ಟ್ವಿಟರಿನಲ್ಲಿ ಗೂಗಲ್

ಟ್ವಿಟರಿನಲ್ಲಿ ಗೂಗಲ್

ಬರಹ

ಏಳುನೂರು ಪುರಂದರ ದಾಸರ ಕೀರ್ತನೆಗಳೀಗ ಅಂತರ್ಜಾಲದಲ್ಲಿ ಲಭ್ಯ!
ದಾಸ ಕೀರ್ತನೆಗಳು ಮತ್ತು ಉಗಾಭೋಗಗಳನ್ನು ಅಂತರ್ಜಾಲದಲ್ಲಿ ಒದಗಿಸಿ,ಜನಪ್ರಿಯವಾದ ಅಂತರ್ಜಾಲ ತಾಣವೇ http://haridasa.in.ಸದ್ಯ ಸುಮಾರು ಏಳುನೂರು ಪುರಂದರ ದಾಸರ ಕೀರ್ತನೆಗಳು ಇಲ್ಲಿ ಲಭ್ಯ.ಸಂಪದ ಅಂತರ್ಜಾಲ ಸಮುದಾಯದ ಈ ತಾಣದ ಸಾರಥ್ಯ ರಾಮ್‌ಪ್ರಸಾದ್ ಎನ್ನುವ ಹೊರನಾಡ ಕನ್ನಡಿಗ.ಅಲ್ಟೆರಾ ಕಂಪೆನಿಯ ಉದ್ಯೋಗಿ.ಶ್ರೀಕಾಂತ್ ಮಿಶ್ರಿಕೋಟಿಯೆನ್ನುವ ಉತ್ಸಾಹಿ ಇನ್ನೂ ನಾಲ್ಕುನೂರು ಹಾಡುಗಳನ್ನು ಸೇರಿಸುವ ಸನ್ನಾಹದಲ್ಲಿದ್ದಾರೆ.ಈ ಪ್ರಯತ್ನಗಳಿಗೆ ನೀವೂ ಕೈಗೂಡಿಸಬಹುದು!
------------------------------------------------------
ಟ್ವಿಟರಿನಲ್ಲಿ ಗೂಗಲ್
ಕೊನೆಗೂ ಟ್ವಿಟರ್ ಅಂತರ್ಜಾಲ ತಾಣದಲ್ಲಿ ಅಧಿಕೃತ ಗೂಗಲ್ ಖಾತೆಯ ಸೃಷ್ಟಿಯಾಗಿದೆ.ಖಾತೆ ಆರಂಭವಾದ ಕೆಲವೇ ಗಂಟೆಗಳೊಳಗೆ ಸಾವಿರಾರು ಜನರು ಗೂಗಲ್ ಖಾತೆಯನ್ನು ಹಿಂಬಾಲಿಸಲಾರಂಭಿಸಿದರು.ಕಂಪೆನಿಗಳೂ ಕೂಡಾ ಟ್ವಿಟರ್ ಖಾತೆಯನ್ನು ಹೊಂದಿ,ಅದರ ಮೂಲಕ ತಮ್ಮ ಉದ್ಯೋಗಿಗಳು,ಬಳಕೆದಾರರು ಮತ್ತಿತರಿಗೆ ತಮ್ಮ ಕಂಪೆನಿಯ ಬಗ್ಗೆ ಮಾಹಿತಿ ನೀಡುವ ವಿಧಾನ ಈಗ ಚಾಲ್ತಿಗೆ ಬಂದಿದೆ. ಗೂಗಲ್ ವಿನೂತನ ಸೇವೆಗಳನ್ನು ನೀಡುವುದರಲ್ಲಿ ಮುಂದು. ಇಂತಹ ಹೊಸ ಸೇವೆಗಳನ್ನು ಪ್ರಚುರ ಪಡಿಸಲು ಗೂಗಲ್ ಬ್ಲಾಗನ್ನು ಅವಲಂಬಿಸಿದೆ. ಆದರೆ ಬ್ಲಾಗ್ ಬರೆದಿರುವ ಬಗ್ಗೆ ಜನರಿಗೆ ತಿಳಿಸಲು ಟ್ವಿಟರಿನಂತಹ ಸೇವೆ ಸಹಾಯ ಮಾಡಲಿದೆ.