ಕೊಕ್ಕರೆಗಳ ಕುಣಿತ
ಆ ರಸ್ತೆಯ ಕೆಂಪು ಗುಲ್ಮೋಹರ್ ಸಾಲುಗಳ ನೆರಳಿನಲ್ಲಿ , ಆ ಕೆಂಪಿನ ಹಬ್ಬವನ್ನು ಕಣ್ಣುಗಳು ಆಸ್ವಾದಿಸುತ್ತಾ ನಡೆದರೆ, ಕೆಲವು ದಿನಗಳಲ್ಲಿ ಗುಲ್ಮೋಹರ್ ಗಳೆಲ್ಲ ಬೋಳಾಗಿ , ಬಣ್ಣವೆಲ್ಲಾ ಮಾಯವಾಗುವ ಕೊರಗು ಕಾಡುವ ಮುನ್ನ ಎರಡು ಜೋಡಿಮನೆಗಳು ಕಾಣಸಿಗುತ್ತಿತ್ತು. ಆ ಎರಡು ಮನೆಗಳನ್ನು ಕೈತೋಟವೊಂದು ಬೇರ್ಪಡಿಸುತ್ತಿತ್ತು .
( ಹೆಸರಿಗೆ ಕೈತೋಟವಾದರೂ, ಅದನ್ನು ಎರಡೂ ಮನೆಗಳ ಯಾವ ಕೈಗಳೂ ನೀರೆರೆದು ಬೆಳೆಸಿರಲಿಲ್ಲ. ಸಂಬಳಕ್ಕಿದ್ದ ಮಾಲಿಯೊಬ್ಬನ ಬೆವರಿನ ನೀರನ್ನುಂಡು ತೋಟವು ಹೂವುಗಳಿಂದ ಕಂಗೊಳಿಸುತ್ತಿತ್ತು ).
ಒಂದು ಮನೆಯಾದರೋ, ಕೆಂಪು ಗುಲ್ಮೋಹರ್ ಗಳಂತೆ ಕೆಂಪಾಗಿ ಕಂಗೊಳಿಸುತ್ತಿತ್ತು. ಮನೆ ಮುಂದೆ ನಿಂತ ಅದೇ ಗುಲ್ಮೋಹರ್ ಕೆಂಪಿನ ಕಾರಿನೊಳಗಿಂದ ೨೮ರ ಹರೆಯದ ಯುವಕನೊಬ್ಬ ಅಗಲವಾದ ಹಾಳೆಯೊಂದನ್ನು ಓದುತ್ತಿದ್ದನು.ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಅದೊಂದು ಗ್ರೀಟಿಂಗ್ ಕಾರ್ಡ್ ಎಂದು, ”ಆರ್ಚೀಸ್” ಎಂಬ ಆ ಕಾರ್ಡನ್ನಿಟ್ಟ ಚೀಲದ ಮೇಲಿನ ಬರವಣಿಗೆಯಿಂದ ತಿಳಿಯುತ್ತಿತ್ತು. ಆ ವ್ಯಕ್ತಿಯ ಮುಖದಲ್ಲಿರುವ ತುಂಟತನದ ನಗುವು, ಅದು ಪ್ರಥಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಿಂದ ಉಂಟಾದ ನಗುವೆಂದು ತಿಳಿಸುತ್ತಿತ್ತು. ಅವನು “ಪ್ರಿಯಾ, come on, Its getting late“ ಎಂದು ನಾಲ್ಕನೇ ಬಾರಿ ಕರೆದ, ಪ್ರತಿ ಬಾರಿಯೂ “ just five minutes, ಸ್ವಲ್ಪ wait ಮಾಡು ಪ್ರತಾಪ್ “ ಎಂಬ ಅದೇ ಉತ್ತರ ಅವನಿಗೆ ದೊರೆಯುತ್ತಿತ್ತು. ಅದರಿಂದ ಬೇಸತ್ತು ಅವನು ಸುಮ್ಮನಾಗಿ , ಬೋಳು ಗುಲ್ಮೋಹರ್ ಗಳಂತೆ ಕಳೆಗುಂದಿದ ಪಕ್ಕದ ಮನೆಯನ್ನು ಒಮ್ಮೆ ನೋಡಿದರೆ, ಮತ್ತೊಮ್ಮೆ ಹೂವುಗಳಿಂದ ತುಂಬಿರುವ ಕೈತೋಟವನ್ನು ನೋಡುತ್ತಾ ಸುಮ್ಮನಾಗುತ್ತಿದ್ದನು. ಸ್ವಲ್ಪ ಹೊತ್ತಿನ ನಂತರ ಮತ್ತದೇ ಪ್ರಶ್ನೆ, ಮತ್ತದೇ ಉತ್ತರ, ಮತ್ತದೇ ನೋಟ.
