ಜನರಲ್ಲಿ ಹಾಸ್ಯ ಪ್ರಜ್ಞೆ ಕಡಿಮೆಯಾಗುತ್ತಿದೆಯೇ?

ಜನರಲ್ಲಿ ಹಾಸ್ಯ ಪ್ರಜ್ಞೆ ಕಡಿಮೆಯಾಗುತ್ತಿದೆಯೇ?

ನನಗೇಕೋ ಹೌದು ಎಂದೇ ಅನಿಸುತ್ತಿದೆ. ಬಿಡುವಿಲ್ಲದ ಕೆಲಸಗಳ ನಡುವಿನ ಒತ್ತಡವು ಈಗ ಜನರನ್ನು ಹೈರಾಣಾಗಿಸಿದೆ ಎಂದು ಅನಿಸುತ್ತಿದೆ. ದಿನವಿಡೀ ದುಡಿದು ಸುಸ್ತಾಗಿ ಮನೆಗೆ ಮರಳುವ ವ್ಯಕ್ತಿಗೆ ತನ್ನ ಸಂಸಾರಕ್ಕಾಗಿ ಸ್ವಲ್ಪ ಸಮಯ ಮೀಸಲಿಡಬೇಕು ಎಂದು ಈಗ ಅನಿಸುವುದೇ ಇಲ್ಲ. ಮಕ್ಕಳ ಜೊತೆ ಆಟವಾಡಿ, ನಕ್ಕು ತನ್ನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಯೋಚನೆ ಬರುವುದೇ ಇಲ್ಲ. ಮಕ್ಕಳು ಆಟಕ್ಕೆ ಕರೆದಾಗ ನನಗೆ ಸಾಧ್ಯವಿಲ್ಲ ಎಂಬ ಮಾತು. ಈಗೀಗ ಮಾನವ ಒಂದು ಯಂತ್ರವೇ ಆಗಿ ಹೋಗಿದ್ದಾನೆ. ಒತ್ತಡದ ಜೀವನದಿಂದಾಗಿ ಅರ್ಧಾಯುಷ್ಯ ಮುಗಿಸುವ ಮೊದಲೇ ಹಲವಾರು ಕಾಯಿಲೆಗಳ ಗೂಡು ಆಗಿರುತ್ತಾನೆ. ಡಯಾಬಿಟೀಸ್, ಬಿಪಿ, ಹೃದಯ ಸಂಬಂಧಿ ಕಾಯಿಲೆ, ಅಜೀರ್ಣದ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆಗಳು ಆತನನ್ನು ಕಾಡಲು ಪ್ರಾರಂಭಿಸುತ್ತವೆ. 

ನೀವೇ ಯೋಚಿಸಿ, ಒಂದು ಹತ್ತು ವರ್ಷಗಳ ಮೊದಲು ಎಪ್ರಿಲ್ ಒಂದು ಬಂತು, ಎಂದೊಡನೇ ಎಲ್ಲರೂ ಒಂದು ರೀತಿಯಲ್ಲಿ ಜಾಗೃತರಾಗಿರುತ್ತಿದ್ದರು. ಯಾರು ನಮ್ಮನ್ನು ‘ಫೂಲ್’ ಮಾಡುತ್ತಾರೆಯೋ? ನಾವು ಹೇಗೆ ಮೂರ್ಖರಾಗಿ ಬಿಡುತ್ತೇವೆಯೋ ಎಂದು ಎಚ್ಚರಿಕೆಯಲ್ಲಿರುತ್ತಿದ್ದರು. ಆದರೆ ಕಳೆದ ಎರಡು ದಿನಗಳ ಹಿಂದೆ ಕಳೆದು ಹೋದ ಎಪ್ರಿಲ್ ಒಂದಕ್ಕೆ ಬಹುಷಃ ಯಾರೂ ಮೂರ್ಖರಾಗಿಲ್ಲ ಅಥವಾ ಯಾರನ್ನೂ ಮೂರ್ಖರನ್ನಾಗಿಸಿಲ್ಲ. ವರ್ಷವಿಡೀ ಮೂರ್ಖರಾಗಿರುವವರನ್ನು ಮತ್ತೆ ಮೂರ್ಖರನ್ನಾಗಿಸುವುದೇಕೆ ಎನ್ನುವ ಯೋಚನೆ ಇರಬಹುದೇ ಗೊತ್ತಿಲ್ಲ? ಮೊದಲಾದರೆ ಪತ್ರಿಕೆಗಳೂ ಹಾಸ್ಯ ಸಂಚಿಕೆಗಳು, ಮೂರ್ಖರನ್ನಾಗಿಸುವ ಬರಹಗಳನ್ನು ಹೊತ್ತ ವಿಶೇಷ ಸಂಚಿಕೆಗಳನ್ನು ಹೊರತರುತ್ತಿದ್ದವು.

