ಗಂಡುಗಲಿ ಕುಮಾರರಾಮ
ಕವನ
ಹುರಿಮೀಸೆ ಸೆಟೆದುದಟದಲಿ ಹುರಿಯಾದುದತಿ ರುಧಿರ ಸಿಂಚನಕೆ |
ಧಗಧಗಿಸುವ ಕಣ್ಣಾಲಿಗಳ್ ಕೆಂಪಡರಿ ಕ್ರೋಧಾಧಿಕ್ಯದಿಂದುರಿದುರಿದುದತಿ |
ಕೋಪಾಟೋಪದೊಳ್ ಕೆಂಜಡೆ ಹೊಯ್ದಾಡಿದುದುಘಟಸರ್ಪದೋಲ್ |
ಫೂತ್ಕರಿಸಿದನು ರಣಕಲಿ ಗಂಡುಗಲಿ ಕುಮಾರರಾಮ ತರಿಯುತರಿತಲೆಗಳ ಖಡ್ಗದಿಂ |
ದಿಸೆದಿಸೆಗೆಸೆದನು ರುಂಡಗಳ ಚೆಂಡಾಡುತ ಧಡಧಡ ದಾಂಗುಡಿಯಿಡೆ |
ರಣರಂಗದಲಡಿಗಡಿಗೆ ಗಡಗಡನೆ ನಡುಗುತುಡುಗಿದವಡಿಗಡಿಗೆ |
ಭಟರ ಗುಂಡಿಗೆಗಳ್ ರಣಚೆಂಡಾಟದ ರುದ್ರತಾಂಡವದೊಳುದ್ಧಟ |
ಗಂಡರಗಂಡರೆದೆಯೊಡೆದುದು ತುಂಡರಿಸಲರಿಗಳೊಡಲುಗಳ |
ತರಿಯುತ ಬಾಳುಕದಿ ಸೀಳೆ ತಲೆ ಬುರುಡೆಗಳೊಳಗಿನ ಮೆದುಡೊಡೆದೊಡೆದು |
ಹೊರಹೊಂಟು ಚೆಲ್ಲಾಡೆ ಎಂಟೆದೆ ಬಂಟರ ಬಾಯ್ಗೆ ಬಂದುದು ಜೀವ |
ಬಿಟ್ಟೋಡಿದರರಿಭಟರ್ ಬದುಕುವಾಸೆಯೊಳ್ ಪ್ರಾಣಭಯದಿಂ ಕೊಳುಗುಳವ |
ಕಾಲಭೈರವ ಕಲಿ ಕುಮಾರರಾಮನುಪಟಳವ ತಡೆಯಾದದರ್ ರಣದೊಳ್ |
ಜಯಪ್ರಕಾಶಿತ ಗಂಡುಗಲಿ ಕುಮಾರ ರಾಮ ರಣ ಭೀಷಣ |
ಕದನ ವಿಜೃಂಭಣ ಸರಳಗನ್ನಡ ಗದ್ಯ ರಣ ವರ್ಣನ ||