ಕೊನೆಗೂ ಹಾರಿ ಹೋದ ಹಕ್ಕಿ !
ನೀವು ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿದ್ದರೆ ಈ ಹಕ್ಕಿಯ ಪರಿಚಯ ನಿಮಗೆ ಇದ್ದೇ ಇರುತ್ತದೆ. ನೀಲಿ ಬಣ್ಣದ ಪುಟ್ಟ ಪುಟ್ಟ "ಟ್ವೀಟ್"ಗಳನ್ನು ಮಾಡುವ ಹಕ್ಕಿ ಇದು. “ಟ್ವೀಟರ್” ಎಂಬ ಸಾಮಾಜಿಕ ಜಾಲತಾಣದ ಲೋಗೋ ಆಗಿದ್ದ ಈ ಪುಟ್ಟ ಹಕ್ಕಿಯನ್ನು ಹಾರಿಸಿ ಬಿಡಲಾಗಿದೆ ಅರ್ಥಾತ್ ಈ ಹಕ್ಕಿಯ ಲೋಗೋ ತೆಗೆದು ಹಾಕಲಾಗಿದೆ. ‘ಉಲಿಯುವ ನೀಲಿ ಹಕ್ಕಿ' ಯ ಲೋಗೋವನ್ನು ತೆಗೆದು ಹಾಕುವ ಮತ್ತು ಟ್ವಿಟರ್ ತಾಣವನ್ನು ಸಮಗ್ರವಾಗಿ ಬದಲಾಯಿಸುವ ಬಗ್ಗೆ ಅದರ ನೂತನ ಮಾಲೀಕರಾದ ಎಲಾನ್ ಮಸ್ಕ್ ಈ ಹಿಂದಿನಿಂದ ಅಂದರೆ ಟ್ವಿಟರ್ ಅನ್ನು ಖರೀದಿಸಿದ ದಿನದಿಂದಲೇ ಹೇಳುತ್ತಾ ಬಂದಿದ್ದರು.
ಇದನ್ನು ಸಾಬೀತು ಪಡಿಸಲೋ ಎಂಬಂತೆ ಕೆಲವು ತಿಂಗಳುಗಳ ಹಿಂದೆ ಎಲಾನ್ ಮಸ್ಕ್ ತನ್ನ ನಾಯಿ ‘ಶಿಬಾ ಇನು' ಚಿತ್ರವನ್ನು ಹಕ್ಕಿಯ ಬದಲು ಪ್ರಕಟ ಮಾಡಿದ್ದರು. ಒಂದು ದಿನದ ಬಳಿಕ ಮತ್ತೆ ಹಕ್ಕಿಯ ಲೋಗೋ ಟ್ವಿಟರ್ ಗೆ ಮರಳಿತ್ತು. ಯಾವಾಗ ಎಲಾನ್ ಮಸ್ಕ್ ಟ್ವಿಟರ್ ನ್ನು ಖರೀದಿಸಿದರೋ ಅಂದಿನಿಂದ ಒಂದಲ್ಲಾ ಒಂದು ಬದಲಾವಣೆ ಆಗುತ್ತಲೇ ಇದೆ. ಮೊದಲಿಗೆ ಟ್ವಿಟರ್ ನ ಉದ್ಯೋಗಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತ ಮಾಡಿದರು. ನಂತರ ಟ್ವಿಟರ್ ಖಾತೆಗೆ ಚಂದಾದಾರಿಕೆಯನ್ನು ನಿಗದಿ ಪಡಿಸಿದರು. ತಿಂಗಳಿಗೆ ಇಂತಿಷ್ಟು ಚಂದಾ ಹಣವನ್ನು ನೀಡಿದವರಿಗೆ ಮಾತ್ರ ಅಧಿಕೃತ ‘ಬ್ಲೂ ಟಿಕ್' ಮಾರ್ಕ್ ಸಿಗುವಂತೆ ಮಾಡಿದರು. ಇದಕ್ಕೆ ನಕಲು ಖಾತೆಗಳನ್ನು ಗುರುತಿಸುವ ಉದ್ದೇಶ ಎಂಬ ಹೇಳಿಕೆ ನೀಡಿದರು. ಬಹುತೇಕ ಗಣ್ಯ ವ್ಯಕ್ತಿಗಳು ಹಣ ತೆತ್ತು ಚಂದಾದಾರಿಕೆಯನ್ನು ಪಡೆದುಕೊಂಡು ಬ್ಲೂ ಟಿಕ್ ಅನ್ನು ಖಾಯಂ ಆಗಿಸಿ ಕೊಂಡರು.
