ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ

ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ

ಬರಹ

ಒಮ್ಮೊಮ್ಮೆ ಶಬ್ದವೊಂದು ಮನಸ್ಸನ್ನು ಆವರಿಸಿಕೊಳ್ಳುವ ರೀತಿ ಕಂಡು ಅಚ್ಚರಿಯಾಗುತ್ತದೆ.

ಇಂಗ್ಲಿಷ್‌ನಲ್ಲಿ ಹಿಪಾಕ್ರಸಿ ಎಂಬ ಶಬ್ದವಿದೆ. ಕನ್ನಡದಲ್ಲಿ ಅದಕ್ಕೆ ಆಷಾಡಭೂತಿ ಎಂಬ ಅಧ್ವಾನದ ಹೆಸರಿದೆ. ಹಾಗಂದರೇನು ಎಂದು ತಕ್ಷಣಕ್ಕೆ ಗೊತ್ತಾಗದಿದ್ದರೆ ಹುಸಿವಾದ ಎಂತಲೋ, ಡಾಂಭಿಕತೆ ಎಂದೋ ಅರ್ಥ ಮಾಡಿಕೊಳ್ಳಬಹುದು. ಒಂದು ಉದಾಹರಣೆ ಮೂಲಕ, ಈ ಶಬ್ದದ ಅರ್ಥ ಹಾಗೂ ನಮ್ಮ ಅನೇಕ ಬುದ್ಧಿಜೀವಿಗಳ ಗೊಡ್ಡುತನವನ್ನು ನಿಮ್ಮ ಮುಂದಿಡಲು ಯತ್ನಿಸುತ್ತೇನೆ.

ಕರ್ನಾಟಕ-ಭಾರತ ಬಿಡಿ, ಜಗತ್ತಿನ ಯಾವುದೇ ಭಾಗದಲ್ಲಿ ಹಿಂದುಗಳಲ್ಲದವರ ಮೇಲೆ, ಮುಖ್ಯವಾಗಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ನರ ಮೇಲೆ ಹಲ್ಲೆಗಳಾಗಲಿ, ಅನ್ಯಾಯದ ಘಟನೆಗಳು ನಡೆಯಲಿ, ಕೋಮು ಸೌಹಾರ್ದ ಹೆಸರಿನ ಸಂಘಟನೆಗಳಿಗೆ ಜೀವ ಬಂದುಬಿಡುತ್ತದೆ. ಅವರು ನೀಡುವ ಪತ್ರಿಕಾ ಪ್ರಕಟಣೆಗಳೋ, ನಡೆಸುವ ಪತ್ರಿಕಾಗೋಷ್ಠಿಗಳೋ, ಹಮ್ಮಿಕೊಳ್ಳುವ ವಿಚಾರಗೋಷ್ಠಿಗಳೋ- ಅಬ್ಬಬ್ಬಾ ಒಂದಕ್ಕಿಂತ ಒಂದು ಭೀಕರ. ಜಗತ್ತಿನಲ್ಲಿ ಇದಕ್ಕಿಂತ ಕೆಟ್ಟದ್ದು ಇನ್ಯಾವುದೂ ಇರಲಿಕ್ಕಿಲ್ಲ ಎನ್ನುವಂತೆ, ಹೊಟ್ಟೆಯಲ್ಲಿ ಹುಟ್ಟಿದವರಿಗೇ ತೊಂದರೆಯಾಯಿತೇನೋ ಎಂಬಂತೆ ಶಾಬ್ದಿಕ ಅನುಕಂಪ ಹರಿಸಿದ್ದೇ ಹರಿಸಿದ್ದು, ಭಾಷಣ ವ್ಯಭೀಚಾರ ಎಸಗಿದ್ದೇ ಎಸಗಿದ್ದು.

ಇದನ್ನೇಕೆ ವ್ಯಭೀಚಾರಕ್ಕೆ ಹೋಲಿಸುತ್ತಿದ್ದೇನೆಂದರೆ, ಒಂದು ವೇಳೆ ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಇತರ ಧರ್ಮೀಯರ ಮೇಲೆ ದಾಳಿ ಮಾಡಿದ್ದರೆ ಇವರ ಕಾಳಜಿ ಕಾಣುವುದಿಲ್ಲವಾದ್ದರಿಂದ. ಉದಾಹರಣೆಗೆ ನೋಡಿ, ಕರ್ನಾಟಕದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಿದ ಹಾಗೂ ಎಸಗಲು ಹೊಂಚು ಹಾಕುತ್ತಿದ್ದ ಸಾಲು ಸಾಲು ಉಗ್ರರನ್ನು ಪೊಲೀಸರು ಬಂಧಿಸಿದಾಗ, ಕೋಮು ಸೌಹಾರ್ದ ವೇದಿಕೆ ಕತ್ತೆ ಮೇಯಿಸಲು ಹೋಗಿತ್ತೇನೋ. ಧಾರ್ಮಿಕ ಅಲ್ಪಸಂಖ್ಯಾತರ ಪರ ಎಂದು ಘೋಷಣೆ ಕೂಗುವ ಈ ನಾಯಕ-ನಾಯಕಿಯರು ತುಟಿ ಬಿಚ್ಚದೇ ಸುಮ್ಮನೇ ಕೂತಿದ್ದರು.

