ತ.ನಾ.ಸರಕಾರ - ರಾಜ್ಯಪಾಲರ ತಿಕ್ಕಾಟ : ಕೇಂದ್ರ ತುರ್ತು ಮಧ್ಯ ಪ್ರವೇಶಿಸಲಿ

ತ.ನಾ.ಸರಕಾರ - ರಾಜ್ಯಪಾಲರ ತಿಕ್ಕಾಟ : ಕೇಂದ್ರ ತುರ್ತು ಮಧ್ಯ ಪ್ರವೇಶಿಸಲಿ

ನಮ್ಮ ನೆರೆಯ ತಮಿಳುನಾಡಿನಲ್ಲಿ ರಾಜ್ಯ ಸರಕಾರ ಮತ್ತು ರಾಜ್ಯಪಾಲರ ನಡುವಣ ಸಂಘರ್ಷ ಅತಿರೇಕಕ್ಕೆ ತಲುಪಿದೆ. ಕೇಂದ್ರ ಸರಕಾರ ಆರ್ ಎನ್ ರವಿ ಅವರನ್ನು ತಮಿಳುನಾಡಿನ ರಾಜ್ಯಪಾಲರಾಗಿ ನೇಮಿಸಿದ್ದಾಗಿನಿಂದ ಈ ಗುದ್ದಾಟ ನಡೆಯುತ್ತಲೇ ಬಂದಿದೆ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರದ ಹೆಚ್ಚಿನ ನಿರ್ಣಯಗಳಿಗೆ ಆಕ್ಷೇಪ ಎತ್ತಿ, ರಾಜ್ಯದಲ್ಲಿನ ಬೆಳವಣಿಗೆಗಳ ಬಗೆಗೆ ಬಹಿರಂಗವಾಗಿಯೇ ಟೀಕಿಸುವ ಮೂಲಕ ರಾಜ್ಯಪಾಲರು ರಾಜ್ಯ ಸರಕಾರದ ವಿರುದ್ಧ ನೇರವಾಗಿ ರಾಜಕೀಯ ಸಮರವನ್ನೇ ಸಾರಿದಂತೆ ತೋರುತ್ತಿದೆ. ಸುಪ್ರೀಂ ಕೋರ್ಟಿನ ನಿರ್ದೇಶನದ ಹೊರತಾಗಿಯೂ ರಾಜ್ಯ ಸರಕಾರವಾಗಲೀ, ರಾಜ್ಯಪಾಲರಾಗಲಿ ಈ ಸಂಘರ್ಷದ ಧೋರಣೆಯನ್ನು ಕೈಬಿಡದೆ ಮುಂದುವರೆಸಿದ್ದಾರೆ. ರವಿವಾರದ ಗಣರಾಜ್ಯೋತ್ಸವದ ಬೆಳವಣಿಗೆಯಂತೂ ಈ ಸಂಘರ್ಷ ಅಂತಿಮ ಘಟ್ಟಕ್ಕೆ ತಲುಪಿರುವುದಕ್ಕೆ ನೇರ ಸಾಕ್ಷಿ. ಕೇಂದ್ರ ಸರಕಾರ ತುರ್ತಾಗಿ ಮಧ್ಯ ಪ್ರವೇಶಿಸಿ ಈ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಹಾಡುವ ಮೂಲಕ ದೇಶದ ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯಪಾಲರ ಹುದ್ದೆಯ ಘನತೆ, ಗೌರವವನ್ನು ಎತ್ತಿ ಹಿಡಿಯಬೇಕು.

ರವಿವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಂಪ್ರದಾಯದಂತೆ ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲ ಆರ್ ಎನ್ ರವಿ ಅವರು, ತಮ್ಮ ಗಣರಾಜ್ಯೋತ್ಸವ ಭಾಷಣವನ್ನಿಡೀ ರಾಜ್ಯ ಸರಕಾರವನ್ನು ಹಳಿಯಲು ಬಳಸಿಕೊಂಡಿದ್ದಾರೆ. ಮುಖ್ಯಮಂತ್ರಿ ನೇತೃತ್ವದ ರಾಜ್ಯ ಸರಕಾರದ ‘ಸಾಂವಿಧಾನಿಕ ಮುಖ್ಯಸ್ಥ’ನ ಪಾತ್ರ ರಾಜ್ಯಪಾಲರದ್ದಾಗಿದೆ. ರಾಜ್ಯ ಸರಕಾರದ ಆಡಳಿತ ವೈಖರಿ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಸರಕಾರದ ನೀತಿ-ನಿರೂಪಣೆಗಳ ಬಗೆಗೆ ಏನೇ ಆಕ್ಷೇಪ, ಅಸಮಧಾನವಿದ್ದರೂ ರಾಜ್ಯಪಾಲರಿಗೆ ಸಾಂವಿಧಾನಿಕ ಚೌಕಟ್ಟಿನಲ್ಲಿ ಅವನ್ನೆಲ್ಲ ವ್ಯಕ್ತಪಡಿಸಲು ನೀತಿ-ನಿಯಮಾವಳಿಗಳಿವೆ. ತನ್ನ ನಿರ್ದೇಶನ, ಎಚ್ಚರಿಕೆಗಳಿಗೆ ರಾಜ್ಯ ಸರಕಾರ ಕಿವಿಗೊಡುತ್ತಿಲ್ಲ ಎಂದಾದರೆ ಆ ಬಗ್ಗೆ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಬಹುದು. ಚುನಾಯಿತ ಸರಕಾರದ ನೀತಿ, ನಿರ್ಧಾರಗಳು ಜನಹಿತಕ್ಕೆ ಮಾರಕವಾಗಿದ್ದರೂ ಅವನ್ನೆಲ್ಲ ಕೇಂದ್ರ ಸರಕಾರದ ಗಮನಕ್ಕೆ ತಂದು ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸುವ ಅಧಿಕಾರವಿದೆ. ಇನ್ನು ರಾಜ್ಯ ಸರಕಾರ, ರಾಜ್ಯಪಾಲ ಹುದ್ದೆಗೆ ನೀಡಬೇಕಾದ ಗೌರವವನ್ನು ನೀಡದೇ ಹೋದಲ್ಲಿ ಅದನ್ನು ಪ್ರಶ್ನಿಸಲು ಕೂಡ ರಾಜ್ಯಪಾಲರಿಗೆ ಸಂವಿಧಾನದತ್ತ ಅಧಿಕಾರವಿದೆ. ಇವನ್ನೆಲ್ಲ ಮರೆತು ಈ ರೀತಿ ಮಾಡಿರುವುದು ಅವರ ಹುದ್ದೆಗೂ ಶೋಭೆಯಲ್ಲ.

ರಾಜ್ಯ ಸರಕಾರ ಬರೆದುಕೊಟ್ಟ ಭಾಷಣವನ್ನು ಓದಲು ಇಷ್ಟವಿಲ್ಲದಿದ್ದರೆ ಸ್ವಂತ ಭಾಷಣವನ್ನು ಮಾಡಲು ರಾಜ್ಯಪಾಲರಿಗೆ ವಿವೇಚನಾಧಿಕಾರವಿದೆ. ಹಾಗೆಂದು ಅದನ್ನು ಸರಕಾರದ ಟೀಕೆಗೆ ಸೀಮಿತಗೊಳಿಸಿ ವಿಪಕ್ಷದವರ ರೀತಿ ನಡೆದುಕೊಳ್ಳುವುದು ಸರಿಯಾದುದಲ್ಲ. ಬದಲಾಗಿ ಸಲಹೆಯ ರೂಪದಲ್ಲಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಒಂದಷ್ಟು ಅಂಶಗಳನ್ನು ಬೆಟ್ಟು ಮಾಡಿ ಅದರ ಅಗತ್ಯವನ್ನು ತಿಳಿಹೇಳುವ ಕೆಲಸವನ್ನು ಮಾಡಬಹುದಿತ್ತು. ರಾಜ್ಯ ಸರಕಾರ ಸಹ ರಾಜ್ಯಪಾಲರ ಜೊತೆಗಿನ ಗುದ್ದಾಟವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳಬಾರದು. ಎರಡು ಪ್ರಮುಖ ಹುದ್ದೆಗಳ ನಡುವೆ ಭಿನ್ನಾಭಿಪ್ರಾಯಗಳು ಬಂದಲ್ಲಿ ಅದನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಬೇಕಾಗುತ್ತದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ರಾಜಭವನ ಮತ್ತು ಸರಕಾರದ ನಡುವೆ ಒಂದು ಹಂತದ ಹೊಂದಾಣಿಕೆ ಇರುವುದು ಅತ್ಯಂತ ಅಗತ್ಯವಾಗಿದೆ. ಕೇಂದ್ರ ಸರಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯಪಾಲರ ಮತ್ತು ಸರಕಾರದ ನಡುವಿನ ತಿಕ್ಕಾಟಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಚಿಂತಿಸುವುದು ತುರ್ತು ಅಗತ್ಯವಿದೆ.

ಕೃಪೆ: ಉದಯವಾಣಿ, ಸಂಪಾದಕೀಯ,ದಿ: ೨೮-೦೧-೨೦೨೫ 

ಚಿತ್ರ ಕೃಪೆ: ಅಂತರ್ಜಾಲ ತಾಣ