ಜಯಂತ ಕಾಯ್ಕಿಣಿ ಕುವೆಂಪು-ಬೇಂದ್ರೆ ಅವರನ್ನು ಮಾನವೀಯ ನೆಲೆಯಲ್ಲಿ ಅನಾವರಣಗೊಳಿಸಿದಾಗ..ಭಾಗ ೧.

ಜಯಂತ ಕಾಯ್ಕಿಣಿ ಕುವೆಂಪು-ಬೇಂದ್ರೆ ಅವರನ್ನು ಮಾನವೀಯ ನೆಲೆಯಲ್ಲಿ ಅನಾವರಣಗೊಳಿಸಿದಾಗ..ಭಾಗ ೧.

ಬರಹ

ಕರ್ನಾಟಕ ವಿದ್ಯಾವರ್ಧಕ ಸಂಘದ ಚಾಮರಾಜ ಮಂದಿರದಲ್ಲಿ ಡಾ.ದ.ರಾ.ಬೇಂದ್ರೆ ರಾಷ್ಟ್ರ್ರೀಯ ಸ್ಮಾರಕ ಟ್ರಸ್ಟ್, ಸಾಧನಕೇರಿ ಧಾರವಾಡ ಹಾಗು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಕೇಂದ್ರ, ಕುಪ್ಪಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ವೈಶಿಷ್ಠ್ಯಪೂರ್ಣ ವಿಚಾರ ಸಂಕಿರಣ ಜರುಗಿತು.
ಪ್ರಥಮ ಬಾರಿಗೆ ನವೋದಯದ ಇಬ್ಬರು ಅಸಾಮಾನ್ಯ ಪ್ರತಿಭೆಯ ಸೀಮಾತೀತ ವರಕವಿ ಹಾಗು ರಾಷ್ಟ್ರಕವಿಗಳನ್ನು ಒಂದೇ ವೇದಿಕೆಯ ಮೇಲೆ ತಂದು ನಿಲ್ಲಿಸಿ ಬೇಂದ್ರೆ-ಕುವೆಂಪು ತೌಲನಿಕ ಅಧ್ಯಯನವನ್ನು ಒಟ್ಟು ೧೧ ಜನ ಪ್ರಬಂಧಕಾರರು ಮಂಡಿಸಿ ಸಾಹಿತ್ಯ ಪ್ರಿಯರಿಗೆ ಭೂರಿ ಭೋಜನ ಉಣಬಡಿಸಿತು.

ವಿಚಾರ ಸಂಕಿರಣದ ಕೊನೆಯ ದಿನ ನಾಡಿನ ಖ್ಯಾತ ಸಣ್ಣಕಥೆಗಾರ, ಕಿರುತೆರೆಯ ದಿಗ್ದರ್ಶಕ, ‘ಮುಂಗಾರು ಮಳೆ’ಯ ಇಂಪು-ತಂಪು-ಕಂಪಿನ ಕವಿ ಗೋಕರ್ಣದ ಮೇರು ‘ಮೇಷ್ಟ್ರು’ ಗೌರೀಶ ಕಾಯ್ಕಿಣಿ ಪುತ್ರ ಜಯಂತ ಕಾಯ್ಕಿಣಿ ಪ್ರಬಂಧ ಮಂಡಿಸಿದರು. ಬೇಂದ್ರೆ ಹಾಗು ಕುವೆಂಪು ಇಬ್ಬರು ಹಿರಿಯ ಕವಿಗಳ ಆತ್ಮಕಥೆಗಳ ಕುರಿತು ಮಾತನಾಡಿದ ಜಯಂತ ಕಾಯ್ಕಿಣಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. ದೂರದರ್ಶನಕ್ಕಾಗಿ ತಾವು ಮಥಿಸಿದ ಹಾಗು ಕಥಿಸಿದ ‘ಬೇಂದ್ರೆ ಮಾಸ್ತರರಿಗೆ ನಮಸ್ಕಾರ’ ಹಾಗು ‘ರಾಷ್ಟ್ರಕವಿಗೆ ನಮನ’, ‘ಕಡಲತೀರದ ಭಾರ್ಗವನಿಗೆ ನಮಸ್ಕಾರ’ ಸರಣಿಯಲ್ಲಿ ಹಿರಿಯರ ಬಗ್ಗೆ ಆಸಕ್ತಿಯನ್ನು ಹುಟ್ಟಿಸಬಲ್ಲ ಘಟನೆಗಳನ್ನು, ವಯುಕ್ತಿಕ ಅಂಶಗಳನ್ನು ಪ್ರಸ್ತಾಪಿಸಿದ ಕವಿ ಜಯಂತ್ , ಯಾರಿಗೂ ಗೊತ್ತಿರದ ಸ್ವಾರಸ್ಯಕರ ಪ್ರಸಂಗಗಳನ್ನು ನನಪಿಸಿ ಆಳವಾದ ಸಮುದ್ರದಿಂದ ಮುತ್ತು ಹೆಕ್ಕಿ ತಂದರು.