ಈಗ ಸುಮಾರು ಮೂವತ್ತಮೂರು ಸಾವಿರ ಹಿಂಬಾಲಕರನ್ನು ಹೊಂದಿರುವ ಗೂಗಲ್ ಖಾತೆಯು ಟ್ವಿಟರ್ ಬಗ್ಗೆ ಇನ್ನಷ್ಟು ಜನರ ಗಮನ ಸೆಳೆದಿದೆ. ಗೂಗಲ್ ಖಾತೆಯು ಅರುವತ್ತೇಳು ವ್ಯಕ್ತಿ ಅಥವಾ ಸೇವೆಗಳನ್ನು ಹಿಂಬಾಲಿಸುತ್ತಿದೆ. ತಂತ್ರಜ್ಞಾನ ಸುದ್ದಿ ಮಾಧ್ಯಮಗಳ ಟ್ವಿಟರ್ ಖಾತೆಗಳನ್ನು ಮತ್ತು ಗೂಗಲ್‌ನದ್ದೇ ಆದ ಯುಟ್ಯೂಬ್ ಮುಂತಾದ ಸೇವೆಗಳು ಅದರಲ್ಲಿ ಸೇರಿವೆ.ಅಂದ ಹಾಗೆ ಗೂಗಲ್ ಖಾತೆಯ ಮೊದಲ ಸಂದೇಶ ಏನೆಂಬ ಕುತೂಹಲ ನಿಮಗಿದೆಯೇ? “I’m feeling lucky\n” ಎನ್ನುವುದೇ ಆ ಸಂದೇಶವಾಗಿದೆ.
-------------------------------------------------------
"ಆನ್ಲೈನ್ ಬಳಕೆಗೆ ಓ ಸಿ ಆರ್"
ಓಸಿಆರ್ ಎಂದರೇನು ಎನ್ನುವುದು ನಿಮಗೆ ನೆನಪಿದೆ ತಾನೇ? ಅಪ್ಟಿಕಲ್ ಕ್ಯಾರೆಕ್ಟರ್ ರೆಕೋಗ್ನಿಷನ್ ಎಂದರೆ ಚಿತ್ರ ಅಥವ ಪಿಡಿಎಫ್ ರೂಪದಲ್ಲಿರುವ ಪುಟದ ಅಕ್ಷರಗಳನ್ನು ಗ್ರಹಿಸಿ, ಪದಸಂಸ್ಕಾರಕ ಕಡತವಾಗಿ ಅದನ್ನು ಬದಲಾಯಿಸಿ,ಪುಟದಲ್ಲಿರುವ ಮಾಹಿತಿಯನ್ನು ಬಳಸಿಕೊಳ್ಳಲು ಅಥವ ಬದಲಾಯಿಸಲು ಅನುವು ಮಾಡುವ ಸೌಕರ್ಯ ಸಿಗುತ್ತದೆ. ಸಾಮಾನ್ಯವಾಗಿ ಓಸಿಆರ್ ತಂತ್ರಾಂಶಗಳು ಸ್ಕ್ಯಾನರ್ ಯಂತ್ರಾಂಶದ ಜತೆ ಸಿಗುತ್ತವೆ. ಒಂದು ವೇಳೆ ನಿಮ್ಮ ಕಂಪ್ಯೂಟರಿನಲ್ಲಿ ಓಸಿಆರ್ ತಂತ್ರಾಂಶ ಇಲ್ಲವೆನ್ನಿ.ಹಾಗಾದರೆ ಅದನ್ನು ಅಂತರ್ಜಾಲ ಮೂಲಕ ಪಡೆಯಬಹುದೇ? ಇದು ಸಾಧ್ಯ. https://www.ocrterminal.com/ ಅಂತಹ ಸೇವೆಯ ಪ್ರಾಯೋಗಿಕ ಸೇವೆ ನೀಡುತ್ತಿದೆ.ನೋಂದಾಯಿಸಿ ಕೊಂಡವರಿಗೆ ದಿನವೊಂದಕ್ಕೆ ಮೂವತ್ತು ಪುಟಗಳನ್ನು ಪಿಡಿಎಫ್‌ನಿಂದ doc ಕಡತಗಳಾಗಿ ಬದಲಾಯಿಸಿಕೊಳ್ಳಲು ಅವಕಾಶವಿದೆ. ಇದೀಗ ಈ ಸೇವೆ ಅದೆಷ್ಟು ಜನಪ್ರಿಯವಾಗಿದೆಯೆಂದರೆ ಕೆಲವೊಮ್ಮೆ ಈ ಅಂತರ್ಜಾಲ ತಾಣ ಬಳಕೆದಾರರ ಒತ್ತಡದಿಂದ ಕುಸಿಯುವ ಭೀತಿ ಎದುರಿಸುತ್ತಿದೆ!