ಹೀಗೆ ಪ್ರಶ್ನೆ-ಉತ್ತರ-ನೋಟ ಶೃಂಖಲೆಯ ಅದೆಷ್ಟೋ ಪುನರಾವರ್ತನಗಳ ನಂತರ ಅಂತೂ ಸಮೃದ್ಧವಾಗಿ ಅಲಂಕೃತಳಾದ ೨೬ರ ತರುಣಿಯೊಬ್ಬಳು ಹೊರಗೆ ಬಂದು ಕೈತೋಟ ದಾಟಿ ಆ ಕಳೆಗುಂದಿದ ಮನೆಯೆಡೆಗೆ ನಡೆದು ,ಕರೆಗಂಟೆಯನ್ನು ಒತ್ತಿದಳು. ಬಾಗಿಲನ್ನು ತೆರೆಯುವ ಕ್ಷೀಣ ಸದ್ದು ಸುತ್ತಲಿನ ಮೌನವನ್ನು ಭೇದಿಸಿ ಬಂದು, ಮಧ್ಯವಯಸ್ಸಿನ ಹೆಂಗಸೊಬ್ಬಳು ಹೊರಬಂದಳು.
“Aunty, ನಾವಿಬ್ಬರೂ planet Dಗೆ ಹೋಗ್ತಿದೀವಿ, ಯಾರಾದರೂ ಮನೆ ಕಡೆ ಬಂದರೆ ನನ್ನ ಮೊಬೈಲ್ ಗೆ ಫೋನ್ ಮಾಡಲು ಹೇಳಿಬಿಡಿ “ ಎಂದು ಹೇಳಿ ಉತ್ತರಕ್ಕೆ ಕಾಯದೇ ಕಾರಿನೆಡೆಗೆ ಪ್ರಿಯಾ ಮರಳಿದಳು. ಬಾಗಿಲಲ್ಲಿ ನಿಂತಿದ್ದ ಶಾಂತಿ ಕಾರಿನೆಡೆಗೆ ಕೈ ಬೀಸಿ ,ಅದು ನೋಟದಿಂದ ಮಾರೆಯಾಗುವ ತನಕ ಅಲ್ಲೇ ನಿಂತು, ನಂತರ ಮನೆಯೊಳಹೊಕ್ಕಾಗ ಮತ್ತೆ ಕ್ಷೀಣ ಧ್ವನಿಯಲ್ಲಿ ಬಾಗಿಲ ಚಿಲಕಹಾಕುವ ಸದ್ದು ಕೇಳಿಬಂತು.
ಆ ಮನೆಯೊಳಕ್ಕೆ ಹೊಕ್ಕರೆ ಯಾವುದೋ ಒಂದು ಹೊಸ ಲೋಕಕ್ಕೆ ಬಂದಂತೆನಿಸುತ್ತಿತ್ತು ಮನೆಯೊಳಗೆ ಮರಳುಗಾಡಿನಂತಹ ಮೌನ, ಸಂಜೆಯ ತಂಗಾಳಿಯಲ್ಲಿ ತೇಲಾಡಲು ಅಡ್ಡಿಯಾಗಿರುವ ಮುಚ್ಚಿರುವ ಕಿಟಕಿಗಳನ್ನು ಪರದೆಗಳು ಕೋಪಗೊಂಡು ನೋಡುತ್ತಿದ್ದವು.
