ಕುಲದ ನೆಲೆಯ ಬಲ್ಲಿರಾ?
"ಈ ಮನುವಾದಿಗಳು ದೇಶವನ್ನು ಅಧೋಗತಿಗೆ ತಂದಿದ್ದಾರೆ. ಶತಶತಮಾನಗಳಿಂದ ನಮ್ಮನ್ನು ತುಳಿಯುತ್ತಾ, ಶೋಷಿಸುತ್ತಾ ಬಂದಿದ್ದಾರೆ. ಅವರನ್ನು ಮಟ್ಟ ಹಾಕಬೇಕು. ಆಗ ಮಾತ್ರ ನಮ್ಮ ಉದ್ಧಾರ ಸಾಧ್ಯ" - ಪುಟ್ಟರಾಜುವಿನ ಭಾಷಣ ಈ ಮಾತಿನೊಂದಿಗೆ ಮುಕ್ತಾಯವಾದಾಗ ಜನ ಚಪ್ಪಾಳೆ ತಟ್ಟಿದರು. ಯಾವುದೋ ಗುಂಗಿನಲ್ಲಿದ್ದ, ಪರಸ್ಪರ ಮಾತಿನಲ್ಲಿ ಮಗ್ನರಾಗಿದ್ದ ಇನ್ನಿತರರೂ ಎಚ್ಚೆತ್ತು ಚಪ್ಪಾಳೆ ತಟ್ಟಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಣ್ಣಸ್ವಾಮಿಯ ಮೇಲೆ ಪುಟ್ಟರಾಜುವಿನ ಮಾತು ಬಹಳ ಪ್ರಭಾವ ಬೀರಿತ್ತು. ಮನುವಾದಿಗಳನ್ನು ಮಟ್ಟ ಹಾಕಲು ಏನಾದರೂ ಮಾಡಬೇಕೆಂದು ಸಣ್ಣಸ್ವಾಮಿಗೆ ಅನ್ನಿಸಿತು. ಏನು ಮಾಡಬಹುದೆಂದು ಪುಟ್ಟರಾಜುವಿನೊಂದಿಗೇ ಚರ್ಚಿಸಬೇಕೆಂದುಕೊಂಡ ಅವನಿಗೆ ಅವಕಾಶವೂ ಒದಗಿಬಂದಿತು. ಒಮ್ಮೆ ಗೆಳೆಯರೊಡನೆ ಎಡವಟ್ಟು ಮಂಜನ ಮನೆಯಲ್ಲಿ ಪಾನಗೋಷ್ಠಿ ವ್ಯವಸ್ಥೆ ಆಗಿದ್ದಾಗ ಪುಟ್ಟರಾಜುವೂ ಬಂದಿದ್ದ. ಕುರುಕಲು ತಿಂಡಿ ತಿನ್ನುತ್ತಾ ಒಳಕ್ಕೆ ಚೈತನ್ಯರಸ ಇಳಿಯುತ್ತಿದ್ದಂತೆಯೇ ಮಾತುಕತೆಗೆ ರಂಗೇರಿತ್ತು. ಎಲ್ಲರದೂ ಒಂದು ದಾರಿಯಾದರೆ ಎಡವಟ್ಟನದೇ ಬೇರೆ ದಾರಿ ಎಂಬಂತೆ ಅಡ್ಡಪ್ರಶ್ನೆಗಳನ್ನೇ ಹಾಕುತ್ತಿದ್ದ ಮಂಜನಿಗೆ ಉತ್ತರ ಕೊಡಲಾರದ ಗೆಳೆಯರು ಅವನನ್ನು ಎಡವಟ್ಟು ಮಂಜ ಎಂದೇ ಕರೆಯುತ್ತಿದ್ದರು.
