ಚಿಣ್ಣರ ಬರಿಗಾಲಿಗೆ ಶೂ ಎಂದು?

ಚಿಣ್ಣರ ಬರಿಗಾಲಿಗೆ ಶೂ ಎಂದು?

ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಮಕ್ಕಳಿಗೆ ರಾಜ್ಯ ಸರಕಾರ ಇನ್ನೂ ಶೂ ವಿತರಿಸದೇ ಇರುವ ಬಗ್ಗೆ, ಸಂಪೂರ್ಣವಾಗಿ ಸಮವಸ್ತ್ರ ನೀಡದಿರುವ ಬಗ್ಗೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಉತ್ಸವಗಳಿಗೆ ಕೋಟಿ ಖರ್ಚು ಮಾಡುವ ಸರಕಾರ, ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಹಣ ವಿನಿಯೋಗಿಸಲು ಹಿಂದೆಮುಂದೆ ನೋಡುತ್ತಿರುವುದು ಅಮಾನವೀಯ ಬೆಳವಣಿಗೆ ಮಾತ್ರವೇ ಅಲ್ಲ ನಾಚಿಕೆಗೇಡಿನ ಸಂಗತಿ ಕೂಡ ಎಂದು ಕಟುವಾಗಿ ನುಡಿದಿದೆ. “ಅಧಿಕಾರಿಗಳ ಮಕ್ಕಳು ಕಾರಿನಲ್ಲಿ ಶಾಲೆಗೆ ಹೋಗಿ ಬರುತ್ತಾರೆ, ಸರಕಾರಿ ಶಾಲಾ ಮಕ್ಕಳು ಬರಿಗಾಲಿನಲ್ಲಿ ಹೋಗುತ್ತಿದ್ದಾರೆ. ಈ ತಾರತಮ್ಯ ಸರಿಯಲ್ಲ" ಎಂದು ಹೈಕೋರ್ಟ್ ನ್ಯಾ.ವೀರಪ್ಪ ನೇತೃತ್ವದ ನ್ಯಾಯಾಪೀಠವು ಸರಕಾರದ ವಿರುದ್ಧ ಗುಡುಗಿರುವ ಈ ಮಾತುಗಳಲ್ಲಿ ಅಂತಃಕರಣ ಬಡಿದೆಬ್ಬಿಸುವ ಸಂಗತಿಗಳೂ ಇವೆ. ಸರಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ೨ ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ೨ ಸಾಕ್ಸ್ ನೀಡಬೇಕೆಂದು ೨೦೧೮ರಲ್ಲಿ ಹೈಕೋರ್ಟ್ ನೀಡಿದ ಆದೇಶ ಪಾಲಿಸದೆ ಸರಕಾರ ನಿರ್ಲಕ್ಷ್ಯ ತೋರಿರುವುದು ಖಂಡನಾರ್ಹ.

ಆಡಳಿತ ಯಂತ್ರಕ್ಕೆ ಮಾನವೀಯ ಹೃದಯ, ತಾಯ್ತನ ಇದ್ದಿದ್ದರೆ ಹೈಕೋರ್ಟ್ ನಿಂದ ಈ ಪರಿ ನಿಂದಿಸಿಕೊಳ್ಳುವ ಪ್ರಮೇಯವೇ ಎದುರಾಗುತ್ತಿರಲಿಲ್ಲ. ಶಾಲಾ ಕಟ್ಟಡ ಅಥವಾ ಪೀಠೋಪಕರಣ ಸೌಲಭ್ಯವನ್ನು ನಾಲ್ಕು ದಿನ ತಡವಾಗಿ ಕಲ್ಪಿಸಿದರೆ ಅದನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ, ಇಲ್ಲಿ ಮಕ್ಕಳು ಕೇಳುತ್ತಿರುವುದು ಕನಿಷ್ಟ ಮೂಲಭೂತ ತುರ್ತು ಅಗತ್ಯವನ್ನು. ಇದನ್ನು ಪೂರೈಸದೆ ಸರಕಾರ ಅಸೆಡ್ಡೆತನ ಪ್ರದರ್ಶಿಸಿದರೆ, ಸರಕಾರಿ ಶಾಲೆಗೆ ಬರುತ್ತಿರುವ ಅಲ್ಪಸ್ವಲ್ಪ ಮಕ್ಕಳೂ ಖಾಸಗಿ ವಿದ್ಯಾಸಂಸ್ಥೆಗಳತ್ತ ಮುಖ ಮಾಡುವ ಅಪಾಯ ಇಲ್ಲದಿಲ್ಲ.

