ಕುಶಿನಗರ
ಲುಂಬಿನಿ ಮತ್ತ್ಕು ಕುಶಿನಗರಗಳು ಗೌತಮಬುದ್ಧನ ಜೀವನದ ಎರಡು ಪ್ರಮುಖ ಆಖ್ಯಾಯಿಕೆಗಳು. ನೇಪಾಳ ಗಡಿಯಲ್ಲಿರುವ ಲುಂಬಿನಿ ಸಿದ್ಧಾರ್ಥ ಸಂಭವಕ್ಕೆ ನಾಂದಿ ಹಾಡಿದರೆ ಕುಶಿನಗರವು (ಕುಶೀನಾರ ಎಂದೂ ಹೇಳುತ್ತಾರೆ) ಬುದ್ಧನ ಪರಿನಿರ್ವಾಣಕ್ಕೆ ವೇದಿಕೆಯಾಗಿದೆ. ಕಪಿಲವಸ್ತುವಿನ ರಾಜ ಶುದ್ಧೋಧನನ ತುಂಬುಗರ್ಭಿಣಿ ರಾಣಿ ಮಾಯಾದೇವಿಯು ಹಸಿರುವನ ದರ್ಶಿಸುವ ಬಯಕೆ ಹೊತ್ತು ನೇಪಾಳದ ಗಡಿಯಲ್ಲಿನ ಲುಂಬಿನಿಗೆ ತೆರಳಿದ್ದಾಗ ಅಲ್ಲಿನ ತೋಟವೊಂದರಲ್ಲಿ ಇದ್ದಕ್ಕಿದ್ದಂತೆ ಗಂಡುಮಗು ಹೆರುತ್ತಾಳೆ. ಹೀಗೆ ರಾಜಕುವರನೊಬ್ಬನ ಜನನ ಮರದ ಕೆಳಗೆ ಆಗುತ್ತದೆ. ಆ ರಾಜಪುತ್ರನೇ ಮುಂದೆ ಬುದ್ಧನೆನಿಸಿದ ಸಿದ್ಧಾರ್ಥ. ಬುದ್ಧ ಸಿದ್ಧಾರ್ಥನಾಗಿ ಜನ್ಮ ತಳೆದ ಆ ಲುಂಬಿನಿ ಎಂಬ ಸ್ಥಳ ಉತ್ತರಪ್ರದೇಶದ ಗೋರಖಪುರದಿಂದ ಸುಮಾರು ೯೦ಕಿಲೋಮೀಟರು ವಾಯುವ್ಯದಲ್ಲಿ ನೇಪಾಳ ಗಡಿಯಲ್ಲಿದೆ. ದೈವಾಂಶಸಂಭೂತನಾದ ಪುತ್ರನು ಜನಿಸುವಾಗ್ಗೆ ದೇವತೆಗಳು ಬಂದು ಉಪಚಾರ ಮಾಡಿದ್ದನ್ನು ಸೂಚಿಸುವ ಚಿತ್ರವುಳ್ಳ ಕಲ್ಲು ಅಲ್ಲಿದೆ.