ಸಣ್ಣಸ್ವಾಮಿ: ಪುಟ್ಟರಾಜು, ನೀನು ಅವತ್ತು ಮಾಡಿದ ಭಾಷಣ ಬೊಂಬಾಟಾಗಿತ್ತು. ಮನುವಾದಿಗಳನ್ನು ಮಟ್ಟ ಹಾಕಬೇಕು ಅಂದ ಮಾತಂತೂ ನನಗೆ ಬಹಳ ಇಷ್ಟವಾಯಿತು. ನೂರಾರು ವರ್ಷಗಳಿಂದ ನಮ್ಮನ್ನು ತುಳಿಯುತ್ತಾ ಬಂದಿರುವ ಅವರನ್ನು ಮಟ್ಟ ಹಾಕಕ್ಕೆ ನಿಜವಾಗಿಯೂ ಏನಾದರೂ ಮಾಡಲೇಬೇಕು ಕಣ್ಲಾ. ಏನು ಮಾಡಬಹುದು?
ಪುಟ್ಟರಾಜು ಏನನ್ನೋ ಹೇಳಲು ಬಾ ತೆರೆಯುತ್ತಿದ್ದಂತೆ ಮಂಜ ಅಡ್ಡಬಾಯಿ ಹಾಕಿದ:
ಮಂಜ: ಲೋ, ಪುಟ್ಟರಾಜ, ನಿಂಗೆ ಎಷ್ಟಲಾ ವಯಸ್ಸು?
ಪು: ಇಪ್ಪತ್ತೆಂಟು. ಯಾಕಲಾ?
ಮಂಜ: ಅಲ್ಲಾ, ನೂರಾರು ವರ್ಷದಿಂದ ತುಳೀತಿದಾರೆ ಅಂದೆಯಲ್ಲಾ, ಅದಕ್ಕೇ ಕೇಳಿದೆ.
ಪು: ನನ್ನನ್ನು ಅಂತ ಹೇಳ್ಲಿಲ್ಲ ಕಣ್ಲಾ, ನಮ್ಮನ್ನು ಅಂತ ಅಂದೆ.
ಮಂಜ: ನಾವು ಅಂದರೆ ನಮ್ಮ ಜಾತಿಯೋರು! ಅಲ್ಲವೇನ್ಲಾ?
ಪು: ಹೂಂ.
ಮಂಜ: ನೀನು ಪುನರ್ಜನ್ಮ ನಂಬ್ತೀಯಾ?
ಪು: ಯಾಕಲಾ?
ಮಂಜ: ಉತ್ತರ ಹೇಳು, ಮೊದಲು.
ಪು: ಒಂದೊಂದು ಸಲ ಪುನರ್ಜನ್ಮ ಇದೆ ಅಂತ ಅನ್ಸುತ್ತೆ, ಒಂದೊಂದು ಸಲ ಇಲ್ಲ ಅಂತ ಅನ್ಸುತ್ತೆ.
ಮಂಜ: ಪುನರ್ಜನ್ಮ ಇಲ್ಲ ಅಂದರೆ ನೂರಾರು ವರ್ಷದಿಂದ ತುಳೀತಿದಾರೆ ಅನ್ನೋ ಮಾತಿಗೆ ಅರ್ಥ ಇರಲ್ಲ. ಇದೇ ಅಂತ ಅಂದುಕೊಂಡರೆ ಹಿಂದೆಯೂ ಇದೇ ಜಾತೀಲಿ ಹುಟ್ಟಿದ್ದೆವಾ ಅನ್ನೋದು ಗ್ಯಾರೆಂಟಿ ಏನು? ಏನೋ ನಮ್ಮ ಅಪ್ಪ-ಅಮ್ಮ ಈ ಜಾತಿಯವರು, ಆದ್ದರಿಂದ ನಮ್ಮದೂ ಈ ಜಾತಿ. ನಾವೇನಾದರೂ ದೇವರನ್ನು ಕೇಳಿಕೊಂಡಿದ್ದೆವಾ, ಈ ಜಾತೀಲಿ ಹುಟ್ಟಿಸು ಅಂತಾ? ಹಿಂದೆ ಬೇರೆ ಇನ್ನು ಯಾವುದೋ ಜಾತಿಯಲ್ಲಿ ಹುಟ್ಟಿರಬಹುದಲ್ವಾ? ದೇವರನ್ನು ಇಂಥಾ ಜಾತೀಲೇ ಹುಟ್ಟಿಸು ಅಂತ ಕೇಳಿಕೊಂಡು ಹುಟ್ಟಲು ಸಾಧ್ಯ ಇದ್ದಿದ್ದರೆ ನೀನು ನಿನ್ನನ್ನು ಯಾವ ಜಾತೀಲಿ ಹುಟ್ಟಿಸು ಅಂತ ಕೇಳಿಕೊಳ್ತಾ ಇದ್ದೆ?
