ಕೆಟ್ಟ ಮನುಷ್ಯ (ಕಥೆ)

ಕೆಟ್ಟ ಮನುಷ್ಯ (ಕಥೆ)

 

  ಅಂದಿನ ಬೆಳಗಿನ ಮನೆಗೆಲಸಗಳನ್ನೆಲ್ಲಾ ಮುಗಿಸಿ ಟೀವಿ ನೋಡಿಕೊಂಡು ತಿಂಡಿ ತಿನ್ನುತ್ತಾ ಸೋಫಾದ ಮೇಲೆ ಕುಳಿತಿದ್ದ ಗಿರಿಜಮ್ಮನವರ ಮನಸ್ಸಿನಲ್ಲಿ ಟೀವಿಯಲ್ಲಿ ಬರುತ್ತಿದ್ದ ಯಾರೋ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಅತ್ಯಾಚಾರದ ವಿಸ್ತøತ ವರದಿ ಮತ್ತು ದೃಶ್ಯಗಳನ್ನು ವೀಕ್ಷಿಸಿ ‘ಎಂತಾ ಕಾಲ ಬಂದೋಯಿತಲ್ಲ.. ಹೀಗೇ ಮುಂದುವರಿದರೆ ಹೆಣ್ಣುಮಕ್ಕಳ ಗತಿಯೇನು’ ಎಂಬ ಆತಂಕ ಮೂಡಿತು. ಇಂತಹ ಅಮಾನುಷ ಕೃತ್ಯವನ್ನೆಸಗುವ ನೀಚರನ್ನು ಒಂದಿಷ್ಟೂ ಕರುಣೆ ತೋರದೆ ಗಲ್ಲಿಗೇರಿಸಬೇಕು ಎಂದುಕೊಂಡು ಹಿಡಿಶಾಪ ಹಾಕಿದರು. ತಕ್ಷಣವೇ ಕಾಲೇಜಿಗೆ ತೆರಳಿದ್ದ ತಮ್ಮ ಮಗಳು ಜಾಹ್ನವಿಯ ನೆನಪಾಯಿತು

                        * * * * * *

     ಗಿರಿಜಮ್ಮ ಶಂಕರಪ್ಪ ದಂಪತಿಗಳಿಗೆ ಇಬ್ಬರು ಮಕ್ಕಳು. ಮಗ ಪ್ರಶಾಂತ ಎಂಜನಿಯರಿಂಗ್ ಮುಗಿಸಿ ಎರಡು ವರ್ಷಗಳಿಂದ ದೂರದ ಪೂನಾದಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಗಳು ಜಾಹ್ನವಿ ಇದೀಗ ಹೈಸ್ಕೂಲಿನ ವಿದ್ಯಾಭ್ಯಾಸ ಮುಗಿಸಿ ನಗರದ ಹೆಸರಾಂತ ಕಾಲೇಜಿನಲ್ಲಿ ಮೊದಲ ವರ್ಷದ ಪಿಯೂಸಿ ಓದುತ್ತಿದ್ದಳು. ಶಂಕರಪ್ಪನವರು ಖಾಸಗಿ ಕಾರ್ಖಾನೆಯೊಂದರಲ್ಲಿ ಸೂಪರವೈಸರಾಗಿ ಕೆಲಸ ಮಾಡುತ್ತಿದ್ದರು. ಅವರು ಬೆಳಿಗ್ಗೆ ಏಳು ಗಂಟೆಗೆ ಮನೆ ಬಿಟ್ಟರೆ ಮತ್ತೆ ವಾಪಸಾಗುತ್ತಿದ್ದುದು ಸಂಜೆ ಏಳು ಗಂಟೆಯ ನಂತರವೇ. ಮನೆಯ ಜವಾಬ್ದಾರಿಯೆಲ್ಲಾ ಗಿರಿಜಮ್ಮನವರ ಮೇಲಿತ್ತು.  ಖಾಸಗಿ ಕಾರ್ಖಾನೆಯಲ್ಲಿ ಸಮಯದ ಪರಿವೇ ಇಲ್ಲದಂತೆ ದುಡಿಯುತ್ತಿದ್ದ ಪತಿಗೆ ಸ್ವಲ್ಪವೂ ಸಂಸಾರದ ಹೊರೆಯನ್ನು ನೀಡದೆ ಖರ್ಚುವೆಚ್ಚಗಳನ್ನೆಲ್ಲಾ ಸರಿದೂಗಿಸಿಕೊಂಡು ಕೊಂಚವೂ ಏರುಪೇರಾಗದಂತೆ ಗಿರಿಜಮ್ಮನವರು ನೋಡಿಕೊಳ್ಳುತ್ತಿದ್ದರು. ಇದೀಗ ಒಂದು ವರ್ಷದ ಕೆಳಗೆ ನಗರದಿಂದ ದೂರವಿದ್ದ ಹೊಸಬಡಾವಣೆಯಲ್ಲಿ ಯಾವಾಗಲೋ ಖರೀದಿಸಿದ್ದ ನಿವೇಶನದಲ್ಲಿ ಎರಡು ಕೊಠಡಿಯ ಮನೆಯನ್ನು ಕಟ್ಟಿಸಿಕೊಳ್ಳುವುದರ ಮೂಲಕ ತಲೆಯ ಮೇಲೊಂದು ಸೂರು ನಿರ್ಮಿಸಿಕೊಳ್ಳಬೇಕೆಂದಿದ್ದ ತಮ್ಮ ಬಹುದಿನದ ಕನಸನ್ನು ನನಸಾಗಿಸಿಕೊಂಡಿದ್ದರು.

