ ಲಿಂಕ್ ಇದೆ ಸಮಯ ಸಿಕಾಗ ಓದಿ ಖುಷಿ ಪಡಿ..
ಶುಭವಾಗಲಿ
ನನ್ನಿ
\\\||||///
In reply to ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು) by venkatb83
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಸಪ್ತಗಿರಿಗಳೆ ನಿಮ್ಮ ಸಂಪದದ ಧೀರ್ಘಕಾಲದ ಒಡನಾಟದ ಫಲವಾಗಿ ಹಳೆಯ ಸರಕನ್ನೆಲ್ಲ ನೋಡಲು ಆಗಾಗ ಅವಕಾಶವಾಗುತ್ತದೆ, ಅದಕ್ಕೆ ಧನ್ಯವಾದಗಳು.
ಅಂದ ಹಾಗೆ ನಿನಗೆ ಮೆಚ್ಚುಗೆಯಾದ ಅದೇ ಸಾಲುಗಳು ನನಗೂ ತುಂಬಾ ಹಿಡಿಸಿದ್ದು. ಬರೆದ ಮೇಲೆ ಓದಿದಾಗೆಲ್ಲ 'ಚೆನ್ನಾಗಿದೆಯಲ್ವಾ' ಅನಿಸುವಂತೆ ಮಾಡಿತ್ತು. ಯಾರಾದರು ರಾಗ ಹಾಕಿ ಹಾಡುವ ಸಾಹಸ ಮಾಡಿದರೆ ಹೊಂದಿಕೊಳ್ಳಲೆಂದು ಸ್ವಲ್ಪ ಪ್ರಾಸ ಬದ್ಧವಾಗಿಯೆ ಹೊಸೆದೆ. ನಿಮಗೆ ಇಷ್ಟವಾಗಿದ್ದಕ್ಕೆ ನನ್ನೀ.. :-)
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ರಾಯರು, ಅದುಮಿಟ್ಟುಕೊಂಡಿದ್ದ ನಮ್ಮ ಸುಪ್ತ ಬಯಕೆಯನ್ನು ಬಡಿದೆಬ್ಬಿಸಿ, ನಮಗೆ "ಕಂಡಲ್ಲಿ ಗುಂಡು" ಕಾಣುವಂತೆ ಮಾಡಿದ ತಪ್ಪಿಗೆ ಪುಂಡುಗಂದಾಯ (ಸಾರಿ, "ಗುಂಡುಗಂದಾಯ!") ವಿಧಿಸಲಾಗಿದೆ. ಇದರೊಂದಿಗೆ ಬಾರ್ ಬಿಲ್ ಲಗತ್ತಿಸಿದ್ದೇನೆ!
In reply to ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು) by santhosha shastry
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಶಾಸ್ತ್ರಿಗಳೆ ನಮಸ್ಕಾರ. 'ಕಂಡಲ್ಲಿ ಗುಂಡು..' ಇಷ್ಟರ ಮಟ್ಟಿಗೆ ಪ್ರಭಾವ ಬೀರಿ, ಗಡಂಗಿನತ್ತ ಓಡಿಸಿ, ಕುಡಿಸಿ ಚಿತ್ತಾಗಿಸಿಬಿಡಬಹುದೆಂದು ಊಹಿಸದೆ ಎಡವಿಬಿಟ್ಟೆ. ಅದರ ಪ್ರಾಯಶ್ಚಿತವಾಗಿ ನಿಮ್ಮ ಗುಂಡು ಕಂದಾಯದ ಆಜ್ಞೆಯನ್ನು ಮನ್ನಿಸಿ ತಮ್ಮ ಬಿಲ್ ಪಾವತಿಸಿದ್ದೇನೆ - ಮತ್ತೆರಡು ಗುಂಡು ಬಾಟಲಿಗಳ ಮೂಲಕವೆ... ! ಜತೆಗೆ ನಂಚಿಕೊಳಲು ಬೋನಸ್ ರೂಪದಲ್ಲಿ ಜೀ. ಪಿ. ರಾಜರತ್ನಂರ ರತ್ನನ ಪದಗಳನ್ನು ಕಳಿಸಿದ್ದೇನೆ. ಇಂತಾಗಿ ಈ ಶಾಂತಿಯ ಮುಖೇನ ಪೂರ್ಣ ಪಾಪ ಪರಿಹಾರವಾಯ್ತೆಂದು ಭಾವಿಸುತ್ತೇನೆ...!
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಕುಡುಕರ ಬಗ್ಗೆ ಎಲ್ಲರಿಗೂ ಕುತೂಹಲ ಸಹಾನುಭೂತಿ ಆಸಕ್ತಿ ಇದೆ ಅನ್ನೋದು ಸತ್ಯ...ಇಷ್ಟು ಕಾಮೆಂಟ್ಸ್ ಬಂದಿರೋದು ನೋಡಿದರೇನೇ ಗೊತಾಗುತ್ತೆ...ಸಕ್ಕತ್ ಆಗಿದೆ ಸರ್
ಶ್ರೀ :-)
In reply to ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು) by sriprasad82
ಉ: ಕುಡುಕರ ರಾಜ್ಯದ 'ಕಂಡಲ್ಲಿ ಗುಂಡು' (ಕುಡುಕರ ಹಾಡು)
ಶ್ರೀ ಪ್ರಸಾದ್ ನಮಸ್ಕಾರ ಮತ್ತು ಧನ್ಯವಾದಗಳು. ಕುಡಿಯಲಿ ಬಿಡಲಿ ಪ್ರತಿಯೊಬ್ಬನಲ್ಲು ಒಳಗೊಬ್ಬ ಕುಡುಕ ಇರುತ್ತಾನೆಂತ ಕಾಣುತ್ತೆ. ತಾವು ವಾಸ್ತವದಲ್ಲಿ ಧೈರ್ಯದಿಂದ ಮಾಡೋಕೆ ಆಗ್ದೆ ಇರೋದನ್ನು ಕುಡಿದಾಗ ಭಂಡ ಧೈರ್ಯದಲ್ಲಿ ಮಾಡಿಬಿಡೋದ್ರಿಂದ ಒಂದು ರೀತಿಯ ಆಪ್ತ ಭಾವ ಬರುವುದು ಸುಲಭ. ಇನ್ನು ರಾಜಾರೋಷವಾಗಿಯೊ ಅಥವಾ ಗುಟ್ಟಲ್ಲಿಯೊ ಕುಡಿವವರು ಕುಡಿತದ ವಿಷಯದಲ್ಲಿ ತಮ್ಮನ್ನು ತಾವೆ ಸುಲಭವಾಗಿ ಗುಎಉತಿಸಿಕೊಳ್ಳುವುದು ಸುಲಭವಾದ್ದರಿಂದ ಸಹಾನುಭೂತಿ ಸಹಜವಾಗಿಯೆ ಬಂದುಬಿಡುತ್ತದೆನ್ನಬೇಕು. ಒಟ್ಟಾರೆ ಕುಡಿತದ ಬಗ್ಗೆ ಅಸಹನೆಯಿದ್ದವರು ಸಹ ಕುಡುಕರ ಬಗ್ಗೆ ಅನುಕಂಪ, ಕರುಣೆಯ ಭಾವನೆ ತೋರುವುದು ಅಪರೂಪವೇನಲ್ಲ ಬಿಡಿ:-)