ಕುವೆಂಪು ಅವರೇ ಬರೆದುಕೊಂಡಂತೆ ‘ನೆನಪಿನ ದೋಣಿ’ ಅವರ ಆತ್ಮಕಥೆ. ಬೇಂದ್ರೆಯವರ ಆತ್ಮಕಥೆ ಎಂದೇ ಹೇಳಲ್ಪಡುವ ‘ಸಖೀಗೀತ’ದಲ್ಲಿ ಉಲ್ಲೇಖಗೊಂಡಿರುವ ಅಂಶಗಳನ್ನು ಹೊರತುಪಡಿಸಿ (ಅವು ಅಪೂರ್ಣವಾಗಿವೆ!) ಕವಿ ಜಯಂತ್ ಅವರು ಅನೇಕ ಸ್ವಾರಸ್ಯಕರ ವಿಷಯಗಳನ್ನು ಮಂಡಿಸಿದರು. ಲೇಖನ ತುಸು ಧೀರ್ಘವಾಗಿದೆ. ಆದರೂ ಓದುಗರನ್ನು ಓದಿಸಿಕೊಂಡು ಹೋಗಬಲ್ಲುದು ಎಂಬ ಭರವಸೆ ನನ್ನದು. ಸಂಪದದ ಓದುಗರಿಗಾಗಿ ನನ್ನ ಹಳೆಯ ರೆಕಾರ್ಡ್ ಹೆಕ್ಕಿ ಈ ಮುತ್ತುಗಳನ್ನು ಇಲ್ಲಿ ಪೋಣಿಸಿದ್ದೇನೆ.

ಕವಿ ಜಯಂತ್ ಅವರಿಗೆ ಅವರ ತಂದೆ ಡಾ.ಗೌರೀಶ ಕಾಯ್ಕಿಣಿ ಸದಾ ಒಂದು ಮಾತನ್ನು ಹೇಳುತ್ತಿದ್ದರಂತೆ. ಮಾನವ ಜೀವನ ಪ್ರಾಥಮಿಕ ಶಾಲೆಯ ಪಠ್ಯದಂತೆ ಆರಂಭಗೊಂಡು ಪರೀಕ್ಷೆಯಲ್ಲಿ ಪರ್ಯಾವಸಾನಗೊಳ್ಳುತ್ತದೆ. ‘ಸಾರ್ಥಕತೆ’ ಪಡೆಯುವುದು ನಮ್ಮ ‘ಯೋಗ್ಯತೆ’ಗೆ ಬಿಟ್ಟಿದ್ದು.
ಪರೀಕ್ಷೆಯಲ್ಲಿ ಪ್ರಥಮತ: ಆರಂಭವಾಗುವುದು ‘ಬಿಟ್ಟಸ್ಥಳ ತುಂಬಿರಿ..’ ‘ಹೊಂದಿಸಿ ಬರೆಯಿರಿ..’ ಮೂಲಕ. ಆನಂತರ ಕೊನೆಗೊಳ್ಳುವುದು ‘ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ..’ಎಂಬುದರ ಮೂಲಕ!

************॑॑॑॑॑॑॑॑॑॑***********************
ರಾಷ್ಟಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಬಗ್ಗೆ ....

*ರಾಷ್ಟ್ರಕವಿಗೆ ಟೆನ್ನಿಸ್ ಆಟಗಾರ್ತಿ ಸ್ಟೆಫಿಗ್ರಾಫ್ ಅತ್ಯಂತ ಹಿಡಿಸುತ್ತಿದ್ದಳು. ಅವಳ ಹಲವಾರು ವಿಶಿಷ್ಠ ಭಾವ-ಭಂಗಿಯ ಪೇಪರ್ ಫೋಟೊ ಕಟ್ಟಿಂಗ್ಸ್ ತಮ್ಮ ಅಧ್ಯಯನ ಪುಸ್ತಕಗಳ ಒಳಗಡೆ ಅವರು ತೂರಿಸಿಟ್ಟಿರುತ್ತಿದ್ದರು!
