ಗಝಲ್ ಗಳ ಲೋಕ

ಗಝಲ್ ಗಳ ಲೋಕ

ಕವನ

೧.

ಅರಳಬಹುದೆ ಮತ್ತೆ ವಸಂತ ನನ್ನ ಬದುಕಲಿ

ನರಳ ಬಹುದೆ ದ್ವೇಷ ರೋಷ ನನ್ನ ಮನದಲಿ

 

ನೋವು ಇರುವ ಮಾತಿಗಿಂದು ಪ್ರೀತಿ ಇಲ್ಲವೇತಕೆ

ಸಾರವಿರದ ಮಧುರ ಲತೆಯೇ ನನ್ನ ಜೊತೆಯಲಿ

 

ಕನಸಿನೊಳಗೆ ನನಸುಯಿರದೆ ಜೀವ ಸೊರಗಿತೇತಕೆ

ಹಣದ ಹೊಳೆಯೆ ತೇಲಿ ಇಹುದು ನನ್ನ ಮನೆಯಲಿ

 

ಉಪ್ಪು ಕಾರ ತಿಂದ ದೇಹ ಹುಳಿಯ ಕಾರಿದೆ

ಕರುಣೆಯಿರದ ವಿಷವು ಸೇರೆ ನನ್ನ ಗುಣದಲಿ

 

ಸ್ವರ್ಗ ನರಕ ಎರಡು ಜೊತೆಗೆ ಸಾಗುತಿಹುದು ಈಶಾ

ಅರಳೆ ಇರದ ಹೃದಯ ನೋವು ನನ್ನ ನನಸಲಿ

***

೨.

ನಾ ಹೋತ್ತೆ ಹೇಳಿರ್ ನೀ ಬಿಡ್ತಿಲ್ಲಿಯಾ ಕೂಸೆ

ಮತ್ತದೇ ಕನಸ್ಸಿಗೆ ಎನ್ನ ದೂಡ್ತಿಲ್ಲಿಯಾ ಕೂಸೆ

 

ಎಂತ್ತಾತ್ ಮುಳುಗಿ ಹೋತೆನಾ ನಿನ್ ಮನ್ಸೀಗಾ

ಸುಖ್ ಇಲ್ದೇಯಾ ಸುಮ್ನೆ ಕಾಡ್ತಿಲ್ಲಿಯಾ ಕೂಸೆ

 

ಉಪ್ಪ್ ಖಾರ ತಿಂದುಂಬ ದೇಹಕ್ಕ್ ಈಗ ಸೊಕ್ಕ್ 

ತಡ್ಡ್ಕೊಂಬಂಗಾವುತ್ತಿಲ್ಲೆ ಹೇಳ್ತಿಲ್ಲಿಯಾ ಕೂಸೆ

 

ಬಡ್ಕೊಂಡ್ ನಡೆತ್ತೆ ತವರ್ ಮನೆಗೆ ಅಂದ್ ಹೇಳಿದ್ದೆ

ಕಂಡವರ್ರಲ್ಲೆ ಕುಳ್ಕೋಳ್ತೆ ನೋಡ್ತಿಲ್ಲಿಯಾ ಕೂಸೆ

 

ಈಶನ್ ಭೇಟ್ಟಿಗೆ ಯಾವಾಗ್ ಬೇಕಾರು ಬಾ ತಿಳಿತಲ್ಲೊ

ಉಪುಕಾರ ಮಾಡಿರೊನ್ನಾ ನಿನ್ಗೆ ಕಾಣ್ತಿಲ್ಲಿಯಾ ಕೂಸೆ

***

೩. 

ಮಧು ಚಂದ್ರನ ಹುಣ್ಣಿಮೆಯ ದಿನವೆ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇನೆ ಚೆಲುವೆ

ಮನದೊಳಗಿನ ಒಲವಿನ ಹಾಗೇ ತಬ್ಬಿ ಹಿಡಿದು ನಿನಗಾಗಿಯೇ ಕುಳಿತ್ತಿದ್ದೇನೆ ಚೆಲುವೆ

 

ಸುಖದ ಅಮಲಿನ ನಡುವೆಯೆ ಬೀಸುವ ತಂಗಾಳಿಗೆ ಮತ್ತಷ್ಟು ಬೆರೆಸಿದೆ ನಿದಿರೆಯನು ಏಕೆ

ಎದೆ ಬಯಕೆಯ ನಲಿವ ನಡುವೆ ಉಲಿವ ಹೊಸ ಮನ್ವಂತರವ ಬಯಸುತ್ತಿದ್ದೇನೆ ಚೆಲುವೆ

 

ಅರಳಿರುವ ಕೆಂಪು ಹೂವಿನ ನೆತ್ತರದು ಹರಡದಿರಲಿ ಸುತ್ತ ಮುತ್ತಲು ಸವಿಯು ಇರುವಾಗ

ಪ್ರೀತಿಯು ಉಕ್ಕುತ್ತಿರುವ ಸಮಯ ಸನಿಹವೇ ಇರು ನೀಯೆಂದು ಕೇಳುತ್ತಿದ್ದೇನೆ ಚೆಲುವೆ

 

ಅರಮನೆಯೊಳಗಿನ  ಒಲವಿನಾಸರೆಯ ಬದುಕು ಗೂಡೊಳಗೆ ಜೊತೆಯಲ್ಲಿ ಬಾರದಿರಲಿ

ಬಡವರ ಗುಡಿಸಲಿನಲ್ಲಿ ಸಿಗುವಂತಹ ನನಸಿನಾಳದ ಪ್ರೇಮಗಳ ಹುಡುಕುತ್ತಿದ್ದೇನೆ ಚೆಲುವೆ

 

ಸಕಲ ವಾಲಗದೊಡನೆ ಹಸೆಮಣೆಯನ್ನೇರಿ ಶಾಸ್ತ್ರಗಳನು ಮುಗಿಸಿ ಹೊರಟಿರುವೆಯಾ ಈಶಾ

ನಲುಮೆಯ ಹೂವ ಮಂಚಕೆ ಮದನನೆನುವ ಇಂದ್ರನಾಗಿ ನಿನ್ನ ನಾ ಕರೆಯುತ್ತಿದ್ದೇನೆ ಚೆಲುವೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್