ಪು: ತಲೆ ತಿನ್ನಬೇಡ ಕಣ್ಲಾ.
ಮಂಜ: ಮನುವಾದ ಅಂದ್ರೆ ಏನು?
ಪು: ಈ ಪುಳಿಚಾರುಗಳು ನಮ್ಮನ್ನು ತುಳಿಯೋಕೆ ಮಾಡ್ಕೊಂಡಿರೋ ಒಂದು ಗ್ರಂಥ.
ಮಂಜ: ಅದರಲ್ಲಿ ಏನಿದೆ? ನೀನು ಅದನ್ನು ಓದಿದೀಯಾ?
ಪು: ನಾನು ಓದಿಲ್ಲ ಕಣ್ಲಾ. ಅದನ್ನು ಯಾವನು ಓದ್ತಾನೆ? ಅದರಲ್ಲಿ ವೇದಾನ ಬ್ರಾಹ್ಮಣರು ಅದರಲ್ಲೂ ಗಂಡಸರು ಮಾತ್ರ ಕಲಿಯಬೇಕು, ಹೆಂಗಸರಿಗೆ ಸ್ವಾತಂತ್ರ್ಯ ಕೊಡಬಾರದು, ಹಾಗೆ, ಹೀಗೆ ಅಂತ ಏನೇನೋ ಅಪದ್ಧ ಇದೆಯಂತೆ. ಒಟ್ಟಿನಲ್ಲಿ ನಮ್ಮನ್ನು ತುಳಿಯೋಕೆ ಏನು ಬೇಕೋ ಅದೆಲ್ಲಾ ಇದೆಯಂತೆ.
ಮಂಜ: ನೀನು ಅದನ್ನು ಓದದೇ ಅದು ಹೆಂಗಲಾ ಹೇಳ್ತೀಯ? ನನ್ನ ಕ್ಲಾಸ್ ಮೇಟ್ ಹಾರುವ ಪ್ರಸಾದಿಗೂ ಮನುವಾದ ಅಂದ್ರೆ ಏನೂ ಅಂತಲೇ ಗೊತ್ತಿಲ್ಲ. ಅವರಪ್ಪ ಜೋಯಿಸರನ್ನೂ ಕೇಳಿದ್ದೆ. 'ಅದೇನೋ ಗೊತ್ತಿಲ್ಲ, ಮನುಷ್ಯರು ಹೇಗಿರಬೇಕು ಅಂತ ಬರೆದಿದ್ದಾರೆ, ಅಷ್ಟೇ ನನಗೆ ಗೊತ್ತಿರೋದು' ಅಂದರು. ಅವರೂ ಅದನ್ನು ಓದಿಲ್ಲವಂತೆ. ಅವರೊಬ್ಬರೇ ಅಲ್ಲ, ಹೆಚ್ಚಿನ ಹಾರುವರಿಗೂ ಸರಿಯಾಗಿ ಗೊತ್ತಿಲ್ಲ. ಮತ್ತೆ ಯಾಕಲಾ, ಈ ಜಟಾಪಟಿ?
ಪು: ನೀನೇನು ಬ್ರಾಮಣರ ಏಜೆಂಟ್ ಏನ್ಲಾ? ಅವರ ಪರ ಯಾಕ್ ಮಾತಾಡ್ತೀಯ? ಅವರೇನು ಅವರ ಜಾತಿ ಬಿಟ್ಟುಕೊಡ್ತಾರಾ?
