ಕೃಷಿ ತ್ಯಾಜ್ಯಗಳ ಸೂಕ್ತ ವಿಲೇವಾರಿ ಸಮಸ್ಯೆ

ಕೃಷಿ ತ್ಯಾಜ್ಯಗಳ ಸೂಕ್ತ ವಿಲೇವಾರಿ ಸಮಸ್ಯೆ

ಕಸ...ಕಸ...ಕಸ... ನಗರ ಪ್ರದೇಶಗಳಲ್ಲಿ ಕಸದ ವಿಲೇವಾರಿ ಒಂದು ದೊಡ್ಡ ಸಮಸ್ಯೆ. ಪ್ರತೀ ದಿನ ಉತ್ಪತ್ತಿಯಾಗುವ ನೂರಾರು ಟನ್ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದೇ ದೊಡ್ದ ಸಮಸ್ಯೆ. ಹಸಿ ತ್ಯಾಜ್ಯಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸಬಹುದಾದರೂ, ಪ್ಲಾಸ್ಟಿಕ್ ಹೊಂದಿರುವ ಒಣ ತ್ಯಾಜ್ಯಗಳ ನಿರ್ವಹಣೆಯೇ ಬಹಳ ದೊಡ್ದ ಸಮಸ್ಯೆ.  ಸಾಮಾನ್ಯವಾಗಿ ನಗರಗಳಲ್ಲಿ ಪ್ರತಿ ದಿನ ಕಸದ ಸಂಗ್ರಹಣೆಗಾಗಿ ಸಿಬ್ಬಂದಿಯನ್ನು ನೇಮಿಸಿರುತ್ತಾರೆ. ಹಾಗೇ ಸಂಗ್ರಹವಾದ ಕಸವನ್ನು ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಿ, ಸಂಸ್ಕರಿಸಿ ಗೊಬ್ಬರವನ್ನಾಗಿಸುತ್ತಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯದ ಅಥವಾ ಕಸದ ಸಂಗ್ರಹ, ವಿಲೇವಾರಿ, ಸಂಸ್ಕರಣೆ ಎಲ್ಲವೂ ವೈಯಕ್ತಿಕ ಆಸಕ್ತಿ ಮತ್ತು ಸ್ವಯಂಪ್ರೇರಿತವಾಗಿದ್ದು ಕುಟುಂಬದ ಸದಸ್ಯರೇ ತಮ್ಮ ಸುತ್ತಮುತ್ತಲಿನ ಜಾಗಗಳ ಸ್ವಚ್ಛತೆಯನ್ನು ಕಾಪಾಡಬೇಕಾಗುತ್ತದೆ.

`ತ್ಯಾಜ್ಯ’ ಎಂದೊಡನೆ ಸಹಜವಾಗಿ ನೆನಪಿಗೆ ಬರುವುದು ನಗರ ಮತ್ತು ಕೈಗಾರಿಕಾ ತ್ಯಾಜ್ಯಗಳು. ಈ ತ್ಯಾಜ್ಯಗಳು ಘನ, ದ್ರವ ಮತ್ತು ಅನಿಲದ ರೂಪದಲ್ಲಿ ಉತ್ಪತ್ತಿಯಾಗಿ ಮಣ್ಣು ಮತ್ತು ನೀರಿನಲ್ಲಿ ಬೆರೆಯುತ್ತವೆ. ಇದರಿಂದಾಗಿ ಮಲಿನಗೊಂಡ ಮಣ್ಣು ಮತ್ತು ನೀರು ಮಾನವನ  ಬಳಕೆಗೆ ಬಾರದಂತಾಗುತ್ತಿರುವುದಲ್ಲದೇ ಬೆಳೆಯ ನಾಶ, ರೋಗರುಜಿನಗಳ ಪ್ರಸಾರಕ್ಕೆ ಕಾರಣವಾಗುತ್ತಿದೆ. ತ್ಯಾಜ್ಯಗಳನ್ನು ನಗರ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ಮತ್ತು ಕೃಷಿ ತ್ಯಾಜ್ಯ ಎಂದು ವಿಂಗಡಿಸಬಹುದು. ನಗರ ಮತ್ತು ಕೈಗಾರಿಕಾ ತ್ಯಾಜ್ಯಗಳನ್ನು ಘನರೂಪದ ತ್ಯಾಜ್ಯ ಮತ್ತು ದ್ರವರೂಪದ ತ್ಯಾಜ್ಯ ಎಂದು ಬೇರ್ಪಡಿಸಬಹುದಾಗಿದೆ. ಘನರೂಪದ ತ್ಯಾಜ್ಯಗಳ ಗುಂಪಿಗೆ ಗಾರ್ಬೇಜ್ (ಪಟ್ಟಣ ಪ್ರದೇಶದ ವಿವಿಧ ಬಗೆಯ ತ್ಯಾಜ್ಯ), ಚರಂಡಿ ಸ್ಲಡ್ಜ್ (ಚರಂಡಿಯಲ್ಲಿಯ ಘನರೂಪದ ತ್ಯಾಜ್ಯ), ಕೈಗಾರಿಕಾ ಸ್ಲಡ್ಜ್ ಮತ್ತು ಗಣಿಗಾರಿಕೆ ತ್ಯಾಜ್ಯಗಳು ಸೇರಿಸಲ್ಪಡುತ್ತವೆ. ಸೀವೇಜ್ ನೀರು (ಚರಂಡಿ ನೀರು) ಮತ್ತು ಕೈಗಾರಿಕಾ ಎಫ್ಲುಯೆಂಟ್ ಗಳು ದ್ರವರೂಪದ ತ್ಯಾಜ್ಯಗಳಾಗಿವೆ.

