ಜೀವ ವಿಜ್ಞಾನದ ಒಂದು ಪ್ರಯೋಗ ಮಾಡಿನೋಡಿ

ಜೀವ ವಿಜ್ಞಾನದ ಒಂದು ಪ್ರಯೋಗ ಮಾಡಿನೋಡಿ

ಮಣ್ಣಿನಲ್ಲಿ ಊರಿದ ಬೀಜ ಜಿಗಿದು ಮೇಲೆ ಬಂದದ್ದು ಹೇಗೆ?: ಮಣ್ಣಿನಲ್ಲಿ ಬೀಜ ಊರಿದಾಗ ಅದು ಮೊಳಕೆಯೊಡೆದು ಬೆಳೆಯುವುದು ಸಾಮಾನ್ಯವಾದ ಸಂಗತಿ. ಆದರೆ ನೆಲದಲ್ಲಿ ಊರಿದ ಬೀಜದ ಭಾಗ ಮೇಲೆದ್ದು ಬಂದರೆ? ಅಚ್ಚರಿಯಾಗದೆ ಇದ್ದೀತೆ? ನೀವೂ ನೋಡಬೇಕೆನಿಸಿದರೆ ಈ ಚಟುವಟಿಕೆಯನ್ನು ಮಾಡಿ ನೋಡಿ.

ಬೇಕಾಗುವ ವಸ್ತುಗಳು: ಮೂರು ಕಾಗದದ ಲೋಟಗಳು, ಮಣ್ಣು, ನೀರು, ಗೋಧಿ ಕಾಳುಗಳು, ಹೆಸರು ಕಾಳುಗಳು, ರಾಗಿ.

ಬೀಜ ಮೊಳಕೆಯೊಡೆಯುವಂತೆ ಮಾಡಿ: ೧. ಮೂರು ಕಾಗದದ ಲೋಟಗಳನ್ನು ತೆಗೆದುಕೊಳ್ಳಿ. ಮೂರು ಲೋಟಗಳಲ್ಲಿಯೂ ಮಣ್ಣನ್ನು ಸಡಿಲವಾಗಿ ತುಂಬಿ.

೨. ಮೊದಲನೆಯ ಲೋಟದಲ್ಲಿ ಗೋಧಿ ಕಾಳುಗಳನ್ನು ಊರಿ. ಎರಡನೇ ಲೋಟದಲ್ಲಿ ಹೆಸರು ಕಾಳುಗಳನ್ನು, ಮೂರನೇ ಲೋಟದಲ್ಲಿ ರಾಗಿಯನ್ನು ಊರಿ.

೩. ಮೂರು ಲೋಟಗಳಿಗೆ ನೀರು ಚಿಮುಕಿಸಿ ಬೆಳಕಿನಲ್ಲಿ ಇಡಿ. ಒಂದೆರಡು ದಿನ ಕಾಯಿರಿ.

ಕೆಲವು ದಿನಗಳ ನಂತರ ಮೂರೂ ಲೋಟಗಳಲ್ಲಿ ಸಸ್ಯಗಳು ಬೆಳೆದಿರುವುದನ್ನು ನೀವು ನೋಡಬಹುದು. ಗೋಧಿ ಕಾಳುಗಳ ಭಾಗಗಳಾಗಲೀ, ರಾಗಿ ಕಾಳುಗಳ ಭಾಗಗಳಾಗಲೀ ನಿಮಗೆ ಗೋಚರವಾಗುವುದಿಲ್ಲ. ಆದರೆ ಹೆಸರು ಕಾಳುಗಳ ಭಾಗಗಳು ಗಿಡದ ಜೊತೆ ಗೋಚರವಾಗುತ್ತವೆ. ಇದಕ್ಕೆ ಕಾರಣ ಏನಿರಬಹುದು?

ಸತ್ಯ ಸಂಗತಿ: ಸಸ್ಯಗಳನ್ನು ಅವುಗಳ ಗುಣಲಕ್ಷಣಗಳ ಆಧಾರದ ಮೇಲೆ ಏಕದಳ ಮತ್ತು ದ್ವಿದಳ ಸಸ್ಯಗಳೆಂದು ವರ್ಗೀಕರಿಸಲಾಗಿದೆ. ರಾಗಿ ಮತ್ತು ಗೋಧಿ ಏಕದಳ ಸಸ್ಯಗಳಿಗೆ ಉದಾಹರಣೆಯಾದರೆ, ಹೆಸರು ದ್ವಿದಳ ಸಸ್ಯಗಳಿಗೆ ಉದಾಹರಣೆ. ಏಕದಳ ಸಸ್ಯಗಳ ಬೀಜಗಳನ್ನು ಮಣ್ಣಿನಲ್ಲಿ ಊರಿದಾಗ ಅವು ಮೊಳಕೆಯೊಡೆದು ಸಸ್ಯವಾದಾಗ ಅವುಗಳ ಬೀಜಗಳು ನೆಲದೊಳಗೇ ಉಳಿದು ಬಿಡುತ್ತವೆ. ಆದರೆ ದ್ವಿದಳ ಸಸ್ಯಗಳ ಬೀಜಗಳಲ್ಲಿ ಎರಡು ಸಮನಾದ ಬೀಜ ಭಾಗಗಳಿರುತ್ತವೆ. ಬೀಜ ಮೊಳಕೆಯೊಡೆದಾಗ ಅವುಗಳ ಬೀಜದಳಗಳು ಭೂಮಿಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಇದು ದ್ವಿದಳ ಸಸ್ಯಗಳ ಲಕ್ಷಣ. ಸಸ್ಯಗಳ ಎಲೆಯ ರಚನೆ, ಹೂವಿನ ದಳಗಳ ಸಂಖ್ಯೆ, ಬೀಜದಳಗಳ ಸಂಖ್ಯೆ, ಬೇರಿನ ವ್ಯವಸ್ಥೆ ಆಧಾರದ ಮೇಲೆ ಏಕದಳ ಸಸ್ಯಗಳು ಮತ್ತು ದ್ವಿದಳ ಸಸ್ಯಗಳನ್ನು ಗುರುತಿಸಬಹುದು.