ಮಂಜ: ನಾನು ಯಾರ ಪರಾನೂ ಮಾತಾಡ್ತಿಲ್ಲ ಕಣ್ಲಾ. ನಂಗೆ ಅರ್ಥ ಆಗದೇ ಇರೋದು ಏನೆಂದರೆ ನಾವು ಹಿಂದೆ ಯಾವ ಜಾತೀಲಿ ಹುಟ್ಟಿದ್ದೆವು? ಮುಂದೆ ಯಾವ ಜನ್ಮದಲ್ಲಿ ಹುಟ್ತೀವಿ ಅನ್ನೋದು. ಈಗಿರೋ ಜಾತೀಲೇ ಮುಂದೇನೂ ಹುಟ್ಟುತ್ತೇವಾ?
ಪು: ಇವನ್ಯಾವನ್ಲಾ ಇವನು? ತಲೆ ಗಬ್ಬೆಬ್ಬಿಸಿಬಿಟ್ಟ.
ಮಂಜ: ನಿನ್ನ ಮಾತು ಕೇಳಿಯೇ ಕಣ್ಲಾ ನನ್ನ ತಲೇನೂ ಗಬ್ಬೆದ್ದಿರೋದು. ಈ ಪ್ರಪಂಚ ಏನು ಇವತ್ತಿಂದಾ? ಬ್ರಾಮಣರು, ಕ್ರಿಶ್ಚಿಯನರು, ಸಾಬರು, ಬೌದ್ಧರು, ಜೈನರು, ಲಿಂಗಾಯತರು ಇಂಥವೆಲ್ಲಾ ಪ್ರಪಂಚ ಹುಟ್ಟಿದಾಗಿನಿಂದಲೂ ಇದ್ದವೇನ್ಲಾ? ಇವನ್ನೆಲಾ ಮಾಡಿದೋರು ಜನರೇ ಅಲ್ಲವೇನ್ಲಾ?
ಪು: ಮತ್ತೆ ಯಾಕಲಾ ಆ ಪುಳಿಚಾರುಗಳು ಬ್ರಾಹ್ಮಣ ಮುಖದಿಂದ ಹುಟ್ಟಿದ, ಶೂದ್ರ ಕಾಲಿಂದ ಹುಟ್ಟಿದ ಅನ್ನೋದು?
ಮಂಜ: ಯಾರಾದ್ರೂ ಎಲ್ಲಿಂದ ಹುಟ್ತಾರೆ ಅನ್ನೋದು ಎಲ್ರಿಗೂ ಗೊತ್ತು. ಎಲ್ಲಾರೂ ಹುಟ್ಟೋದು ಒಂದೇ ಕಡೆಯಿಂದ.
ಪು: ಲೋ ಮಗನೇ. ಕೆಣಕಬೇಡ, ಒದ್ದುಬಿಡ್ತೀನಿ. ನಾನು ಹೇಳಿದ್ದು ಅವರು ಮೇಲೆ, ನಾವು ಕೆಳಗೆ ಅಂತ ಹೇಳೋ ರೀತಿ ಕಣ್ಲಾ ಇದು.
ಮಂಜ: ಜಾತೀಲಿ ಮೇಲು-ಕೀಳು ಅನ್ನೋರು ಯಾರೇ ಆಗಲಿ ಅವರು ಸರಿಯಿಲ್ಲ. ಜಾತೀಲಿ ಮೇಲು-ಕೀಳು ಇದೆ ಅಂತ ತಿಳಿಯೋರೂ ಮೂರ್ಖರೇ. ಬ್ರಾಹ್ಮಣ ಅನ್ನಿಸಿಕೊಂಡೋನು ಕೆಟ್ಟದಾಗಿ ನಡೆದುಕೊಂಡರೆ ಅವನಿಗಿಂತ ಕೆಟ್ಟವರಿಲ್ಲ. ಶೂದ್ರ ಅನ್ನಿಸಿಕೊಂಡೋನು ಒಳ್ಳೆಯ ರೀತಿ ನಡೆದರೆ ಅವನನ್ನು ಮೇಲು ಅಂದರೆ ತಪ್ಪೇನೂ ಇಲ್ಲ. ಹುಟ್ಟೋ ಜಾತೀನೇ ಖಾಯಂ ಇಲ್ಲ. ಹಾಗಿರುವಾಗ ಹುಟ್ಟಿನ ಜೊತೆ ಬರೋ ಜಾತಿ ಹಿಡ್ಕೊಂಡು ಯಾಕೆ ಕಿತ್ತಾಡಬೇಕು? ಹುಟ್ಟು ನಮ್ಮದಲ್ಲ, ಸಾವೂ ನಮ್ಮದಲ್ಲ. ಮಧ್ಯ ಇರೋ ಬದುಕು ಮಾತ್ರ ನಮ್ಮದು ಕಣ್ಲಾ.
