ಜಾತಿಗಣತಿಗೆ ರಾಜಕೀಯವೇಕೆ?

ಜಾತಿಗಣತಿಗೆ ರಾಜಕೀಯವೇಕೆ?

ಬಿಹಾರವು ದೇಶದಲ್ಲೇ ಮೊದಲ ಜಾತಿ ಗಣತಿ ವರದಿ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ. ಜಾತಿಗಣತಿಯ ಜತೆಜತೆಗೆ ಈ ವರದಿ ಸಾಮಾಜಿಕ ವ್ಯವಸ್ಥೆಯ ಹಲವು ವಾಸ್ತವಗಳನ್ನೂ ಹೊರಗೆಡವಿದೆ. ಅಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ. ೨೭. ಅತ್ಯಂತ ಹಿಂದುಳಿದ ವರ್ಗದವರ ಸಂಖ್ಯೆ ಶೇ ೩೬ರಷ್ಟಿದೆ. ರಾಜ್ಯದ ಶೇ. ೩೪.೧೩ರಷ್ಟು ಜನರ ಮಾಸಿಕ ಆದಾಯ ೬ ಸಾವಿರ ರೂ.ಗ಼ಿಂತ ಕಡಿಮೆ ಇದ್ದರೆ, ಮಾಸಿಕ ೧೦ ಸಾವಿರ ರೂ. ಅಥವಾ ಅದಕ್ಕಿಂತಲೂ ಕಡಿಮೆ ಆದಾಯವಿರುವವರ ಸಂಖ್ಯೆ ಶೇ.೨೯.೬೧ರಷ್ಟು. ಶೇ ೨೮ರಷ್ಟು ಮಂದಿ ಮಾತ್ರ ೧೦,೦೦೦-೫೦,೦೦೦ ರೂ. ಆದಾಯದಲ್ಲಿ ಜೀವಿಸುತ್ತಿದ್ದಾರೆ. ಶೇ. ೪ ರಷ್ಟು ಜನರು ಮಾತ್ರ ಮಾಸಿಕ ೫೦ ಸಾವಿರ ರೂ. ಆದಾಯ ಹೊಂದಿದ್ದಾರೆ.

ನಿಜ, ಸಮಾಜದಲ್ಲಿ ಜಾತಿ ನಿರ್ಮೂಲನೆ ಆಗಬೇಕು ಎಂದು ಹಲವು ಸಾಮಾಜಿಕ ಸುಧಾರಕರು ಬಯಸಿದ್ದಾರೆ. “ಇವನಾರವ ಇವನಾರವ, ಇವನಾರ ಎಂದೆನಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ” ಎಂದು ಬಸವಣ್ಣ ಆಶಿಸಿದರೆ, ಡಾ. ಬಿ ಆರ್ ಅಂಬೇಡ್ಕರ್, ರಾಮ ಮನೋಹರ ಲೋಹಿಯಾ ಅವರಂಥವರು ಜಾತಿ ನಿರ್ಮೂಲನಕ್ಕೆ ಕರೆಕೊಟ್ಟರು. ಆದರೆ ಜಾತಿ ವಿನಾಶಕ್ಕೆ ಮೊದಲು ನಮ್ಮೊಳಗೆ ಆಳವಾಗಿ ಬೇರು ಬಿಟ್ಟಿರುವ ಜಾತಿಯ ಜೀವಂತಿಕೆಯನ್ನು ಒಪ್ಪಿಕೊಳ್ಳುವುದು ಈ ಕಾಲದ ಅನಿವಾರ್ಯತೆಗಳಲ್ಲೊಂದು.

ಜಾತಿಗಣತಿ ಬಗ್ಗೆ ತನ್ನದೇ ವಾದ ಮುಂದಿಟ್ಟು ಆಕ್ಷೇಪ ಸೂಚಿಸಿದ್ದ ಬಿಜೆಪಿ ಕೂಡ ಚುನಾವಣೆ ಹೊಸ್ತಿಲಿನಲ್ಲಿ ತನ್ನ ನಿಲುವನ್ನು ಬದಲಿಸಿಕೊಳ್ಳುತ್ತಿದೆ. ಅಂದ ಮೇಲೆ, ಈಗ ಎಲ್ಲ ರಾಜಕೀಯ ಪಕ್ಷಗಳಿಗೂ ಜಾತಿಗಣತಿ ಒಪ್ಪಿಕೊಳ್ಳದೇ ವಿಧಿಯಿಲ್ಲ. ಆದರೆ, ಜಾತಿಗಣತಿ ಹಿಂದೆ ರಾಜಕೀಯ ಲೆಕ್ಕಾಚಾರಗಳಿದ್ದರೆ ಅದು ನಿಜಕ್ಕೂ ಸಾಮಾಜಿಕ ನಷ್ಟ. ಪಕ್ಷಗಳು ‘ಮೀಸಲು'ಗಣ್ಣಿನಿಂದ, ರಾಜಕೀಯ ಲೆಕ್ಕಾಚಾರಗಳಿಂದ ಜಾತಿಯನ್ನು ನೋಡುವುದನ್ನು ಕೈಬಿಡಬೇಕಿದೆ. ಜಾತಿಗಣತಿಯನ್ನು ಪಕ್ಷಗಳು ರಾಜಕೀಯಗೊಳಿಸದೆ, ವಿಶಾಲ ಅರ್ಥದಿಂದ ನೋಡುವುದನ್ನು ರೂಢಿಸಿಕೊಳ್ಳಬೇಕಿದೆ.

