ಕೇಶವ .ಕರಾವಲಂಬಂ

ಕೇಶವ .ಕರಾವಲಂಬಂ

ಕವನ

ಪಾಲ್ಗಡಲ ಸದನ ವರ ಸುದರ್ಶನವ ಪಿಡಿದವನೆ 
ಹಿರಿಹಾವ ಹಲಹೆಡೆಯ ಮಣಿಯಿ೦ದ ಶೋಭಿಸುತ |
ಯೋಗೀಶ ದಾಸರಾದವರ ಭವ ಸಾಗರವ ದಾಟಿಸುವ 
ಕರುಣಾಳು ಕೇಶವನೇ ಕೈ ಹಿಡಿಡಿದೆನ್ನ ಉದ್ಧರಿಸು ||೧||
 
ಅಜ ಶಕ್ರ ಭವ ಮರುತ ಸುರಗಡಣ ಪೂಜಿತನೆ
ಅಬ್ಜ ನೇಸರರ ಹಡೆದು ಬೆಳಗುವ ಬೇಳಕಿನಾಕಾರ
ಎದೆಯಲ್ಲಿ ಸಿರಿದೇವಿಯ ಹೊತ್ತ ಸಿರಿವಂತ
ಕರುಣಾಳು ಕೇಶವನೇ ಕೈ ಹಿಡಿಡಿದೆನ್ನ ಉದ್ಧರಿಸು ||೨||
 
ಬದುಕೆಂಬ ಕತ್ತಲೆಯ ಕಾನನದಿ ಹೊರಟಿಹೆನು
ಆಸೆಯದು ಘೋರ ಮೃಗದಂತೆ ಭಯಪಡಿಸಿ
ಮತ್ಸರದ ಜ್ವರದಿಂದ ಬಳಲಿ ಹಲಬುತಿಹೆನು
ಕರುಣಾಳು ಕೇಶವನೇ ಕೈ ಹಿಡಿಡಿದೆನ್ನ ಉದ್ಧರಿಸು ||೩||
 
ದೂರದೂರಕೆ ಸರಿದು ಕೂಪದಲಿ ನಾ ಬಿದ್ದು
ನೂರು ಸಾವಿರ ಕ್ಲೇಶ ಕೂಟಶೇಷಗಳು ಇಲ್ಲಿ
ತತ್ತರಿಸಿ ಕರೆಯುತಿಹೆ ದೀನವತ್ಸಲ ಸ್ವಾಮಿ
ಕರುಣಾಳು ಕೇಶವನೇ ಕೈ ಹಿಡಿಡಿದೆನ್ನ ಉದ್ಧರಿಸು ||೪||
 
ಜೀವನದ ಸಾಗರದ ಆಳಕಾಳಕೆ ತೆರಳಿ
ಕಾಲಮುತ್ತನು ಅರಸಿ ಮಕರಗಳಿಗೆರವಾದೆ
ವಾಂಛೆಗಳ ಅಲೆಗಳ ಹೊಡೆತ ತಾಳೆನು ಸ್ವಾಮಿ
ಕರುಣಾಳು ಕೇಶವನೇ ಕೈ ಹಿಡಿಡಿದೆನ್ನ ಉದ್ಧರಿಸು ||೫||
 
ಶಂಕರಾಚಾರ್ಯರ ಲಕ್ಷ್ಮೀ ನರಸಿಂಹ ಕರವಲಂಬನ ಸ್ಪೂರ್ತಿ ಮತ್ತು ಅನುಗ್ರಹದಿಂದ ಬರೆದದ್ದು