ಜಾತಕ ಎಂಬ ಕವನ

ಜಾತಕ ಎಂಬ ಕವನ

ಬರಹ

ನಿನ್ನೆಯ ತನಕ ಅಲ್ಲಿ ಇಲ್ಲಿ
ತಕಪಕ ಕುಣಿಯುತ್ತಿದ್ದ ಮನೆಯ ನಾಯಿ
ತಟಪಟ ಕೈಕಾಲು ಬಡಿದು ಸತ್ತಾಗಲೇ
ಶುರುವಾಗಿತ್ತು ನನ್ನಮ್ಮನ ಮನದಲ್ಲಿ
ಸಂಶಯದ ಕೀಟ

ಮಾಡಿರಬಹುದೇ ಯಾರಾದರೂ ಮಂತ್ರ ಮಾಟ
ವಾರದಲಿ ಮುದಿ ದನವೊಂದು ಗೊಟಕ್ಕೆನ್ನಬೇಕೇ?
ಅಪ್ಪನಿಗೇರಿತು ಹಳೆಯ ದಮ್ಮಿನ ಹುಮ್ಮು
ಅಮ್ಮನಿಗೆ ಗಾಬರಿಯೋ ಗಾಬರಿ
ಗ್ರಹಗತಿಯ ಗ್ರಹಚಾರ ಸರಿಇರದೆಂಬ ಖಾತರಿ

ತುರುಕಿದಳು ಅಮ್ಮ ನನ್ನ ಕೈಯೊಳಗೆ
ಅಪ್ಪನ ಮತ್ತು ನನ್ನ ಜಾತಕದ ಕಟ್ಟು
'ಬೇಡ ಸಾಧ್ಯವಿಲ್ಲ' ಎಂದರೂ ಕೇಳಬೇಕೇ? ನೋಡಿ
ಓಡಿಸಿದಳು ಜೋಯಿಸರ ಮನೆಗೆ ಕಾಡಿ ಬೇಡಿ

ಜೋಯಿಸರ ಮನೆ ಮಟ್ಟಲೇರುವಾಗಲೇ
ನೆರೆದಿತ್ತು ಅಲ್ಲಿ ದೊಡ್ದ ಸಂತೆ
ಪ್ರತಿಯೊಬ್ಬರ ಮೊಗದಲ್ಲೂ ಪ್ರೇತ ಕಳೆ
ಸಣ್ಣ ಪುಟ್ಟ ಬಗೆಬಗೆಯ ಚಿಂತೆ
ಒಬ್ಬನ ಮಗನಿಗೆ ಹುಚ್ಚು
ಮತ್ತೊಬ್ಬನ ಮಗಳಿಗೆ ಬೀದಿ ಸುತ್ತುವ ನೆಚ್ಚು
ಇನ್ನೊಬ್ಬನ ಮಡದಿಗೆ ರಕ್ತ ವಾಂತಿ
ಮಗದೊಬ್ಬನಿಗೆ ಇಲ್ಲವಂತೆ ಮನೆ ಮನ ಶಾಂತಿ

ಜೋಯಿಸರ ಮಾಣಿಗೆ ಪುರುಸೊತ್ತಿರಲಿಲ್ಲ
ತಾಯತ, ಮಂತ್ರಾಕ್ಷತೆ, ರಕ್ಷಾಕವಚ
ಮಂತ್ರಿಸಿದ ತೆಂಗಿನಕಾಯ ಸಾರಾಸಗಟು ಮಾರಾಟ
ಕೊನೆಯಲ್ಲಿ ಬಂತು ನನ್ನ ಸರದಿ
ಎತ್ತಿಕೊಂಡರು ನನ್ನ ಜಾತಕ
ಇಟ್ಟರೊಮ್ಮೆ ಗರ್ದೃ ದೃಷ್ಟಿ
ಹಾರುತ್ತಿತ್ತು ಜುಟ್ಟು, ಕುಣಿಯುತ್ತಿತ್ತು ಹುಬ್ಬು
ನಲಿಯುತ್ತಿತ್ತು ಕೈಯಲ್ಲಿ ಕವಡೆ ತಕಪಕ
ಒಮ್ಮೆ ನಗು, ಮಗದೊಮ್ಮೆ ಘನ ಗಂಭೀರ
ಪಕ್ಕನೆ ಚಿಂತಾಕ್ರಾಂತ, ಹಟಾತ್ತನೆ ಶಾಂತ, ಮಂದಸ್ಮಿತ

ಅಷ್ಟಮದಲ್ಲಂತೆ ಚಂದ್ರ ಸಪ್ತಮದಲ್ಲಿ ಕುಜ
ಆದರೂ ಬಚಾವ್ - ಇದೆ ಗುರುವಿನ ದೃಷ್ಟಿ
ಗುರುವಿನ ಗುಲಾಮನಾಗದ ತನಕ ಇಲ್ಲವಂತೆ ಮುಕುತಿ
ಮುಂದಿನ ತಿಂಗಳೆರಡು ಸಂಕಷ್ಟ, ಅನಾವೃಷ್ಟಿ
ಸಾವು, ರೋಗರುಜಿನ, ಶಸ್ತ್ರಕ್ರಿಯೆ ಅಪಾಯ
ಮತ್ತೆ ಇರಬಹುದು ಧನ ಪ್ರಾಪ್ತಿ ಸಂತೃಪ್ತಿ -
ಶನಿ ಪೂಜೆಯಿಂದ , ವೈದೀಕರ ಸೇವೆಯಿಂದ

ಅವರವರ ಭಾವಕ್ಕೆ ಅವರವರ ಭಕುತಿಗೆ
ತಕ್ಕಂತೆ ನುಡಿಯುತ್ತಿತ್ತು ಜಾತಕವೆಂಬ ಸೀಡಿ
ಇಟ್ಟೆ ಜೋಯಿಸರ ಮುಂದೆ ನೂರರ ಐದು ಕಟ್ಟು
ಕಣ್ಣಿಗೊತ್ತಿ ಕಣ್ಮುಚ್ಚಿ ಕೈಯಲ್ಲಿಟ್ಟರು ಮಂತ್ರಿಸಿದ ತೆಂಗಿನ ಕಾಯಿ
ಅಲುಗಾಡಿಸಿದರೆ ನೀರಿರದ ಬರೆಯ ಬುರುಡೆ

ಎ.ಪಿ.ರಾಧಾಕೃಷ್ಣ