   ಅವರ ಮನೆಯಿದ್ದ ಹೊಸಬಡಾವಣೆ ನಗರ ಪ್ರದೇಶದಿಂದ ಏಳೆಂಟು ಕಿಲೋಮೀಟರುಗಳ ದೂರದಲ್ಲಿತ್ತು. ಇದೀಗ ತಾನೆ ಅಲ್ಲೊಂದು ಇಲ್ಲೊಂದು ಮನೆಗಳು ತಲೆ ಎತ್ತುತ್ತಿದ್ದವು. ನಗರದ ರಿಂಗ್ ರಸ್ತೆಗೆ ಹೊಂದಿಕೊಂಡಿದ್ದ ಬಡಾವಣೆಗೆ ನಗರ ಸಂಚಾರಿ ಬಸ್ಸುಗಳು ನಿಗದಿತ ಸಮಯಕ್ಕೆ ಬಂದು ಹೋಗುತ್ತಿದ್ದವು. ರಿಂಗ್ ರಸ್ತೆಯಲ್ಲಿ ಬಸ್ ಇಳಿದು ಸುಮಾರು ಅರ್ಧ ಕಿಲೋಮೀಟರಿನಷ್ಟು ದೂರ ನಡೆದು ಗಿರಿಜಮ್ಮನವರ ಮನೆ ತಲುಪಬೇಕಿತ್ತು. ಜಾಹ್ನವಿ ಪ್ರತಿದಿನ ಬೆಳಿಗ್ಗೆ ಎಂಟುಗಂಟೆಗೆ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗಿ ಬಸ್ಸು ಹಿಡಿದು ಮಧ್ಯಾಹ್ನ ಕಾಲೇಜು ಮುಗಿದ ಮೇಲೆ ಮೂರುಗಂಟೆಗೆ ಬರುತ್ತಿದ್ದ ಬಸ್ಸಿನಲ್ಲಿ ವಾಪಸಾಗುತ್ತಿದ್ದಳು. ಪ್ರಯೋಗಾಲಯದ ತರಗತಿಗಳು ಇದ್ದ ದಿನ ಆಕೆ ಮನೆಗೆ ಬರುವುದು ಸಂಜೆ ಆರು ಗಂಟೆಯಾಗುತ್ತಿತ್ತು. ಹೊಸ ಬಡಾವಣೆ ಸದಾ ಕಾಲ ನಿರ್ಜನವಾಗಿರುತ್ತಿದ್ದುದರಿಂದ ಗಿರಿಜಮ್ಮನವರೇ ಮಗಳ ಜೊತೆಯಲ್ಲಿ ಬಸ್ ನಿಲ್ದಾಣಕ್ಕೆ ನಡೆದು ಬಸ್ಸು ಹತ್ತಿಸಿ ಬರುತ್ತಿದ್ದರು. ಮತ್ತೆ ಅವಳು ವಾಪಾಸು ಬರುವ ಸಮಯಕ್ಕೆ ರಸ್ತೆಯ ಬಳಿ ಹೋಗಿ ನಿಂತು ಕಾಯ್ದುಕೊಂಡಿದ್ದು ಜೊತೆಯಲ್ಲಿ ಕರೆದುಕೊಂಡು ಬರುತ್ತಿದ್ದರು.