ಕರ್ನಾಟಕದ ಖ್ಯಾತ ಕನ್ನಡ ದಿನ ಪತ್ರಿಕೆಯೊಮ್ಮೆ ಎಪ್ರಿಲ್ ಒಂದರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಗ್ಗೆ ಸುದ್ದಿಯನ್ನು ಪ್ರಕಟಿಸಿ ಇಡೀ ರಾಜ್ಯದ ಜನರನ್ನು ಮೂರ್ಖರನ್ನಾಗಿಸಿದ್ದರು. ಈ ಬಗ್ಗೆ ಸುಳಿವೇ ಇಲ್ಲದ ಜನರು ಬೆಳಿಗ್ಗೆ ಪತ್ರಿಕೆ ಓದಿ ಬೇಸ್ತು ಬಿದ್ದದ್ದು ಮಾತ್ರ ಮರೆಯಲಾಗದ ಘಟನೆ. ಕೆಲವು ಸೀರಿಯಸ್ ಮಂದಿಗಳು ಮಾತ್ರ ಈ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದರೂ ಬಹಳಷ್ಟು ಮಂದಿ ಈ ಪ್ರಯೋಗವನ್ನು ಮೆಚ್ಚಿಕೊಂಡಿದ್ದರು. ಅದಾದ ಬಳಿಕ ಪ್ರತೀ ವರ್ಷ ಎಪ್ರಿಲ್ ಒಂದರಂದು ಏನು ಫೂಲ್ ಮಾಡುತ್ತಾರೆ ಎಂದು ಕಾಯುವವರೂ ಇದ್ದರು. ನಂತರದ ದಿನಗಳಲ್ಲಿ ಆ ಪತ್ರಿಕೆಯವರೂ ಈ ರೀತಿಯ ಹಾಸ್ಯ ಶಾಕ್ ನೀಡುವುದನ್ನು ನಿಲ್ಲಿಸಿ ಬಿಟ್ಟರು. ಈಗಂತೂ ಯಾವುದೇ ಪತ್ರಿಕೆ ಈ ರೀತಿಯ ‘ಶಾಕ್’ ನೀಡುವುದಿಲ್ಲ. ನಕ್ಕು ಹಗುರಾಗಿಸುವ ಕಲೆ ಈಗ ಬಹಳ ದುಬಾರಿಯಾದಂತಿದೆ. ಅಂದು ದೂರದರ್ಶನ, ಅಂತರ್ಜಾಲದ ಹಾವಳಿ ಅಷ್ಟಾಗಿ ಇಲ್ಲದೇ ಇದ್ದುದರಿಂದ ಈ ರೀತಿಯ ಪ್ರಯೋಗಗಳು ಬಹಳಷ್ಟು ಯಶಸ್ಸನ್ನು ಕಾಣುತ್ತಿದ್ದವು ಅನ್ನಿಸುತ್ತಿದೆ.