ಜಾತಿಯನ್ನು ಆಧಾರವಾಗಿಟ್ಟುಕೊಂಡು, ಜನಸಮುದಾಯದ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಸ್ಥಿತಿಗತಿ,ಜಾತಿಗಳಿಗೆ ಸರಕಾರದಿಂದ ಸಿಕ್ಕಂಥ ಸೌಲಭ್ಯಗಳ ಬಗ್ಗೆ ಗಮನ ನೆಡುವುದು ಅತ್ಯವಶ್ಯ. ಪ್ರಸ್ತುತ ಬಿಹಾರದ ಜಾತಿಗಣತಿಯಿಂದ ನಾವು ಹೆಕ್ಕಬೇಕಾಗಿರುವ ಅಂಶಗಳೂ ಇವೇ ಆಗಿವೆ. ಅಲ್ಲಿ ಸಿಕ್ಕಿರುವ ನಿಖರ ಮಾಹಿತಿಗಳಿಂದ ಬಿಹಾರ ಸರಕಾರಕ್ಕೆ ಸೂಕ್ತ ನೀತಿ-ನಿರೂಪಣೆ ಕೈಗೊಳ್ಳಲು ಉತ್ತಮ ಅವಕಾಶ ಲಭಿಸಿದಂತಾಗಿದೆ.

ಜಾತಿ ಎಂದಿಗೂ ಸಮಾಜದ ಕಹಿ ಸತ್ಯ. ಅದನ್ನು ದೂರ ಮಾಡುವುದು, ಆ ಸತ್ಯವನ್ನು ಮರೆಮಾಚುವುದು ಅಥವಾ ಕತ್ತಲೆಯಲ್ಲಿಯೇ ಉಳಿಸುವುದು-ಇವೆಲ್ಲ ಅಮಾನವೀಯ. ೨೦೦೨ರ ಬಿಪಿಎಲ್ ಜನಗಣತಿಯಲ್ಲಿ ಗ್ರಾಮೀಣ ಕುಟುಂಬಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಜತೆಗೆ ಜಾತಿ ಸಂಬಂಧಿತ ಕೆಲವು ಅಂಕಿ-ಅಂಶಗಳನ್ನು ಸಂಗ್ರಹಿಸಲಾಗಿತ್ತು. ಆದರೆ, ಈ ಎರಡು ದಶಕಗಳಲ್ಲಿ ಸಮಾಜದ ಸ್ಥಿತಿಗತಿಗಳೂ ಸಾಕಷ್ಟು ಬದಲಾಗಿದ್ದು, ಹಳೇ ದತ್ತಾಂಶಗಳೊಂದಿಗೆ ಸರಕಾರಗಳಿಗೆ ಕೆಲಸ ಮಾಡುವುದು ಅಸಾಧ್ಯದ ಮಾತು.

ಪ್ರತಿ ೧೦ ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ೨೦೨೧ರಲ್ಲಿ ಕೊರೋನಾ ಕಾರಣಕ್ಕಾಗಿ ನಡೆಯದೆ, ಈಗ ಚುನಾವಣೆ ಸೇರಿದಂತೆ ನಾನಾ ಕಾರಣಗಳಿಗೆ ಮುಂದೆ ಹೋಗುತ್ತಿದೆ. ಕಲ್ಯಾಣ ಯೋಜನೆಗಳಿಗೆ ೨೦೧೧ರ ಜನಗಣತಿ ದತ್ತಾಂಶಗಳೂ ಅಪ್ರಯೋಜಕವೇ. ಜಾತಿಗಣತಿ ಈ ಎಲ್ಲ ಕೊರತೆಗಳನ್ನು ನೀಗಿಸಿ, ನೀತಿ ನಿರೂಪಣೆಗೆ ಹೊಸ ದಿಕ್ಕು ತೋರಿಸಲಿ. 

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೯-೧೧-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