ಈ ಎಲ್ಲಾ ಘನ ತ್ಯಾಜ್ಯ, ದ್ರವರೂಪದ ಪದಾರ್ಥಗಳು, ಅನಿಲ ರೂಪದ ವ್ಯರ್ಥ ವಿಷ ಕಸ ಅಥವಾ ರೇಡಿಯೋ ಆಕ್ಟಿವ್ ಹೊರಸೂಸುವ ವಸ್ತುಗಳ ನಿರ್ವಹಣೆಯು ತ್ಯಾಜ್ಯ ನಿರ್ವಹಣೆ ಎನಿಸಿಕೊಳ್ಳುತ್ತದೆ. ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯು ಪ್ರಗತಿ ಹೊಂದಿದ ಮತ್ತು ಪ್ರಗತಿ ಹೊಂದುತ್ತಿರುವ ದೇಶ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ಜನವಸತಿ ಮತ್ತು ಕೈಗಾರಿಕಾ ಉತ್ಪಾದನಾ ಪ್ರದೇಶಗಳಲ್ಲಿ ವಿಭಿನ್ನವಾಗಿರುತ್ತದೆ. ತ್ಯಾಜ್ಯದ ಪ್ರಮಾಣದ ಆಧಾರದ ಮೇಲೆ ನಗರಪಾಲಿಕೆಗಳ ಘನ ತ್ಯಾಜ್ಯದ ನಂತರದ ಸ್ಥಾನ ಕೃಷಿ ತ್ಯಾಜ್ಯಕ್ಕಿದೆ. ನಂತರದ ಸ್ಥಾನವನ್ನು ಬಯೋಮೆಡಿಕಲ್, ಕೈಗಾರಿಕಾ  ಹಾಗೂ ‘ಇ’ ತ್ಯಾಜ್ಯಗಳು ಅಲಂಕರಿಸುತ್ತವೆ. ಜಾಗತಿಕ ಮಟ್ಟದಲ್ಲಿ ಪ್ರತಿ ವರ್ಷ ೧೪೦ ಬಿಲಿಯನ್ ಮೆಟ್ರಿಕ್ ಟನ್ ನಷ್ಟು ಕೃಷಿ ತ್ಯಾಜ್ಯದ ಉತ್ಪಾದನೆಯಾಗುತ್ತದೆ. ಭಾರತ ದೇಶದಲ್ಲಿ ಇದರ ಪ್ರಮಾಣ ಸುಮಾರು ೩೫೦ ಮಿ ಟನ್.

ಕೃಷಿಯಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎರಡು ವಿಧಗಳಲ್ಲಿ ವಿಂಗಡಿಸಬಹುದು. ಮೊದಲನೆಯದಾಗಿ ಅವುಗಳ ಬಳಕೆಯನ್ನಾಧರಿಸಿದ ವಿಂಗಡಣೆ. ಇದರಲ್ಲಿ ಕೃಷಿ ತ್ಯಾಜ್ಯವನ್ನು ಮರುಬಳಕೆಗೆ ಬರುವಂತಹ ತ್ಯಾಜ್ಯವೆಂದೂ ಬಳಕೆಗೆ ಬಾರದ ಅಪಾಯಕಾರಿ ತ್ಯಾಜ್ಯವೆಂದು ಎರಡು ವರ್ಗಗಳನ್ನಾಗಿ ಮಾಡಬಹುದು. ಮರುಬಳಸುವಂತಹ ತ್ಯಾಜ್ಯಗಳೆಂದರೆ ಹುಲ್ಲು, ಹೊಟ್ಟು, ಹಾಳಾದ ಹಣ್ಣು ತರಕಾರಿ, ಭತ್ತದ ಹೊಟ್ಟಿನ ಬೂದಿ, ಕಬ್ಬಿನ ತರಗು, ತೆಂಗಿನ ನಾರು,  ಗಂಜಲ, ಸಗಣಿ ಇತರೆ, ಬಳಕೆಗೆ ಬಾರದ ತ್ಯಾಜ್ಯಗಳು ಮಣ್ಣು ಮತ್ತು ನೀರನ್ನು ಮಲಿನಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಹೊದಿಕೆಗೆ ಬಳಸಿದ ಪ್ಲಾಸ್ಟಿಕ್, ಡ್ರಿಪ್ ಲೈನ್ ಗಳು, ಖಾಲಿಯಾದ ಔಷಧಿ ಅಥವಾ ರಾಸಾಯನಿಕಗಳ ಡಬ್ಬಿಗಳು, ಮಷಿನ್ ಗಳಿಗೆ ಬಳಸುವ ಎಣ್ಣೆ, ಟೈರ್, ಪಶುಪಾಲನೆಯಲ್ಲಿ ಬಳಸಲ್ಪಡುವ ಸಿರಿಂಜ್, ಲಸಿಕೆಯ ಡಬ್ಬಿಗಳು.

ಮತ್ತೊಂದು ಬಗೆಯ ವಿಂಗಡಣೆಯಲ್ಲಿ ಕೃಷಿ ತ್ಯಾಜ್ಯವನ್ನು ಕ್ಷೇತ್ರ ಮಟ್ಟದಲ್ಲಿ, ಸಂಸ್ಕರಣೆ ಹಂತದಲ್ಲಿ ಹಾಗೂ ಮಾರುಕಟ್ಟೆ ಹಂತದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಎಂದು ವರ್ಗೀಕರಿಸಬಹುದು. ಕ್ಷೇತ್ರ ಮಟ್ಟದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳಲ್ಲಿ ರಾಗಿ, ಭತ್ತ, ಜೋಳ, ಮೆಕ್ಕೆ ಜೋಳದ ಬೆಳೆಗಳ ಕೂಳೆ, ಒಣಗಿದ ಗರಿ, ಕಬ್ಬಿನ ತರಗು, ತೆಂಗಿನ ಮಟ್ಟೆ ಅಥವಾ ಹೆಡೆ, ಕತ್ತರಿಸಿದ ರೆಂಬೆ ಟೊಂಗೆಗಳನ್ನು ಗುರುತಿಸಬಹುದು. ಹಾಗೆಯೇ ಸಸ್ಯ ಸಂರಕ್ಷಣೆಗೆ ಬಳಸುವ ಕಳೆನಾಶಕ, ಶಿಲೀಂಧ್ರ ನಾಶಕಗಳ ಖಾಲಿಯಾದ ಡಬ್ಬಿಗಳು, ಕ್ಯಾನ್ ಗಳು, ಪ್ರೊಟ್ರೇಗಳು, ಡ್ರಿಪ್ ಲೈನ್ ಗಳು, ಹೊದಿಕೆಗೆ ಬಳಸುವ, ಸೋಲಾರೈಜೇಷನ್ ಗೆ ಬಳಸುವ ಪ್ಲಾಸ್ಟಿಕ್ ಹಾಳೆ ಇವು ಕೂಡ ಕ್ಷೇತ್ರ ಮಟ್ಟದಲ್ಲಿ ಉತ್ಪತ್ತಿಯಾಗುವ ಕೃಷಿ ತ್ಯಾಜ್ಯಗಳು.