ಪು: ಗ್ಯಾರೆಂಟಿ ಆಯ್ತು ಕಣ್ಲಾ. ಯಾರೋ ನಿನ್ನ ತಲೇನ ಚೆನ್ನಾಗಿ ತಿಕ್ಕೀದಾರೆ. ಅದಕ್ಕೇ ಹೀಗೆ ಮಾತಾಡ್ತಾ ಇದೀಯ.
ಮಂಜ: ನೀನೇ ಹೇಳ್ತೀಯ, ಜಾತಿ ಬಿಡಿ, ಮತ ಬಿಡಿ, ಮಾನವತೆಗೆ ಜೀವ ಕೊಡಿ ಅಂತ. ಗೋಡೆ ಮೇಲೆಲ್ಲಾ ಹೀಗೆ ಬರೀತಾರೆ, ನೀನು ಜಾತಿ ಬಿಡಕ್ಕೆ ತಯಾರಿದೀಯಾ?
ಪು: ಅದ್ಹೆಂಗಲಾ ಬಿಡಕ್ಕಾಗುತ್ತೆ? ನಮ್ಮ ಜಾತಿ ನಮಗೆ ದೊಡ್ಡದು, ನೀನು ಬಿಟ್ಟೀಯಾ?
ಮಂಜ: ಓ ಬಿಡ್ತೀನಿ. ಆದ್ರೆ ಒಂದು ಪ್ರಾಬ್ಲೆಮ್ಮು. ಈ ಜಾತಿ ಹೆಸರಿಂದನೇ ನನಗೆ ಕೆಲಸ ಸಿಕ್ಕಿರೋದು. ನನ್ನ ಮಗನಿಗೆ ಸ್ಕಾಲರ್ ಶಿಪ್ ಸಿಕ್ಕಿರೋದು. ಜಾತಿ ಬಿಟ್ಟರೆ ಇದಕ್ಕೆಲ್ಲಾ ಎಳ್ಳು-ನೀರು ಬಿಡಬೇಕಾಗುತ್ತೆ. ಅಷ್ಟಕ್ಕಾದರೂ ಜಾತಿ ಇಟ್ಕೊಳ್ಳಲೇಬೇಕು.
ಸಣ್ಣಸ್ವಾಮಿ: ನಮ್ಮ ನಂಜಪ್ಪ ಚರ್ಚಿಗೆ ಹೋಗ್ತಾನೆ, ಚರ್ಚಿನವರು ಅವರ ಆಸ್ಪತ್ರೇಲಿ ಅವನ ಮಗಳಿಗೆ ನರ್ಸು ಕೆಲಸ ಕೊಡಿಸಿದಾರೆ. ಆದ್ರೆ ಅವನು ಜಾತಿ ಬಿಟ್ಟಿಲ್ಲ. ಎರಡು ಕಡೇಗೂ ಹೋಗ್ತಾನೆ, ಎರಡು ಕಡೇನೂ ಅನುಕೂಲ ಪಡೀತಾ ಇದಾನೆ.