‘ಸುಧಾ’ ವಾರ ಪತ್ರಿಕೆ ಕಳೆದ ಸುಮಾರು ಐದು ದಶಕಗಳಿಂದ ಪ್ರತೀ ವರ್ಷ ಎಪ್ರಿಲ್ ಒಂದರ ಸಂಚಿಕೆಯನ್ನು ಹಾಸ್ಯ ಸಂಚಿಕೆಯನ್ನಾಗಿ ಹೊರ ತರುತ್ತಿದೆ. ಆದರೆ ವರ್ಷದಿಂದ ವರ್ಷಕ್ಕೆ ಹಾಸ್ಯ ಪುಟಗಳು ಕಡಿಮೆಯಾಗುತ್ತಿವೆ. ದಶಕಗಳ ಹಿಂದಿನ ಸಂಚಿಕೆಗಳನ್ನು ತೆರೆದು ನೋಡಿದರೆ ಇಡೀ ಸಂಚಿಕೆ, ಮುಖಪುಟದಿಂದ ಹಿಡಿದು ಸಿನೆಮಾ ಪುಟಗಳ ವರೆಗಿನ ಬರಹಗಳು ಹಾಸ್ಯ ಬರಹಗಳಾಗಿರುತ್ತಿದ್ದವು. ಹಾಸ್ಯ ಪ್ರಹಸನ, ವಿಶೇಷ ವ್ಯಂಗ್ಯ ಚಿತ್ರಗಳು, ನಗೆಹನಿಗಳು, ರಾಜಕಾರಣಿಗಳ ಹಾಸ್ಯ ಸಂದರ್ಶನ, ಸಿನೆಮಾ ನಟ ನಟಿಯರ ಕಾಲ್ಪನಿಕ ಸಿನೆಮಾಗಳ ಬಗ್ಗೆ ವಿವರ, ಮಕ್ಕಳ ಪುಟಗಳಲ್ಲೂ ಹಾಸ್ಯ ಕಂಡು ಬರುತ್ತಿತ್ತು. ಆದರೆ ಕಳೆದ ವಾರ ಹೊರ ಬಂದ ಸುಧಾ ಸಂಚಿಕೆಯಲ್ಲಿ ಈ ಹಾಸ್ಯ ನಾಲ್ಕು ಬರಹಗಳಿಗೆ ಮಾತ್ರ ಸೀಮಿತವಾಗಿ ಉಳಿದಿದೆ. ಅದೂ ಮಹಿಳಾಮಣಿಯರು ಬರೆದ ಹಾಸ್ಯ ಬರಹಗಳು. ಉಳಿದಂತೆ ಮಾಮೂಲೀ ಸುಧಾ ಆಗಿಯೇ ಇದೆ. ಜನರಲ್ಲಿ ‘ಹಾಸ್ಯ’ ಪ್ರಜ್ಞೆ ಕಡಿಮೆಯಾಗಿರುವ ಲಕ್ಷಣವೇ? ನಗಲು ಇನ್ನೂ ಸರಕಾರ ಟ್ಯಾಕ್ಸ್ ಹಾಕಿಲ್ಲವಾದುದರಿಂದ ಇದರ ಹಿಂದೆ ಸರಕಾರದ ಕೈವಾಡ ಇದ್ದಿರಲಿಕ್ಕಿಲ್ಲ !