ಸಂಸ್ಕರಣೆ ಹಂತದಲ್ಲಿ ದೊರೆಯುವ ಭತ್ತದ ಹೊಟ್ಟು, ಭತ್ತದ ಹೊಟ್ಟಿನ ಬೂದಿ ತೆಂಗಿನ ನಾರಿನ ಹುಡಿ, ಅಡಿಕೆ ಸಿಪ್ಪೆ, ಸಕ್ಕರೆ ಕರ‍್ಖಾನೆ ಅಥವಾ ಆಲೆಮನೆಯಲ್ಲಿ ದೊರೆಯುವ  ಕಬ್ಬಿನ ತ್ಯಾಜ್ಯ, ಜ್ಯೂಸ್, ಜಾಮ್, ಜೆಲ್ಲಿ ಹಾಗೂ ಕೆಚಪ್ ಗಳ ತಯಾರಿಕೆಯಲ್ಲಿ ಒದಗುವ ತರಕಾರಿ ಹಾಗೂ ಹಣ್ಣುಗಳ ತ್ಯಾಜ್ಯಗಳೆಲ್ಲವೂ ಕೃಷಿಗೆ ಪುನಃ ಗೊಬ್ಬರದ ರೂಪದಲ್ಲಿ ಕೊಡಬಹುದಾದ ತ್ಯಾಜ್ಯಗಳು ರ‍್ಸರಿಗಳಲ್ಲಿ ಸಸಿಗಳನ್ನು ಬೆಳೆಸಲು ತೆಂಗಿನ ನಾರಿನ ಹುಡಿಯ ಕೋಕೊಪೀಟ್ ನ್ನು ಬಳಸಲಾಗುತ್ತದೆ. ಇದರಿಂದ ನೀರನ್ನು ಹಿಡಿದಿಡಬಹುದಾಗಿದೆ.

ಮಾರುಕಟ್ಟೆ ಹಂತದಲ್ಲಿ ದೊರೆಯುವ ಮುಖ್ಯವಾದ ಕೃಷಿ ತ್ಯಾಜ್ಯಗಳು, ಬಾಡಿದ ತರಕಾರಿ, ಹಣ್ಣು, ಹೂವು, ಸೀಳಿದ ಅಥವಾ ಒಡೆದ ಹಣ್ಣು ಕಾಯಿ, ಕೊಳೆತ ಹಣ್ಣು ಇತರೆ. ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಾದ ಪಶುಸಂಗೋಪನೆ, ತೋಟಗಾರಿಕೆಯಿಂದ ಬರುವ ತ್ಯಾಜ್ಯಗಳಲ್ಲಿ ಶೇ.೭೮ ಕೊಳೆಯುವ ತ್ಯಾಜ್ಯವಾಗಿರುತ್ತದೆ. ಉಳಿದಂತೆ ಶೇ.೧೨ ರಿಂದ ೧೫ ರಷ್ಟು (ಗಾಜು, ಲೋಹ, ಕಾಗದ, ಪ್ಲಾಸ್ಟಿಕ್) ಮರುಬಳಕೆಗೆ ಆಯ್ದುಕೊಳ್ಳಬಹುದಾದ ತ್ಯಾಜ್ಯಗಳಾಗಿರುತ್ತವೆ. ಪ್ರತಿ ೧೦೦ ಕೆಜಿ ಕೊಳೆಯುವ ತ್ಯಾಜ್ಯದಿಂದ ೪೦ ರಿಂದ ೫೦ ಕೆಜಿ ಗೊಬ್ಬರ ಪಡೆಯಬಹುದು. ಒಂದು ವರದಿಯಲ್ಲಿ ಸೂಚಿಸಿರುವಂತೆ ಭಾರತ ದೇಶದಲ್ಲಿರುವ ಜಾನುವಾರುಗಳಿಂದ ಬರುವ ಗಂಜಲ ಮತ್ತು ಗೊಬ್ಬರ ಸುಮಾರು ೧೭.೫ ಮಿಲಿಯನ್ ಟನ್ ಯೂರಿಯಾ ಗೊಬ್ಬರಕ್ಕೆ ಸಮನಾಗಿರುತ್ತದೆ. ಜಾನುವಾರುಗಳ ಮೃತದೇಹಗಳನ್ನು ಎಲ್ಲೆಂದರಲ್ಲಿ ಹಾಕುವುದರಿಂದ ರೋಗರುಜಿನಗಳು ಹರಡುತ್ತವೆ. ಬದಲಿಗೆ ಸರಿಯಾದ ರೀತಿಯಲ್ಲಿ ವಿಂಗಡಣೆ ಮಾಡಿ ಹೂತು ಹಾಕುವುದರಿಂದ ಗೊಬ್ಬರ ಉತ್ಪತ್ತಿಯಾಗುತ್ತದೆ ಹಾಗೂ ಕೊಳೆತು ಗೊಬ್ಬರವಾಗುವ ಕ್ರಿಯೆಯಲ್ಲಿ ಉಂಟಾಗುವ ಉಷ್ಣತೆಯಿಂದ ರೋಗಕಾರಕ ರೋಗಾಣುಗಳು ಹಾಗೂ ಕೀಟಾಣುಗಳು ಸಾಯುತ್ತವೆ. ಇದರಿಂದಾಗಿ ಪರಿಸರಕ್ಕೆ ಧಕ್ಕೆಯಾಗುವುದಿಲ್ಲ.