ಈ ಸಂದರ್ಭದಲ್ಲಿ ದೇಶ ಕಂಡ ಮೇರು ರಾಜಕಾರಣಿ, ತಮಿಳುನಾಡಿನ ಕೆ ಕಾಮರಾಜ್ ಅವರ ವ್ಯಕ್ತಿತ್ವ ಉಲ್ಲೇಖನೀಯ. ದೇಶಕ್ಕ್ರೆ ಸ್ವಾತಂತ್ರ್ಯ ಬಂದ ಆರಂಭದಲ್ಲಿ ಒಮ್ಮೆ ಅವರು ಹಳ್ಳಿಗಾಡಿನತ್ತ ಪ್ರವಾಸ ತೆರಳಿದ್ದರು. ಶಾಲೆಗೆ ಹೋಗಿ ಅಕ್ಷರ ಕಲಿಯಬೇಕಿದ್ದ ಮಕ್ಕಳೂ ಅಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಈ ದೃಶ್ಯ ಕಂಡ ಕಾಮರಾಜರು “ನೀವೇಕೆ ಶಾಲೆಗೆ ಹೋಗಿಲ್ಲ?” ಎಂದು ವಿಚಾರಿಸಿದಾಗ, ಆ ಮಕ್ಕಳಿಂದ ಬಂದ ಪ್ರತಿಪ್ರಶ್ನೆ ಹೀಗಿತ್ತು: “ಶಾಲೆಗೆ ಹೋದರೆ ನಮ್ಮ ಹಸಿದ ಹೊಟ್ಟೆಗೆ ಊಟ ಹಾಕುವವರಾರು?” ಮಕ್ಕಳ ಮಾತು ಕಾಮರಾಜ್ ಅವರ ಅಂತಃಕರಣವನ್ನು ತಟ್ಟಿತು. ಈ ಪ್ರಸಂಗವೇ ಮುಂದೆ ಅವರು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸಲು ಪ್ರೇರೇಪಿಸಿತು.

ಇಲ್ಲಿಯೂ ಹಾಗೆಯೇ ಮಕ್ಕಳ ಸಂಕಷ್ಟವನ್ನು ಸರಕಾರ ಕಣ್ತೆರೆದು ನೋಡಿದರೆ ಸಂಕಟ ಅರ್ಥವಾದೀತು. ಖಾಸಗಿ ಶಾಲೆಗಳಲ್ಲಿ ದಾಖಲಾತಿ ಸಂದರ್ಭದಲ್ಲಿಯೇ ಪುಸ್ತಕ, ಸಮವಸ್ತ್ರ, ಶೂಗಳನ್ನು ವಿತರಿಸುವ ಶಿಸ್ತುಬದ್ಧ ವ್ಯವಸ್ಥೆಯಿದೆ. ಈ ಪರಿಯ ಶಿಸ್ತು ರೂಢಿಸಿಕೊಳ್ಳಲು ಸರಕಾರದಂಥ ಯೋಜಿತ ಆಡಳಿತ ವ್ಯವಸ್ಥೆಗೇಕೆ ಸಾಧ್ಯವಾಗುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆ. ಅಧಿಕಾರಿಗಳು ನಿದ್ದೆಯಿಂದ ಎದ್ದೇಳಲಿ, ಮಕ್ಕಳಿಗೆ ಸೂಕ್ತ ಸೌಲಭ್ಯ ತಲುಪಲಿ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೧-೦೨-೨೦೨೩

 ಚಿತ್ರ ಕೃಪೆ: ಅಂತರ್ಜಾಲ ತಾಣ.