ಏಕೆ?

ಏಕೆಂದರೆ, ಹಿಂದುಗಳ ಪರ ನಿಲ್ಲುವುದಕ್ಕೆ ಅವರಿಗೆ ನಾಚಿಕೆ. ತಪ್ಪು ಯಾರೇ ಮಾಡಲಿ, ಅದು ಖಂಡನಾರ್ಹ ಎಂಬ ನಿಲುವು ತಳೆಯಲು ನಿಜವಾದ ಆದರ್ಶದ, ಸಚ್ಚಾರಿತ್ಯ್ರದ ಕೊರತೆ. ಹೇಗಿದ್ದರೂ ಹಿಂದುಗಳ ಪರ ನಿಲ್ಲಲು ಬಿಜೆಪಿ ಇದೆ. ಹಿಂದು ಪರ ಸಂಘಟನೆಗಳಿವೆ. ಅವರಿಗೆ ಎದುರಾಗಿ ನಿಂತರೆ ಬಿಟ್ಟಿ ಪ್ರಚಾರ ಸಿಗುವ ಖಾತರಿ ಇರುವುದರಿಂದ ಕೋಮು ಸೌಹಾರ್ದತೆ ಭಾಷಣಗಳು, ಭಾಷಣ ವ್ಯಭೀಚಾರಿಗಳು ಹುಟ್ಟಿಕೊಂಡಿದ್ದಾರೆ.

ಇವರಲ್ಲಿ ಬಹುತೇಕ ಜನ ಹುಸಿ ಆದರ್ಶವಾದಿಗಳು. ಢೋಂಗಿಗಳು. ಸರಿಯಾಗಿ ಹೇಳಬೇಕೆಂದರೆ ಆಷಾಡಭೂತಿಗಳು. ಕೂಗಾಡಲು ವಿಷಯ ಇಲ್ಲದ ದಿನಗಳಲ್ಲಿ ಅವರ ಚಟುವಟಿಕೆ ನೋಡಿದರೆ ಸಾಕು, ಸತ್ಯ ಗೊತ್ತಾಗುತ್ತದೆ. ಅದೂ ಬೇಡ, ಅವರು ಕೆಲಸ ಮಾಡುವಲ್ಲಿ, ವಾಸಿಸುವಲ್ಲಿ ಒಂದೆರಡು ಗಂಟೆ ಇದ್ದರೆ ಸಾಕು, ಆಷಾಡಭೂತಿತನ ಅಥವಾ ಹಿಪಾಕ್ರಸಿ ಎಂಬ ಶಬ್ದಕ್ಕೆ ಸಜೀವ ಅರ್ಥ ಸಿಕ್ಕಿಬಿಡುತ್ತದೆ.

ಇಂಥ ನೀಚ-ನೀಚೆಯರಿಂದಾಗಿ ಕೋಮುವಾದ ಹಾಗೂ ಕೋಮು ಸೌಹಾರ್ದ ಶಬ್ದಗಳೆರಡೂ ನಿಜಾರ್ಥ ಕಳೆದುಕೊಂಡಿವೆ. ಒಂದು ವರ್ಗದ ಜನರನ್ನು ತಿರಸ್ಕರಿಸುತ್ತ, ಇನ್ನೊಂದು ವರ್ಗದವರನ್ನು ಓಲೈಸುವ ಮೂಲಕ ಪ್ರಚಾರ ಪಡೆಯಲು ಈ ಜನ ಯತ್ನಿಸುತ್ತಿದ್ದಾರೆ. ಇಂಥ ಆಷಾಡಭೂತಿಗಳಿಗೂ ಹಾಗೂ ಇದೇ ಕೆಲಸವನ್ನು ನಿರ್ಲಜ್ಜವಾಗಿ ಮಾಡುತ್ತಿರುವ ಹಿಂದು ಪರ ಸಂಘಟನೆಗಳಿಗೂ ಏನೂ ವ್ಯತ್ಯಾಸವಿಲ್ಲ.

ಎರಡೂ ಸಾಮಾಜಿಕ ಸ್ವಾಸ್ಥ್ಯಕ್ಕೆ ಅಂಟಿಕೊಂಡ ವ್ರಣಗಳೇ!

- ಚಾಮರಾಜ ಸವಡಿ