ಪರದೆಗಳಂತೆ ಆ ಮನೆಯಲ್ಲಿದ್ದ ಮಿಕ್ಕೆಲ್ಲ ವಸ್ತುಗಳೂ ಮೌನವಹಿಸಿದ್ದವು. ಶಾಂತಿ ಸೋಫ ಮೇಲೆ ಕುಳಿತು ಸಾಪ್ತಾಹಿಕವೊಂದನ್ನು ಹಿಡಿದಿದ್ದಳು, ಆಗಲೇ ಪ್ರತಾಪನ " It's getting late" ನಿವೇದನೆಯಂತೆ
ಹಲವು ಬಾರಿ ಅದರ ಪುಟಗಳನ್ನು ತಿರುವಿದ್ದರೂ ಮತ್ತೆ ಅದೇ ಪುಟಗಳನ್ನು ಅವಳ ಬೆರಳುಗಳು ತಿರುವುತ್ತಾ ಆಸಕ್ತಿಯಿಂದ ಓದುತ್ತಿರುವಂತೆ ಕಣ್ಣುಗಳು ನಟಿಸುತ್ತಿದ್ದವು.ಪತ್ನಿಯ ನಟನಾ ಕೌಶಲ್ಯದ ಪರಿವೇ ಇಲ್ಲದೆ ಮನೋಹರ ಚಾಪೆಯ ಮೇಲೆ ಮಲಗಿದ್ದ. ಶಾಂತಿಯನ್ನು ಬೈಯುತ್ತಿರುವ ಕನಸುಗಳು ಆಗಾಗ ಬಿದ್ದು " ಏನಕ್ಕೂ ಪ್ರಯೋಜನವಿರದ ಮೂದೇವಿ" "ಗೂಬೆ" ಎಂದೆಲ್ಲಾ ನಿದ್ದೆಯಲ್ಲೇ ಆಗಾಗ್ಗೆ ಕನವರಿಸುತ್ತಿದ್ದ. ನಾಲ್ಕು ಘಂಟೆಗೆ
" ಕಾಫಿ ವೇಳೆ" ಸಮೀಪಿಸುತ್ತಿದ್ದರಿಂದ ಗಾಢ ನಿದ್ದೆಯಿಂದ ಸಹಜವೆಂಬಂತೆ ಮನೋಹರನು ಎದ್ದು ಸ್ವಲ್ಪಹೊತ್ತು ಅತ್ತಿತ್ತ ನೋಡಿ, ತನ್ನ ಒಂದೇ ಹವ್ಯಾಸವಾಗಿರುವ ಟಿವಿ ವಿಕ್ಷಣೆಯಲ್ಲಿ ತೊಡಗಿದ. ಟಿವಿಯ ಚಾನೆಲ್ ಗಳನ್ನು ತಿರುವುತ್ತಾ ತನ್ನ ಅಚ್ಚುಮೆಚ್ಚಿನ " ಚಿರತೆ ಜಿಂಕೆಯನ್ನು ಬೇಟೆಯಾಡುವ ದೃಶ್ಯಾವಳಿ" ಯನ್ನು ತೋರಿಸುವ ಚಾನೆಲ್ ನನ್ನು ಹುಡುಕತೊಡಗಿದ. ಇಬ್ಬರೂ ಮತ್ತೊಬ್ಬರ ಇರುವಿಕೆಯನ್ನು ಗಮನಿಸದೆ ತಮ್ಮ -ತಮ್ಮ ಲೋಕಗಳಲ್ಲಿ ಮುಳುಗಿದ್ದರು. ಮದುವೆಯಾದ ಹಲವು ವರ್ಷಗಳ ನಂತರ ಅವರ ಮಧ್ಯೆ ಮಾತನಾಡಲು ಏನೂ ಉಳಿದಿಲ್ಲದಂತಾಗಿತ್ತು. ನಿದ್ದೆಯು ಮನೋಹರನನ್ನು ಬಿಟ್ಟು ಶಾಂತಿಯನ್ನು ಬೇಟೆಯಾಡತೊಡಗಿ,ಅವಳು ಅದಕ್ಕೆ ಸುಲಭ ತುತ್ತಾದಳು.
ಸ್ವಲ್ಪ ಹೊತ್ತಿನ ಬಳಿಕ ಪಕ್ಕದಲ್ಲಿ ಯಾರೋ ಬಂದು ಕುಳಿತಂತೆನ್ನಿಸಿ ಶಾಂತಿ ತಿರುಗಿ ನೋಡಿದಳು
ಕಿರುನಗೆ ಬೀರುತ್ತಾ ಪಕ್ಕದಲ್ಲಿ ಕುಳಿತಿದ್ದ ಮನೋಹರನನ್ನು ಕಂಡು ಆಶ್ಚರ್ಯವಾಯಿತು.