ಮಂಜ: ಈಗ ಹೇಳು, ಜಾತಿ ಮನುಷ್ಯರು ಮಾಡಿದ್ದಾ? ದೇವರು ಮಾಡಿದ್ದಾ? ದೇವರು ಮಾಡಿದ್ದಾದರೆ ಜಾತಿ ಬದಲಾಯಿಸಕ್ಕೆ ಆಗ್ತಾ ಇತ್ತಾ? ದೇವರೇ ಜಾತಿ ಮಾಡಿದ್ದಾಗಿದ್ರೆ ನೋಡಿದ ತಕ್ಷಣ ಇವರು ಇಂತಹ ಜಾತಿಯವರು ಅಂತ ಗೊತ್ತಾಗೋ ಹಾಗೆ ಮಾಡ್ತಾ ಇದ್ದ. ಈಗ ಕುದುರೆ ಇದೆ, ಕತ್ತೆ ಇದೆ, ನಾಯಿ ಇದೆ. ಅವು ಪ್ರಪಂಚದ ಎಲ್ಲೇ ಇರಲಿ, ನೋಡಿದ ಕೂಡಲೇ ಕುದುರೆ, ಕತ್ತೆ, ನಾಯಿ ಅಂತಾ ಹೇಳಬಹುದು. ಆದರೆ ಮನುಷ್ಯರನ್ನು ನೋಡಿ ಇವರು ಇಂತಹ ಜಾತಿಯವರು ಅಂತ ಹೇಳಕ್ಕೆ ಆಗುತ್ತಾ? ಮನುಷ್ಯ ಅಂತ ಮಾತ್ರ ಹೇಳ್ಬೋದು. ನಾಯಿ ಹೊಟ್ಟೇಲಿ ನಾಯಿ ಹುಟ್ಟುತ್ತೆ. ಅದಕ್ಕೇ ಅದು ನಾಯಿ ಜಾತಿ. ಮನುಷ್ಯರ ಹೊಟ್ಟೇಲಿ ಮನುಷ್ಯರೇ ಹುಟ್ಟೋದು. ಅದು ಮನುಷ್ಯ ಜಾತಿ ಅಷ್ಟೆ. ದೇವರು ಮಾಡಿದ್ದೂ ಅಷ್ಟೇ. ಮನುಷ್ಯರು ಆಮೇಲೆ ಆ ಜಾತಿ, ಈ ಜಾತಿ, ಮೇಲೆ, ಕೆಳಗೆ ಅಂತ ಮಾಡಿಕೊಂಡಿದ್ದು.
ಪು: ಈಗ ನನ್ನ ದಾರೀಗೆ ಬಂದೆ ನೀನು. ಮನುಷ್ಯರೆಲ್ಲರೂ ಒಂದೇ. ಮೊದಲು ಈ ಜಾತಿ ಹೋಗಬೇಕು. ವಿಶ್ವಮಾನವರಾಗಬೇಕು.
ಮಂಜ: ನೀನೇ ನಿನ್ನ ಜಾತಿ ಬಿಡಕ್ಕೆ ತಯಾರಿಲ್ಲ. ಬೇರೆಯವರಿಗೆ ಯಾಕಲಾ ಹೇಳ್ತೀಯಾ? ವಿಶ್ವಮಾನವ ಅಂದರೆ ಎಲ್ಲಾ ಒಂದೇ ಅಂತ ತಾನೇ? ಹಾಗಾದ್ರೆ ನೀನು ಒಂದು ಜಾತಿಯವರನ್ನೇ ಏಕೆ ಬೈತೀಯಾ?
ಪು: ಅವರಿಂದಾನೇ ದೇಶ ಹಾಳಾಗಿರೋದು ಅದಕ್ಕೇ.