---------------------------------------------------------
ಗೂಗಲ್ ಕೈಕೊಟ್ಟಿತು!
ಜಿಮೇಲ್ ಗೂಗಲ್ ಮಿಂಚಂಚೆ ಈ ವಾರಾರಂಭದಲ್ಲಿ ಬಳಕೆದಾರರಿಗೆ ಲಭ್ಯವಿರಲಿಲ್ಲ. ಕೆಲವು ಗಂಟೆಗಳು ಅದರ ಸೇವೆ ಜನರಿಗೆ ಸಿಗದೆ,ಜನರು ಕಂಗಾಲಾದರು.ಈಗೀಗ ಅಂತರ್ಜಾಲ ಮಿಂಚಂಚೆ ಸೇವೆಯಲ್ಲಿ ಅಪರಿಮಿತ ಸ್ಮರಣಸಾಮರ್ಥ್ಯ ಲಭ್ಯವಾಗುವುದರಿಂದ,ಮಿಂಚಂಚೆಯನ್ನು ತಮ್ಮ ಕಂಪ್ಯೂಟರಿಗೆ ಇಳಿಸಿಕೊಳ್ಳುವ ಪ್ರವೃತ್ತಿ ಕಡಿಮೆಯಾಗಿದೆ.ಸದಾ ಅಂತರ್ಜಾಲಕ್ಕೆ ಸಂಪರ್ಕದಲ್ಲಿರುವ ಜನರು ಬೇಕೆಂದಾಗ ಗೂಗಲ್ ಖಾತೆಗೆ ಹೋಗಿ ತಮಗೆ ಬೇಕಾದ ಹಳೆಯ ಸಂದೇಶವನ್ನು ಶೋಧಿಸಿ, ಅದನ್ನು ನೋಡುವ ಸೌಲಭ್ಯವಿದೆ.ಆದರೆ ಗೂಗಲ್ ಸೇವೆಯು ಅಕಸ್ಮಾತ್ತಾಗಿ ನಿಂತು ಜನರನ್ನು ಕಂಗೆಡಿಸಿತು.ಹೀಗಾಗಲು ಕಾರಣವೆಂಬುದು ಸ್ಪಷ್ಟವಿಲ್ಲವಾದರೂ,ಹ್ಯಾಕರುಗಳ ದಾಳಿ ಇದಕ್ಕೆ ಕಾರಣವಿರಬಹುದು ಎನ್ನುವ ಗುಮಾನಿ ಇದೆ.ಅಂತರ್ಜಾಲದ ಸಾವಿರಾರು ಕಂಪ್ಯೂಟರುಗಳನ್ನು ಮೋಸದಿಂದ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು,ಅವುಗಳ ಮೂಲಕ ಗೂಗಲ್ ಸರ್ವರಿಗೆ ಸತತ ಸೇವೆಯ ಕೋರಿಕೆಗಳನ್ನು ಕಳುಹಿಸುವ ಮೂಲಕ ನೈಜ ಬಳಕೆದಾರರಿಗೆ ಸೇವೆಯನ್ನು ನಿರಾಕರಿಸುವ ಸಂಚು ನಡೆದಿತ್ತು ಎನ್ನುವುದು ಪರಿಣತರ ಗುಮಾನಿ.ಈ ನಡುವೆ ಯಾಹೂ ಕಂಪೆನಿಯು ತನ್ನ ಸೇವೆಯೊಂದನ್ನು ನಿಲ್ಲಿಸುವ ನಿರ್ಧಾರ ಪ್ರಕಟಿಸಿ,ಜನರಿಗೆ ಆಶ್ಚರ್ಯ ಉಂಟು ಮಾಡಿದೆ. ಯಾಹೂ ಬ್ರೀಫ್‌ಕೇಸ್ ಎನ್ನುವ ಆನ್‌ಲೈನ್ ಅಂತರ್ಜಾಲ ಕಡತ ದಾಸ್ತಾನು ಮಾಡುವ ಸೇವೆ ಈ ತಿಂಗಳ ಅಂತ್ಯದಿಂದ ನಿಲ್ಲಲಿದೆ. ಈ ಆರ್ಥಿಕ ಹಿನ್ನಡೆಯ ದಿನಗಳಲ್ಲಿ, ಅಂತರ್ಜಾಲದ ಉಚಿತ ಸೇವೆಗಳು ಅನಿರ್ದಿಷ್ಟಾವಧಿ ಕಾಲಮುಂದುವರಿಯುವುದು ಸಾಧ್ಯವೇ ಎನ್ನುವ ಅನುಮಾನ ಜನರಲ್ಲಿ ಉಂಟಾಗಿದೆ.
