ಗೇರ್ ಗೇರ್ ತಿಮ್ಮಣ್ಣ
ಮೊನ್ನೆ ಏನಾಯ್ತೂಂತೀರಿ . . . ಬೆಂಗಳೂರಿನಿಂದ ಮೈಸೂರಿಗೆ ಹೊಗ್ತಾ ಇದ್ದಾಗ, ಅರ್ಧ ದಾರಿ ಕ್ರಮಿಸಿದಮೇಲೆ, ನಾಲಗೆಯ ದ್ರವ ಆರತೊಡಗಿದಂತಾಗಿ, ಹಾಗು ಕಿಬ್ಬೊಟ್ಟೆಯು ತುಂಬಿಕೊಂಡುಬಂದು ದಾರಿ ಬದಿಯ ಒಂದು ದೊಡ್ಡ ಆಲದ ಮರದ ಕೆಳಗೆ ಕಾರನ್ನು ನಿಲ್ಲಿಸಿ, ನೀರಾವರಿ ಕಾರ್ಯವನ್ನು ಮೊದಲು ಮುಗಿಸಿ, ಡಿಕ್ಕಿಯಲ್ಲಿದ್ದ ಪ್ಲಾಸ್ಕಿನಿಂದ ಕಾಫಿಯನ್ನು ತೆಗೆದುಕೊಂಡು ಲೋಟಕ್ಕೆ ಬಗ್ಗಿಸಿಕೊಳ್ಳುತಿದ್ದಂತೆಯೇ , ಮೇಲಿನಿಂದ ದಡದಡನೆ ನಮ್ಮ ಪೂರ್ವೀಕರುಗಳ ಆಗಮನವಾಯಿತು. ಒಂದು ಕೆಂಪು ಮೂತಿಯ ಇಂಪೋರ್ಟೆಡ್ ಗಡವ, ಜೊತೆ ಜೊತೆಯಲಿ ಬಾಯಗಲವಾಗಿದ್ದ ಲೋಕಲ್ ಗಡವಿ ಮತ್ತು ಅವುಗಳ ಸುತ್ತಾ ಮುತ್ತಾ ಪಡ್ಡೆ ಮಂಗಗಳು ಕುಣಿದಾಡುತ್ತಾ ಬಂದು ನನ್ನ ಸುತ್ತಾ ಗಿರಕಿ ಹೊಡೆಯಲಾರಂಬಿಸಿದವು. ಗಡವ ಹಾಗು ಜೊತೆಯಲ್ಲಿದ್ದ ಗಡವಿ ನನ್ನನ್ನು ತಮ್ಮವರೆಂದು ಗುರುತಿಸಿದವೋ ಏನೋ, ಇಂಗ್ಲೀಷಿನಂತಹ ಭಾಷೆಯಲಿ ಏನೇನೋ ಹೇಳಲಾರಂಭಿಸಿದವು. ನಿಧಾನವಾಗಿ ಅವುಗಳ ಮಾತು ನನಗೆ ನಿಧಾನವಾಗಿ ಅರ್ಥವಾಗತೊಡಗಿತು.
ನಾನು ಗಡವನನ್ನು "ನಿನ್ನ ಹೆಸರೇನು?" ಎಂದದ್ದಕೆ ಅದು "ಗೇರ್ ಗೇರ್ ತಿಮ್ಮಣ್ಣ" ಎಂದಿತು. "ನಿನ್ನಾಕೆಯ ಹೆಸರು?" ಎಂದೆ. "ಅದು ನನ್ನಾಕೆಯಲ್ಲ, ಈ ಪ್ರದೇಶದಲ್ಲಿ ಎಯ್ಡ್ಸ್ ರೋಗ ಹೆಚ್ಚಾಗಿ ಕಾಣಿಸಿಕೊಂಡಿದ್ದಾಗಿ ಅಂಕೆ ಸಂಖ್ಯೆಗಳಿಂದ ತಿಳಿದು ಬಂದದ್ದರಿಂದ, ಆಕೆ ಇಲ್ಲಿ ಅರಿವಿನ ಕಾರ್ಯಕ್ರಮ ಹಮ್ಮಿಕೊಂಡಿದ್ದಾಳೆ. ಅವಳ ಹೆಸರು ಸ್ವಲ್ಪಾ ಗಟ್ಟಿ ಅಂತಾ" ಎಂದಿತು.