ಗೋರಖಪುರದಿಂದ ೫೦ ಕಿಲೋಮೀಟರು ದೂರದಲ್ಲಿರುವ ಕುಶಿನಗರವು ಬುದ್ಧನು ತನ್ನ ಜೀವನದ ಅಂತಿಮ ಕ್ಷಣಗಳನ್ನು ಕಳೆದ ಸ್ಥಳ. ಬುದ್ಧನು ತನ್ನ ೮೦ನೇ ವಯಸ್ಸಿಗೆ ಕಾಲಿರಿಸಿದಾಗ ಬಿಹಾರದ 'ವೈಶಾಲಿ' ಯಲ್ಲಿ ಬೋಧನೆ ಮಾಡುತ್ತಿದ್ದ. ಮಾಘ ಪೂರ್ಣಿಮೆಯ ಆ ದಿನ ಆತ ತನ್ನ ಮರಣ ಸಮೀಪಿಸುತ್ತಿದೆಯೆಂದೂ ಮೂರು ತಿಂಗಳ ನಂತರ ಕುಶಿನಗರದಲ್ಲಿ ತಾನು ಸಾಯುವೆನೆಂದೂ ಹೇಳಿದ. ಕ್ತಿಸ್ತಪೂರ್ವ ೫೪೩ರಲ್ಲಿ ಬುದ್ಧ ಕುಶಿನಾರ (ಮಲ್ಲರೆಂಬ ಮೂಲ ನಿವಾಸಿಗಳ ಪಾಳೆಯಪಟ್ಟು ಆಗಿದ್ದ ಕುಶಿನಾರ ಮುಂದೆ ಜನರ ಬಾಯಲ್ಲಿ ಕುಶಿನಗರ ಆಯಿತು. ಚೀನೀ ಯಾತ್ರಿಕರಾದ ಫಾ-ಹಿಯೆನ್ ಹಾಗೂ ಹಿಯೆನ್ ತ್ಸಾಂಗರು ತಮ್ಮ ಪ್ರವಾಸ ಕಥನದಲ್ಲಿ ಕುಶಿನಾರದ ಉಲ್ಲೇಖ ಮಾಡಿದ್ದಾರೆ) ತಲುಪಿದ. ವೈಶಾಖ ಪೂರ್ಣಿಮೆಯ ಆ ದಿನ ಆತ ಮರಣಶಯ್ಯೆಯಲ್ಲಿ ಮಲಗಿ ತನ್ನ ಕೊನೆಯ ಉಪನ್ಯಾಸದಲ್ಲಿ ಪ್ರಿಯ ಶಿಷ್ಯ ಆನಂದ ಮತ್ತು ಇತರರಿಗೆ ಓ ನನ್ನ ಸೋದರರೇ, ಮತ್ತೆ ಈಗ ನಿಮಗೆ ನೆನಪಿಸುತ್ತೇನೆ. ಐಹಿಕ ವಸ್ತುಗಳೆಲ್ಲವೂ ನಶಿಸಿಹೋಗುತ್ತವೆ, ಹಾಗಾಗಿ ನಿಮ್ಮ ರಕ್ಷಣೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಿರಿ ಎಂದ. ಇದ್ದಕ್ಕಿದ್ದಂತೆ ಮಂದಹಾಸವೊಂದು ಅವನ ಮುಖದ ಮೇಲೆ ಸುಳಿಯುತ್ತದೆ. ಆನಂದಾತಿರೇಕದಿಂದ ಆತ ಬಹಳಷ್ಟು ಮಾತನಾಡುತ್ತಾನೆ. ಆತನ ಶಿಷ್ಯರಿಗೂ ಬುದ್ಧ ಸ್ವಸ್ಥನಾದನೆಂಬಂತೆ ತೋರುತ್ತದೆ. ಆದರೆ ಆರುವ ದೀಪ ಕೊನೆ ಗಳಿಗೆಯಲ್ಲಿ ಹೆಚ್ಚು ಪ್ರಕಾಶಿಸುವಂತೆ ಬುದ್ಧನೂ ಪ್ರಜ್ವಲಿಸಿ ನಿರ್ವಾಣ ಹೊಂದುತ್ತಾನೆ.