ಹಿಂದೆ ಕೆಲವರು ಮಾಡುವ ಹಾಸ್ಯಗಿಂದ ಅಪಹಾಸ್ಯಗಳಾಗಿ ಕೆಲವೊಮ್ಮೆ ಜೀವವನ್ನೂ ಕಳೆದುಕೊಂಡ ನಿದರ್ಶನಗಳೂ ಇವೆ. ನೈಜ ಸುದ್ದಿಗಳನ್ನೂ ಎಪ್ರಿಲ್ ಒಂದರಂದು ಪ್ರಕಟವಾದ ಕಾರಣ ಹಾಸ್ಯ ಸುದ್ದಿಗಳು ಎಂದು ತಿಳಿದುಕೊಂಡದ್ದೂ ಇದೆ. ಈ ವಿಚಾರದಲ್ಲಿ ನನಗೆ ನೆನಪಾಗುವುದು ಮಂಗಳೂರಿನ ಪ್ರತಿಷ್ಟಿತ ಐಸ್ ಕ್ರೀಂ ಕಂಪೆನಿಯವರು ನೀಡಿದ ಒಂದು ಜಾಹೀರಾತು. ಮಂಗಳೂರಿನ ಪ್ರತಿಷ್ಟಿತ ಐಸ್ ಕ್ರೀಂ ಕಂಪೆನಿಗೆ ಸಮೋಸಾ, ಕಟ್ಲೇಟ್ ತಯಾರಿಸುವವರು ಬೇಕಾಗಿದ್ದಾರೆ ಎನ್ನುವ ವರ್ಗೀಕೃತ ಜಾಹೀರಾತೊಂದು ಎಪ್ರಿಲ್ ಒಂದರಂದು ದಶಕಗಳ ಹಿಂದೆ ಪ್ರಕಟವಾಗಿತ್ತು ಎಂದು ನನ್ನ ನೆನಪು. ಆಗ ಈ ಸಂಸ್ಥೆ ಐಸ್ ಕ್ರೀಂ ಮಾತ್ರ ತಯಾರಿಸುತ್ತಿತ್ತು. ಈ ಕಾರಣದಿಂದ ನನ್ನನ್ನೂ ಸೇರಿ ಹಲವಾರು ಮಂದಿ ಇದು ಎಪ್ರಿಲ್ ಫೂಲ್ ಸುದ್ದಿ ಎಂದು ತಿಳಿದುಕೊಂಡಿದ್ದೆವು. ಆದರೆ ಈ ಸುದ್ದಿ ಸುಳ್ಳಾಗಿರದೇ ನಂತರದ ಕೆಲವೇ ದಿನಗಳಲ್ಲಿ ಆ ಐಸ್ ಕ್ರೀಂ ಪಾರ್ಲರ್ ನಲ್ಲಿ ಸಮೋಸಾ, ಕಟ್ಲೇಟ್, ಸ್ಯಾಂಡ್ ವಿಚ್ ಮೊದಲಾದ ಆಹಾರ ಪದಾರ್ಥಗಳು ದೊರೆಯಲು ಪ್ರಾರಂಭವಾದವು. ಇಂತಹ ಹಲವಾರು ಸುದ್ದಿ ಸಂಗತಿಗಳು ಅಂದು ನಡೆಯುತ್ತಿದ್ದವು ಮತ್ತು ಜನರಲ್ಲಿ ಹಾಸ್ಯರಸವನ್ನು ಉಕ್ಕಿಸುತ್ತಿದ್ದವು.

ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ನಗು ತುಂಬಾನೇ ತುಟ್ಟಿಯಾಗಿದೆ ಅನಿಸುತ್ತಿದೆ. ಹಾಸ್ಯ ಸಾಹಿತಿ ಕೃಷ್ಣೇ ಗೌಡರ ಪ್ರಕಾರ “ಈಗಂತೂ ಜನರು ಹಾಸ್ಯ ಪ್ರಸಂಗಗಳನ್ನು ಹೇಳಿದರೆ ಮನಸ್ಸು ಬಿಚ್ಚಿ ನಗುವುದೇ ಇಲ್ಲ, ಚಪ್ಪಾಳೆಯನ್ನೂ ತಟ್ಟುವುದಿಲ್ಲ. ಅಂದರೆ ಹಾಸ್ಯವನ್ನು ಒಳಗೊಳಗೇ ಆನಂದಿಸುತ್ತಾರೆ". ನಿಜಕ್ಕೂ ಸತ್ಯವಾದ ಮಾತು ಅಲ್ಲವೇ? ಹಾಸ್ಯ ಗೋಷ್ಟಿಗಳಲ್ಲಿ ನಗುವುದಕ್ಕೆ ಬಿಗುಮಾನವಾದರೆ ಹೇಗೆ? ನಕ್ಕರೆ ಅದೇ ಆರೋಗ್ಯ ಎನ್ನುತ್ತಾರೆ. ನಕ್ಕು ಆರೋಗ್ಯವಾಗಿರಿ…

ಚಿತ್ರ ಕೃಪೆ: ಅಂತರ್ಜಾಲ ತಾಣ