"ಸರಿ, ನಿಮ್ಮ ದೇಶದಲ್ಲಿ ಎಯ್ಡ್ಸ್ ಇಲ್ಲವೆ" ಎಂದೆ.
"ಅಯ್ಯೋ ಬುದ್ದೂ, ಎಯ್ಡ್ಸ್ ಎಂಬ ರೋಗದ ಹೆಸರನ್ನು ನೀವು, ಭಾರತೀಯರು ಈ ಮೊದಲು ಕೇಳಿದ್ದಿರೇನು? ಇಲ್ವಲ್ಲಾ, ಅದನ್ನು ಸೃಷ್ಟಿಸಿದೋರು, ಭಾರತಕ್ಕೆ ತಂದೋರು ಎಲ್ಲಾ ನಾವೆ. ಈಗ ಅದನ್ನು ನಿರ್ಮೂಲನ ಮಾಡಿ, ಹೆಸರನ್ನೂ, ಹಣವನ್ನೂ ಗಳಿಸಿಕೊಂಡು ಹೋಗಲು ಬಂದಿದ್ದೇನೆ ಅಷ್ಟೆ. ಆದರೆ, ಈ ಒಳಗಿನ ವಿಷಯವನ್ನು ನೀನು ನನ್ನ ವಂಶಸ್ಥನೆಂದು ಹೇಳಿದ್ದೇನೆ. ಇವನ್ನೆಲ್ಲಾ ಪೇಪರ್ರಿನವರಿಗಾಗಲೀ, ಟಿವಿಯವರಿಗಾಗಲೀ ಹಂಚಬೇಡಾ" ಎಂದಿತು.
"ಸರಿ, ನಿಮ್ಮ ಕಾರ್ಯಕ್ರಮದ ರೀತಿ ಏನು?" ಎಂದೆ.
"ನಾನು ಎಯ್ಡ್ಸ್ ಹೇಗೆ ಬರುತ್ತದೆಂದು ತೋರಿಸಿಕೊಟ್ಟರೆ, ಸ್ವಲ್ಪಾಗಟ್ಟಿ ಅದನ್ನು ಬರದಂತೆ ತಡೆಯುವುದು ಹೇಗೆಂದು ತೋರಿಸುತ್ತಾಳೆ, ಮುಂದೆ ಈ ಮರಿಕೋತಿಗಳು ತಾಳಕ್ಕೆ ತಕ್ಕಂತೆ ಕುಣಿಯುತ್ತವೆ" ಎಂದಿತು.
"ಸರಿ, ಹತ್ತು ನಿಮಿಶದಲ್ಲಿ ನಿಮ್ಮ ಕಾರ್ಯಕ್ರಮದ ತುಣುಕೊಂದನ್ನು ನನ್ನ ಮುಂದೆ ಪ್ರದರ್ಶಿಸಲು ಸಾಧ್ಯವೇ? ನನಗೂ ಎಯ್ಡ್ಸ್ ಬಗ್ಗೆ ಸ್ವಲ್ಪವಾದರೂ ಜ್ಝಾನೋದಯವಾಗಲಿ" ಎಂದೆ.