ಬುದ್ಧನು ಮರಣ ಹೊಂದಿದ ಆ ಮಹಾ ಪರಿನಿಬ್ಬಾಣದ ಸ್ಥಳದಲ್ಲಿ ಅವನು ಇನ್ನೂ ಮಲಗಿರುವ ಹಾಗೆ, ಅವನ ಶಿಷ್ಯರು ದುಃಖಾಶ್ರುಧಾರೆಯಿಂದ ಅವನನ್ನು ಬೀಳ್ಕೊಡುತ್ತಿರುವ ಹಾಗೆ ಅದೇ ಸ್ಥಳದಲ್ಲಿ ಅದೇ ಹಜಾರದಲ್ಲಿ ಹರಿಬಾಲಾ ಎಂಬಾತ ಸ್ಥಾಪಿಸಿದ ೬.೧೦ ಮೀಟರು ಉದ್ದದ ಪ್ರಾಚೀನ ಧರಾಶಾಯಿ ಬುದ್ಧ ಮೂರ್ತಿಯನ್ನು ಇಡಲಾಗಿದೆ. ಅನಿರ್ವಚನೀಯವಾದ ದೈವೀಕಳೆಯಿಂದ ಬುದ್ಧ ಬೆಳಗುತ್ತಿದ್ದಾನೆ. ಅವನ ಪಾದುಕೆಯೂ ಬಿಕ್ಷಾಪಾತ್ರೆಯೂ ಸನಿಹದಲ್ಲೇ ಇವೆ. ನೀರವ ಮೌನ ಆ ಸ್ಥಳವನ್ನು ವ್ಯಾಪಿಸಿದೆ. ಆ ಮೂರ್ತಿಯು ಕಾರ್ಲೈಲ್ ಎಂಬ ಅಧಿಕಾರಿಯು ೧೮೭೬ರಲ್ಲಿ ಉತ್ಖನನ ನಡೆಸುತ್ತಿದ್ದಾಗ ಗೋಚರವಾಯಿತು. ಪದ್ಮರಾಗದ ಏಕಶಿಲೆಯಲ್ಲಿ ಕಟೆಯಲಾದ ಆ ಪ್ರತಿಮೆಯಲ್ಲಿ ಮೃತ್ಯುಮುಖಿಯಾದ ಬುದ್ಧನು ಅಂಗಾತನಾಗಿರದೆ ಬಲಕ್ಕೆ ಮಗ್ಗುಲಾಗಿ ಮಲಗಿದ್ದಾನೆ. ಅವನ ಮುಖ ಶಾಂತವಾಗಿ ಪಶ್ಚಿಮ ದಿಕ್ಕನ್ನು ನಿರುಕಿಸುತ್ತಿದೆ. ಪಶ್ಚಿಮ ದಿಕ್ಕಿನಲ್ಲಿ ಕಣ್ಣು ಕೀಲಿಸಿರುವ ಬುದ್ಧ ಇಂದು ಆ ದಿಕ್ಕಿನಲ್ಲಿ ಬೌದ್ಧ ಧರ್ಮ ಅವಸಾನವಾಗುತ್ತಿರುವುದನ್ನು ನೋಡುತ್ತಿದ್ದಾನೇನೋ ಎನಿಸುತ್ತದೆ. ವಿಪರ್ಯಾಸವೆಂದರೆ ಬುದ್ಧ ನಾಡಿನ ಪೂರ್ವ ದಿಕ್ಕಿನಲ್ಲಿ ಅಂದರೆ ಜಪಾನ್, ಬರ್ಮಾ, ಥೈಲ್ಯಾಂಡ್, ಮಲೇಶಿಯಾ, ಚೀನಾ ಮುಂತಾದೆಡೆಗಳಲ್ಲಿ ಬೌದ್ಧ ಧರ್ಮ ಗಣನೀಯ ಸ್ಥಾನ ಪಡೆದಿದೆ.
ಬುದ್ದನ ದೇಹಾಂತವಾದ ಸ್ಥಳದಿಂದ ಪೂರ್ವ ದಿಕ್ಕಿನಲ್ಲಿ ೧.೫ಕಿ.ಮೀ. ದೂರದಲ್ಲಿ ಬುದ್ಧನ ಅಂತ್ಯ ಸಂಸ್ಕಾರಗಳು ನಡೆದು ಅವನ ದೇಹ ಬೂದಿಯಾದ ಮುಕತ್ ಬಂಧನ್ ಎಂಬ ಸ್ಥಳದಲ್ಲಿ ಮಲ್ಲರು ಸ್ತೂಪ ಕಟ್ಟಿಸಿದರು. ಮುಂದೆ ಅಶೋಕ ಸಾಮ್ರಾಟನು ಅದನ್ನು ನವೀಕರಿಸಿದನು. ನನ್ನ ಅವಶೇಷಗಳನ್ನು ಎಲ್ಲೆಡೆ ಕೊಂಡೊಯ್ಯಿರಿ, ಅವುಗಳ ಮೇಲೆ ಸ್ತೂಪಗಳನ್ನು ಕಟ್ಟಿ ಅಲ್ಲಿ ನನ್ನ ಸಿದ್ಧಾಂತಗಳನ್ನು ಪ್ರಚಾರಗೊಳಿಸಿರಿ. ಸ್ತೂಪಗಳು ಸದಾ ಶಾಂತಿ ಸೂಸುವ ಮಂದಿರಗಳಾಗಿರಲಿ ಎಂದು ಬುದ್ಧ ಹೇಳಿದಂತೆ ಸ್ತೂಪ ಅಥವಾ ಪಗೋಡಗಳು ಬೌದ್ಧ ಧಾರ್ಮಿಕ ಕೇಂದ್ರಗಳಾಗಿದ್ದು ಅವುಗಳನ್ನು ಬುದ್ದನ ಅವಶೇಷಗಳ ಮೇಲೆಯೇ ಕಟ್ಟಲಾಗಿರುತ್ತೆ. ವರ್ತುಳಾಕೃತಿಯ ಈ ಕಟ್ಟಡವನ್ನು ಸುಟ್ಟ ಇಟ್ಟಿಗೆಗಳಿಂದ ಕಟ್ಟಲಾಗಿದ್ದು ಇದಕ್ಕೆ ಬಾಗಿಲುಗಳು ಇಲ್ಲ. ಈ ಕಟ್ಟಡ ಮೊದಲೇ ಹೇಳಿದಂತೆ ಬುದ್ಧನ ಅವಶೇಷಗಳನ್ನು ಆವರಿಸಿದಂತೆ ಕಟ್ಟಿದ್ದು. ಹಾಗೆಂದು ತಾಮ್ರಪಟದಲ್ಲಿ ಉಲ್ಲೇಖವಿದೆ. ಇದರ ತಳದ ವ್ಯಾಸ ೪೭.೨೪ ಮೀಟರು ಇದ್ದು ಮೇಲ್ಮಟ್ಟದ ವ್ಯಾಸ ೩೪.೧೪ ಮೀಟರು ಇದೆ. ಇದರ ಮೇಲೆ ಬಹುಶಃ ಎರಡಕ್ಕಿಂತ ಹೆಚ್ಚು ಛಾವಣಿಗಳಿವೆ. ಹಿಂದೆ ಪಾಷಂಡಿಗಳ ಉಪಟಳದಿಂದ ಬೌದ್ಧಧರ್ಮ ತತ್ತರಿಸಿದಾಗ ಬುದ್ಧನ ಅವಶೇಷಗಳನ್ನು ಈ ಕಟ್ಟಡದಿಂದ ಹೊರ ತೆಗೆದು ಬೇರೆ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆಯಾದರೂ ಹಾಗೆ ಎಲ್ಲಿಗೆ ಕೊಂಡೊಯ್ಯಲಾಯಿತೆಂಬ ಸಂಗತಿ ಅತಿ ನಿಗೂಢವಾಗಿದೆ. ಕ್ರಿಸ್ತಶಕ ೧೨ನೇ ಶತಮಾನದವರೆಗೆ ಜೀವಂತಿಕೆಯಿಂದ ಅರಳಿದ್ದ ಕುಶಿನಗರವು ನಂತರ ಇತಿಹಾಸದಲ್ಲಿ ಕಮರಿಹೋಗಿತ್ತು. ಬ್ರಿಟಿಷ್ ಸರ್ವೇಕ್ಷಣ ಅಧಿಕಾರಿ ಕಾರ್ಲೆಲನು ಕುಶಿನಗರದ ಉತ್ಖನನವನ್ನು ಬಹು ಶ್ರದ್ಧೆಯಿಂದ ಮಾಡಿ ಮಣ್ಣಿನಲ್ಲಿ ಹೂತುಹೋಗಿದ್ದ ಈ ಮಹಾಸ್ತೂಪವನ್ನು ಹಾಗೂ ನಿರ್ವಾಣ ಮೂರ್ತಿಯನ್ನು ಬೆಳಕಿಗೆ ತಂದನು.
ಈ ೧೯೦೩ರಲ್ಲಿ ಬರ್ಮಾದಿಂದ ಚಂದ್ರಮಣಿ ಎಂಬ ಬೌದ್ಧ ಗುರುವು ಆಗಮಿಸಿ ಮಹಾಪರಿನಿರ್ವಾಣ ಮಂದಿರ ಸ್ಥಾಪಿಸಿ ಕುಶಿನಗರಕ್ಕೆ ಮರುರೂಪ ತಂದುಕೊಟ್ಟನು. ಇದೀಗ ಭಾರತದ ಪ್ರಾಚ್ಯ ವಸ್ತು ಇಲಾಖೆಯು ಈ ಪ್ರಾಚ್ಯ ಕಟ್ಟಡಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ.
