ಛಾಯಾಗ್ರಹಣ ಮತ್ತು ISO

ಛಾಯಾಗ್ರಹಣ ಮತ್ತು ISO

ಬರಹ

ನೀವು ಯಾವುದೋ ಮ್ಯೂಸಿಯಂಗೋ, ದೇವಸ್ಥಾನಕ್ಕೋ ಹೋಗಿರುವಿರಿ. ಒಳಗಡೆ ಬೆಳಕು ಕಡಿಮೆ ಇದ್ದು, ಫ್ಲಾಷ್ ಉಪಯೋಗಿಸುವುದನ್ನು ನಿಷೇದಿಸಿರುತ್ತಾರೆ. ಫ್ಲಾಷ್ ಆಫ್ ಮಾಡಿ ಚಿತ್ರ ತೆಗೆದು, ಮನೆಗೆ ಬಂದು ಕಂಪ್ಯೂಟರಿನಲ್ಲಿ ನೋಡಿದರೆ ಎಲ್ಲವೂ ಅಸ್ಪಷ್ಟ! ಬೆಳಕು ಕಡಿಮೆಯಾದ್ದರಿಂದ, ಫ್ಲಾಷ್ ಕೂಡ ಬಳಸದಿದ್ದುದರಿಂದ ನಿಮ್ಮ ಕ್ಯಾಮಾರದ Shutter Speed ಕಡಿಮೆಯಾದುದ್ದೇ ಇದಕ್ಕೆ ಕಾರಣ. ಕ್ಯಾಮರಾ ಹಿಡಿದ ನಮ್ಮ ಕೈ ಇಷ್ಟೊಂದು ದೀರ್ಘಾವಧಿಯವರೆಗೆ ಒಂದುಚೂರೂ ಚಲಿಸದೆ ಇರುವುದು ಕಷ್ಟ. ಇಂತಹ ಸಂದರ್ಭದಲ್ಲಿ ಟ್ರೈಪಾಡ್ ಅಥವಾ ಸ್ಥಿರವಾದ ವಸ್ತುವಿನ ಮೇಲೆ ಕ್ಯಾಮರಾ ಇರಿಸಿ ಚಿತ್ರ ತೆಗೆಯಬಹುದು. ಒಂದುವೇಳೆ ಇವೆರಡೂ ಇಲ್ಲದಿದ್ದಲ್ಲಿ? ಇಂತಹ ಸಂದರ್ಭದಲ್ಲಿ ಕ್ಯಾಮರಾದ ISO ಜಾಸ್ತಿ ಮಾಡಬಹುದು. ISO ಜಾಸ್ತಿ ಮಾಡಿದಂತೆಲ್ಲಾ ಹೆಚ್ಚಿನ Shutter Speed ಮೂಲಕ ಚಿತ್ರ ತೆಗೆಯಬಹುದು. ಹಾಗಿದ್ದಲ್ಲಿ ಎಲ್ಲಾ ಸಮಯದಲ್ಲೂ ISO ಜಾಸ್ತಿ ಇರಿಸಿಕೊಳ್ಳಬಹುದಲ್ಲಾ? ಆದರೆ ISO ಜಾಸ್ತಿ ಮಾಡಿದಂತೆಲ್ಲ ನಿಮ್ಮ ಚಿತ್ರದ ಗುಣಮಟ್ಟ ಕುಸಿಯುತ್ತದೆ.

ನೀವು ಈ ಹಿಂದೆ ಅನಲಾಗ್ ಕ್ಯಾಮರಾ ಉಪಯೋಗಿಸಿದ್ದಲ್ಲಿ, ಫಿಲ್ಮ್ ಕೊಳ್ಳುವಾಗ ಅದರ ಡಬ್ಬಿಯಲ್ಲಿ ೧೦೦, ೨೦೦, ೪೦೦ ಅಥವಾ ೮೦೦ ಮುಂತಾದ ಸಂಖ್ಯೆಯನ್ನು ಗುರುತಿಸಿರಬಹುದು. ಈ ಸಂಖ್ಯೆ ಬೆಳಕಿಗೆ, ಫಿಲ್ಮಿನ ಸಂವೇದನೆಯನ್ನು ಸೂಚಿಸುತ್ತದೆ. ಅಂದರೆ ಈ ಸಂಖ್ಯೆಯ ಬೆಲೆ ಕಡಿಮೆಯಾದಂತೆಲ್ಲಾ ಫಿಲ್ಮ್ ಚಿತ್ರವನ್ನು ಸೆರೆಹಿಡಿಯಲು ಹೆಚ್ಚಿನ ಕಾಲವಧಿ ತೆಗೆದುಕೊಳ್ಳುತ್ತದೆ. ಇದನ್ನೇ ಡಿಜಿಟಲ್ ಕ್ಯಾಮರಾಕ್ಕೆ ಅನ್ವಯಿಸುವುದಾದರೆ, ISO ಸೆನ್ಸರ್ನ್ ಸಂವೇದನೆ ಎನ್ನಬಹುದು. ISOವನ್ನು ೧೦೦, ೨೦೦, ೪೦೦, ೮೦೦, ೧೬೦೦ ಹೀಗೆ ಮೊದಲಾದ ಸಂಖ್ಯೆಯಿಂದ ಗುರುತಿಸುತ್ತಾರೆ. ISO ಹೆಚ್ಚು ಮಾಡಿದಂತೆಲ್ಲಾ ಹೆಚ್ಚಿನ Shutter Speed ಅಥವಾ ಕಡಿಮೆ Aperture ಮೂಲಕ ಚಿತ್ರ ತೆಗೆಯಲು ಅನುಕೂಲ.



ಈ ಮೇಲಿನ ಎರಡು ಚಿತ್ರ ಒಂದೇ ಕ್ಯಾಮಾರಾದಿಂದ ತೆಗೆದಿರುವುದು. ಮೊದಲನೆಯದ್ದು ISO ೮೦ರಲ್ಲಿ (ನನ್ನ ಕ್ಯಾಮರಾ ಒದಗಿಸುವ ಕಡಿಮೆ ಸಂಖ್ಯೆ) ಹಾಗೂ ಎರಡನೆಯದ್ದು ISO ೧೦೦೦ದಲ್ಲಿ (ನನ್ನ ಕ್ಯಾಮರಾ ಒದಗಿಸುವ ಜಾಸ್ತಿ ಸಂಖ್ಯೆ) ತೆಗೆದದ್ದು. ಸುಲಭವಾಗಿ ಗುರುತಿಸುವಂತೆ ಮೊದಲನೆಯದ್ದಕ್ಕೆ ಹೋಲಿಸಿದಲ್ಲಿ ಎರಡನೆ ಚಿತ್ರದಲ್ಲಿ ಕಪ್ಪು ಚುಕ್ಕಿಗಳು (noise) ಜಾಸ್ತಿ ಇದೆ. ಕಪ್ಪು ಚುಕ್ಕಿಗಳು ಎರಡನೆಯ ಚಿತ್ರದ ಮಾಸಲು ಬಣ್ಣಕ್ಕೆ ಕಾರಣ. ಆದ್ದರಿಂದ ಸಾಮಾನ್ಯವಾಗಿ ಇದನ್ನು ನಮ್ಮ ಕ್ಯಾಮರಾ ಒದಗಿಸುವ ಕಡಿಮೆ ಸಂಖ್ಯೆಗೆ ಹೊಂದಿಸಿಟ್ಟು ಉತ್ತಮ ಗುಣಮಟ್ಟದ ಚಿತ್ರವನ್ನು ನಿರೀಕ್ಷಿಸಬಹುದು. ಬೆಳಕು ಕಡಿಮೆಯಿದ್ದು ಫ್ಲಾಷ್ ಉಪಯೋಗಿಸಲು ಅವಕಾಶ ಇರದಿದ್ದಲ್ಲಿ ಅಥವಾ ಇಷ್ಟವಿರದಿದ್ದಲ್ಲಿ ISO ಜಾಸ್ತಿ ಮಾಡುತ್ತಾ ಹೋಗಬಹುದು.



ಜಾಸ್ತಿ ISO ಉಂಟುಮಾಡುವ ಈ ಕಪ್ಪು ಚುಕ್ಕಿಗಳನ್ನು, ವಿಷಯಕ್ಕೆ, ಮನೋಭಾವನೆಗೆ ತಕ್ಕಂತೆ ನಿಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳಬಹುದು. ಕಪ್ಪು ಬಿಳುಪು ಮತ್ತು ಹೆಚ್ಚಿನ ISO ಬಳಸಿ ತೆಗೆದ ಈ ಚಿತ್ರ, ವ್ಯಕ್ತಿಯ ಕಣ್ಣಿನ ಸುತ್ತ ಇರುವ ನೆರಿಗೆಗೆ ಪೂರಕವಾಗಿ ಒಂದು ರೀತಿಯ ಹಳೇಯ ಭಾವನೆ ಕೊಡುತ್ತದೆ.