ತ್ಯಾಜ್ಯ ನಿರ್ವಹಣೆಯ ಮೂಲತತ್ವ ಕಡಿಮೆ ಬಳಸು(Reduce), ಪುನಃ ಬಳಸು (Reuse) ಹಾಗೂ ಮರುಬಳಸು (Recycle) ಎಂಬುದಾಗಿದೆ. ವರದಿಗಳಲ್ಲಿ ಕಂಡುಬರುವಂತೆ ತ್ಯಾಜ್ಯಗಳು ಕಳಿಯಲು ಕೆಲವು ವಾರಗಳಿಂದ ಹಲವಾರು ವರ್ಷಗಳೇ ಬೇಕಾಗುತ್ತವೆ. ಬಾಳೆಹಣ್ಣಿನ ಸಿಪ್ಪೆ ಕಳಿಯಲು ೩ರಿಂದ ೪ ವಾರಗಳಾದರೆ, ಕಿತ್ತಳೆ ಹಣ್ಣಿನ ಸಿಪ್ಪೆ ಕಳಿಯಲು ೬ ತಿಂಗಳುಗಳೇ ಬೇಕಾಗುತ್ತದೆ. ಇನ್ನು, ಪ್ಲಾಸ್ಟಿಕ್ ಡಬ್ಬಿಗಳು ಮತ್ತು ಸ್ಟೀಲ್ ಟಿನ್ ಗಳು ೫೦-೮೦ ವರ್ಷಗಳಲ್ಲಿ, ಅಲ್ಯುಮಿನಿಯಂ ಕ್ಯಾನ್ ಗಳು ೨೦೦-೫೦೦ ವರ್ಷಗಳಲ್ಲಿ ಹಾಗೂ ಪ್ಲಾಸ್ಟಿಕ್ ಚೀಲಗಳು ಸುಮಾರು ೨೦೦-೧೦೦೦ ವರ್ಷಗಳಲ್ಲಿ ಕೊಳೆಯುತ್ತವೆ ಎಂದು ಅಂದಾಜಿಸಲಾಗಿದೆ. ಇಂತಹ ಪರಿಸ್ಥಿತಿಗಳಲ್ಲಿ ಕಡಿಮೆ ಬಳಸುವ ಮಾರ್ಗರ್ಗ ಬಹುಪ್ರಯೋಜನಕಾರಿ. ತ್ಯಾಜ್ಯಗಳ ಉತ್ಪತ್ತಿ ಕಡಿಮೆ ಮಾಡಲು ಮುಖ್ಯವಾಗಿ ಅವಶ್ಯಕತೆಯಿರುಷ್ಟು ಸಾಮಗ್ರಿಗಳನ್ನು ಮಾತ್ರ ಖರೀದಿಸುವುದು, ಹೆಚ್ಚು ಅನವಶ್ಯಕ ಸಾಮಗ್ರಿಗಳನ್ನು ಹಾಗೂ ಪರಿಕರಗಳನ್ನು ಸಂಗ್ರಹಿಸಿಡದಿರುವುದು, ಹೆಚ್ಚಾದ ಅಥವಾ ಬೇಡವಾದ ಔಷಧಿ ಅಥವಾ ರಾಸಾಯನಿಕಗಳನ್ನು ಬೇಕಿರುವವರೊಡನೆ ಹಂಚಿಕೊಳ್ಳುವುದು, ಸರಿಯಾದ ಔಷಧಿ ಅಥವಾ ರಾಸಾಯನಿಕಗಳನ್ನು ಸರಿಯಾದ ರೀತಿ ಬಳಸಲು ಲೇಬಲ್ ಬರೆದು ಇಡುವುದು. ಇದರಿಂದಾಗಿ, ವೆಚ್ಚ  ನಿಯಮಿತವಾಗಿರುತ್ತದೆ, ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷತೆ ಇರುತ್ತದೆ ಹಾಗೂ ಪ್ರಕೃತಿಗೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ. ಮಾರುಕಟ್ಟೆ ಹಂತದಲ್ಲಿ ದೊರೆಯುವ ತ್ಯಾಜ್ಯಗಳನ್ನು ಸಂಘ ಸಂಸ್ಥೆಗಳ ವತಿಯಿಂದ, ಸಹಕಾರಿ ಮಾದರಿಯಲ್ಲಿ ಮಾರುಕಟ್ಟೆಯ ಬಳಿಯಲ್ಲಿಯೇ ಅಥವಾ ಮಾರುಕಟ್ಟೆಯಿಂದ  ಸಂಗ್ರಹಿಸಿಕೊಂಡು ಸಮೀಪದಲ್ಲಿರುವ ಬೇರೆ ಜಾಗಗಳಲ್ಲಿ ಕಾಂಪೋಸ್ಟ್ ಅಥವಾ ಎರೆಗೊಬ್ಬರ ತಯಾರಿಸಬಹುದು. ಬಯೋಡೈಜೆಸ್ಟರ್ ಗಳ ನಿರ್ಮಾಣಕ್ಕೆ  ಪ್ರೋತ್ಸಾಹವಿರುವುದರಿಂದ ಬಯೋಡೈಜೆಸ್ಟರ್ ಗಳ ಮೂಲಕ ತ್ಯಾಜ್ಯ ನಿರ್ವಹಿಸಬಹುದು. ಪಶುಗಳಿಗೆ ತಿನ್ನಿಸಲು ಯೋಗ್ಯವೆನಿಸುವಂತಹ ತ್ಯಾಜ್ಯವನ್ನು ಪಶು ಆಹಾರವಾಗಿ ನೀಡಬಹುದು. ಮೊಲ ಸಾಕಾಣಿಕೆಯಲ್ಲಿ ತರಕಾರಿ ಮತ್ತು ಹಣ್ಣುಗಳ ತ್ಯಾಜ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ತರಕಾರಿ, ಹೂ, ಹಣ್ಣುಗಳ ಸಾರ ಅಥವಾ ಸತ್ವವನ್ನು ಬಳಸಿಕೊಂಡು ದ್ರವ ರೂಪದ ಗೊಬ್ಬರ ತಯಾರಿಸಿ ಸಿಂಪಡಿಸುವುದು ಸಾಧ್ಯ.

