ಚುರುಕಾದ ಪಿಕಳಾರ ಹಕ್ಕಿ
ಈ ಚಿತ್ರದಲ್ಲಿ ಒಂದು ಪುಟಾಣಿ ಹಕ್ಕಿಯನ್ನು ನೋಡ್ತಾ ಇದ್ದೀರಲ್ಲಾ ಇದರ ಹೆಸರು ಕೆಮ್ಮೀಸೆ ಪಿಕಳಾರ. ನಮ್ಮ ಶಾಲೆಯ ಮಕ್ಕಳು ಇದನ್ನು ಜುಟ್ಟು ಪಿಕಳಾರ ಅಂತ ಕರೀತಾರೆ. ಬಿಳೀ ಬಣ್ಣದ ಹೊಟ್ಟೆ, ಕಂದು ಬಣ್ಣದ ರೆಕ್ಕೆ, ಕಪ್ಪು ಬಣ್ಣದ ಜುಟ್ಟು ಕೆಂಪು ಮೀಸೆ ಇದರ ಮುಖ್ಯ ಗುರುತು.
ಇದು ಪೇಟೆ ಹಳ್ಳಿ ಎಲ್ಲಾ ಕಡೆ ನೋಡ್ಲಿಕ್ಕೆ ಸಿಗ್ತದೆ. ಸಾಮಾನ್ಯವಾಗಿ ಎರಡು ಅಥವಾ ನಾಲ್ಕು ಹಕ್ಕಿಗಳು ಜೊತೆಯಾಗಿ ಕಾಣಲಿಕ್ಕೆ ಸಿಗ್ತವೆ. ಈ ಹಕ್ಕಿಗಳು ತುಂಬಾ ಚುರುಕು ಸ್ವಭಾವದವು, ಮನೆಯ ಗಾರ್ಡನ್ ನಲ್ಲಿ, ಮನೆ ಪಕ್ಕದ ವಿದ್ಯುತ್ ತಂತಿ ಅಥವಾ ಕೇಬಲ್ ಗಳ ಮೇಲೆ ಕುಳಿತುಕೊಂಡು, ಕೂಗುತ್ತಾ, ಹರಟುತ್ತಾ ಆಟವಾಡುತ್ತಾ ಇರುತ್ತವೆ. ಪುಟ್ಟ ಗಾತ್ರದ ಹಣ್ಣುಗಳು ಇದರ ಮುಖ್ಯ ಆಹಾರ. ನೇರಳೆ, ಸರೊಳಿ, ಕುಂಟಾಲ, ಉಪ್ಪಳಿಗೆ, ಚೆರಿ ಹೀಗೆ ಹಲವಾರು ಸಸ್ಯಗಳ ಹಣ್ಣುಗಳನ್ನು ತಿನ್ನುತ್ತವೆ, ಮಾತ್ರವಲ್ಲ ಹಲವು ಬಗೆಯ ಕೀಟಗಳನ್ನೂ ಹಿಡಿದು ತಿನ್ನುತ್ತವೆ. ನಮ್ಮ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಊಟದ ನಂತರ ಮಕ್ಕಳು ಕೈತೊಳೆಯುವಲ್ಲಿ ಬಿದ್ದಿರುವ ಅನ್ನದ ಅಗುಳುಗಳನ್ನು ಹೆಕ್ಕಿ ತಿನ್ನಲು ಬರುತ್ತವೆ. ನಾವು ಅವುಗಳನ್ನು ಪ್ರತಿದಿನ ಗಮನಿಸ್ತೇವೆ.
ಡಿಸೆಂಬರ್ ನಿಂದ ಮೇ ತಿಂಗಳಿನ ನಡುವೆ ಇವುಗಳ ಸಂತಾನಭಿವೃದ್ಧಿ ಕಾಲ. ಇವು ಹೆಚ್ಚಾಗಿ ಮನುಷ್ಯನ ಮನೆಗಳ ಸಮೀಪ ಹೂಗಿಡಗಳ ಸಂದಿಯಲ್ಲಿ, ಪೊದೆಗಳಲ್ಲಿ ice cream cup ಆಕಾರದ ಗೂಡುಕಟ್ಟುತ್ತವೆ. ಹುಲ್ಲು ಕಡ್ಡಿ ಹೀಗೆ ಹಲವಾರು ವಸ್ತುಗಳನ್ನು ಗೂಡುಕಟ್ಟಲು ಬಳಸುತ್ತವೆ. ಎರಡರಿಂದ ಮೂರು ಮೊಟ್ಟೆ ಇಡುತ್ತದೆ. ಹದ್ದು, ಗಿಡುಗದಂತಹ ಹಕ್ಕಿಗಳಿಂದ ರಕ್ಷಣೆ ಪಡೆಯಲು ಅವು ಹೀಗೆ ಮನೆಗಳ ಸಮೀಪ ಗೂಡು ಮಾಡುತ್ತವೆ ಅಂತ ಹೇಳ್ತಾರೆ. ಗಂಡು ಹೆಣ್ಣು ಎರಡೂ ಹಕ್ಕಿಗಳು ಸಮಾನವಾಗಿ ಕಾವುಕೊಡುವ, ಮರಿಗಳಿಗೆ ಆಹಾರ ತರುವ ಕೆಲಸವನ್ನುಮಾಡುತ್ತವೆ. ನೋಡಲಿಕ್ಕೂ ಗಂಡು ಹೆಣ್ಣುಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲ.
ಇದು ತುಂಬ ಚುರುಕಾಗಿ ಹಾರಾಡುತ್ತಾ ಕೂಗುತ್ತಾ ಶಬ್ದಮಾಡುತ್ತಾ ಇರುವುದರಿಂದ ಮಲೆನಾಡಿನ ಕಡೆ ಇದನ್ನು ಕ್ವಾಟ್ಲಕ್ಕಿ ಅಂತ ಕರೀತಾರೆ. ಕನ್ನಡದಲ್ಲಿ ಕೆಮ್ಮೀಸೆ ಪಿಕಳಾರ ಅಂತ ಕರೀತಾರೆ.
ಇದರ ಇಂಗ್ಲೀಷ್ ಹೆಸರು Red-Whiskered Bulbul.
ಇದರ ವೈಜ್ಙಾನಿಕ ಹೆಸರು: Pycnonotus jocosus
ಈ ಹಕ್ಕಿ ನಿಮ್ಮ ಮನೆಯ ಸಮೀಪವೂ ಇರಬಹುದು. ನೋಡ್ತೀರಲ್ಲ
ಚಿತ್ರ - ಬರಹ : ಅರವಿಂದ ಕುಡ್ಲ, ಬಂಟ್ವಾಳ