ಗರಿಗರಿ ಆದಾಯಕ್ಕೆ ತರಕಾರಿಯೇ ತರವಯ್ಯಾ

ಗರಿಗರಿ ಆದಾಯಕ್ಕೆ ತರಕಾರಿಯೇ ತರವಯ್ಯಾ

ತರಕಾರಿಗಳ ಬೆಲೆ ಗಮನಿಸಿದ್ದೀರಾ? ಕಳೆದ ಹತ್ತು ವರುಷಗಳಲ್ಲಿ ಅದು ಏರುತ್ತಲೇ ಇದೆ. 2013ರಲ್ಲಂತೂ ತರಕಾರಿಗಳ ಬೆಲೆಯಲ್ಲಾದ ಹೆಚ್ಚಳ ಶೇಕಡಾ 80. ಹಣದುಬ್ಬರದ ಲೆಕ್ಕಾಚಾರ ಮಾಡುವಾಗ ಪರಿಗಣಿಸುವ ವಿವಿಧ ವಸ್ತುಗಳ ಬೆಲೆ ಹೆಚ್ಚಳದಲ್ಲಿ  ತರಕಾರಿಗಳ ಬೆಲೆಯ ಹೆಚ್ಚಳವೇ ಅತ್ಯಧಿಕ.

ಆದ್ದರಿಂದಲೇ ನಮ್ಮ ದೇಶದ ಉದ್ದಗಲದಲ್ಲಿ ಹೆಚ್ಚೆಚ್ಚು ಕೃಷಿಕರು ತರಕಾರಿ ಕೃಷಿ ಕೈಗೆತ್ತಿಕೊಳ್ಳುತ್ತಿದ್ದಾರೆ – ಪ್ರಮುಖವಾಗಿ ಮಳೆಯಾಧಾರಿತ ಪ್ರದೇಶಗಳಲ್ಲಿರುವ ರೈತರು. ಇದರಿಂದಾಗಿ, ಭಾರತಕ್ಕೆ ದೊರಕಿರುವ ಮನ್ನಣೆ: ತರಕಾರಿ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನ.

ಈ ಬೆಳವಣಿಗೆಗೆ ಕಾರಣಗಳೇನು? ಮುಖ್ಯ ಕಾರಣ: ಹಿಡುವಳಿಗಳ ಕುಗ್ಗುತ್ತಿರುವ ವಿಸ್ತೀರ್ಣ. ಭಾರತದ ಕೃಷಿ ಹಿಡುವಳಿಗಳ ಸರಾಸರಿ ವಿಸ್ತೀರ್ಣ 1970ರಲ್ಲಿ 2.28 ಹೆಕ್ಟೇರ್ ಆಗಿದ್ದರೆ, 2010ರಲ್ಲಿ 1.22 ಹೆಕ್ಟೇರಿಗೆ ಕುಸಿದಿದೆ. ಅಂದರೆ, ಅಂದಿನ ವಿಸ್ತೀರ್ಣದ ಅರೆಭಾಗಕ್ಕೆ ಇಳಿದಿದೆ! ಈಗ ಇದು ಇನ್ನಷ್ಟು ಕುಸಿದಿದೆ. ಇಂತಹ ಸಣ್ಣ ಹಿಡುವಳಿಗಳಲ್ಲಿ ಗೋಧಿ, ಭತ್ತ ಇತ್ಯಾದಿ ಆಹಾರಬೆಳೆಗಳ ಕೃಷಿ ಕಡಿಮೆ ಲಾಭದಾಯಕ. ಅದಲ್ಲದೆ, ಆಹಾರಬೆಳೆಗಳಿಗೆ ನೀರಾವರಿ ಅಗತ್ಯ. ಆದರೆ ನಮ್ಮ ದೇಶದ ಶೇ.60 ಕೃಷಿಭೂಮಿ ಮಳೆಯಾಧಾರಿತ. ಹಾಗಾಗಿ, ಅವನ್ನು ಬೆಳೆಸುವ ರಿಸ್ಕ್ ತೆಗೆದುಕೊಳ್ಳುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ.

ಮುಂಗಾರು ಕಳೆದ ಐದಾರು ವರುಷಗಳಲ್ಲಿ ಇನ್ನಷ್ಟು ಅನಿಶ್ಚಿತವಾಗಿದೆ . ಹಾಗಾಗಿ, ಸಣ್ಣ ಮತ್ತು ಅತಿಸಣ್ಣ ರೈತರು ತರಕಾರಿ ಕೃಷಿಯನ್ನು ಆದಾಯಮೂಲವಾಗಿ ಅವಲಂಬಿಸುತ್ತಿದ್ದಾರೆ. ಯೋಜನಾ ಆಯೋಗದ ತೋಟಗಾರಿಕಾ ಕಾರ್ಯತಂಡವೊಂದು ತನ್ನ ವರದಿಯಲ್ಲಿ ಹೀಗೆಂದಿದೆ: ಸಣ್ಣ ಮತ್ತು ಅತಿಸಣ್ಣ ರೈತರು ಕೃಷಿಭೂಮಿಯ ಶೇ.44 ಮಾಲೀಕತ್ವ ಹೊಂದಿದ್ದರೂ, ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ತರಕಾರಿಗಳ ಶೇ.70 ಬೆಳೆಸುತ್ತಿದ್ದಾರೆ.