-----------------------------------------------------
ಮಹಾಚುನಾವಣೆ ಮತ್ತು ಅಂತರ್ಜಾಲ
ಆರ್ಥಿಕ ಹಿನ್ನಡೆಯಿಂದ ಉದ್ಯೋಗ ನಷ್ಟದ ಭೀತಿ ಎಲ್ಲೆಡೆ ಹಬ್ಬಿರುವ ಬೆನ್ನಿಗೇ ಭಾರತದ ಸಂಸತ್‌ನ ಚುನಾವಣೆಗಳ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ.ಸುಮಾರು ಹದಿನೈದರಿಂದ ಹದಿನಾರು ಸಾವಿರ ಕೋಟಿ ಹಣವನ್ನು ಚುನಾವಣೆ ನಡೆಸಲು ಕೇಂದ್ರ ಸರಕಾರವೊಂದೇ ಖರ್ಚು ಮಾಡಲಿದೆ. ಚುನಾವಣೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಖರ್ಚು,ಪಕ್ಷಗಳು ಸುರಿಯಲಿರುವ ಹಣ ಇವೆಲ್ಲವೂ ಹೊಸ ಉದ್ಯೋಗ,ಅವಕಾಶಗಳ ಸೃಷ್ಟಿಗೆ ಕಾರಣವಾಗಿ ಆರ್ಥಿಕ ಪುನಶ್ಚೇತನ ಮಾಡಬಹುದು ಎಂಬ ಆಶೆಗೆ ಕಾರಣವಾಗಿದೆ.ಅಂತರ್ಜಾಲದಲ್ಲಿ ಮತದಾರರ ಪಟ್ಟಿಯ ಲಭ್ಯತೆಯಿಂದ ಹಿಡಿದು, ಪಕ್ಷಗಳ ಮತ್ತು ಅಭ್ಯರ್ಥಿಗಳ ಅಂತರ್ಜಾಲ ತಾಣಗಳು ಈ ಸಲದ ಚುನಾವಣೆಯಲ್ಲಿ ಪ್ರಮುಖವಾಗಿ ಸುದ್ದಿ ಮಾಡುವ ನಿರೀಕ್ಷೆಯಿದೆ. ಬ್ಲಾಗ್ ಬರವಣಿಗೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ವೈಖರಿಗೆ ಬಿಜೆಪಿ ಮುಖಂಡ ಎಲ್ ಕೆ ಅಡ್ವಾಣಿಯವರು ಚಾಲನೆ ನೀಡಿದ್ದಾರೆ.ಅಂತರ್ಜಾಲ ಮೂಲಕ ಸಾಮೂಹಿಕ ಎಸ್ ಎಂ ಎಸ್ ಸಂದೇಶಗಳನ್ನು ಕಳುಹಿಸಲು ಸಾಧ್ಯವಿರುವುದರಿಂದ,ಮೊಬೈಲ್ ಹ್ಯಾಂಡ್‌ಸೆಟ್ ಮೂಲಕ ಜನರನ್ನು ತಲುಪುವ ಪ್ರಯತ್ನ ನಡೆಯುವುದು ನಿಶ್ಚಿತ. ಟ್ವಿಟರ್ ಸೇವೆಯಲ್ಲಿ ಅಭ್ಯರ್ಥಿಗಳ ಖಾತೆ,ಅರ್ಕುಟ್ ಅಂತಹ ನೆಟ್ವರ್ಕಿಂಗ್ ತಾಣಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರ ಸಮುದಾಯ ಏರ್ಪಡುವುದು ಈ ಸಲದ ಹೊಸ ನಡೆಯಾಗಲಿದೆ.