*ಕುವೆಂಪು ಅವರಿಗೆ ಕ್ರಿಕೇಟರ್ ಸುನೀಲ್ ಗವಾಸ್ಕರ ಪಂಚಪ್ರಾಣ. ಅವರ ಅಪ್ಪಟ ಅಭಿಮಾನಿಯಾಗಿದ್ದ ಕವಿ ಗವಾಸ್ಕರ ಸ್ಕೋರ್ ಗಳನ್ನು ತಮ್ಮ ಟಿಪ್ಪಣಿ ಪುಸ್ತಕದಲ್ಲಿ ಗುರುತು ಹಾಕಿಕೊಂಡು ಅಗಾಗ ತಾಳೆ ನೋಡುತ್ತಿದ್ದರು. ಸ್ಕೋರ್ ‘ಅಪ್ ಗ್ರೇಡ್’..‘ಅಪ್ ಡೇಟ್’ ಕೂಡ ಮಾಡಿಕೊಳ್ಳುತ್ತಿದ್ದರು!
*ಕವಿ ಕುವೆಂಪು ಅತ್ಯಂತ ಶಿಸ್ತಿನ ಹಾಗು ಸಿಟ್ಟಿನ ವ್ಯಕ್ತಿ. ಗಂಭೀರವಾಗಿ ಪಾಠ-ಪ್ರವಚನ ಅವರ ಜಾಯಮಾನ. (ಡಾ.ಎಸ್.ಎಂ.ವೃಷಭೇಂದ್ರಸ್ವಾಮಿ ಅವರ ‘ತರಗತಿಗಳಲ್ಲಿ ಕುವೆಂಪು’ ಕೃತಿ ಓದುಗರು ಪರಾಮರ್ಶಿಸಬಹುದು.) ತುಸು ಅಲುಗಾಟ, ಕುಲುಕಾಟವನ್ನು ಸಹಿಸದ ಶಿಕ್ಷಕ. ಒಮ್ಮೆ ಇದ್ದಕ್ಕಿಂತ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪಾಠ ಮಾಡುತ್ತಿರುವಾಗ ಏಕಾಏಕಿ ಹತ್ತೆಂಟು ಬಾರಿ ತಮ್ಮ ಎಡಗೈ ಕುಲುಕುತ್ತ, ಮೇಲಕ್ಕೆತ್ತಿ ಮತ್ತೆ ಕಳಕ್ಕೆ ಬಿಡುತ್ತಿದ್ದರು. ಈ ರೀತಿಯ ಆಂಗಿಕ ಅಭಿನಯ ನೋಡಿರದ, ಊಹಿಸಲೂ ಸಾಧ್ಯವಾಗದ ವಿದ್ಯಾರ್ಥಿಗಳಲ್ಲಿ ಸಂಶಯ ಮನೆಮಾಡಿತ್ತು. ಕುವೆಂಪು ಇಂದು ‘ಅಸ್ವಸ್ಥರಾಗಿದ್ದಾರೆ’ ..ಎಂಬುದೇ ಅವರ ತರ್ಕ!
ಆದರೆ ರಾಷ್ಟ್ರಕವಿಗಳು ಅಂದು ಹೊಸ ‘ರಿಸ್ಟ್’ ವಾಚ್ (ಕೈ ಘಡಿಯಾರ) ಖರೀದಿಸಿದ್ದರಂತೆ. ಹಾಗಾಗಿ, ಅದು ಅವರ ಅಭಿವ್ಯಕ್ತಿಯ ಪರಿಯಂತೆ!