ಮಾತ್ರವಲ್ಲ, ಗ್ರಾಹಕರು ತರಕಾರಿಗಳನ್ನು ಹೆಚ್ಚೆಚ್ಚು ಖರೀದಿಸುತ್ತಿರುವುದೂ ಅವುಗಳ ಬೇಡಿಕೆ ಹೆಚ್ಚಾಗಲು ಕಾರಣ. ಕಳೆದ ಆರೇಳು ವರುಷಗಳಲ್ಲಿ ಆಹಾರದ ಹಣದುಬ್ಬರ ಏರುತ್ತಲೇ ಇದೆ. ಇದಕ್ಕೆ ಕಾರಣ, ಹಣ್ಣುಗಳು, ತರಕಾರಿಗಳು, ಹೈನ ಉತ್ಪನ್ನಗಳು ಮತ್ತು ಮೀನಿನ ಬೆಲೆಗಳ ಹೆಚ್ಚಳ. ಆದರೂ, ಜನರು ಸೇವಿಸುವ ಆಹಾರದಲ್ಲಿ ಇವುಗಳ ಪಾಲು ಹೆಚ್ಚುತ್ತಲೇ ಇದೆ.

ಯೋಜನಾ ಆಯೋಗದ ಅಂದಾಜುಗಳ ಪ್ರಕಾರ, ವರುಷ 2000ದಿಂದ ತರಕಾರಿಗಳ ಉತ್ಪಾದನಾ ಹೆಚ್ಚಳ ದರ ಏರಿಕೆಯಾಗುತ್ತಿದೆ. ಅದೇನಿದ್ದರೂ, ನಮ್ಮ ದೇಶದಲ್ಲಿ ತರಕಾರಿಗಳ ಪೂರೈಕೆಯು ಬೇಡಿಕೆಯನ್ನು ಸರಿದೂಗುತ್ತಿಲ್ಲ. ಆದ್ದರಿಂದಲೇ ತರಕಾರಿಗಳ ಬೆಲೆಯೇರಿಕೆ ಗಣನೀಯ.

ನೂರಾರು ನಮೂನೆಯ ತರಕಾರಿಗಳ ಆಗರವಾದ ನಮ್ಮ ದೇಶದಲ್ಲಿಯೂ ಯಾಕೆ ಹೀಗಾಗುತ್ತಿದೆ? ಇದಕ್ಕೂ ಕಾರಣಗಳು ಹಲವಾರು. ಜಗತ್ತಿನ 400 ತರಕಾರಿ ಪ್ರಭೇದಗಳಲ್ಲಿ 80ಕ್ಕೆ ಭಾರತವೇ ಮೂಲ ಎಂದು ಹೇಳಲಾಗಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅಂಗಸಂಸ್ಥೆಯಾದ ಭಾರತೀಯ ತರಕಾರಿ ಸಂಸ್ಥೆಯಲ್ಲಿ 4,548 ವಿವಿಧ ತರಕಾರಿ ತಳಿಗಳನ್ನು ಸಂರಕ್ಷಿಸಲಾಗಿದೆ. ಆದರೂ, ನಮ್ಮ ದೇಶದಲ್ಲಿ ಬೆಳೆಸುತ್ತಿರುವುದು 60 ತರಕಾರಿ ಪ್ರಭೇದಗಳನ್ನು ಮಾತ್ರ.

ಇನ್ನೊಂದು ಮುಖ್ಯ ಕಾರಣ, ರೈತರು ಬೆಳೆಸಿದ ತರಕಾರಿಗಳನ್ನು ಶೇಖರಿಸಲಿಕ್ಕಾಗಿ ಶೀತ ಉಗ್ರಾಣಗಳ ಕೊರತೆ. ಬಹುಪಾಲು ತರಕಾರಿಗಳ ಬಳಕೆಯೋಗ್ಯ ಅವಧಿ ಕೇವಲ 24ರಿಂದ 48 ಗಂಟೆಗಳು. ಆದ್ದರಿಂದ ತರಕಾರಿಗಳಿಗೆ ಶೀತ ಉಗ್ರಾಣಗಳು ಅತ್ಯಗತ್ಯ. ಉದಾಹರಣೆಗೆ ಜಾರ್ಖಂಡದಲ್ಲಿ ಬೆಳೆಸಿದ ತರಕಾರಿಗಳಲ್ಲಿ ಶೇ.25ರಿಂದ 40 ಭಾಗ ಈ ಕೊರತೆಯಿಂದಾಗಿ ಹಾಳಾಗುತ್ತಿದೆ. ಕರ್ನಾಟಕದಲ್ಲಿ ರೈತರು ಮತ್ತೆಮತ್ತೆ ಟೊಮೆಟೊ ರಸ್ತೆಗೆಸೆಯಲು ಇದುವೇ ಕಾರಣ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯಿದೆ, ತರಕಾರಿಗಳ ಸುಗಮ ಮಾರಾಟಕ್ಕೆ ಮತ್ತೊಂದು ತೊಂದರೆ. ಹಣ್ಣು ಮತ್ತು ತರಕಾರಿ ಬೆಳೆಗಾರರ ಬಹುಕಾಲದ ಬೇಡಿಕೆಗೆ ಮಣಿದು, ಕೇಂದ್ರ ಸರಕಾರವು “ಬೇಗನೇ ಹಾಳಾಗುವ ಕೃಷಿ ಉತ್ಪನ್ನಗಳ”ನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಮುಕ್ತಗೊಳಿಸಿದೆ. ಮಾದರಿ ಎಪಿಎಂಸಿ ಕಾಯಿದೆಯ ಪ್ರಕಾರ, ಬೆಳೆಗಾರರು ತಮ್ಮ ಕೃಷಿ ಉತ್ಪನ್ನಗಳನ್ನು ವ್ಯಾಪಾರಿಗಳಿಗೆ ನೇರವಾಗಿ ಮಾರಾಟ ಮಾಡಬಹುದು. ಆದರೆ ಕೆಲವು ರಾಜ್ಯಗಳು ಮಾತ್ರ ಈ ಮಾದರಿ ಕಾಯಿದೆಯನ್ನು ಅನುಮೋದಿಸಿವೆ.