"ಓ. . . ಅದಕ್ಕೇನಂತೆ, ಆ ಸೀನು ನನಗೆ ತುಂಬಾ ಇಷ್ಟ. ನೂರು ಸಾರಿ ಬೇಕಾದರೂ ಮಾಡಿತೋರಿಸುತ್ತೇನೆ" ಎಂದು ಓಡಿ ಹೋಗಿ, ಕೈಯಲ್ಲಿ ಕೋಲಿನ ತುಂಡೊಂದನ್ನು ಮೈಕಿನಂತೆ ಹಿಡಿದುಕೊಂಡು, ಏನೇನೋ ಕಿಚಕಿಚ ಎನ್ನುತ್ತಿದ್ದ ಸ್ವಲ್ಪಾಗಟ್ಟಿಯನ್ನು ಮುಂದಿನಿಂದ ಅನಾಮತ್ತಾಗಿ ತಬ್ಬಿಕೊಂಡು ಬಾಯಿಗೆ ಮುತ್ತು ಕೊಡಲು ಪ್ರಯತ್ನಿಸಿತು. ಆದರೆ ಸ್ವಲ್ಪಗಟ್ಟಿ ಅದಕ್ಕೆ ಅವಕಾಶ ಕೊಡದಂತೆ ತಲೆಯನ್ನು ಕೆಳಕ್ಕೆ ಬಾಗಿಸುತ್ತಾ, ಬಾಯನ್ನು ಮುಚ್ಚಲಾಗದಂತೆ ಅಗಲವಾಗಿ ತೆರೆದು ನಗುತ್ತಿರುವಂತೆ ನಟನೆ ಮಾಡಿತು. ವಿಧಿ ಇಲ್ಲದೆ, ಗೇರ್ ಗೇರ್ ತಿಮ್ಮಣ್ಣ ಅದರ ಕೆನ್ನೆಯ ಮೇಲೆ ಮುತ್ತುಗಳ ಸರ ಪೋಣಿಸತೊಡಗಿತು.
ನಾನು "ಇದೇನು ಗೇರ್ ಮಹಾರಾಜರೇ, ನಾನು ಕೇಳಿದ್ದೇನು, ನೀವು ಮಾಡುತ್ತಿರುವುದೇನು?" ಎಂದೆ.
ಅದಕ್ಕೆ ಆಕೆಯನ್ನು ತನ್ನ ಭಾಹು ಬಂದನದಿಂದ ಬೇಸರದಿಂದಲೇ ಬಿಟ್ಟ ಗೇರ್ ಗೇರ್ ತಿಮ್ಮಣ್ಣ "ನಾನು ಆಕೆಯನ್ನು ತಬ್ಬಿಕೊಂಡು ಮುದ್ದಾಡಲು ಹೋದದ್ದನ್ನು ನೀನು ನೋಡಿದೆಯಲ್ಲವೇ? ಅಂದರೆ ಏಯ್ಡ್ಸ್ ರೋಗ ಬರಲು ಈ ರೀತಿ ಅನೈತಿಕ ಸಂಬಂದವನ್ನು ಬೆಳೆಸಬೇಡಿ ಎಂದು ತೋರಿಸಿಕೊಟ್ಟೆ. ಅವಳು ಬಾಯನ್ನು ಅಗಲವಾಗಿ ಬಿಟ್ಟಿದ್ದರಿಂದ ನಾನು ಆಕೆಯ ತುಟಿ ಜೇನನ್ನು ಸವಿಯಲು ಆಗಲೇಇಲ್ಲ. ಎಯ್ಡ್ಸ್ ಬರುವ ಅವಕಾಶವೂ ಅವಳಿಗೆ ದೊರೆಯಲಿಲ್ಲ. ಅದನ್ನು ಆಕೆ ಸ್ಪಷ್ಟ ಪಡಿಸಿದಳು. ಇವೆಲ್ಲಾ ನಿಮ್ಮಂತಹ ಮಂದ ಬುದ್ಧಿಯವರಿಗೆ ತಕ್ಷಣ ಅರ್ಥವಾಗದು" ಎಂದಿತು.
"ಸರಿಯಪ್ಪ" ಎಂದ ನಾನು ಸ್ವಲ್ಪಗಟ್ಟಿಯನ್ನು "ಏನಮ್ಮಾ ನೀನು ಭಾರತೀಯಳಾಗಿ ಇದಕ್ಕೆಲ್ಲಾ ಅವಕಾಶ ಕೊಡಬಹುದೇ?. ಇಂತಹ ಪ್ರದರ್ಶನಗಳು ಮುಚ್ಚಿದ ಕದಗಳ ಹಿಂದೆಯಲ್ಲವೇ ನಡೆಯಬೇಕಾದದ್ದು" ಎಂದೆ.