*ಪುಟ್ಟಪ್ಪನವರು ಹೊಸಕಾರು ಖರೀದಿಸಿದ್ದ ಸಂದರ್ಭ. ಅತ್ಯಂತ ಠೀವಿಯಿಂದ ತಮ್ಮ ಎಂದಿನ ಗತ್ತು, ಗಜಗಾಂಭೀರ್ಯದಿಂದಲೇ ಅದನ್ನು ತಂದು ಮಹಾವಿದ್ಯಾಲಯದ ಗಿಡದ ನೆರಳಿನಲ್ಲಿ ನಿಲ್ಲಿಸಿ ವರ್ಗಕ್ಕೆ ಭಿಜಂಗೈಯ್ದರು. ‘ಶ್ರೀ ರಾಮಾಯಣ ದರ್ಶನಂ’ ಅಂದಿನ ಪಾಠ. ವಿದ್ಯಾರ್ಥಿ ಸಂಪೂರ್ಣ ಏಕಾಗ್ರಚಿತ್ತನಾಗಿ ತಮ್ಮ ಪಾಠ ಆಲಿಸಬೇಕು. ಅದು ಕಡ್ಡಾಯ. ಆ ಕಡೆ- ಈ ಕಡೆ ಹೊರಳುವಂತಿಲ್ಲ.
ಆದರೆ ಕುವೆಂಪು, ಮಧ್ಯೆ-ಮಧ್ಯೆ ಕಿಟಕಿಯಿಂದ ಆಕಡೆ ಇಣುಕಿ ನೋಡುತ್ತ, ತಮ್ಮ ಹೊಸ ಕಾರು ಸರಿಯಾಗಿದೆಯೇ? ಅದಕ್ಕೆ ಬಿಸಿಲು ತಟ್ಟುತ್ತಿದೆಯೇ? ಎಂದು ಯೋಚಿಸುತ್ತಲೇ ಪಾಠ ಮಾಡುತ್ತಿದ್ದರಂತೆ! ಅರ್ಧ ಗಂಟೆ ಕಳೆಯುವ ಹೊತ್ತಿಗೆ ಕಾರಿನ ಮೇಲೆ ಬಿಸಿಲು ತಾಂಡವವಾಡತೊಡಗಿತ್ತು. ಸಹಿಸಲಾಗದೇ ಪುಟ್ಟಪ್ಪನವರು, ಪುಸ್ತಕ ಮಡಚಿ ಮೇಜಿನ ಮೇಲಿಟ್ಟು ತಮ್ಮ ಕಾರಿನ ಬಳಿ ತೆರಳಿದರು. ಅದನ್ನು ಮುಂದುಗಡೆ ಕೊಂಡೊಯ್ದು ನೆರಳಿನಲ್ಲಿ ನಿಲ್ಲಿಸಿ ಬಂದು ಮತ್ತೆ ಅದೇ ಗತ್ತಿನಲ್ಲಿ ಪಾಠ ಪ್ರಾರಂಭಿಸಿದರಂತೆ!
*ಸೂಜಿ ಬಿದ್ದರೂ ಸಪ್ಪಳಾಗಬೇಕು. ವರ್ಗದಲ್ಲಿ ಪಾಠ ಮಾಡುವಾಗ ಅದು ಪುಟ್ಟಪ್ಪನವರಿಗೆ ಕೇಳಿಸಬೇಕು! ಇದು ಅವರ ಪಾಠದ/ ವರ್ಗದ ಶಿಷ್ಠ ಸಂಪ್ರದಾಯ. ಒಮ್ಮೆ ‘ಮಲೆಗಳಲ್ಲಿ ಮದುಮಗಳು’ ಪಾಠ ಮಾಡುತ್ತಿದ್ದರು ಕುವೆಂಪು. (ಊಹಿಸಿ; ಸ್ವತ: ಬರೆದ ಕವಿಯೇ ತನ್ನ ವಿಶಿಷ್ಠ ಭಾವ, ಶೈಲಿ, ಲಯ ಹಾಗು ಶಬ್ದಗಳ ಹಿಡಿತದಿಂದ ಉದ್ಧರಿಸಬೇಕಾದರೆ!)
ಹಿಂಬದಿಯ ಬೆಂಚಿನಿಂದ ಬೆಕ್ಕು ಕೂಗಿದ ಸದ್ದಾಯಿತು. ಕೆಂಡಾಮಂಡಲರಾದ ಕುವೆಂಪು ಕಾವ್ಯದ ಶೈಲಿಯಲ್ಲಿ ‘ಯಾವುದದು ಕುನ್ನಿ ಕುಂಯ್ ಗುಟ್ಟಿದ್ದು?’ ಎಂದರಂತೆ. ಎದ್ದು ನಿಲ್ಲದೇ ಹೋದರೆ ತಕ್ಕ ಶಾಸ್ತಿ. ಆ ರೀತಿ ಕಳ್ಳ ಬೆಕ್ಕಿನಂತೆ ಕೂಗಿದ್ದ ವಿದ್ಯಾರ್ಥಿ ಎದ್ದು ನಿಂತು ಕಾವ್ಯದ ಶೈಲಿಯಲ್ಲಿಯೇ ‘ಕ್ಷಮಿಸಬೇಕು..ಗುರುಸಾರ್ವಭೌಮ..ಕುಂಯ್ ಗುಟ್ಟಿದ್ದ ಕುನ್ನಿ ಇದು’ ಎಂದ.