ಕುಶಿನಗರದ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಪ್ರಾಚೀನ ಕುಶಾನರ ಕಾಲದ ಹಾಗೂ ಮಥುರೆಯಲ್ಲಿ ದೊರೆತ ಬುದ್ಧ ಸಂಸ್ಕೃತಿಯ ಕುರುಹುಗಳನ್ನು ಅಂದರೆ ಶಿರ, ಸ್ತೂಪ, ಸ್ತಂಭ, ಪ್ರತಿಮೆ ಮುಂತಾದ ಕಲ್ಲಿನ ಕೆತ್ತನೆಗಳನ್ನು ಸಂರಕ್ಷಿಸಿಡಲಾಗಿದೆ. ಮತ್ತೊಂದು ಅಂಕಣದಲ್ಲಿ ಜಪಾನ್‌ನ ಬುದ್ಧ ಧಾರ್ಮಿಕ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಇದೇ ಅಂಕಣದ ಮತ್ತೊಂದು ಪಾರ್ಶ್ವದಲ್ಲಿ ಆಸ್ಟ್ರೇಲಿಯಾದಲ್ಲಿ ಕಟ್ಟಲಾಗುತ್ತಿರುವ ವಿಶ್ವದ ಅತಿ ದೊಡ್ಡ ಬೌದ್ಧ ಸ್ತೂಪದ ಮಾದರಿ ಇದೆ. CHEN CHOR KHOR LING ಎಂಬ ಸ್ತೂಪವು ಟಿಬೆಟ್‌ನಲ್ಲಿರುವ GANTSE ಎಂಬ ೧೫ನೇ ಶತಮಾನದ ಸ್ತೂಪದ ಪಡಿಯಚ್ಛಾಗಿದ್ದು ದಕ್ಷಿಣ ಆಸ್ಟ್ರೇಲಿಯಾದ ಬೆಂಡಿಗೊ ಎಂಬಲ್ಲಿ ನಿರ್ಮಾಣವಾಗುತ್ತಲಿದೆ. ಇದೇ ಅಂಕಣದಲ್ಲಿ ಸ್ತೂಪ, ಧರ್ಮಚಕ್ರ, ಜಾತಕ, ಮುಂತಾದವುಗಳ ವಿವರಣೆಯಿದ್ದು ಕುಶಿನಗರದ ವಿವಿಧ ದೇಶಿಕ ಕಟ್ಟಡಗಳ ಚಿತ್ರ್ರಗಳೂ ಸ್ಥಳ ಪುರಾಣವೂ ಪ್ರದರ್ಶಿವಾಗಿದೆ. ಆ ಅಂಕಣದಿಂದ ಕೆಳಗಿಳಿದು ಹೋದಲ್ಲಿ ಮತ್ತೆ ಮಥುರಾ ಬೌದ್ಧ ಶಿಲ್ಪಗಳ ಸಂಗ್ರಹಾಲಯವಿದೆ.
ವಸ್ತು ಸಂಗ್ರಹಾಲಯದ ಹೊರಬಂದು ಆ ರಸ್ತೆಯಲ್ಲಿ ಮುಂದೆ ಸಾಗಿದರೆ ಬಲಬದಿಯಲ್ಲಿ ಜಪಾನ್-ಶ್ರೀಲಂಕಾ ಮೈತ್ರಿ ಸಂಸ್ಥೆಯ ಬುದ್ಧಮಂದಿರವೂ ಅಧ್ಯಯನ ಪೀಠವೂ ಇದೆ. ಈ ಮಂದಿರವು ಸುಟ್ಟ ಕೆಂಪನೆಯ ಇಟ್ಟಿಗೆಗಳ ಗುಮ್ಮಟಾಕೃತಿಯಲ್ಲಿದ್ದು ಗಿಲಾವು ಇಲ್ಲದೇ ಪ್ರಚ್ಛನ್ನವಾಗಿದೆ.
