ಝೆನ್ ಕತೆ ೨೫: ಒಳ್ಳೆಯ ಆಶೀರ್ವಾದ

ಝೆನ್ ಕತೆ ೨೫: ಒಳ್ಳೆಯ ಆಶೀರ್ವಾದ

ಬರಹ

ಗುರು ಸೆನ್ಗಿಯನ್ನು ಶ್ರೀಮಂತನೊಬ್ಬ ಕೇಳಿದ. “ಗುರುವೇ, ನಮ್ಮ ಮನೆತನದವರಿಗೆ ಒಳ್ಳೆಯದಾಗಲೆಂದು ಆಶೀರ್ವಾದದ ಮಾತುಗಳನ್ನು ಬರೆದುಕೊಡು. ಅದನ್ನು ನಮ್ಮ ವಂಶದವರೆಲ್ಲ ನಿನ್ನ ಹರಕೆಯೆಂದು ಜೋಪಾನವಾಗಿ ಕಾಪಾಡಿಕೊಳ್ಳುತ್ತೇವೆ” ಎಂದ.
ದೊಡ್ಡ ಹಾಳೆಯೊಂದನ್ನು ತೆಗೆದುಕೊಂಡು “ಈ ವಂಶದವರ ತಂದೆ ಸಾಯಲಿ, ಮಗ ಸಾಯಲಿ, ಮೊಮ್ಮಗ ಸಾಯಲಿ” ಎಂದು ಬರೆದುಕೊಟ್ಟ ಸೆನ್ಗಿ.
ಶ್ರೀಮಂತನಿಗೆ ಬಹಳ ಕೋಪ ಬಂದುಬಿಟ್ಟಿತು. “ಇದೇನು ಗುರುವೇ, ನಾನು ಆಶೀರ್ವಾದದ ಮಾತು ಕೇಳಿದರೆ ತಂದೆ, ಮಗ, ಮೊಮ್ಮಗ ಸಾಯಲಿ” ಎಂದು ಬರೆದಿರುವೆಯಲ್ಲ? ಇದೇನು ತಮಾಷೆ ಮಾಡುತ್ತಿದ್ದೀಯೋ, ಶಾಪ ಹಾಕುತ್ತಿದ್ದೀಯೋ?” ಎಂದು ಕೇಳಿದ.
“ತಮಾಷೆಯೂ ಅಲ್ಲ, ಶಾಪವೂ ಅಲ್ಲ,” ಗುರು ಹೇಳಿದ, “ನಿನಗಿಂತ ಮೊದಲೇ ನಿನ್ನ ಮಗ ಸತ್ತರೆ ನಿನಗೆ ಎಷ್ಟು ದುಃಖವಾಗುತ್ತದೆ ಅಲ್ಲವೆ? ನಿನಗಿಂತ, ನಿನ್ನ ಮಗನಿಗಿಂತ ಮೊದಲೇ ಮೊಮ್ಮಗ ಸತ್ತರೆ ನಿಮಗಿಬ್ಬರಿಗೂ ಸಹಿಸಲಾಗದಷ್ಟು ದುಃಖವಾಗುವುದಿಲ್ಲವೇ? ನಿಮ್ಮ ವಂಶದಲ್ಲಿ ಪ್ರತಿ ತಲೆಮಾರಿನಲ್ಲೂ ನಾನು ಹೇಳಿದ ಕ್ರಮದಲ್ಲೇ ಮರಣ ಸಂಭವಿಸಲಿ ಎಂದು ಆಶೀರ್ವಾದ ಮಾಡಿರುವೆ. ಇದು ಸಹಜವಾದ ಕ್ರಮ. ಇದೇ ಅತ್ಯುತ್ತಮ ಸಂಪತ್ತು, ಆಶೀರ್ವಾದ.”

[ಅಸಹಜವಾದದ್ದು ಏನೂ ಸಂಭವಿಸದಿರಲಿ ಎಂಬುದೇ ಅತ್ಯಂತ ದೊಡ್ಡ ಆಶೀರ್ವಾದವಲ್ಲವೆ!]