ಕೃಷಿ ತ್ಯಾಜ್ಯಗಳು ಹಲವಾರು ಬಗೆಗಳಿದ್ದು ಅವುಗಳಲ್ಲಿ ಅತೀ ಕಡಿಮೆ ಸಮಯದಲ್ಲಿ ಕಳಿಯುವ ತ್ಯಾಜ್ಯಗಳಿಂದ ಕಳಿಯಲು ವರ್ಷಗಳೇ ಬೇಕಾಗಬಹುದಾದ ತ್ಯಾಜ್ಯಗಳೂ ಸೇರಿವೆ. ಕಳಿತು ಗೊಬ್ಬರವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವ ಅಡಿಕೆ ಸಿಪ್ಪೆಯಂತಹ ತ್ಯಾಜ್ಯಗಳನ್ನು ಕಳಿಸಿ ಗೊಬ್ಬರವನ್ನಾಗಿಸಲು ಸೂಕ್ಷ್ಮ ಜೀವಿಗಳ ಮಿಶ್ರಣಗಳನ್ನು ಸಂಶೋಧಿಸಲಾಗಿದೆ. ಕೃಷಿ ತ್ಯಾಜ್ಯಗಳ ಸಂಗ್ರಹ ವಿಲೇವಾರಿ ಮತ್ತು ಸಂಸ್ಕರಣೆಯನ್ನು ಆಸಕ್ತಿಯಿಂದ ಮಾಡಿ ಸ್ವಚ್ಛತೆಯನ್ನು ಕಾಪಾಡುವುದರಿಂದ ಬೆಳೆಗಳ, ಜಾನುವಾರುಗಳ ಮತ್ತು ಜನರ ಆರೋಗ್ಯ ಉತ್ತಮವಾಗಿರುವುದಲ್ಲದೇ ಪ್ರಕೃತಿಯಲ್ಲಿನ ಮಣ್ಣು, ನೀರು ಮತ್ತು ಗಾಳಿ ಮಲಿನಗೊಳ್ಳುವುದಿಲ್ಲ.

ಮಾಹಿತಿ ಕೃಪೆ : ಡಾ. ಟಿ.ಎಂ.ಸೌಮ್ಯ, ಶಿವಮೊಗ್ಗ

ಚಿತ್ರ ಕೃಪೆ: ಅಂತರ್ಜಾಲ ತಾಣ