   ರಿಂಗ್ ರಸ್ತೆಯಲ್ಲಿ ಹೊಸದೊಂದು ಆಸ್ಪತ್ರೆ ಪ್ರಾರಂಭವಾಗಿ ಜನ ಮತ್ತು ವಾಹನಗಳ ಓಡಾಟ ಹೆಚ್ಚಾಯಿತು. ಹೇಗೋ ಇನ್ನೊಂದೆರಡು ವರ್ಷ ಕಳೆದರೆ ಇಡೀ ಬಡಾವಣೆಯಲ್ಲಿ ಪೂರ್ತಿ ಮನೆಗಳಾಗಿ ಜನಸಂಚಾರ ಹೆಚ್ಚಿದ ಮೇಲೆ ಯಾವ ಭಯವೂ ಇಲ್ಲದೆ ವಾಸ ಮಾಡಬಹುದು ಎನ್ನಿಸಿ ಗಿರಿಜಮ್ಮನವರಿಗೆ ತುಸು ನಿರಾಳವಾಗಿತ್ತು. ಆದರೆ ಆಸ್ಪತ್ರೆ ಪ್ರಾರಂಭವಾದ ಮೇಲೆ ಅವರಿಗೆ ಹೊಸ ಸಮಸ್ಯೆಯೊಂದು ಶುರುವಾಗಿತ್ತು. ಬಸ್ ನಿಲ್ದಾಣದ ಸಮೀಪವಿದ್ದ ಮರವೊಂದರ ಕೆಳಗೆ ಎಳನೀರು ಮಾರುವವನೊಬ್ಬ ತನ್ನ ಸೈಕಲನ್ನು ನಿಲ್ಲಿಸಿಕೊಂಡು ನಿಂತಿರುತ್ತಿದ್ದ. ಅವನ ರೂಪವೇ ಗಿರಿಜಮ್ಮನವರಿಗೆ ಭಯ ಹುಟ್ಟಿಸುತಿತ್ತು. ಎಂತಹುದೋ ಕಲೆಗಳಿಂದ ತುಂಬಿದ್ದ ಕಪ್ಪಗಿನ ಮುಖ, ಭುಜದವರೆಗೂ ಇಳಿಬಿದ್ದಿದ್ದ ತಲೆಕೂದಲು, ಪಾನಮತ್ತನಂತೆ ಕೆಂಪಾಗಿರುತ್ತಿದ್ದ ಕಣ್ಣುಗಳು, ಕಪ್ಪು ತುಟಿ ಮತ್ತು ಉದ್ದ ಮೂಗಿನ ಮಧ್ಯದಲ್ಲಿ ತುದಿಗಳನ್ನು ಸುರುಳಿಯಂತೆ ಸುತ್ತಿದ್ದ ಪೊದೆಮೀಸೆ, ಯಾವಾಗಲೂ ತುಟಿಗಳ ಮಧ್ಯದಲ್ಲಿ ಕಚ್ಚಿ ಹಿಡಿದಿರುತ್ತಿದ್ದ ಬೀಡಿ, ಸದೃಢ ದೇಹವನ್ನಪ್ಪಿಕೊಂಡಿರುತ್ತಿದ್ದ ಮಾಸಿದ ನೀಲಿ ಬನಿಯನ್ನು ಖಾಕಿ ಚಡ್ಡಿ. ಒಟ್ಟಿನಲ್ಲಿ ಪಕ್ಕಾ ರೌಡಿಯೊಬ್ಬನಂತೆ ಅವನು ಗಿರಿಜಮ್ಮನವರ ಕಣ್ಣಿಗೆ ಕಾಣಿಸುತ್ತಿದ್ದ. ಅಷ್ಟೇ ಅಲ್ಲದೇ ಅವನು ಬಸ್ಸು ಹತ್ತುವಾಗ ಮತ್ತು ಇಳಿಯುವಾಗ ಮಗಳು ಜಾಹ್ನವಿಯನ್ನೇ ದಿಟ್ಟಿಸಿ ನೋಡುತ್ತಿದ್ದುದನ್ನು ಕಂಡು ಏನೇನನ್ನೋ ಕೆಟ್ಟದನ್ನೆಲ್ಲಾ ಯೋಚಿಸಿ ಅವನೊಬ್ಬ ವಿಕೃತ ಮನಸ್ಸಿನ ಕೆಟ್ಟ ಮನುಷ್ಯ ಹುಷಾರಾಗಿರಬೇಕು ಎನಿಸಿ ಗಿರಿಜಮ್ಮನವರಿಗೆ ಆತಂಕವಾಗುತ್ತಿತ್ತು. ಅವನು ಪ್ರತಿದಿನ ಅಲ್ಲಿರದೆ ಯಾವಾಗಲೋ ಒಂದೊಂದು ದಿನ ಮಾತ್ರ ಅಲ್ಲಿರುತ್ತಿದ್ದುದು ತುಸು ಸಮಾಧಾನದ ವಿಷಯವಾಗಿದ್ದರೂ ಅವನು ಅಲ್ಲಿರುತ್ತಿದ್ದ ದಿನಗಳಂದು ಅವನತ್ತ ತಿರುಗಿ ನೋಡದೆ ಮಗಳನ್ನು ಕರೆದುಕೊಂಡು ಬಿರಬಿರನೆ ನಡೆದು ಮನೆಗೆ ಬಂದು ನಿಟ್ಟುಸಿರುಬಿಡುತ್ತಿದ್ದರು.