ಅಷ್ಟೇ ಮಾರ್ಮಿಕವಾಗಿ, ಅವನ ಪ್ರಾಮಾಣಿಕತೆಗೆ ಮೆಚ್ಚಿ, ಕುವೆಂಪು ಅವರು ‘ಕುಳಿತುಕೋ ಕುನ್ನಿ..ಇನ್ನೊಮ್ಮೆ ಮಾಡದಿರು!’ ಎಂದು ಗಂಭೀರವಾಗಿಯೇ ಹೇಳಿ, ತಮ್ಮ ಪಾಠ ಮುಂದುವರೆಸಿದರು!
*ಪ್ರತಿ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇದ್ದಂತೆ, ಕುವೆಂಪು ಅವರಿಗೆ ಶ್ರೀಮತಿ ಹೇಮಾವತಿ ಅವರೇ ಸರ್ವಸ್ವವಾಗಿದ್ದರು. ಉಸಿರಾಗಿದ್ದರು. ಆದರೆ ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಬಂದಾಗ "ಇಲ್ಲ..ನಾನು ಬ್ರಹ್ಮಚಾರಿಯಾಗಿಯೇ ಉಳಿಯಬೇಕೆಂದಿದ್ದೆ. ಆದರೆ ನಾನು ಪ್ರೀತಿಸಿದ ಹುಡುಗಿ ಮದುವೆಯಾಗಲು ಇಚ್ಛಿಸಿದಾಗ ನಾನ್ಹೇಗೆ ಈ ಬ್ರಹ್ಮಚಾರಕ್ಕೆ ಅಂಟಿಕೊಂಡಿರಲು ಸಾಧ್ಯ? ಮದುವೆ ಯಾಗುವುದೇ ಲೇಸು..ಎಂದು ತೀರ್ಮಾನಿಸಿದೆ!" ಎಂದಿದ್ದರಂತೆ ಕವಿ.
*ಪುಟ್ಟಪ್ಪನವರು ಸೌ.ಹೇಮಾವತಿಯವರನ್ನು ಮೊದಲ ಬಾರಿಗೆ ನೋಡಿದ್ದು, ಮಹಾರಾಜಾ ಕಾಲೇಜಿನ ಕ್ಯಾಂಪಸ್ಸಿನಲ್ಲಿ. ಅದೂ, ಮಹಾವಿದ್ಯಾಲಯದ ಆವರಣದಲ್ಲಿದ್ದ ಗುಲಾಬಿ ಗಿಡದ ಕಂಟಿಯೊಂದರಲ್ಲಿ ಬಿದ್ದಿದ್ದ, ಅವರು ತಮ್ಮ ಕೈಯ್ಯಾರ ಕಸೂತಿ ಹಾಕಿದ್ದ ಕರವಸ್ತ್ರದ ಮೂಲಕ. ಅದನ್ನೆತ್ತಿ ತಮ್ಮ ಬಳಿ ಇಟ್ಟುಕೊಂಡಿದ್ದ ಕುವೆಂಪು ಅವರನ್ನು ಕಂಡು ಸೌ.ಹೇಮಾವತಿಯವರ ಗೆಳತಿಯರು ಪಡೆದುಕೊಂಡು ಒಯ್ದರಂತೆ. ಇದೇ ತಿರುವು ಮುಂದೆ ಕವಿಯ ಬಾಳಿನ ‘ಮುರುವು’(ಹೆಣ್ಣು ಮಕ್ಕಳು ತಮ್ಮ ಸೌಂದರ್ಯ ವರ್ಧಿಸಲು ಬಳಸುವ ಮೂಗಿನೋಲೆ) ಆಯಿತಂತೆ!