ನಂತರ ಟ್ವಿಟರ್ ನಲ್ಲಿ ನೀವು ಹಾಕುವ ಪೋಸ್ಟ್ ಗೆ ಮಿತಿ ನಿಗದಿ ಮಾಡಿದರು. ಹಾಗೆಯೇ ನೀವು ನೋಡ ಬಹುದಾದ ಟ್ವೀಟ್ ಗಳ ಸಂಖ್ಯೆಗೂ ಮಿತಿ ಹಾಕುವ ಕೆಲಸ ಮಾಡಿದರು. ಈ ನಡುವೆ “ಥ್ರೆಡ್'” ಎನ್ನುವ ಹೊಸ ಜಾಲತಾಣ ಹೊರಬಂತು. ಟ್ವಿಟರ್ ನ ಕಿರಿಕಿರಿಯನ್ನು ನೋಡಿ ಬೇಸತ್ತ ಹಲವಾರು ಮಂದಿ ಥ್ರೆಡ್ ಕಡೆಗೆ ಮುಖ ಮಾಡಿದರು. ಜಾಹೀರಾತು ಆದಾಯ ಕಡಿಮೆಯಾಗತೊಡಗಿದಾಗ ಮತ್ತೆ ಎಲಾನ್ ಮಸ್ಕ್ ತಾಳ್ಮೆ ಕಳೆದುಕೊಂಡಂತೆ ಕಾಣಿಸುತ್ತಿದೆ. ಈಗ ಟ್ವಿಟರ್ ನ ಲೋಗೋ ಹಕ್ಕಿಯನ್ನು ತಮ್ಮ ಮೆಚ್ಚಿನ ಆಂಗ್ಲ ಅಕ್ಷರವಾದ 'ಎಕ್ಸ್' (X) ಗೆ ಬದಲಾಯಿಸಿದ್ದಾರೆ. ಈಗ ಟ್ವಿಟರ್ ಖಾತೆಯಲ್ಲಿ ಉಲಿಯುವ ನೀಲಿ ಹಕ್ಕಿಯ ಬದಲು ‘ಎಕ್ಸ್’ ಎಂಬ ವಿನೂತನ ಲೋಗೋ ಕಾಣಿಸುತ್ತಿದೆ. ಇನ್ನು ಟ್ವಿಟರ್, ಟ್ವೀಟ್ ಮೊದಲಾದ ಹೆಸರುಗಳೂ ಬದಲಾಗುವ ದಿನಗಳು ದೂರವಿಲ್ಲ ಅನಿಸುತ್ತಿದೆ.
ಈ ಎಲ್ಲಾ ನಿರ್ಧಾರಗಳು ಎಷ್ಟು ಮಟ್ಟಿಗೆ ಟ್ವಿಟರ್ ನ ಆದಾಯಕ್ಕೆ ಉಪಯುಕ್ತವಾದೀತು ಎನ್ನುವುದನ್ನು ಭವಿಷ್ಯವೇ ಹೇಳಬೇಕು. ಆದರೆ ಇಂತಹ ಚಟುವಟಿಕೆಗಳಿಂದಾಗಿ ಬಳಕೆದಾರರಿಗೆ ಬಹಳಷ್ಟು ಗೊಂದಲಗಳು ಆಗುತ್ತಿರುವುದು ಸಹಜ. ಹಲವಾರು ವರ್ಷಗಳಿಂದ ಹಕ್ಕಿಯ ಲೋಗೋ ನೋಡಿ ಟ್ವಿಟರ್ ಎಂದು ಗುರುತಿಸುತ್ತಿದ್ದ ಬಳಕೆದಾರರಿಗೆ ಒಮ್ಮೆಗೇ ಬದಲಾದ ಎಕ್ಸ್ ಲೋಗೋ ಅವರನ್ನು ಗೊಂದಲಕ್ಕೆ ದೂಡಿರಬಹುದು.
ಟ್ವಿಟರ್ ಅಧಿಕೃತ ಬಳಕೆದಾರರಾಗಿ ಕೇಂದ್ರ, ರಾಜ್ಯ ಸರಕಾರಗಳು, ದೊಡ್ಡ ದೊಡ್ದ ಉದ್ಯೋಗಪತಿಗಳು, ಸಿನೆಮಾ ನಟ-ನಟಿಯರು, ಆಟಗಾರರು ಹೀಗೆ ಹಲವಾರು ಮಂದಿ ಇದ್ದಾರೆ. ಈ ಕಾರಣದಿಂದ ಟೀಟರ್ ನಲ್ಲಿ ಮೂಡಿ ಬರುವ ಟ್ವೀಟ್ ಗೆ ಬಹಳಷ್ಟು ಮೌಲ್ಯ ಇದೆ. ಇದರಲ್ಲಿ ಬರೆಯುವ ಅಕ್ಷರಗಳಿಗೆ ಮಿತಿ ಇರುವುದರಿಂದ ಉದ್ದುದ್ದದ ಬರಹಗಳು ಕಂಡು ಬರುವುದಿಲ್ಲ. ಆ ಕಾರಣದಿಂದಾಗಿ ಇದು ಬಹಳಷ್ಟು ಜನರನ್ನು ಆಕರ್ಷಿಸಿದೆ. ಹಲವಾರು ಬದಲಾವಣೆಗಳ ಬಳಿಕ ಟ್ವಿಟರ್ ಸ್ಥಿತಿ ಏನಾದೀತು ಎಂಬುವುದನ್ನು ಕಾದುನೋಡಬೇಕಾಗಿದೆ.
ಚಿತ್ರ ಕೃಪೆ: ಅಂತರ್ಜಾಲ ತಾಣ