   ಗಿರಿಜಮ್ಮನವರು ತಮ್ಮ ಮನಸ್ಸಿನ ಆತಂಕವನ್ನು ಶಂಕರಪ್ಪನವರಲ್ಲಿ ಹೇಳಿಕೊಂಡು ಆ ಮನುಷ್ಯನನ್ನು ಅಲ್ಲಿ ನಿಂತು ಎಳನೀರು ಮಾರದಂತೆ ಏನಾದರೂ ಮಾಡಿ ಎಂದು ಅಲವತ್ತುಕೊಂಡಿದ್ದರು. ಆಸ್ಪತ್ರೆಗಿಂತ ಮುಂಚೆ ರಿಂಗ್ ರಸ್ತೆಯ ಬದಿಯಲ್ಲಿದ್ದುದು ಅದೊಂದೇ ಮರ. ಉಳಿದೆಲ್ಲಾ ಮರಗಳು ರಸ್ತೆಯನ್ನು ಅಗಲಿಸುವಾಗ ಉರುಳಿಹೋಗಿದ್ದವು. ಶಂಕರಪ್ಪನವರು ಯೋಚಿಸಿ ಏನು ಉಪಾಯ ಮಾಡುವುದೆಂದು ತಿಳಿಯದೆ ಯಾರಿಗಾದರೂ ಪೋಲೀಸಿನವರಿಗೆ ತಿಳಿಸಿ ಅವನನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿಬೇಕು ಎಂದು ಯೋಜನೆ ಹಾಕಿಕೊಂಡರು. ಆದರೂ ಪೋಲೀಸಿನವರಿಗೆ ಅವನಿಂದ ನಮಗೆ ಯಾವ ತೊಂದರೆಯಾಗಿದೆ ಎಂದು ಹೇಳುವುದು ತೋಚದೆ ಸುಮ್ಮನಾಗಿದ್ದರು.