*ಪುಟ್ಟಪ್ಪನವರಿಗೆ ಸ್ತ್ರೀಯರ ಬಗ್ಗೆ ಅಪಾರ ಗೌರವ. ಸಂವೇದನಾಶೀಲರು ಆಗಿದ್ದರು. ತಮ್ಮ ವಿಷಯ (ಕವಿ ಕಲಿಸುವ ವಿಷಯ) ಆಯ್ದುಕೊಂಡು ಅಂದು ವರ್ಗದಲ್ಲಿ ಉಪಸ್ಥಿತರಿದ್ದ ಶ್ರೀಮತಿ ರುಕ್ಮಿಣಿ ಅವರು ಅತ್ಯಂತ ಹಿಂಬದಿಯ ಬೆಂಚಿನಲ್ಲಿ ಆಸೀನರಾಗಿದ್ದನ್ನು ಗಮನಿಸಿದರು. ಕೂಡಲೇ ಅವರು "ನೀವೊಬ್ಬರೆ ಮಹಿಳೆ ಈ ವರ್ಗದಲ್ಲಿ. ನೀವು ಹಾಗೆ ಹಿಂಬದಿಗೆ ಕುಳಿತುಕೊಳ್ಳಬಾರದು. ಮುಂದುಗಡೆ ಬನ್ನಿ. ನೀವು ಏನೇನು ತಿಳಿದುಕೊಂಡಿರಿ ಎಂಬುದನ್ನು ನಾನು ಹೇಗೆ ತಿಳಿಯುವುದು?"
ರುಕ್ಮಿಣಿ ಅವರ ಪ್ರಕಾರ- "ಮಹಿಳೆಯರು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಆರ್ಥಿಕವಾಗಿ ಸಬಲರಾಗಿ ಮುಂದೆ ಬರಬೇಕ್ಉ ಎಂಬುದರ ಪರಿಭಾಷೆಯೇ ಕುವೆಂಪು ನನಗಿತ್ತ ಮುಂದಿನ ಬೆಂಚಿನ ಗೌರವ!"
*ಒಮ್ಮೆ ಮಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅಪ್ಪನ ಮಾತನ್ನು ಕೇಳಿಸಿಕೊಂಡು ಅಮ್ಮ ಹೇಮಾವತಿ ಅವರ ಕಡೆ ತೆರಳಿ- "ಅಮ್ಮ ಸತ್ಯವನ್ನು ಹೇಳಬೇಕು; ಸ್ವಾರಸ್ಯಕರವಾಗಿಯೂ ಹೇಳಬೇಕು ಎಂದರೆ ಹೇಗೆ ಸಾಧ್ಯ? ಮೂಲತ: ಸತ್ಯವೇ ಕಹಿ ಅಲ್ಲವೇ?" ಎಂದಿದ್ದು ಕುವೆಂಪು ಅವರಿಗೆ ಪುಟ್ಟ ಕನ್ನಡಿ ಹಿಡಿದಂತಾಗಿತ್ತು.
*ಅಜ್ಜ ಕವಿ ಪುಟ್ಟಪ್ಪನವರು ಬರೆದು ಪ್ರತಿಪಾದಿಸಿದ ‘ನೂರು ದೇವರನು ನೂಕಾಚೆ ದೂರ..’ ಅಕ್ಷರಶ: ಕೃತಿಗೆ ಇಳಿಸಿದವಳು ಮೊಮ್ಮಗಳು ಈಶಾನ್ಯೆ. ಏಕಾಏಕಿ ಮನೆಯಲ್ಲಿದ್ದ ದೇವರನ್ನೆಲ್ಲ ಪ್ಲಾಸ್ಟಿಕ್ ಚೀಲದಲ್ಲಿ ತುರುಕಿ ಮನೆಯ ಮುಂದಿನ ಆವರಣದಲ್ಲಿ ಬಿಸಾಕಿದ್ದಳು. ಇದನ್ನು ನೋಡಿದ ಅಜ್ಜಿ ಮತ್ತು ತಾಯಿ ದಿಗ್ಭ್ರಮೆ ವ್ಯಕ್ತಪಡಿಸಿ ಕುವೆಂಪು ಅವರ ಬಳಿ ದೂರು ನೀಡಲು ಬಂದಾಗ- ಈಶಾನ್ಯೆ ಮುಗ್ಧತೆಯಿಂದ "ಅಜ್ಜ ನೀವೇ ಹೇಳಿದ್ದು. ನೂರು ದೇವರನು ನೂಕಾಚೆದೂರ ಎಂದು?!" ಕುವೆಂಪು ಮೂಕವಿಸ್ಮಿತರು ಆಗ.