ಮಂಜ: ಅವರಿಂದಾನೇ ದೇಶ ಉದ್ಧಾರ ಆಗಿರೋದು ಅಂತ ಅವರೂ ಹೇಳಬಹುದಲ್ಲವೇನ್ಲಾ? ಅವರನ್ನು ಬೈದರೆ ದೇಶ ಸರಿ ಹೋಗುತ್ತಾ? ಯಾರನ್ನಾದರೂ ಬೈದುಬಿಟ್ಟು ಸರಿ ಮಾಡಕ್ಕೆ ಸಾಧ್ಯ ಇದೆಯಾ? ಸರಿ ಅಂತ ಅವರಿಗೆ ಅನ್ನಿಸಿದರೆ ಅವರೇ ಸರಿ ಹೋಗ್ತಾರೆ. ನೀನು ಅವರನ್ನು ದ್ವೇಷ ಮಾಡುತ್ತಾ ಅವರು ನಿನ್ನನ್ನು ಪ್ರೀತಿಸಬೇಕು ಅಂತ ಬಯಸೋದು ಅಷ್ಟು ಸರಿ? ನೀನು ಇನ್ನೊಬ್ಬರನ್ನು ಅನ್ನುವುದನ್ನು ಬಿಟ್ಟರೆ ಅದೇ ದೊಡ್ಡ ಬದಲಾವಣೆ. ಮುಸ್ಲಿಮರು ಬೇರೆಯವರನ್ನು ಕಾಫಿರ್ ಅಂತ ಬೈದರೆ? ಕಾಫಿರರಿಗೆ ಬದುಕುವ ಹಕ್ಕಿಲ್ಲ ಅಂದರೆ? ಕ್ರಿಶ್ಚಿಯನ್ನರು ಇತರರನ್ನು ದ್ವೇಷಿಸುತ್ತಾ ಹೋದರೆ, ಮತಾಂತರ ಮಾಡುತ್ತಾ ಹೋದರೆ ಪರಿಸ್ಥಿತಿ ಸರಿಹೋಗುತ್ತಾ? ಹಿಂದೂಗಳು ಇತರ ಧರ್ಮದವರನ್ನು ಸಹಿಸದೇ ಹೋದರೆ? ಇದಕ್ಕೆಲ್ಲಾ ಕೊನೆ ಅನ್ನೋದು ಇದೆಯಾ? ಇನ್ನೊಂದು ವಿಷಯ. ಈಗ ನಮ್ಮಲ್ಲಿ ಜಾತಿ ಅನ್ನೋದು ಉಳಿಯೋದಕ್ಕೆ, ಬಲವಾಗುವುದಕ್ಕೆ ನಿಜವಾದ ಕಾರಣ ಈ ದರಿದ್ರ ರಾಜಕಾರಣಿಗಳು. ಅವರನ್ನು ಮೊದಲು ವಿಚಾರಿಸಿಕೊಳ್ಳಬೇಕು. ಎಲ್ಲರೂ ದೇಶ ಮುಂದುವರೆಯಬೇಕು ಅಂತ ಬಯಸಬೇಕಾಗಿರುವಾಗ, ಸಿಗೋ ಸ್ವಲ್ಪ ಲಾಭಕ್ಕೋಸ್ಕರ ನಮ್ಮ ಜಾತಿ ಹಿಂದುಳಿದವರ ಜಾತಿಗೆ ಸೇರಲಿ, ವರ್ಗಕ್ಕೆ ಸೇರಲಿ ಅಂತ ಹೊಡೆದಾಡ್ತಾ ಇದಾರೆ. ಜಾತಿಗೆ ಸರ್ಕಾರಿ ಮಾನ್ಯತೆ ಇದೆ. ಅದೇ ತಪ್ಪು. ಜಾತೀ ಆಧಾರದ ಮೇಲೇನೇ ಸರ್ಕಾರ ನಡೆಸ್ತಾ ಇದಾರೆ. ಇದು ನಿಜವಾಗಿಯೂ ಜಾತ್ಯಾತೀತ ದೇಶ ಅಂತ ಹೇಳಕ್ಕಾಗುತ್ತೇನ್ಲಾ?
ಪು: ನೀನು ಏನ್ಲಾ ಹೇಳೋದು? ಇದನ್ನು ಬದಲಾಯಿಸೋಕೆ ಏನು ಮಾಡಬೇಕು? ನನ್ ತಲೆ ಗೊಜ್ಜಾಗಿ ಹೋಯಿತು. ತಂದೇ, ನಿನಗೆ ಕೈಮುಗೀತೀನಿ, ನೀನು ಏನು ಹೇಳಬೇಕೂಂತಿದೀಯಾ?