                               * * * * * *                                                                              

   ದಿನವೆಲ್ಲಾ ತನ್ನ ಮಗಳ ಭವಿಷ್ಯದ ಬಗ್ಗೆಯೇ ಯೋಚಿಸುತ್ತಾ ಇಂದಿನ ಸಮಾಜ ಎತ್ತ ಸಾಗುತ್ತಿದೆ.. ಹೆಂಗಸರ ಮೇಲೆ ದೌರ್ಜನ್ಯವೆಸಗುವ ಗಂಡಸರ ಸಂತತಿ ಹೆಚ್ಚಾಗಿ ಹೋಗಿದೆಯೇನೋ.. ಇವರಿಗೆಲ್ಲಾ ಏನಾಗಿಹೋಗಿದೆ.. ಎಂದು ತಿಳಿಯದೆ ಚಿಂತಾಕ್ರಾಂತರಾಗಿದ್ದ ಗಿರಿಜಮ್ಮನವರಿಗೆ ಸಮಯ ಸರಿದದ್ದು ತಿಳಿಯಲಿಲ್ಲ. ಜಾಹ್ನವಿ ‘ಈವತ್ತು ಲ್ಯಾಬ್ ಇದೆ ಮಮ್ಮೀ.. ಬರೋದು ಆರು ಗಂಟೆ ಬಸ್ಸಿಗೆ’ ಎಂದು ಹೇಳಿ ಹೋಗಿದ್ದಳು. ಸಮಯ ನೋಡಿಕೊಂಡು ಆರು ಗಂಟೆಗೆ ಇನ್ನೂ ಕಾಲು ಗಂಟೆಯಿದ್ದುದು ತಿಳಿದು ಚಪ್ಪಲಿ ಮೆಟ್ಟಿಕೊಂಡು ಹೊರಗೆ ಬಂದು ಮನೆಗೆ ಬೀಗ ಹಾಕಿ ರಸ್ತೆಗಿಳಿದರು. ಎಂದಿನಂತೆ ಬಡಾವಣೆ ನಿರ್ಜನವಾಗಿತ್ತು. ಆಗಲೇ ಸೂರ್ಯ ಪಶ್ಚಿಮಕ್ಕೆ ಇಳಿಯುತ್ತಿದ್ದುದರಿಂದ ಸಂಜೆಗತ್ತಲು ಮೂಡಿ ವಾತಾವರಣ ಮಸಕು ಮಸಕಾಗಿತ್ತು.

  ರಿಂಗ್ ರಸ್ತೆಯ ಕಡೆ ನಡೆಯುತ್ತಿದ್ದ ಗಿರಿಜಮ್ಮನವರ ಮನಸ್ಸಿನಲ್ಲಿ ಆ ಹಾಳು ಮನುಷ್ಯ ಅಲ್ಲಿರದಿದ್ದರೆ ಸಾಕು ಎಂಬ ಆತಂಕ ಮೂಡಿತ್ತು. ನಿಧಾನವಾಗಿ ನಡೆಯುತ್ತಾ ರಸ್ತೆಯ ಬಳಿ ಬಂದಾಗ ಮರದ ಬಳಿಯಲ್ಲಿ ಬೀಡಿ ಸೇದಿಕೊಂಡು ನಿಂತಿದ್ದ ಅವನನ್ನು ಕಂಡು ತುಸು ಭಯವಾಯಿತು. ಅವನು ವ್ಯಾಪಾರವಾಗದೇ ಉಳಿದಿದ್ದ ಎಳನೀರುಗಳನ್ನೆಲ್ಲಾ ಒಟ್ಟಿಗೆ ಕಟ್ಟಿ ಸೈಕಲ್ಲಿಗೆ ಏರಿಸಿಕೊಂಡು ಹೊರಡಲು ಸಿದ್ಧನಾಗುತ್ತಿದ್ದ. ಸದ್ಯ ಬಸ್ಸು ಬರುವುದರೊಳಗಾಗಿ ತೊಲಗಿದರೆ ಸಾಕು ಎಂದು ರಸ್ತೆಯ ದೂರಕ್ಕೆ ಕಣ್ಣು ಹಾಯಿಸಿದಾಗ ಬಸ್ಸು ಬರುತ್ತಿರುವುದು ಕಾಣಿಸಿ ಇಂದೂ ಕೂಡ ತಮ್ಮ ಮಗಳು ಈ ಪಾಪಿ ಮನುಷ್ಯನ ಕೆಂಗಣ್ಣುಗಳಿಗೆ ಬೀಳುವಂತಾಯಿತಲ್ಲ ಎಂದು ಮನದಲ್ಲಿಯೇ ಅವನನ್ನು ಶಪಿಸಿಕೊಂಡು ಅವನತ್ತ ನೋಡದೆ ನಿಂತುಕೊಂಡರು.    