ಅದಕ್ಕೆ ಆಕೆ ಸ್ವಲ್ಪವೂ ವಿಚಲಿತಳಾಗದೆ "ಅಯ್ಯೋ ಮಂಕುದಿಣ್ಣೆ, ಗೇರ್ ಮುತ್ತು ಕೊಟ್ಟದ್ದು ನನ್ನ ಕೆನ್ನೆಗೆ ಮಾತ್ರ, ನನಗಲ್ಲ. ಅಷ್ಟಕ್ಕೆಲ್ಲಾ ಎಯ್ಡ್ಸ್ ರೋಗ ಬರುವುದಿಲ್ಲ, ಅಲ್ಲದೆ, ಅಷ್ಟೋ ಆಕರ್ಷಣೆ ಇಲ್ಲದಿದ್ದರೆ ನಮ್ಮೆದುರು ಸಂತೆಯೂ ಸೇರುವುದಿಲ್ಲ. ಒಟ್ಟಲ್ಲಿ ನಮ್ಮ ಉದ್ದೇಶ ಎಯ್ಡ್ಸನ್ನು ಭಾರತದಿಂದ ತೊಲಗಿಸುವುದು. ಅದನ್ನು ತೊಲಗಿಸ ಬೇಕಾದರೆ, ಮೊದಲು ಅದನ್ನು ಭಾರತಕ್ಕೆ ತರಬೇಕು, ಆನಂತರ ನಾವು ಅದನ್ನು ತೊಲಗಿಸುವ ಪ್ರಯತ್ನ ಮಾಡಬೇಕು. ಎನ್ ಜಿ ಓ ಗಳು ಇದಕ್ಕಾಗಿ ಹಣವನ್ನು ಸಂಗ್ರಹಿಸುತ್ತಿವೆ, ನಾವು ಖರ್ಚು ಮಾಡುವಂತೆ ಮಾಡಿ, ನಮ್ಮ ಖರ್ಚನ್ನು ಹೊಂದಿಸಿಕೊಳ್ಳುತ್ತೇವೆ. ಒಟ್ಟಿನಲ್ಲಿ ಇದೊಂದು ಅರಿವಿನ ಕಾರ್ಯಕ್ರಮ. ಜನ ಜಾಗೃತಿಗಾಗಿ ಇವೆಲ್ಲಾ ಅಷ್ಟೇ" ಎಂದಿತು. ಇದನ್ನು ಕೇಳಿದ ಸುತ್ತಾ ನೆರೆದಿದ್ದ ಪಡ್ಡೆ ಮಂಗಣ್ಣಗಳಿಗೆ ಜ್ಞಾನೋದಯವಾದಂಗ್ತಾಗಿ, ಓಡಿ ಹೋಗಿ "ಹಿಡಿ ಮಗ, ಹಿಡಿ ಮಗ ಬಿಡಬೇಡ ಅವನ್ನ" ಎಂಬ ಹಾಡಿಗೆ ಕಾಲು ಹಾಕುತ್ತಾ, ಗೇರ್ ಗೇರ್ ತಿಮ್ಮಣ್ಣನ ಹಿಂದೆ ಸುತ್ತತೊಡಗಿದವು.
"ಸರಿಯಮ್ಮಾ, ವಿಶ್ ಯೂ ಬೋತ್ ಆಲ್ ದಿ ಬೆಸ್ಟ್" ಎಂದು ವಿಶ್ಶಿಸಿ, ಕಾರನ್ನೇರಿದೆ.
ಎ.ವಿ. ನಾಗರಾಜು
ಅಗಿಲೆನಾಗ್[ಎಟ್]ರಿಡಿಫ್ ಮೇಲ್.ಕಾಂ