ಮಂಜ: ಬದಲಾಯಿಸೋಕೆ ನಾನು, ನೀನು ಯಾರಲಾ? ಎಲ್ಲರೂ ಎಲ್ಲರನ್ನೂ ಪ್ರೀತಿಸಬೇಕು ಅಂತ ತಾನೇ ನೀನು ಅವರನ್ನು ಬಯ್ಯೋ ಹಿಂದಿರುವ ಕಾರಣ? ಅದಕ್ಕೆ ಏನು ಮಾಡಬೇಕು? ನೀನು ಅದನ್ನು ಮೊದಲು ಅದನ್ನು ಮಾಡು. ನೀನು ಬೇರೆಯವರನ್ನು ಪ್ರೀತಿಸು. ಆಮೇಲೆ ಬೇರೆಯವರಿಗೆ ಹೇಳುವಂತೆ. ನೀನು ಮೊದಲು ಬದಲಾಗು.
ಪು: ನಾನೊಬ್ಬ ಬದಲಾಗಿಬಿಟ್ಟರೆ ದೇಶ ಬದಲಾಗಿಬಿಡುತ್ತಾ?
ಮಂಜ: ಎಲ್ಲರೂ ಬೇರೆಯವರು ಬದಲಾಗಲಿ ಅಂತಾರೆ. ತಾವು ಮಾತ್ರ ಬದಲಾಗಲ್ಲ. ಹೀಗಾದ್ರೆ ಬದಲಾವಣೆ ಆಗುತ್ತಾ? ಬೇರೆಯವರ ಬಗ್ಗೆ ಯೋಚಿಸೋದು ಬಿಟ್ಟು ಪ್ರತಿಯೊಬ್ಬರೂ ಅವರ ಪಾಡಿಗೆ ಅವರು ಬದಲಾಗಲಿ. ಆಗ ಬದಲಾವಣೆ ಆಗೇ ಆಗುತ್ತೆ. ಸಾವಿರಾರು ಮೈಲಿ ಪ್ರಯಾಣ ಪ್ರಾರಂಭ ಆಗೋದು ನಾವು ಇಡೋ ಮೊದಲ ಹೆಜ್ಜೆಯಿಂದಲೇ. ಆ ಹೆಜ್ಜೆ ನಮ್ಮಿಂದಲೇ ಶುರುವಾಗಲಿ. ಏನಂತೀರಾ ಫ್ರೆಂಡ್ಸ್?
ಎಲ್ಲರೂ 'ಚಿಯರ್ಸ್' ಅಂದರು. 'ಥತ್, ಇವತ್ತು ಕಿಕ್ಕೇ ಬರಲಿಲ್ಲ. ಎಲ್ಲಾ ಈ ಎಡವಟ್ಟು ಮಂಜನಿಂದ' ಎಂದು ಪುಟ್ಟರಾಜು ಗೊಣಗಾಡಿದರೆ ಉಳಿದವರು 'ನಮಗಂತೂ ಸಕತ್ ಕಿಕ್ ಸಿಕ್ಕಿತು' ಎಂದು ನಕ್ಕರು.
-ಕ. ವೆಂ.ನಾಗರಾಜ್.
Comments
ಕವಿಯವರೆ, ಜಾತಿಯ ಬಗ್ಗೆ ತು೦ಬಾ
In reply to ಕವಿಯವರೆ, ಜಾತಿಯ ಬಗ್ಗೆ ತು೦ಬಾ by spr03bt
ಧನ್ಯವಾದ, ಶಿವಪ್ರಕಾಶರೇ. ಇದು
ಉತ್ತಮ ವಿಚಾರದ, ಸ್ನೇಹತರ
In reply to ಉತ್ತಮ ವಿಚಾರದ, ಸ್ನೇಹತರ by RAMAMOHANA
ರಾ.ಮೋ.ರಿಗೂ ನಮೋ ನಮಃ! :)
ಕವಿ ನಾಗರಾಜ ರವರಿಗೆ ವಂದನೆಗಳು\
In reply to ಕವಿ ನಾಗರಾಜ ರವರಿಗೆ ವಂದನೆಗಳು\ by H A Patil
ಧನ್ಯವಾದ ಪಾಟೀಲರೇ.