  ಬಸ್ಸು ಬಂದ ತಕ್ಷಣವೇ ಬಸ್ಸಿಳಿದ ಜಾಹ್ನವಿಯ ಕೈ ಹಿಡಿದುಕೊಂಡು ಸುತ್ತಾಮುತ್ತಾ ನೋಡದೇ ಗಿರಿಜಮ್ಮ ನಡೆಯತೊಡಗಿದರು. ಹಿಂದಿನಿಂದ ಯಾರೋ ಬಂದಂತಾಗಿ ಅವನೇ ಬಂದನೇನೋ ಎಂದು ತಿರುಗಿ ನೋಡಲೂ ಭಯವಾಯಿತು. ಅಷ್ಟರಲ್ಲಿ ಮಿಂಚಿನಂತೆ ಮುಂದಕ್ಕೆ ಬಂದ ಒಬ್ಬ ಯುವಕನ ಕೈ ಗಿರಿಜಮ್ಮನವರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಸೆಳೆದುಕೊಂಡಿತು. ಗಿರಿಜಮ್ಮನವರ ಬಾಯಿಯಿಂದ ‘ಅಯ್ಯಯ್ಯೋ ಕಳ್ಳ.. ಕಳ್ಳ..’ ಎಂಬ ಉದ್ಗಾರ ಅವರಿಗರಿವಿಲ್ಲದಂತಯೇ ಹೊರಬಂದು ಪಕ್ಕದಲ್ಲಿದ್ದ ಜಾಹ್ನವಿ ಕೂಡ ದಿಗ್ಭ್ರಾಂತಳಾಗಿ ಹೆದರಿಕೆಯಿಂದ ನಡುಗತೊಡಗಿದಳು.

   ಗಿರಿಜಮ್ಮನವರು ತುಸು ಸಾವರಿಸಿಕೊಂಡು ಸರವನ್ನು ಕಿತ್ತುಕೊಂಡು ಓಡಿಹೋಗುತ್ತಿದ್ದವನತ್ತ   ನೋಡಿದರು. ಅವನನ್ನು ಹಿಂಬಾಲಿಸಿ ಅಟ್ಟಿಸಿಕೊಂಡು ಎಳನೀರು ಮಾರುವ ಮನುಷ್ಯ ಓಡಿಹೋಗುತ್ತಿದ್ದ. ಸರವನ್ನು ಹಿಡಿದು ಓಡುತ್ತಿದ್ದವನ ತೋಳು ಹಿಡಿದು ಜಗ್ಗಿ ಬೆನ್ನ ಮೇಲೆ ಒಂದೇಟು ಕೊಟ್ಟಾಗ ನುಣಿಚಿಕೊಂಡ ಅವನು ಕೈಯಲ್ಲಿದ್ದ ಸರವನ್ನು ಬಿಸಾಕಿ ಅವನಿಗಾಗಿ ಕಾಯುತ್ತಿದ್ದ ಇನ್ನೊಬ್ಬ ಯುವಕನ ಬೈಕು ಹತ್ತಿ ಪರಾರಿಯಾದ. ಎಲ್ಲವೂ ಕಣ್ಣು ಮಿಟುಕಿಸುವುದರೊಳಗಾಗಿ ನಡೆದುಹೋಯಿತು. ಅತ್ತ ಬಿದ್ದಿದ್ದ ತುಂಡಾದ ಸರವನ್ನು ಕೈಯಲ್ಲೆತ್ತಿಕೊಂಡು ಬಂದ ಎಳನೀರು ಮಾರುವ ಮನುಷ್ಯ ಗಿರಿಜಮ್ಮನವರ ಬಳಿ ಬಂದು ಸರವನ್ನು ಅವರ ಕೈಯಲ್ಲಿಟ್ಟು ‘ತಗೋಳ್ಳೀ ಅಮ್ಮಾರೇ.. ಬಡ್ಡೀಮಗ ಕೈಗೆ ಸಿಕ್ಲಿಲ್ಲ.. ತಪ್ಪಿಸ್ಕಂಡುಬಿಟ್ಟ....ಪಾಪಿ ನನ್ಮಕ್ಕಳು.. ಮೈ ಬಗ್ಗಿಸಿ ದುಡೀನಾರ್ದೆ ಹೆಣ್ಮಕ್ಕಳ ಸರ ಕದಿಯೋದು ಕಲ್ತುಕೊಂಡವೆ’ ಅಂದ.