*ಇದ್ದಕ್ಕಿದ್ದಂತೆಯೇ ಒಂದು ದಿನ ಬೆಳಿಗ್ಗೆ ಒಕ್ಕಲಿಗ ಸಮಾಜದ ಕೆಲ ಮುಖಂಡರು ಕುಪ್ಪಳ್ಳಿಯ ಕವಿಯ ಮನೆಗೆ ಆಗಮಿಸಿದರು. ಕುವೆಂಪು ಅವರನ್ನು ಕಂಡು ಉಭಯ ಕುಶಲೋಪರಿ ವಿಚಾರಿಸಿ, ತಮ್ಮ ಸಮಾಜದ ಮುಖಂಡತ್ವ ವಹಿಸಿಕೊಳ್ಳಲು ಕೇಳಿಕೊಂಡರು.
ಮರುಮಾತನಾಡದೇ ಬಿರಬಿರನೇ ಎದ್ದು ಒಳ ನಡೆದ ಕುವೆಂಪು ತಮ್ಮ ಅಭ್ಯಾಸ ಕೊಠಡಿಯಲ್ಲಿ ನೇತು ಹಾಕಿಕೊಂಡಿದ್ದ ಜಗತ್ತಿನ ಭೂಪುಟ ತಂದು ಅವರ ಮುಂದೆ ಹರಡಿದರು. ಆ ಮುಖಂಡರಿಗೆ ಪ್ರಶ್ನೆಗಳ ಸುರಿಮಳೆ ಕವಿ ಹೀಗೆ ಹರಸಿದ್ದರು. ಇದೇನು? ನಮ್ಮ ದೇಶ ಯಾವ ಖಂಡದಲ್ಲಿದೆ? ದೇಶ ಎಲ್ಲಿದೆ? ಇದರಲ್ಲಿ ಕರ್ನಾಟಕ ಎಲ್ಲಿದೆ? ಅಲ್ಲಿ ಕುಪ್ಪಳ್ಳಿ ಎಲ್ಲಿದೆ? ಇದರಲ್ಲಿ ಕುವೆಂಪು ಮನೆ ಎಲ್ಲಿ ಬರುತ್ತದೆ? ಹೀಗೆ..
ಬಂದಿದ್ದವರಿಗೆ ತಮ್ಮ ತಪ್ಪಿನ ಅರಿವು ತಡವಾಗಿಆಗಿತ್ತು. ವಿಶ್ವಮಾನವತೆ ಪ್ರತಿಪಾದಿಸಿದ್ದ ರಸರುಷಿಗೆ ಜಾತಿವಾದಿಗಳು ಬ್ರ್ಯಾಂಡ್ ಮಾಡಲು ಹೋಗಿ ತೆಪ್ಪಗಾದ ಪ್ರಸಂಗ. ಇಂದಿಗೂ ಪ್ರಸ್ತುತ.
*ಜಗತ್ತಿನ ಜೀವಿಗಳ ಬಗ್ಗೆ ತಿಳಿಯಲು ‘ಎನ್ ಸೈಕ್ಲೋಪೀಡಿಯಾ’ ತೆರದುಕೊಂಡು ಕುವೆಂಪು ಚಿಂತಿಸುತ್ತಿರುವಾಗ, ಎಲ್ಲಿಂದಲೋ ಇರುವೆಯೊಂದು ಬಂದು ಪುಟಗಳಲ್ಲಿ ಹರಿದಾಡಲಾರಂಭಿಸಿತು. ಎರಡು ಬಾರಿ ಊದಿದ ಕುವೆಂಪು ಮೂರನೇ ಬಾರಿ ತಾಳ್ಮೆ ಮೀರಿ ‘ಧಡ್’ ಎಂದು ಪುಸ್ತಕ ಮುಚ್ಚಿದರು. ತೆರೆದು ನೋಡಿದಾಗ ‘ಇರುವೆ’ ಅಲ್ಲಿರಲಿಲ್ಲ. ‘ನೀನೆಲ್ಲಿರುವೆ?’ ಆಗಿತ್ತು. ಸ್ವಲ್ಪಹೊತ್ತಿನ ಬಳಿಕ ಅರ್ಧಜೀವ ಹಿಡಿದುಕೊಂಡು ತೆವೆಳುತ್ತ ಹರಿದಾಡಲಾರಂಭಿಸಿತು- ಬೈಂಡಿಂಗ್ ಸಂದಿಯಿಂದ.