ಅದೇ ರಸ್ತೆಯಲ್ಲಿ ಎರಡು ಜಪಾನೀ ಶೈಲಿಯ ತಾರಾ ಹೋಟೆಲುಗಳನ್ನು ದಾಟಿ ಮುಂದೆ ಹೋದಲ್ಲಿ ಬಲಬದಿಯಲ್ಲೇ ಥೈಲ್ಯಾಂಡ್ ದೇಶದ ಮನಮೋಹಕ ಬುದ್ಧಮಂದಿರ ಇದೆ. Wat Thai Kushinara Chalermraj ಎಂಬ ಹೆಸರಿನ ಈ ಮಂದಿರಲ್ಲಿ ಸ್ವರ್ಣಲೇಪಿತ ಬುದ್ಧ ಪ್ರತಿಮೆ ವಿಶೇಷವಾಗಿ ಅಲಂಕೃತವಾದ ಪೀಠದ ಮೇಲಿದೆ. ಆ ಸಭಾಂಗಣವು ಪುಷ್ಪದಾನಿಗಳಿಂದಲೂ ಕಲಾಕುಸುರಿಯ ರತ್ನಗಂಬಳಿ ಹಾಗೂ ಕಲಾಮಯ ಆಸನಗಳಿಂದಲೂ ಸಜ್ಜುಗೊಂಡಿದ್ದು ಪ್ರಾರ್ಥನೆ ಮಾಡಲು ಯೋಗ್ಯ ವಾತಾವರಣ ಒದಗಿಸಿದೆ. ದೇವಾಲಯದ ಆವರಣದಲ್ಲಿ ಬೌದ್ಧ ಬಿಕ್ಷುಗಳ ಶಿಕ್ಷಣ ಮತ್ತು ಅಧ್ಯಯನ ಕೇಂದ್ರವಿದೆ. ಸ್ವರ್ಣಲೇಪಿತ ಸ್ತೂಪಗೋಪುರವೂ ಇದೆ.
ಇವು ಮಾತ್ರವಲ್ಲದೇ ಕುಶಿನಗರದಲ್ಲಿ ಟಿಬೆಟ್ ಶೈಲಿಯ, ಚೀನಾ ಶೈಲಿಯ, ಬರ್ಮಾ ಶೈಲಿಯ ಬುದೃಮಂದಿರಗಳೂ ಸ್ತೂಪಗಳೂ ಅತಿಥಿಗೃಹಗಳೂ ಇವೆ. ಬಂಗಾರ ಲೇಪಿತ ಗೋಪುರಗಳೂ ಸ್ತಂಭಗಳೂ ಕಮಾನುಗಳೂ ಚಾವಣಿಗಳೂ ಉಳ್ಳ ಬುದ್ಧ ಮಂದಿರಗಳು ಒಂದಕ್ಕಿಂತ ಒಂದು ಮಿಗಿಲಾಗಿ ನಿಂತು ಪ್ರವಾಸಿಗರ ಹಾಗೂ ಭಕ್ತರ ಕಣ್ತಣಿಸುತ್ತವೆ. ನಿಜ ಹೇಳಬೇಕೆಂದರೆ ಕುಶಿನಗರವು ವಿವಿಧತೆಯಲ್ಲಿ ಏಕತೆ ಬಿಂಬಿಸುವ ಪುಟ್ಟ ಊರಾಗಿದೆ.