   ನಡೆದುಹೋದ ಘಟನೆಯಿಂದ ತೀವ್ರ ಕಂಗೆಟ್ಟಿದ್ದ ಗಿರಿಜಮ್ಮನವರ ಮನಸ್ಸಿನಲ್ಲಿ ಯಾಕೋ ಏನೋ ಎದುರಿಗೆ ನಿಂತಿದ್ದವನನ್ನು ಕಂಡು ಕೈಮುಗಿಯಬೇಕೆನಿಸಿ ಎರಡೂ ಕೈಜೋಡಿಸಿದರು. ಅವರ ಕಣ್ಣಂಚುಗಳು ಹನಿಗೂಡಿದ್ದವು. ಕುತ್ತಿಗೆಯಲ್ಲಿ ಬರೀ ಕರಿಮಣಿಯ ಸರವೊಂದನ್ನೇ ಧರಿಸಿದ್ದ ಗಿರಿಜಮ್ಮನವರನ್ನು ಕಂಡು ಅವರ ಮಗ ಪ್ರಶಾಂತ ಕೆಲಸಕ್ಕೆ ಸೇರಿದ ಮೇಲೆ ‘ಮಮ್ಮೀ ಇಷ್ಟು ದಿವ್ಸ ನನ್ನನ್ನ ಹೊಟ್ಟೆಬಟ್ಟೆ ಕಟ್ಟಿ ಸಾಕಿ ಸಲಹಿ ಓದಿಸಿದ್ದೀಯಾ.. ನಿನಗಾಗಿ ಅಂತ ನೀನೇನೂ ಆಸೆಪಡಲಿಲ್ಲ.. ನಾನು ಈಗ ನನ್ನ ಕಾಲ ಮೇಲೆ ನಿಂತಿದ್ದೀನಿ.. ಬೇಡ ಅನ್ನದೆ ತಗೋಬೇಕು’ ಎಂದು ಹೇಳಿ ಆಭರಣದ ಅಂಗಡಿಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಕೊಡಿಸಿದ್ದ ಚಿನ್ನದ ಸರವದು. 

   ಈ ಮನುಷ್ಯನ ಬಗ್ಗೆಯೇ ತಪ್ಪು ತಿಳಿದಿದ್ದೆನಲ್ಲಾ ಎಂಬ ಅಪರಾಧಿ ಭಾವದಿಂದ ನೊಂದುಕೊಂಡು ‘ಏನೋ ಇಂತಾ ಕೆಟ್ಟ ಕಾಲದಲ್ಲೂ ನಿಮ್ಮಂತಹ ಒಳ್ಳೆಯವರೂ ಇದ್ದಾರಲ್ಲ ಅನ್ನೋದೇ ಸಮಾಧಾನ.....’ ಎಂದು ಹೇಳುವಷ್ಟರಲ್ಲಿ ಗಿರಿಜಮ್ಮನವರ ಗಂಟಲು ತುಂಬಿಬಂದಿತ್ತು.

   ‘ಜನ ಎಲ್ಲಾ ಒಳ್ಳೆಯವ್ರೇ ಅಮ್ಮಾರೇ.. ಎಲ್ಲಾರೂ ಕೆಟ್ಟೋರಾಗ್ಬುಟ್ರೆ ಜೀವ್ನ ಮಾಡೋಕಾಯ್ತದಾ.. ಎಲ್ಲೋ ಒಬ್ರು ಇಬ್ರು ಇಂತಾ ಕೆಟ್ ನನ್ಮಕ್ಕಳು ಎಲ್ಲಾ ಕಡೆ ಇರ್ತಾರೆ.. ಅಂತೋರನ್ನ ಸಿಕ್ಕಿದ್ ಕಡೆ ಹಿಡಿದು ಕಂಬಿ ಎಣಿಸಂಗೆ ಮಾಡ್ತಾ ಇರ್ಬೇಕು. ಯಜಮಾನ್ರುಗೆ ಹೇಳಿ  ಟೇಷನ್ನಿಗೋಗಿ ಕಂಪ್ಲೇಂಟ್ ಕೊಡಿ.. ನಾನೂ ಬಂದು ಸಾಕ್ಷಿ ಹೇಳ್ತೀನಿ’ ಎಂದ ಎಳನೀರು ಮಾರುವ ಮನುಷ್ಯನ ಹೂವಿನಂತಹ ಹೃದಯ ಕಂಡು ಗಿರಿಜಮ್ಮನವರಿಗೆ ಅತೀವ ಸಂತೋಷವಾಯಿತು. 