------------------------------------------------------------
ಜಪಾನಿನಲ್ಲಿ ಈಗ ಐಫೋನ್ ಉಚಿತ
ಮೊಬೈಲ್ ಸಂಪರ್ಕದೊಂದಿಗೆ ಹ್ಯಾಂಡ್‌ಸೆಟ್ ಅನ್ನು ಉಚಿತವಾಗಿ ಒದಗಿಸುವ ಪರಿ ಆರಂಭವಾಗಿದೆ. ಜಪಾನಿನಲ್ಲಿ ಐಫೋನ್ ಮೂಲಕ ಸೇವೆ ಒದಗಿಸುವ ಸಾಫ್ಟ್‌ಬ್ಯಾಂಕ್ ಮೊಬೈಲ್ ಕಂಪೆನಿ ಎರಡು ವರ್ಷದ ತ್ರೀಜಿ ಸೇವೆ ಅಪೇಕ್ಷಿಸುವ ಮೊಬೈಲ್ ಬಳಕೆದಾರರಿಗೆ ಉಚಿತ ಐಫೋನ್ ಹ್ಯಾಂಡ್‌ಸೆಟ್ ನೀದಲು ಮುಂದೆ ಬಂದಿದೆ. ಈ ಹ್ಯಾಂಡ್‌ಸೆಟ್ ಎಂಟು ಜೀಬಿ ಸಾಮರ್ಥ್ಯದ್ದು.ಹದಿನಾರು ಜೀಬಿ ಸಾಮರ್ಥ್ಯದ ಸೆಟ್ ಬೇಕಿದ್ದರೆ,ನೂರ ಹದಿನೆಂಟು ಡಾಲರು ತೆತ್ತರಾಯಿತು.(ನಿಜ ಬೆಲೆ ಮುನ್ನೂರೈವತ್ತು ಡಾಲರು).ಜಪಾನಿನಲ್ಲಿ ಐಪೋನ್‌ಗಳಷ್ಟೇನೂ ಮಾರಾಟವಾಗುತ್ತಿಲ್ಲ.ಅದಕ್ಕಾಗಿಯೇ ಈ ವೇಷ.ಹೆಬ್ಬೆರಳೊಂದರಿಂದಲೇ ಕಿರುಸಂದೇಶ ರಚಿಸಿ ಕಳುಹಿಸಲು ಸಾಧ್ಯವಿಲ್ಲದಿರುವುದು,ಕ್ಯಾಮರಾದ ಗುಣಮಟ್ಟ ಸಾಮಾನ್ಯವಾಗಿರುವುದು, ಉದ್ದ ಉಗುರಿನ ಮಹಿಳೆಯರಿಗೆ ಬಳಸಲು ಅನುಕೂಲ ಇಲ್ಲದಿರುವುದು ಐಫೋನ್ ಜನಪ್ರಿಯತೆಗೆ ಅಡ್ದಿಯಾಗಿದೆ ಎಂಬ ಗುಮಾನಿಯಿದೆ. ಅದೇ ವೇಳೆ ಅತ್ತ ಇಂಗ್ಲೆಂಡಿನಲ್ಲಿ ನೆಟ್‌ಬುಕ್ ಎನ್ನುವ ಲ್ಯಾಪ್‌ಟಾಪ್ ಸಾಧನವನ್ನು ನಿಸ್ತಂತು ಬಳಕೆದಾರರಿಗೆ ಉಚಿತವಾಗಿ ಒದಗಿಸಿ,ಸೇವೆಯನ್ನು ಜನಪ್ರಿಯವಾಗಿಸುವ ಪ್ರಯತ್ನ ಸಾಗಿದೆ. ಡೆಲ್ ಕಂಪೆನಿಯ ನೆಟ್‌ಬುಕ್ ಅಂತರ್ಜಾಲ ಜಾಲಾಟಕ್ಕೆ ಅನುಕೂಲ ಒದಗಿಸುತ್ತದೆ. ಅದರ ಬೆಲೆ ಮುನ್ನೂರು ಡಾಲರುಗಳು.
udayavani

*

ashokworld