" ನಾವು planet Dಗೆ ಹೋಗಿ ಡ್ಯಾನ್ಸ್ ಮಾಡಿಬರೋಣ ಬಾ" ಎಂದು ಮನೋಹರನೆಂದಾಗ ಶಾಂತಿಗೆ ಅವನ ಮಾತುಗಳನ್ನು ನಂಬಲಾಗಲ್ಲಿಲ್ಲ.
" ಹುಷಾರಗಿದ್ದೀರಿ ತಾನೆ ? " ಎಂದು ಆಶ್ಚರ್ಯಚಕಿತ ದನಿಯಲ್ಲೇ ಕೇಳಿದಳು
"ಈಗ ಹೊರಡ್ತಿಯೋ ಇಲ್ವೋ ?" ಎಂದು ಹುಸಿಕೋಪ ತೋರಿಸುತ್ತಾ ಮನೋಹರ ಕೇಳಿದ.
" ಇದ್ದಕ್ಕಿದ್ದಂತೆ ಈ ಖಯಾಲಿ ಏನಕ್ಕೆ ..... ?" ಎಂದು ಶಾಂತಿಯು ಕೇಳಲು ಹೊರಟಾಗ, ಅವಳ ಪ್ರಶ್ನೆಯನ್ನು ಅರ್ಧದಲ್ಲೆ ತಡೆದು "ಮೊನ್ನೆ ಅನಿಮಲ್ ಪ್ಲಾನೆಟ್ ನಲ್ಲಿ ಕೊಕ್ಕರೆಗಳ ಬಗ್ಗೆ ಡಾಕ್ಯೂಮೆಂಟ್ರಿಯೊಂದನ್ನು ತೊರಿಸ್ತಿದ್ರು , ಜೋಡಿ ಕೊಕ್ಕರೆಗಳು ಜೀವನವಿಡಿ ಒಟ್ಟಿಗೆ ಇರುತ್ವಂತೆ, ಅವುಗಳ ಮಧ್ಯವಿರುವ
ಅನುಬಂಧವನ್ನು ಗಟ್ಟಿಮಾಡಿಕೊಳ್ಳೋಕ್ಕೆ ಆಗಾಗ್ಗೆ ಕುಣಿಯುತ್ವಂತೆ. ಅವುಗಳ ಕುಣಿತ ಎಷ್ಟು ಚೆನ್ನಾಗಿತ್ತು ಗೊತ್ತಾ !" ಎಂದು ಉತ್ಸಾಹಭರಿತವಾಗಿ ಹೇಳುವಾಗ ಅವನ ಕಣ್ಣುಗಳಲ್ಲಿ ಹೊಳಪು ಕಾಣುತ್ತಿತ್ತು.
"ಹಾಗಂತ ನಾವು ಕುಣಿಯೋದ ?" ಅಂತ ಹೇಳಬೇಕೆನ್ನಿಸಿದರೂ ಶಾಂತಿಗೆ ಮನಸ್ಸಾಗಲಿಲ್ಲ
ಶಾಂತಿ ಸ್ವಲ್ಪ ಹೊತ್ತು ಯೋಚಿಸಿ " ನನಗೆ ಅಲ್ಲೆಲ್ಲ ಬರೋಕ್ಕಾಗೊಲ್ಲ, ಅಷ್ಟಕ್ಕೂ rock-n-roll ವಯಸ್ಸೇ ನಮ್ಮದು ?" ಎಂದಳು.
ಮನೋಹರ ಕೊಂಚ ಬೇಸರಗೊಂಡರೂ ಸಮಾಧಾನದಿಂದ "ಸರಿ ಹಾಗಾದ್ರೆ, ಇಲ್ಲೆ ಡಾನ್ಸ್ ಮಾಡೋಣ " ಎಂದಾಗ ಅರೆಮನಸ್ಸಿನಿಂದ ಶಾಂತಿ ಒಪ್ಪಿದಳು.
