ಗರ್ವ

ಗರ್ವ

ಕವನ

( ಚಿತ್ರ ಕೃಪೆ : ಅಂತರ್ಜಾಲ )

 

 ಹೌದು, ಇದು ನಾನೇ ಮನೆಯಂಗಳದಿ ನೆಟ್ಟು 

ಬೆಳೆಸಿದ ಸಸಿ, ಈಗ ಬೆಳೆದಿದೆ ನನ್ನೆತ್ತರಕ್ಕೆ..
 
ಅದಕ್ಕೆಂದೇ, ಕಪ್ಪು ಮಣ್ಣನ್ನೇ ಹುಡುಕಿ ತಂದು, 
ಹೆಚ್ಚು ಬಿಸಿಲಿಗೆ  ಬಾಡದಿರಲೆಂದು ನೆರಳು ಮಾಡಿ                                      
ಯಾವ ಬೀದಿ ಹೋಕ ದನ- ಕರುಗಳು ಬಾಯಿ ಹಾಕಬಾರದೆಂದು 
ಭದ್ರ ಬೇಲಿ ಮಾಡಿ, ಅತೀ ಜೋಪಾನವಾಗಿ ಬೆಳೆಸಿದ್ದೇನೆ...
 
 ಸದಾ ಹಸಿರಾಗಿರಲೆಂದು ನೀರುಣಿಸಿದ್ದೇನೆ  ಪದೇ ಪದೇ 
ಗೊಬ್ಬರ ತಲೆಮೇಲೆ ಹೊತ್ತು ತಂದಿದ್ದೇನೆ. 
ಸಂಭ್ರಮಿಸಿದ್ದೇನೆ,  ಅದರ ಪ್ರತೀ  ಬದಲಾವಣೆಯನ್ನೂ 
ಹೂಬಿಟ್ಟಾಗ ನಾನೂ ಹೂವಾಗಿ, ಬಾಡಿದಾಗ ನಾನೂ ಬಾಡಿ...
 
ನನ್ನನ್ನೂ ಮೀರಿ ಬೆಳೆದಿದೆ, ಆಗಸಕ್ಕೆ ಮುಖ ಮಾಡಿ
ಅನಂತವಾಗಿ ಬೆಳೆಯಬೇಕೆಂಬ ಆಸೆ, 
ಅರಸಿ ಬಂದವರಿಗೆ  ನೆರಳಾಗಿ, ಅದರ ಹಣ್ಣುoಡು
ಸಂತೃಪ್ತರಾದರೆ ಸಾಕು... ನಾನು ಧನ್ಯ...
  
ಹಾಗಂತ ನಾನು ನಿಸ್ವಾರ್ಥಿಯೇನಲ್ಲ ,
ಕಪ್ಪು ಶಾಯಿಯ ದಪ್ಪ ಅಕ್ಷರದಲ್ಲಿ,  ಬಿಳೀ ಬೋರ್ಡ್ ಮೇಲೆ ಬರೆಸಿದ್ದೀನಿ ನನ್ನ ಹೆಸರ 
ಮರಕ್ಕೆ ಸೇರಿಸಿ ಗಟ್ಟಿಯಾಗಿ ಮೊಳೆ ಜಡಿದಿದ್ದೇನೆ ನಾಲ್ಕು ಮೂಲೆಗೂ    
ಆಗಸದೆತ್ತರ, ಭೂಮಿಯಗಲ ಹರಡಿ ನಿಂತ ಮರ ನಾ ನೆಟ್ಟದ್ದಲ್ಲವೆ...???
 
ಆ ಗರ್ವವೊಂದೆ ಸಾಕೆನಗೆ... ತೃಪ್ತ..... 
 
 
 
  
    
    

Comments