   ‘ನೀವು ಏನೇ ಹೇಳಿ.. ಬೇರೆಯವ್ರಿಗೆ ಏನೇ ಆದ್ರೂ ಕಂಡೂ ಕಾಣಿಸದಂಗೆ ಹೋಗೋರೇ ಜಾಸ್ತಿ. ನಿಮ್ಮಂತೋರು ಇರೋದು ಬಹಳ ಕಮ್ಮಿ..’ ಗಿರಿಜಮ್ಮನವರು ತಮ್ಮ ಮನಸ್ಸಿನಲ್ಲಿದ್ದುದನ್ನು ಮುಚ್ಚಿಟ್ಟುಕೊಳ್ಳದೆ ನುಡಿದರು. 

   ‘ಅಂಗಂದ್ರೆ ಆಯ್ತದಾ ಅಮ್ಮಾರೇ.. ನಿಮಗಾಗಿದ್ದು ನಾಳೆ ದಿನ ನಮಗೂ ಆಗ್ಬಹುದು.. ನಮ್ ಮನೆ ಹೆಣ್ಮಕ್ಕಳೂ ಈ ಪ್ರಪಂಚುದಲ್ಲಿ ನೆಮ್ಮದಿಯಿಂದ ಬದುಕ್ಬೇಕಲ್ಲವಾ.. ನಿಮ್ಮುಡುಗಿ ನೋಡ್ದಾಗಲೆಲ್ಲಾ ನಂಗೆ ನನ್ ಮಗಳೇ ಜ್ಞಾಪಕುಕ್ಕೆ ಬತ್ತಳೆ.. ಇನ್ನೂ ನಾಕನೇ ಕ್ಲಾಸು. ಅವುಳನ್ನೂ ಕಾಲೇಜು ಓದಿಸ್ಬೇಕು ಅಂತಿದೀನಿ.. ಆ ದೇವ್ರು ಏನ್ಮಾಡ್ತಾನೋ ಏನೋ....’ ಎಂದು ನಿಟ್ಟುಸಿರುಬಿಟ್ಟವನಿಗೆ ಗಿರಿಜಮ್ಮನವರು ದೃಢವಾದ ಧ್ವನಿಯಲ್ಲಿ ಹೇಳಿದರು.

   ‘ಹೃದಯದಲ್ಲಿ ಒಳ್ಳೆಯದನ್ನ ತುಂಬಿಕೊಂಡಿರೋ ನಿಮ್ಮಂತೋರನ್ನ ಆ ದೇವ್ರು ಯಾವತ್ತೂ ಕೈ ಬಿಡೋದಿಲ್ಲ.’  

Comments

Submitted by partha1059 Mon, 01/28/2013 - 13:35

ಎಲ್ಲ ಕಡೆಯು ಕೆಟ್ಟದನ್ನ ಹುಡುಕುತ್ತ ಹೋಗುವ‌ , ಬರಹಗಾರರು ಸುತ್ತಲಿನ‌ ಒಳ್ಳೆಯದನ್ನು ಗುರುತಿಸಿ ಬರೆಯಬೇಕು ಅನ್ನುವನು ನಾನು. ನಿಮ್ಮ ಕತೆಯ‌ ಉದ್ದೇಶ‌ ನನಗೆ ಇಷ್ಟವಾಯಿತು. ಉತ್ತಮ‌ ಕತೆ .
Submitted by tthimmappa Mon, 01/28/2013 - 19:57

In reply to by kavinagaraj

ಹಿರಿಯರಾದ ಪಾರ್ಥಸಾರಥಿ ಸಾರ್ ಮತ್ತು ಕವಿನಾಗರಾಜ್ ಸಾರ್, ತಮ್ಮ ಮೆಚ್ಚುಗೆಯ ನುಡಿಗಳು ನನಗೆ ಸ್ಪೂರ್ತಿದಾಯಕವಾಗಿವೆ. ಧನ್ಯವಾದಗಳು.