ಇದನ್ನೆಲ್ಲ ನೋಡಿದ ಕುವೆಂಪು ತನ್ನ ಸ್ವಾರ್ಥಕ್ಕಾಗಿ ಇರುವೆಯ ಜೀವ ಹಣ್ಣು ಮಾಡಿಬಿಟ್ಟೆ ಎಂದೆನಿಸಿ ತಾಸುಗಟ್ಟಲೇ ಅತ್ತರು. ಸ್ವಲ್ಪ ಹೊತ್ತಿನ ಬಳಿಕ ತಾನೇ ಮರುಜೀವ ಪಡೆದು ಇರುವೆ ಪುಸ್ತಕದಿಂದ ಕೆಳಗಿಳಿದು ನಡೆಯಿತು. ಕುವೆಂಪು ನಿಟ್ಟುಸಿರು ಬಿಟ್ಟರು.
*ಕುವೆಂಪು ಕುಪ್ಪಳ್ಳಿಯ ಅಭ್ಯಾಸ ಕೊಠಡಿಯಲ್ಲಿ ಗಂಭೀರವಾಗಿ ಆಲೋಚಿಸುತ್ತ ಒಮ್ಮೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು ೧ ಗಂಟೆಗಳ ಕಾಲ ಕಂಪೌಂಡಿನ ಮೇಲೆ ಅಳಿಲೊಂದು ಆಟವಾಡುತ್ತ, ಹಣ್ಣುಗಳನ್ನು ಹೆಕ್ಕುತ್ತ ಸ್ವಚ್ಛಂದವಾಗಿ ಬಾಲ ಎತ್ತಿ ಕುಣಿಸುತ್ತ ಆಟದಲ್ಲಿ ತೊಡಗಿತ್ತು. ಕಿಟಕಿಯ ಮೂಲಕ ಚಲನವಲನ ಗಮನಿಸುತ್ತಿದ್ದ ಕುವೆಂಪು ಅವರಿಗೂ ಅದು ಹಿಡಿಸಿತ್ತು. ಅದರ ಬುಡದಲ್ಲಿ ಕರಿ ಬೆಕ್ಕೊಂದು ಈ ಸುಂದರ ಅಳಿಲನ್ನು ಹಿಡಿಯಲು ಹೊಂಚುಹಾಕಿ ಕಾಯ್ದಿತ್ತು. ಚತುರ ಅಳಿಲು ಬೆಕ್ಕಿಗೆ ಸಿಗದೇ ಹಾರಿ, ಛಂಗನೇ ನೆಗೆದು ಗಿಡವೇರಿ ಓಡಿಹೋಗುವುದು ಎಂದು ಪರಿಭಾವಿಸಿದ್ದ ಕುವೆಂಪು ಅವರಿಗೆ ಆಘಾತ ಕಾದಿತ್ತು. ಬೆಕ್ಕು ಕೆಲವೇ ಸಕೆಂಡುಗಳಲ್ಲಿ ಛಂಗನೇ ನೆಗೆದು ಅಳಿಲನ್ನು ಹಿಡಿದು ಸಾಯಿಸುವಲ್ಲಿ ಯಶಸ್ವಿಯಾಯಿತು. ಬಹುಶ: ನಾನೇ ಅದರ ಸಾವಿಗೆ ಕಾರಣನಾದೆ. ಬೆಕ್ಕು ಓಡಿಸಿದ್ದರೆ ಪಾಪ ನಿರುಪದ್ರವಿ ಬದುಕುತ್ತಿತ್ತು. ನನ್ನ ಸಾಹಿತ್ಯ ಅಳಿಲನ್ನು ಕೊಂದಿತು ಎಂದು ಬಹಳ ದಿನಗಳ ಕಾಲ ಕುವೆಂಪು ತೀವ್ರ ಮನೋವೇದನೆ ಅನುಭವಿಸಿದ್ದರು.
***********॑॑॑॑॑॑॑॑॑॑॑॑॑॑॑॑॑॑************** ಭಾಗ ೨..ಬೇಂದ್ರೆ-ಕುವೆಂಪು...ಓದಿ.