ನೀವು ಒಂದಿಷ್ಟು ಬೀಜಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ಹರಡಿಕೊಂಡು ಅವುಗಳಲ್ಲಿ ಯಾವುದು ಏಕದಳ ಯಾವುದು ದ್ವಿದಳ ಎಂದು ಗುರುತಿಸಬಹುದು. ಈ ಬೀಜಗಳನ್ನು ಮಣ್ಣಿನಲ್ಲಿ ಊರಿ, ಮೊಳಕೆ ಬರಿಸುವ ಮೂಲಕವೂ ಪ್ರಯೋಗಗಳನ್ನು ಮಾಡಬಹುದು.

(ಕೃಪೆ: ಸೂತ್ರ ಪತ್ರಿಕೆ)

ನೆನಪಾದದ್ದು:  ನಾವು ಸಣ್ಣವರಿದ್ದಾಗ ನಮ್ಮ ಮನೆಯ ಬಳಿಯಲ್ಲಿ ಗೇರು ಮರ, ಹಲಸಿನ ಮರ, ಮಾವಿನ ಮರಗಳು ಇದ್ದವು. ಆಗೆಲ್ಲಾ ಹಣ್ಣುಗಳನ್ನು ಕದ್ದು ತಿನ್ನುವುದೇ ನಮಗೆಲ್ಲಾ ಒಂದು ರೀತಿಯ ಮನೋರಂಜನೆಯ ಆಟವಾಗಿತ್ತು. ಮಾವಿನ ಮರಕ್ಕೆ ಕಲ್ಲು ಬಿಸಾಕುವುದು, ಮಾವಿನ ಕಾಯಿಯನ್ನು ತೆಗೆದು ತುಂಡರಿಸಿ ಅದಕ್ಕೆ ಉಪ್ಪು-ಮೆಣಸು ಹಾಕಿ ತಿಂದು ಬಾಯಿಯನ್ನು ಚಪ್ಪರಿಸುವುದು, ಗೇರು ಹಣ್ಣಿನ ಮರದಿಂದ ಹಣ್ಣನ್ನು ತೆಗೆದು ತಿಂದು ಗೋಡಂಬಿಯನ್ನು ಸಂಗ್ರಹಿಸಿ ಅದನ್ನು ಬೆಂಕಿಯಲ್ಲಿ ಸುಟ್ಟು ತಿನ್ನುವುದು ಇವೆಲ್ಲಾ ನಮ್ಮ ನಿತ್ಯದ ಆಟಗಳಾಗಿದ್ದವು. ಬೇಸಿಗೆ ಕಾಲದಲ್ಲಿ ವಾರ್ಷಿಕ ರಜೆಯಲ್ಲಿ ಮಾವಿನ ಹಣ್ಣು, ಗೇರು ಬೀಜಗಳನ್ನು ತಿಂದ ಬಳಿಕ ಆ ಹಣ್ಣಿನ ಸೀಸನ್ ಮುಗಿದು ಬಿಡುತ್ತಿತ್ತು. ನಂತರ ಮಳೆಗಾಲ ಬಂದಾಗ ನಾವು ಗೇರು ಮರದ ಬುಡಕ್ಕೆ ಓಡುತ್ತಿದ್ದೆವು. ಅಲ್ಲೊಂದು ನಮಗೆ ಅಚ್ಚರಿ ಕಾದಿರುತ್ತಿತ್ತು. ಏನು ಗೊತ್ತೇ? ಬೇಸಗೆ ಕಾಲದಲ್ಲಿ ಹಣ್ಣಾಗಿ ಭೂಮಿಗೆ ಬಿದ್ದಿದ್ದ ಗೇರು ಬೀಜ ಅಲ್ಲೇ ಒಣಗಿ, ಮಳೆ ಬಿದ್ದಾಗ ಮೊಳಕೆಯೊಡೆದು ಪುಟ್ಟ ಗಿಡದ ಜೊತೆ ಆ ಗೇರು ಬೀಜದ ಎರಡು ಭಾಗಗಳು ಹೊರ ಬರುತ್ತಿದ್ದವು. ಅವುಗಳು ತಿನ್ನಲು ಬಹಳ ರುಚಿಕರವಾಗಿರುತ್ತಿತ್ತು. ಅದನ್ನು ಹೆಕ್ಕಲು ನಮ್ಮಲ್ಲೇ ಪೈಪೋಟಿ ಏರ್ಪಡುತ್ತಿತ್ತು. ಆಗಿನ ಈ ಘಟನಾವಳಿಗಳು ಈಗಿನ ಮಕ್ಕಳಿಗೆ ತಿಳಿದಿರುವ ಸಾಧ್ಯತೆ ಕಡಿಮೆ. ಗ್ರಾಮೀಣ ಭಾಗದ ಮಕ್ಕಳಿಗೆ ಅಲ್ಪ ಸ್ವಲ್ಪ ಪರಿಚಯವಿರಬಹುದು, ಆದರೆ ಪಟ್ಟಣಗಳಲ್ಲಿ ಮರಗಳೂ ಇಲ್ಲ, ಮಕ್ಕಳಿಗೆ ಹೊರ ಹೋಗಿ ಆಡುವ ಸ್ವಾತಂತ್ರ್ಯವೂ ಇಲ್ಲ. 

ಚಿತ್ರ ಕೃಪೆ: ಅಂತರ್ಜಾಲ ತಾಣ