ಸಿದ್ಧಾರ್ಥನು ಬುದ್ಧನಾಗುವ ಸಮಯದ ಸಂಕ್ರಮಣಕ್ಕೆ ವೇದಿಕೆಯಾದ ಅರಳಿಮರ ಇರುವುದು ಗೋರಖಪುರದಿಂದ ಆಗ್ನೇಯಕ್ಕಿರುವ ಗಯಾ ಎಂಬಲ್ಲಿ. ಅಲ್ಲಿಂದ ಬೋಧನೆಗೆ ತೆರಳಿದ ಬುದ್ಧ ತನ್ನ ಪ್ರಥಮ ಶಿಷ್ಯರಿಗೆ ಧರ್ಮಚಕ್ರ ಪ್ರವರ್ತನ ಸೂತವನ್ನ್ರು ಬೋಧಿಸಿ ದೀಕ್ಷೆ ನೀಡಿದ್ದು ಗೋರಖಪುರದಿಂದ ದಕ್ಷಿಣಕ್ಕಿರುವ ಸಾರನಾಥದಲ್ಲಿ. ಇದೇ ಸಾರನಾಥದ ದೀಕ್ಷಾ ಸ್ಥಳದಲ್ಲಿ ಮೂಲ ಬೋಧಿವೃಕ್ಷದ ಕೊಂಬೆಯನ್ನು ತಂದು ನೆಟ್ಟಿರುವರಲ್ಲದೆ ಅದೇ ಈಗ ದೊಡ್ಡ ವೃಕ್ಷವಾಗಿದೆ. ಆ ವೃಕ್ಷದ ನೆರಳಲ್ಲಿ ಬುದ್ಧನು ತನ್ನ ಪ್ರಥಮ ಶಿಷ್ಯರಿಗೆ ತ್ರಿಪಿಟಕ (ಬೌದ್ಧಸಂಹಿತೆ) ವನ್ನು ಆಗಿನ ಕಾಲದ ಜನ ಸಾಮಾನ್ಯರ ಲಿಪಿಭಾಷೆ ಪಾಳಿ ಯಲ್ಲಿ ಬೋಧಿಸಿದ್ದನ್ನು ಮೂರ್ತಿ ರೂಪದಲ್ಲಿ ಸ್ಥಾಪಿಸಲಾಗಿದೆ. ಪಕ್ಕದಲ್ಲೇ ಜಪಾನಿಯರು ಕಟ್ಟಿದ ದೀಕ್ಷಾಮಂದಿರವೂ (ಸ್ಥಳೀಯರ ಭಾಷೆಯಲ್ಲಿ ಜಪಾನ್ ಮಂದಿರ) ಶೋಭಾಯಮಾನವಾಗಿ ನಿಂತಿವೆ
ಇಂಡಿಯಾ ದೇಶವು ಹಲವು ಧರ್ಮಗಳ ತವರು. ಇರುವಷ್ಟು ದಿನವೂ ಸಾತ್ವಿಕ ಜೀವನ ನಡೆಸು, ಜೀವನದ ಅಂತ್ಯದಲ್ಲಿ ನಿನಗೆ ಸದ್ಗತಿ ಸಿಗುವುದು, ನೀನು ಪರಮಾತ್ಮನಲ್ಲಿ ಲೀನನಾಗುವೆ ಅಥವಾ ನೀನೇ ಪರಮಾತ್ಮನಾಗುವೆ ಇದು ಎಲ್ಲ ಭಾರತೀಯ ಧರ್ಮಗಳ ಸಾರಾಂಶ. ಹೀಗಾಗಿ ಇಂಡಿಯಾದ ಮುಖ್ಯವಾಹಿನಿ ಮೋಕ್ಷಮಾರ್ಗದತ್ತಲೇ ತುಡಿಯುತ್ತದೆ. ಆದರೆ ಬೌದ್ಧ ಧರ್ಮ ಇದಕ್ಕೆ ವ್ಯತಿರಿಕ್ತ ಸಂದೇಶ ನೀಡುತ್ತದೆ. ಕಾಣದ ಲೋಕದ ಬಗ್ಗೆ ಸಲ್ಲದ ನಿರೀಕ್ಷೆ ಇಟ್ಟುಕೊಳ್ಳಬೇಡ. ಸಾವೆಂಬುದು ಎಲ್ಲರಿಗೂ ಕಟ್ಟಿಟ್ಟ ಬುತ್ತಿ, ಯಾರೂ ಅದನ್ನು ಜಯಿಸಲಾಗದು, ಜೀವನವೆಂಬುದು ಒಂದು ವರ, ಇರುವಷ್ಟು ದಿನವೂ ಸಾರ್ಥಕವಾಗಿ ಬಾಳಬೇಕು, ಹಾಗೆಂದು ಆಸೆಯೆಂಬ ಪ್ರಲೋಭನೆಗೆ ಒಳಗಾಗಬಾರದು, ಆಸೆಯನ್ನು ತುಳಿದರೆ ದು:ಖ ಪರಿತಾಪಗಳನ್ನು ತುಳಿದಂತೆ ಎನ್ನುತ್ತದೆ ಬುದ್ಧವಾಣಿ. ಈ ಸಂದೇಶ ಜನಮಾನಸವನ್ನು ಗೆದ್ದು ಅತಿ ಶೀಘ್ರದಲ್ಲಿ ಎಲ್ಲೆಡೆ ವ್ಯಾಪಿಸಿತು. ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಮುಕ್ತಿಯೆಂಬ ಮಿಥ್ಯಾ ಆಸೆ ಯಾರಿಗೂ ಬೇಡ, ಎಲ್ಲರೂ ಸ್ವತಂತ್ರರು, ಬದುಕಬೇಕು, ಬದುಕಲು ಬಿಡಬೇಕು ಎಂಬ ವಾದ ಯಾರಿಗೆ ತಾನೇ ಚಂದವಾಗಿ ಕಾಣಲ್ಲ. ಅಶೋಕ ಸಾಮ್ರಾಟನಂಥವರಿಂದ ಇದು ರಾಜಧರ್ಮವಾಯಿತು. ಅದೇ ವೇಳೆಗೆ ಬ್ರಾಹ್ಮಿ ಲಿಪಿಯ ಉಗಮವೂ ಆಗಿ ವಿದ್ಯಾಕೇಂದ್ರಗಳೂ, ನಳಂದ ನಾಗಾರ್ಜುನಕೊಂಡ ವಿಶ್ವವಿದ್ಯಾಲಯಗಳೂ ತಲೆಯೆತ್ತಿದ್ದವು. ದೇಶ ವಿದೇಶಗಳಿಗೂ ಬೌದ್ಧ ಧರ್ಮ ವ್ಯಾಪಿಸಿ ಬೃಹತ್ತಾಗಿ ಬೆಳೆಯಿತು. ಆದರೆ ಜನ್ಮ ಜನ್ಮಾಂತರಗಳ ಕಂತೆ ಪುರಾಣ ಹೆಣೆದು ಸಮಾಜದ ಮೇಲೆ ಅಂಕಿತ ಹೊಂದಿದ್ದ ವೈದಿಕ ಧರ್ಮಕ್ಕೆ ಇದು ತೊಡಕಾಯಿತು. ಬೌದ್ಧ ಧರ್ಮದ ವಿರುದ್ಧ ಸನಾತನವಾದಿಗಳ ರುದ್ರತಾಂಡವ ನಡೆದು ಸ್ತೂಪಗಳು ಉರುಳಿದವು. ಬೌದ್ಧ ಧರ್ಮ ಸಂಹಿತೆಗಳು ಬೆಂಕಿಗಾಹುತಿಯಾದವು. ಬುದ್ಧಾನುಯಾಯಿಗಳು ದಿಕ್ಕಾಪಾಲಾಗಿ ಓಡಿಹೋದರು. ಕ್ರಮೇಣ ಅವರ ವಿದ್ಯಾಕೇಂದ್ರಗಳು ಅಜಂತಾ ಎಲ್ಲೋರ ಚಂದ್ರವಳ್ಳಿ ಮುಂತಾದ ಗುಹೆಗಳಲ್ಲಿ ಗುಟ್ಟಾಗಿ ಕ್ರಿಯಾಶೀಲವಾದವು.
ಆರ್ಷೇಯ ಭಾರತದ ಮುಕ್ತಿವಾದಕ್ಕಿಂತ ಭಿನ್ನವಾದ, ಮೋಕ್ಷ ನರಕಗಳನ್ನು ಅಲ್ಲಗಳೆದು ತನ್ನಲ್ಲೇ ದೈವವನ್ನು ಕಾಣಲೆಳಸಿದ ಬುದ್ಧ ಭಾರತದ ಸನಾತನವಾದಿಗಳಿಗೆ ಬೇಡವಾದರೂ ಪೌರ್ವಾತ್ಯ ರಾಷ್ಟ್ರಗಳಿಗೆ ಅಪ್ಯಾಯನಾದ. ಶ್ರೀಲಂಕಾ, ಥೈಲ್ಯಾಂಡ್, ಬರ್ಮಾ, ಚೀನಾ, ಜಪಾನ್ ದೇಶಗಳಲ್ಲಿ ಬೌದ್ಧ ಧರ್ಮ ವಿಶಾಲವಾಗಿ ಪ್ರವರ್ಧಿಸಿತು.