ತಂದೆ

5

ತಂದೆ -

------------
ಕೊರಳಸುತ್ತುತಲಿದ್ದ ಪುಟ್ಟ ಕೈಗಳೆ ನೆನಪು
ಮಗಳನೊಪ್ಪಿಸುವುದು ನರಕಯಾತನೆಯು

ಮಲ್ಲಿಗೆಯ ಹೂವನ್ನು ಬಯಲು ಸೀಮೆಗೆ ಕೊಟ್ಟೆ,
ಬಿಸಿಲ ಝಳಕೆ ಬಾಡುವುದೋ ಎಂದು ಸಂದೇಹಪಟ್ಟೆ
ಮಲೆನಾಡ ತಂಪಿನಲಿ ಅರಳಿಹುದು ಮಲ್ಲಿಗೆ
ಬಿಸಿಲ ಕಂಡರಿಯಳು, ಬೆಳಕಹಳು ಮನೆಗೆ

ಹೆಗಲ ಮೇಲೊಯ್ದಿಹೆನು ಸಾಗರದ ಜಾತ್ರೆಯಲಿ
ಇನ್ನಿವಳು ನಿಮ್ಮವಳು ಸವಿ ಬಾಳ ಯಾತ್ರೆಯಲಿ
ಅಳಿಯನೆದುರಲಿ ಅಳುತ ಕಳುಹುವುದೇ?
ಕೊಳವಿಹುದು ಕಣ್ಣೊಳಗೆ ಮುಚ್ಚಿಡಲು ಬಹುದೇ?

ಮದ್ದಿನಲಿ ಸಾಕಿಹೆನು ಸಲಹುವುದು ನೀವಿನ್ನು
ಎದುರಾಡಲರಿಯಳು ಮಲ್ಲಿಗೆಯ ಮೊಗ್ಗಿನ್ನು.
ಭೂಮದೂಟವು ಮುಗಿದು ಮನೆಯದುಂಬಿತು ಹೆಣ್ಣು
ತೌರಮನೆಯ ಬೆಳಕಾಯ್ತು ರಾಯರಿಗೆ ಕಣ್ಣು

ಬೀಗರ ಮನೆಯೊಳಗೆ ಕವಿತೆಗಳ ಸಾಲು
ಅಳಿಯ ಬರಿಯ ಕವಿಯಿಹನು,ಕವಿಗೆ ಕಲ್ಪನೆಗಳೆ ಮಾಲು
ತುಂಬಲಹುದೇ ಮನೆಯ ದಿನಸಿ ಡಬ್ಬಿಗಳ ಸಾಲು
ಖಾಸಗಿ ಕಂಪನಿಯ ಗುಮಾಸ್ತನಿಹನಂತೆ
ಲೆಕ್ಕದಲಿ ಕವಿತೆ ಹೊಕ್ಕರೆ ಉದ್ಧಾರವಾದಂತೆ

ಜನಕರಾಜನ ಬಿಗುವಡಗಿ ನಗೆಯುಕ್ಕಿ,
ಮೌನದಲಿ ನಿಲ್ಲಲು, ಕೂಸೊದ್ದಳು ಪಡಿಯಕ್ಕಿ
ಮಲ್ಲಿಗೆಯ ದಂಡೆಯನು ಬಿಸಿಲಲ್ಲಿ ಬೇಯಿಸೆವು
ಈ ಮನೆಯ ಬೆಳಕನ್ನು ಕಣ್ಣಂತೆ ಕಾಯುವೆವು

ಬೀಗರ ನುಡಿಗಳಿಗೆ ಮನಸು ಹಗುರಾದರೂ
ಕೊರಳಸುತ್ತುತಲಿದ್ದ ಪುಟ್ಟ ಕೈಗಳೆ ನೆನಪು
ಮಗಳನೊಪ್ಪಿಸುವುದು ನರಕಯಾತನೆಯು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.