ball-room ಡಾನ್ಸಿನಂತೆ ನಿಧಾನವಾಗಿ ಆ ನರ್ತನ ಪ್ರಾರಂಭವಾಗಿ ಇಬ್ಬರು ಗಿರಿ-ಗಿರಿ ಸುತ್ತತೊಡಗಿದರು.ಹತ್ತಿರದಲ್ಲೇ ಇದ್ದ ಹೂದಾನಿಗಳ ಬಗ್ಗೆ ಗಮನವಿಟ್ಟಿದ್ದರಿಂದ
ಮನೋಹರನ ಕಾಲುಗಳು ಶಾಂತಿಯ ಕಾಲುಗಳಿಗೆ ತಾಗಿ ಅವಳು ಬೀಳುವಂತಾದಾಗ ಮನೋಹರನು ಅವಳನ್ನು ತನ್ನ ಕೈಚಾಚಿ ಹಿಡಿದುಕೊಂಡನು. ಎಷ್ಟೋ ಕಾಲದ ಹಿಂದೆ ಇಂತಹ ಅಕ್ಕರೆಯ ಆಸರೆಯನ್ನು
ಅನುಭವಿಸಿದ ನೆನಪು ಶಾಂತಿಗೆ ಮರುಕಳಿಸಿ, ಜೀವನದ ಸಪ್ಪೆತನವನ್ನೆಲ್ಲಾ ಹೋಗಳಾಡಿಸಿ ಸಂತೋಷವನ್ನುಂಟು ಮಾಡಿತು. ಕೊನೆಯಿಲ್ಲದ ಗುಂಡಿಯೊಳಕ್ಕೆ ಬೀಳುತ್ತಿದ್ದ ತನ್ನ ಬಾಳನ್ನು ಕೊಕ್ಕರೆ ಜೋಡಿಯೊಂದು ಮತ್ತೆ ಹಿಡಿದೆತ್ತಿ , ಹೊಸ ಪ್ರಾಣಶಕ್ತಿಯ ಸಂಚಲನ ಮಾಡಿ, ಮರುಹುಟ್ಟು ನೀಡಿದೆಯೆಂದೆನ್ನಿಸಿ. ಸಿಕ್ಕಿರುವ ಎರಡನೇ ಅವಕಾಶವನ್ನು ಕಳೆದುಕೊಳ್ಳಬಾರದೆಂದು ನಿರ್ಧರಿಸಿ ಶಾಂತಿ ಮನಸ್ಸು ತುಂಬಿ ನರ್ತಿಸುತ್ತಿದ್ದಳು.
"ಎದ್ದೇಳೇ ಮೂದೇವಿ ! ,ನಾಲ್ಕು ಗಂಟೆಯಾದ್ರೂ ಕಿಸಿತಾ ಮಲ್ಗಿದ್ದಿಯಾ ? ಕಾಫಿ ಮಾಡು ಹೋಗೆ " ಎಂದು ಮನೋಹರನು ಅರಚಿದಾಗ ತನ್ನ ಕನಸಿನ ಲೋಕದ ವಿಹಾರದಿಂದ ಶಾಂತಿ ಎಚ್ಚೆತ್ತು , ಏನೂ ತೋಚದಂತವಳಾಗಿ ಅಡುಗೆಮನೆಗೆ ಓಡಿದಳು.
ಕಾಫಿ ಮಾಡುವಾಗ ಪಕ್ಕದ ಮನೆಗೆ ಕಾರು ಬಂದ ಸದ್ದಾಗಿ ಪ್ರಿಯಾ " ಮಾತಾಡ್ಬೇಡಾ ನನ್ನ್ ಜೊತೆ ,ಯಾರವಳು ಪ್ರತಿಮಾ ? " ಎಂದು ಕೂಗಾಡುತ್ತಾ ಮನೆಯೊಳಕ್ಕೆ ಹೋಗುತ್ತಿರುವುದು ಶಾಂತಿಗೆ ಕೇಳಿಸಿತು.
ಅಪ್ರಿಯಳಾಗಿದ್ದ ಪ್ರಿಯಾಳ ಮುಂದೆ ಪ್ರತಾಪನ ಪ್ರತಾಪ ಮಾಯವಾಗಿ ಅವಳನ್ನು ಸಂತೈಸಲು ಹೆಣಗಾಡುತ್ತಿದ್ದ.ಮನೋಹರ ಜಿಂಕೆಬೇಟೆಯಲ್ಲಿ ತಲ್ಲಿನನಾಗಿದ್ದನು. ಶಾಂತಿ ಕಾಫಿ ಮಾಡುತ್ತಾ ತನ್ನ ಕನಸಿನ ಗುಂಗಿನಲ್ಲೇ ನಿಂತುಬಿಟ್ಟಳು.