ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
ಸಿನೆಮಾ ನಟನಟಿಯರು ಏನೇ ಪ್ರಚಾರ ಮಾಡಲಿ, ಪೆಪ್ಸಿ, ಕೊಕಾಕೋಲ, ಗೊರಟಿಲ್ಲದ ಮಾವಿನ ಜ್ಯೂಸ್ ಎಲ್ಲಾ ಪುನರ್ಪುಳಿ (ಕೋಕಂ) ಜ್ಯೂಸ್‌ನ ಎದುರಿಗೆ ಬಚ್ಚಾಗಳು.
ಎಂಥಾ ಕಲರ್-ಕೆಂಪು ಕೆಂಪು.. ನ್ಯಾಚುರಲ್ ಬಣ್ಣ. ಹುಳಿ-ಸಿಹಿ ರುಚಿ, ಹೊಟ್ಟೆ,ತಲೆ,ಮೈಗೆ ತಂಪು ತಂಪು. ಇದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ.
೨೦ ರಿಂದ ೩೦ ಅಡಿ ಎತ್ತರ ಬೆಳೆಯುವ ಕೋಕಂ ಮರ ದ.ಭಾರತದ ಕೊಂಕಣ,ಗೋವಾ ಭಾಗದಲ್ಲಿ ಹೆಚ್ಚಾಗಿ ಕಂಡುಬರುವುದು. ಸಿಪ್ಪೆ ಕೆಂಪು ಬಣ್ಣದಿದ್ದು ಒಳಗಿನ ಹಣ್ಣು ಸಿಹಿ-ಹುಳಿ ರುಚಿ. ಬೀಜ ೫-೭ ಇರುವುದು. ಬೆಳೆದ ಹಣ್ಣುಗಳನ್ನು ಹಿಚುಕಿ, ಬೀಜ ತೆಗೆದು,ಸಿಪ್ಪೆ ಜತೆಯಲ್ಲಿ ಬೇಯ್ಸಿ, ಸೋಸಿ, ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಬೆರೆಸಿ, ಪಾಕ ಮಾಡಿ ಬಾಟಲಲ್ಲಿ ತುಂಬಿಸಿ ಇಟ್ಟುಕೊಂಡರಾಯಿತು.-ಪುನರ್ಪುಳಿ ಜ್ಯೂಸ್.
ಪುನರ್ಪುಳಿಯ ಸಿಪ್ಪೆಯನ್ನು ಒಣಗಿಸಿ ತೆಗೆದಿಟ್ಟುಕೊಂಡರೆ, ಯಾವ ಕಾಲಕ್ಕೂ ಸಾರು ಮಾಡಲು ಆಗುವುದು. ಪಿತ್ತಕ್ಕೆ ಒಳ್ಳೆಯದಂತೆ. ಇನ್ನು ಬೀಜಗಳನ್ನು ಒಣಗಿಸಿ, ನೀರಲ್ಲಿ ಕುದಿಸಿ ಆರಿಸಿದಾಗ- ಬೀಜದೊಳಗಿದ್ದ ಎಣ್ಣೆ ಅಂಶ ನೀರಲ್ಲಿ ತೇಲತೊಡಗುತ್ತದೆ. ಈ ತೈಲವನ್ನು ಬೆಣ್ಣೆಯಂತೆ (kokum butter) ತೆಗೆಯಬಹುದು. ಈ ತೈಲ ಗಾಯಗಳಿಗೆ ಅದರಲ್ಲೂ ಸುಟ್ಟಗಾಯಗಳಿಗೆ ರಾಮಬಾಣ. ಸಂ : ವೃಕ್ಷಾಮ್ಲ, ತಿತಿಡೀಕ, ರಕ್ತಪೂರಕ.
ಕ : ಮುರುಗಲು, ಬೀರುಂಡ.
ಇಂ : kokaum butter tree, red mango, mangosteen.
********************************************* ************************
ನಾವು ಚಿಕ್ಕವರಿದ್ದಾಗ ಹಳ್ಳಿಯಲ್ಲಿ, ಕ್ರಿಕೆಟ್ ಆಟ ಮುಗಿಸಿ (ಜಗಳದಲ್ಲಿ), ಹತ್ತಿರದ ತೋಟಕ್ಕೆ ( ಕಾಡು ಎನ್ನಬಹುದು) ನುಗ್ಗುತ್ತಿದ್ದೆವು. ತೋಟದ ಮಾಲಿಕರ ಮಕ್ಕಳೂ ನಮ್ಮ ಜತೆ ಇರುವುದರಿಂದ ಭಯವಿರಲಿಲ್ಲ. ಎಷ್ಟೊಂದು ಹಣ್ಣಿನ ಮರಗಳು- ಗೇರು,ಮಾವು,ಹಲಸು, ಹೆಬ್ಬಲಸು,ನೇರಿಳೆ.. ಗೇರು ಹಣ್ಣು ಎಷ್ಟು ಬೇಕಾದರೂ ತಿನ್ನಬಹುದು. ಬೀಜ ಅಲ್ಲೇ ಬಿಸಾಡಬೇಕು. ಇದೊಂದೇ ಕಟ್ಟುಪಾಡು. ಈ ಹೆಬ್ಬಲಸು (ಪೆಜಕ್ಕಾಯಿ) ಬಹಳ ಎತ್ತರಕ್ಕೆ ಬೆಳೆಯುವ ಮರ. ಮಕ್ಕಳು ಇದಕ್ಕೆ ಹತ್ತಲು ಕಷ್ಟ. ‘ನಿಜ’ ಮಂಗಗಳಿಗೆ ಈ ಒಂದು ಹಣ್ಣಾದರೂ ಉಳಿಯಲಿ ಎಂದು ದೇವರು ಮಾಡಿದ ವ್ಯವಸ್ಥೆ ಇರಬೇಕು. ಆದರೂ ನಾವು ಕಲ್ಲು ಹೊಡೆದು ಬೀಳಿಸಿ, ಅರ್ಧಂಬರ್ದ ಬಜ್ಜಿಯಾದುದನು ತಿನ್ನುತ್ತಿದ್ದೆವು. ---ಈ ಹೆಬ್ಬಲಸನ್ನು ಹಲಸಿಗೆ ಕಸಿಕಟ್ಟಲು ಸಾಧ್ಯವಿಲ್ಲವೇ?
*********************************************************************
ಕೊಟ್ಟೇಹಣ್ಣು ಮತ್ತು ನಾಣಿಲೆ (ತುಳು ಹೆಸರುಗಳು?) ಯ ವಿವರ (ಕನ್ನಡ,ಸಂಸ್ಕೃತ ಹೆಸರು) ಯಾರಿಗಾದರೂ ಗೊತ್ತಿದೆಯಾ? (ನಾಣಿಲೆ-ಉದ್ದಕ್ಕೆ,ತೆಳು ಹಣ್ಣು.ಸಪೋಟದ ಬೀಜದ ತರಹ ಒಂದು ಬೀಜವಿರುವುದು)
-ಗಣೇಶ.