ಚಪ್ಪಾಳೆ ತಟ್ಟಿ ಹೇಳಿ "ವಿನಾಯಕ ಕುರುವೇರಿ ಭೇಷ್!!! "

ಚಪ್ಪಾಳೆ ತಟ್ಟಿ ಹೇಳಿ "ವಿನಾಯಕ ಕುರುವೇರಿ ಭೇಷ್!!! "


ಸಂಪದಿಗ ಸಂಬಂಧಿಗಳೇ   ಡಿಸೆಂಬರ್ ೨೬ ರ ರವಿವಾರದ ವಿಜಯ ಕರ್ನಾಟಕದ ಮಧ್ಯ ಪುಟ ಓದಿ ನಾನು ಆನಂದ ತುಂದಿಲನಾದೆ.  ಅದೂ ಶ್ರೀವತ್ಸಜೋಷಿಯವರ "ಪರಾಗಸ್ಪರ್ಶ" ದ ಕೇಂದ್ರ ಬಿಂದುವಾಗಿದ್ದ ನನ್ನ ಗೆಳೆಯ
ಅದನ್ನು ಅವರ ಭಾಷೆಯಲ್ಲಿಯೇ ಓದಿ

 

 

 

ಅಮೇರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ವಿನಾಯಕ ಕುರುವೇರಿ ಎಂಬ ಹುಡುಗ ಅದ್ಭುತವಾದ ಕವನವನ್ನು ರಚಿಸಿ ನನಗೆ ಈ ಮೇಲ್ ನಲ್ಲಿ ಕಳುಹಿಸಿದ್ದಾನೆ ಅದೂ ಅಂತಿಂಥ  ರಚನೆಯಲ್ಲ
ಚಕ್ರಬಂಧ!!
ಸಂಸ್ಕೃತದ ಮಾಘಕವಿ ಮತ್ತು ಕನ್ನಡದ ಲಿಂಗರಾಜ ಮುಂತಾದವರಿಗೆ ಸಡ್ಡು ಹೊಡೆದು ನಿಂತಿದ್ದಾನೆ, ಕವನವನ್ನು ನೀವೂ ಒಮ್ಮೆ ಓದಿ:


ಸಾಮವಿದುವೇ  ಶಕ್ರನುಡಿ ಮಧುಭಾಮಿನೀ ಚಿತ್ತಕಮಗ
ಕಾವ್ಯನಾಗರಿ  ಸಂಬಂಧಸುಮಗಂಧದಂಕಿತದೂಂಕು ಮೋದ   
ಬಾಳಿಯದರಲಿ ಧರಣಿಮಣಿ ನುಡಿಚಂಚಲರುರ್ಕನು
ನುಸಿದು ಸಾವಿರ ಕಾಲಕು ಬಾಳಲಿಂಗನ್ನಡದ ಹಾಲ್ಜೇನು




