ಜೋಕು ಹುಟ್ಟುವ ಸಮಯ!

ಜೋಕು ಹುಟ್ಟುವ ಸಮಯ!

ಬರಹ

ಕವಿತೆ ಹುಟ್ಟುವುದು ಹೇಗೆ, ಕವಿತೆಯ ಅಪ್ಪ ಅಮ್ಮ ಯಾರು, ಕಥೆ ಜನ್ಮ ತಾಳುವ ಪರಿಸರ
ಎಂಥದ್ದು, ಕಾದಂಬರಿ ಮೊಟ್ಟೆ ಒಡೆದು ಮರಿಯಾಗುವದಕ್ಕೆ ಬೇಕಾದ ಕಾವು ಎಷ್ಟು ಎಂದೆಲ್ಲಾ
ಅಳತೆ ಮಾಪಕಗಳನ್ನು ಹಿಡಿದು jokes
ಬೆವರು ಹರಿಸುವ ಸಂಶೋಧಕ, ಪಂಡಿತರಿಂದ ತಪ್ಪಿಸಿಕೊಂಡಿರುವ ಪ್ರಶ್ನೆ- ಜೋಕುಗಳು
ಹುಟ್ಟುವುದು ಹೇಗೆ? ಈ ಜಗತ್ತಿನಲ್ಲಿರುವ ಅಸಂಖ್ಯಾತ ದಾಖಲಿತ ಜೋಕುಗಳಿಗೆ ಅಪ್ಪ
ಅಮ್ಮಂದಿರು ಯಾರೂ ಇಲ್ಲವೇ? ಒಂದು ಜೋಕು ಹುಟ್ಟು ಪಡೆದು ಬೇರೆ ಬೇರೆ ಸಂಸ್ಕೃತಿಯ ಜನರ
ನಡುವೆ ನಲುಗಿ ಹೊಸ ರೂಪ ಪಡೆದು ದೂರ ದೂರದವರೆಗೆ ಪಸರಿಸುವ ರೀತಿಯೇ ಅದ್ಭುತ. ಎಲ್ಲಿಯೋ
ಸಿಕ್ಕ ಉತ್ಕೃಷ್ಟವಾದ ಹೇಳಿಕೆಯನ್ನು ದಾಖಲಿಸುವಾಗಲೂ, ಭಾಷಣದಲ್ಲಿ, ಬರವಣಿಗೆಯಲ್ಲಿ,
ಪತ್ರಿಕೆಗಳ ಸಂಪಾದಕೀಯ ಪುಟದ ಮೂಲೆಯಲ್ಲಿ ಬಳಸುವಾಗಲೂ ಅದನ್ನುದುರಿಸಿದ ವ್ಯಕ್ತಿಯ
ಹೆಸರನ್ನು ಹಾಕಲಾಗುತ್ತದೆ. ಹೆಸರು ತಿಳಿಯದ ಹೇಳಿಕೆಗಳಿಗೆ ‘ಅನಾಮಿಕ’ನ ಹೆಸರನ್ನಾದರೂ
ಅಂಟಿಸಿ ಕೈತೊಳೆದುಕೊಳ್ಳಲಾಗುತ್ತದೆ. ಆದರೆ ಮನುಷ್ಯ ತನ್ನೆಲ್ಲಾ ಸಂಕಟವನ್ನು ಕ್ಷಣಕಾಲ
ಮರೆತು ನಕ್ಕು ಹಗುರಾಗಲು ನೆರವಾಗುವ ಅಕ್ಷರಗಳ ಈ ಆಭರಣಗಳನ್ನು ಕಡೆದಿರಿಸಿದ ಅಗೋಚರ
ಶಿಲ್ಪಿಗಳ ನೆನಪೂ ನಮಗೆ ಆಗುವುದಿಲ್ಲ!

ಜೋಕು ಹುಟ್ಟುವುದು ಹೇಗೆ ಎನ್ನುವುದು  ಸಿಲ್ಲಿ ಪ್ರಶ್ನೆ ಎಂದು ಭಾವಿಸುವವರು ಒಂದು
ಪ್ರಯತ್ನ ಮಾಡಬಹುದು. ಇದುವರೆಗೂ ತಾವು ಎಲ್ಲೂ ಕೇಳಿರದ, ಎಲ್ಲೂ ಓದಿರದ ತಮ್ಮದೇ ಒಂದೈದು
ಜೋಕುಗಳನ್ನು ಸೃಷ್ಟಿಸುವುದು. ಜೋಕ್ ಎಂದ ಮೇಲೆ ಅದರ ಸಾರ್ಥಕ್ಯವಿರುವುದು ಅದು ಕೇಳುಗನ
ತಲೆಗೆ ಅಪ್ಪಳಿಸಿ ಆತನಲ್ಲಿ ನಗುವಿನ ಅಲೆ ಎಬ್ಬಿಸಿದಾಗಲೇ. ನಾವೆಷ್ಟೇ ಹಾಸ್ಯ
ಪ್ರವೃತ್ತಿಯವರು, ಸರಸ ಮಾತುಗಾರರು ಎಂದು ಭ್ರಮೆ ಇರಿಸಿಕೊಂಡಿದ್ದರೂ ನಮ್ಮ ಕೈಲಿ
ನಾಲ್ಕು ಪಂಚಿಂಗ್ ಜೋಕುಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ. ಆ ಕುಸುರಿ ಕೆಲಸ ಬಲು
ನಾಜೂಕಿನದು.

ಬಹುಶಃ ಈ ಜೋಕುಗಳೆಂಬುವು ಉರುಟುರುಟಾದ ನಾಣ್ಯದ ಹಾಗೆ ಅನ್ನಿಸುತ್ತದೆ. ಅವು ಹೆಚ್ಚು
ಹೆಚ್ಚು ಕೈಗಳನ್ನು ಬದಲಾಯಿಸುತ್ತಾ ಹೋದಂತೆ, ಹೆಚ್ಚು ಚಲಾವಣೆಯಾಗುತ್ತಾ ಹೋದಂತೆ
ನುಣುಪಾಗುತ್ತ ಹೋಗುತ್ತವೆ. ಹೆಚ್ಚು ಶಾರ್ಪ್ ಆಗುತ್ತಾ ಹೋಗುತ್ತವೆ. ಹೆಚ್ಚು ಪಂಚಿಂಗ್
ಎನ್ನಿಸುತ್ತವೆ. ಎಲ್ಲೂ ಪಂಡಿತೋತ್ತಮರ ಕತ್ತರಿ, ಬ್ಲೇಡುಗಳಿಗೆ ಈಡಾಗದೆ, ಹಾರ ತುರಾಯಿಯ
ವೈಭೋಗವನ್ನು ಅನುಭವಿಸದೆ ಜನ ಮಾನಸದಲ್ಲಿ ಹಸಿರಾಗಿರುವ ಜೋಕುಗಳು ನಿಜಕ್ಕೂ ವಿಸ್ಮಯದ
ಸಾಹಿತ್ಯವೇ ಸರಿ.

ನಿಮಗೇನನ್ನಿಸುತ್ತೆ?