ಎಲ್ಲದಕ್ಕಿಂತ ಮುಖ್ಯವಾಗಿ ತರಕಾರಿ ಬೆಳೆಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ. ಯಾಕೆಂದರೆ, ಕೃಷಿ ವಿಶ್ವವಿದ್ಯಾಲಯಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಆಶ್ರಯದಲ್ಲಿ ಈಗ ನಡೆಯುತ್ತಿರುವ ಸಂಶೋಧನೆ ಏನೇನೂ ಸಾಲದು.

ಒಂದು ಸಮಾಧಾನಕರ ಸಂಗತಿಯೆಂದರೆ, ತರಕಾರಿಗಳ ಬೇಡಿಕೆ ವರುಷವರುಷವೂ ಶೇ.4ರಿಂದ 5 ಹೆಚ್ಚುತ್ತಿದೆ. ಈ ಬೇಡಿಕೆ ಸರಿದೂಗಿಸಲಿಕ್ಕಾಗಿ ಹೆಚ್ಚೆಚ್ಚು ಕೃಷಿಕರು ತರಕಾರಿ ಕೃಷಿಯಲ್ಲಿ ತೊಡಗುವುದು ಜಾಣತನ.

Comments

Submitted by Ashwin Rao K P Thu, 03/16/2023 - 08:55

ಮನೆಯಂಗಳದಲ್ಲೇ ತರಕಾರಿ ಬೆಳೆಯುವುದು ಅಪೇಕ್ಷಣೀಯ !

ತರಕಾರಿ ಕೃಷಿ ಬಗ್ಗೆ ಬರೆದ ಲೇಖನ ಕಣ್ಣು ತೆರೆಸುವಂತಿತ್ತು. ನಿಜಕ್ಕೂ ಈಗೀಗ ತರಕಾರಿಯನ್ನು ತರಲು ಹೋದರೆ ಬಂಗಾರವನ್ನು ಕೊಂಡು ತಂದಂತೆ ಅನಿಸುತ್ತದೆ. ಏಕೆಂದರೆ ತರಕಾರಿ ದರ ವಿಪರೀತವಾಗಿ ಏರಿದೆ. ದೊಣ್ಣೆ ಮೆಣಸು ೯೦ ರೂ, ಅಲಸಂಡೆ, ಬೆಂಡೆ, ಬೀನ್ಸ್ ಎಲ್ಲವೂ ರೂ ೫೦ರ ಮೇಲೆ, ಯಾವಾಗಲೂ ಕನಿಷ್ಟ ದರದಲ್ಲೇ ಇರುತ್ತಿದ್ದ ಸೌತೇಕಾಯಿ, ಪಡುವಲ ಕಾಯಿ, ಕುಂಬಳಕಾಯಿ ದರಗಳೂ ರೂ ೩೦ ರ ಮೇಲೇ ಇವೆ. ಇವು ಹೊರ ಊರಿನ ತರಕಾರಿ ಕಥೆಯಾದರೆ, ಮಂಗಳೂರಿನ ಆಸುಪಾಸಿನಲ್ಲಿ ಬೆಳೆಯುವ 'ಊರಿನ' ತರಕಾರಿಗಳ ಬೆಲೆ ನೂರು ರೂಪಾಯಿ ಮೇಲೆ ಇದೆ. 

ನಮಗೆ ಬೇಕಾದಷ್ಟು ತರಕಾರಿಗಳನ್ನು (ಕೆಲವನ್ನಾದರೂ) ಮನೆಯ ತೋಟದಲ್ಲೇ ಬೆಳೆಸುವುದು ಉತ್ತಮ ಎಂದು ನಮಗೆ ಅನಿಸುತ್ತದೆ. ಉತ್ತಮ ಲೇಖನ

-ಅಶ್ವಿನ್