ಸರಳಗನ್ನಡದಲ್ಲಿ ಇದರ ಅರ್ಥ" ಮಧುಭಾಮಿನಿಯಂತಿರುವ,ಚಿತ್ತಕ್ಕೆ ಸಂಭ್ರಮ( ಆಮಗ) ಕೊಡುವ ದೇವರ ನುಡಿಯಾದ( ಶಕ್ರನುಡಿ) ಇದುವೇ( ಕನ್ನಡವೇ)
ನಮಗೆ ಸಾಮ(ಗುನುಗುನಿಸಲಾಗುವ ಸರಳವೇದ) ಸಂಸ್ಕೃತವು ದೇವನಾಗರಿ ( ದೇವರ ನಗರಕ್ಕೆ ಸೀಮಿತವಾದದ್ದು) ಆದರೆ ನಮ್ಮದು ಅತ್ಯುಚ್ಚ ಕವಿ ಪರಂಪರೆ ಹೊಂದಿರುವ ( ಏಳುಜ್ಞಾನಪೀಠಗಳನ್ನು ಪಡೆದ ಎಂಬ ಕ್ಲೀಷೆಯ ಮಾತನ್ನೂ ಕಾಲರ್ ಎತ್ತಿ ಹೇಳೋಣವಂತೆ). ಕಾವ್ಯನಾಗರಿ ಸಂಬಂಧಗಳೆಂಬ ಹೂವಿನ ಗಂಧ ಮೆತ್ತಿಕೊಂಡಿರುವ ಈ ಕನ್ನಡದ ಧ್ಯಾನವು (ಊಂಕು) ನಮಗೆ ಮೋದ ( ಸಂತೋಷಕರ). ನುಡಿಚಂಚಲರ (ಕನ್ನಡಿಗರಾಗಿದ್ದೂ ಕನ್ನಡ ಮಾತಾಡದೇ ಬಾರದ ಭಾಷೇಯ ಬಡಬಡಾಯಿಸುವವರ) ಜಂಭವನ್ನು( ಉರ್ಕನ್ನು)ತೂತುಮಾಡಿ, ಭೂಮಿಗೆ ಮಣಿಯಂತಿರುವ (ಧರಣೀಮಣಿ) ಇಂಪುಗನ್ನಡದ(ಇಂಗನ್ನಡದ) ಹಾಲ್ಜೇನು ಸಾವಿರ ಕಾಲಕ್ಕೂ ಬಾಳಲಿ"
ಅಹಾ ಎಂತಹ ಸುಂದರ ಚಿಂತನೆ ಎಷ್ಟು ಸೊಗಸಾದ ಬಣ್ಣನೆ . ಇದೊಂದು ಚಕ್ರಬಂಧ ರಚನೆ ಎಂದೆನಲ್ಲಾ, ಚಕ್ರದ ಒಳಚಕ್ರಗಳಲ್ಲಿ ಪ್ರದಕ್ಷಿಣಾಕಾರ ಸುರುಳಿಯಲ್ಲಿ "ವಿನಾಯಕ ಕುರುವೇರೀ ರಚಿತ ಚಕ್ರಬಂಧಮಿದಂಡಿ" ಎಂಬ ಹದಿನೆಂಟು ಅಕ್ಷರಗಳ ವಾಕ್ಯ ಗೋಚರಿಸುತ್ತದೆ.
ಇದೊಂದು ಭಾಷಾ ಚಿತ್ರಕೂಡಾ
ತ್ರಿಭಾಷಾ ಸಂಗಮ
ವಿನಾಯಕ ಕುರುವೇರಿ ರಚಿತ ಚಕ್ರಬಂಧ" ಎಂಬಲ್ಲಿಗೇ ನಿಲ್ಲಿಸಿದರೆ ಕನ್ನಡದ ವಾಕ್ಯ. ಚಕ್ರಬಂಧಮಿದಂ ಎಂದರೆ ಸಂಸ್ಕೃತವಾಗುತ್ತದೆ. ಚಕ್ರಬಂಧ
ಮಿದಂಡಿ ಎಂದು ಓದಿದರೆ ಗೌರವದಿಂದ ತೆಲುಗಿನಲ್ಲಿ ಹೇಳಿದಂತಾಗುತ್ತದೆ. ಮಂಗಳೂರಿನ ನಮ್ಮ ಹುಡುಗ ಈ ವಿನಾಯಕ ಕುರುವೇರಿ ಮೈಸೂರಿನಲ್ಲಿ ಇಂಜಿನೀಯರಿಂಗ್ ಓದಿ ಸ್ವಂತ ಇಚ್ಚೆಯಿಂದ ಕನ್ನಡ ಎಮ್ ಎ ಕೂಡಾ ಮಾಡಿ ಈಗ ಇನ್ಫೋಸಿಸ್ನಲ್ಲಿ ಉದ್ಯೋಗಿಯಾಗಿರುವ ಪ್ರತಿಭಾವಂತ .ದಯವಿಟ್ಟು ನೀವು ಒಮ್ಮೆ ಪೇಪರ್ ಕೆಳಗಿಟ್ಟು ಜೋರಾಗಿ ಚಪ್ಪಾಳೆ ತಟ್ಟಿ ಕುರುವೇರಿಯ ಕಾವ್ಯ ಶಕ್ತಿಯನ್ನು ಕೊಂಡಾಡಿ.

ನಾವೆಲ್ಲರೂ ಈಗ ಹೇಳಬಹುದಲ್ಲವೇ ಎದೆತಟ್ಟಿ ಚಪ್ಪಾಳೆ ಹೊಡೆದು ಭೇಷ್ ಕುರುವೇರಿ!!!!

Comments