ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೯

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೯

ಭದ್ರ ನೆಲೆ

ಭದ್ರ ನೆಲೆಯು ಛಿದ್ರವಾಗ-

ದಂತೆ ವಹಿಸು ಎಚ್ಚರ;

ಛಿದ್ರವಾದರದರ ಸತ್ವ

ಉಡುಗಿ ಪೋಪುದೆಚ್ಚರ !

 

ಶುದ್ಧವಾದ ಮನವನಿಟ್ಟು

ಕೊಂಡರದುವೆ ಸಂಭ್ರಮ;

ಬದ್ಧವಾದ ಕ್ರಿಯೆಗೆ ಸ್ಪಷ್ಟ-

ವಾಗದಿರ್ಯ್ವ ವಿಭ್ರಮ !

 

ನಿಖರವಾದ ಯತ್ನದಿಂದ 

ಸಫಲವಾದ ಈ ಕ್ರಮ ;

ಪ್ರಖರವಾದ ಪರಿಣಾಮಕೆ

ನಿಕಟವಾದುದೀ ಶ್ರಮ !

 

ಮನದ ಕುರುಹು ಮನದ ಹರಹು

ಬೆಟ್ಟದಂತೆ ಬೆಳೆದಿದೆ ;

ಮಾನವ ತಣಿಸಿ ಮನವ ಮಣಿಸಿ 

ಕಟ್ಟಿ ಹಾಕಬೇಕಿದೆ !

 

ಛಿದ್ರವಾಗದಂತೆ ಮನವ

ಬದ್ಧಗೊಳಿಸಬೇಕು ;

ಸಿದ್ಧಗೊಳಿಸಿಕೊಂಡ ಮೇಲೆ

ಸ್ನಿಗ್ಧ ಭಾವ ಸಾಕು !

 

ಭದ್ರ ನೆಲೆಯು ಛಿದ್ರವಾಗ-

ದಂತೆ ವಹಿಸು ಎಚ್ಚರ ;

ಛಿದ್ರವಾಗಗೊಡದೆ ನಿತ್ಯ

ಬದ್ಧಗೊಳಿಸು ಎಚ್ಚರ !

***

ದಾತನ ಸ್ಮರಣೆ

ದಾತನ ಸ್ಮರಿಸುವ ಬಾರೆ ಸಖೀ ನವ-

ನೂತನ ಹರುಷವ ತಾಳಿ ಸಖಿ ;

ದಾತನ ಭಜಿಸುವ ಬಾರೆ ಸಖೀ ಭವ

ತಾಪವ ಕಳೆಯುವ ಬಾರೆ ಸಖಿ !

 

ಧ್ಯಾನದಿ ಮನವನು ನಿಲಿಸಿ ಸಖೀ -

ಸುಜ್ಞಾನದ ಸಿರಿಯನು ಪಡೆವ ಸಖಿ ;

ಧ್ಯಾನದ ಮಹಿಮಾಪೂರದಪಾರದ

ವಾರಿಧಿಯಲಿ ಮುಳುಗೋಣ ಸಖಿ !

 

ಜ್ಞಾನದ ಬೆಳಕನು ಹುಡುಕಿ ಸಖೀ -

ಅಜ್ಞಾನನದ ಮೌಢ್ಯವ ಕಳೆವ ಸಖಿ ;

ಜ್ಞಾನದ ಅಮೃತವರ್ಷದ ಸಿಂಚನ -

ದನುಪಮದನುಭವ ಪಡೆವ ಸಖಿ !

 

ದಾತನ ಸ್ಮರಿಸುವ ಬಾರೆ ಸಖಿ ನವ -

ನೂತನ ಹರುಷವ ತಾಳಿ ಸಖಿ ;

ಚೇತನರೂಪನ ಕೌತುಕದೀಪನ

ವ್ಯಾಪಕ ನೆಲೆಯನು ತಿಳಿವ ಸಖಿ !

***